ಕೊನೇ ಫ್ರೇಮು!; ಸ್ವಂತ ಜೀವಕ್ಕಿಂತ ಮಿಗಿಲಾಗದಿರಲಿ ಸ್ವಂತೀ

Selfie Deaths
Published on

ಯಾವುದೋ ಕಾರ್ಯಕ್ರಮ, ದೇಗುಲ, ಸ್ನೇಹಬಳಗ, ಹೋಟೆಲ್-ಮಾಲ್, ಔತಣಕೂಟ, ಪ್ರಯಾಣ, ಬೈಕ್ ಸವಾರಿಯಲ್ಲಿ ಅಥವಾ ಬರುತ್ತಿರುವ ರೈಲಿಗೆ ಬೆನ್ನುಮಾಡಿ, ರೈಲಿನ ಬಾಗಿಲಲ್ಲಿ ನಿಂತು, ಕಡಿದಾದದ ಬೆಟ್ಟದ ಮೆಲೆ, ಜಲಪಾತಗಳ ಅಂಚಿನಲ್ಲಿ.. ಒಟ್ಟಾರೆ ಸ್ಥಳ ಯಾವುದೇ ಆಗಲಿ, ಹೇಗೇ ಇರಲಿ.. ಕಾರ್ಯಗಳ ಉದ್ದೇಶ ಮರೆತು ಸೆಲ್ಪಿ ಕ್ಲಿಕ್ ಮಾಡುವುದು ಈಗಿನ ಪರಿಯಾಗಿದೆ. ಸುಂದರ ಸ್ಥಳಗಳ ವೀಕ್ಷಣೆಗೆ ಹೋಗಿ, ಸ್ಥಳವನ್ನು ಕಣ್ಣಲ್ಲಿ ಆಸ್ವಾದಿಸುವ ಮೊದಲೇ ಮೊಬೈಲ್​ಫೋನ್ ಕೈಯಿಗೆ ಬಂದಿರುತ್ತದೆ. ಅದೆಷ್ಟೋ ಯುವಜನರು ಸೆಲ್ಪಿಗೋಸ್ಕರ ಅನಗತ್ಯ ಹಣ ವ್ಯಯಿಸಿ, ಭಯಂಕರ ಸ್ಥಳಗಳಿಗೆ ಹೋಗುವುದೂ ಉಂಟು. ಸೆಲ್ಪಿಯನ್ನು ನೆನಪುಗಳ ಸರಮಾಲೆಗೆ ಸೇರಿಸಿಕೊಳ್ಳಬೇಕು ಎನ್ನುವುದಕ್ಕಿಂತ ಸೋಷಿಯಲ್ ಮೀಡಿಯಾ ಸ್ಟೇಟಸ್ ಅಪ್ಡೇಟ್ ಮಾಡೋ ಉದ್ದೇಶಕ್ಕೆ ಹೆಚ್ಚು ಸೀಮಿತವಾದಂತಿದೆ. ಇದು ಸೆಲ್ಪಿ ಕ್ಲಿಕ್ ಸಂಖ್ಯೆ ಅಧಿಕವಾಗಲು ಪ್ರಮುಖ ಕಾರಣ. ಈ ಸ್ವಂತಿಞ (ಸೆಲ್ಪಿ) ಬೇಕೇಬೇಕು ಎಂಬುದು ಈಗಿನ ಯುವಜನತೆಯ ಮನಸ್ಥಿತಿಯಾಗಿದೆ. ಆದರೆ ಅದೇ ಕೊನೇ ಫ್ರೇಮಾಗುತ್ತಿರುವ ದುರಂತದ ಕುರಿತು ಜಾಗೃತಿ ಮೂಡಿಸುವುದೇ ಈ ಬರಹದ ಉದ್ದೇಶ.

ಮೋಹನ್ ಶೆಟ್ಟಿ ಬೆಂಗಳೂರು
ಒಂದಾ.. ಎರಡಾ? ಸೆಲ್ಪಿಯಿಂದ ಹಲವಾರು ಜನರು ಅನೇಕ ರೀತಿಯ ಸಂಕಷ್ಟಕ್ಕೆ ಸಿಲುಕಿರುವ ನಿದರ್ಶನಗಳು ಉಂಟು. ಇಷ್ಟೆಲ್ಲ ಆದರೂ ನಮ್ಮಲ್ಲಿ ಸೆಲ್ಪಿ ಗೀಳು ಮಾತ್ರ ಪ್ರಬುದ್ಧಮಾನವಾಗಿ ಸಮಾಜದಲ್ಲಿ ಬೆಳೆಯುತ್ತಲೇ ಇದೆ. ಎಷ್ಟೋ ವಿಷಯಗಳಲ್ಲಿ ಯುವಜನತೆ ಮೊಬೈಲ್​ಫೋನ್ ತಾಂತ್ರಿಕತೆಯನ್ನು ತಮ್ಮ ದಿನಚರಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ವಿಧಾನ ಅರ್ಥೈಸಿಕೊಳ್ಳುವಲ್ಲಿ ಎಡವಿದ್ದಾರೆ ಎಂಬುದು ಬಲವಾಗಿ ತಿಳಿಯುತ್ತದೆ. ವರದಿಯೊಂದರ ಪ್ರಕಾರ ಸೆಲ್ಪಿ ಹುಚ್ಚಿನವರಲ್ಲಿ ಯುವಪೀಳಿಗೆಯೆ ಜಾಸ್ತಿ. 2015ರಲ್ಲಿ ಗೂಗಲ್ ಫೊಟೋಸ್​ಗೆ 24 ಶತಕೋಟಿ ಸೆಲ್ಪಿಗಳನ್ನು ಅಪ್​ಲೋಡ್ ಮಾಡಲಾಗಿತ್ತು. 18-24ರ ವಯಸ್ಸಿನ ಯುವಕ-ಯುವತಿಯರು ದಶಲಕ್ಷಕ್ಕೂ ಅಧಿಕ ಸೆಲ್ಪಿಗಳನ್ನು ತೆಗೆದುಕೊಂಡಿದ್ದಾರೆ ಎಂದು ಗೂಗಲ್ ಅಂದಾಜಿಸಿದೆ. ಸ್ವಂತಿ ಮಾನಸಿಕ ಗೀಳಾಗಿ ಮಾರ್ಪಟ್ಟಿದೆ. ಒಂದೇ ಒಂದು ಫೋಟೋಗಾಗಿ ಜೀವದ ಹಂಗನ್ನೇ ತೊರೆಯುವ ಮನಸ್ಥಿತಿಗೆ ಕಡಿವಾಣ ಅಗತ್ಯವಾಗಿದೆ.

ಸೆಲ್ಪಿ ಎಂಬ ಪದ ಕೇಳಿದೊಡನೆ ಮೊದಲಿಗೆ ನಮ್ಮೆಲ್ಲರ ಕೈ ಕಿಸೆಗೆ ಹೊಕ್ಕಿ, ಮೊಬೈಲ್​ಫೋನ್ ತೆಗೆದು ಚೆಂದದ ಫೊಟೊ ತೆಗೆಯುಬೇಕೆಂಬ ಆಲೊಚನೆ ಥಟ್ ಅಂತ ಹೊಳೆಯುತ್ತದೆ. ಸೆಲ್ಪಿ ಎಂಬುದು ಅಸಂಖ್ಯಾತ ಜನರಿಗೆ ತಮ್ಮ ದಿನಚರಿಯ ಅವಿಭಾಜ್ಯ ಅಂಗ ಎಂಬಂತಾಗಿಬಿಟ್ಟಿದೆ. ಇಂದಿನ ಕಾಲಘಟ್ಟದಲ್ಲಿ ಬಳಕೆಯಾಗುತ್ತಿರುವ ಟೆಕ್ನಾಲಜಿ, ಅದಕ್ಕೆ ಪೂರಕವಾಗಿ ಆಗುತ್ತಿರುವ ಹೊಚ್ಚ ಹೊಸ ಆವಿಷ್ಕಾರಗಳು ಯುವಜನತೆಯನ್ನು ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಅತ್ಯಂತ ಆಕರ್ಷಕ, ಅಮೊಘ ಫೀಚರ್​ಗಳೊಂದಿಗೆ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೆ ಸೆಲ್ಪಿ ಹುಚ್ಚಿಗೆ ಬ್ರೇಕ್ ಹಾಕುವ ಉಪಾಯಗಳು ಮಾತ್ರ ಮಾಯ. ಜಾಲತಾಣಗಳ ಯುಗದಲ್ಲಿ ಸ್ವಪ್ರದರ್ಶನದ ರೋಗಕ್ಕೆ ಮದ್ದಿಲ್ಲ ಎಂಬಂತಾಗಿದೆ.

ಅಪಾಯವಿದ್ದರೂ ಅತ್ಯುತ್ಸಾಹ: ನಮ್ಮೆಲ್ಲರಿಗೂ ತಿಳಿದಿರುವಂತೆ ಈಗ ಶಾಲಾ ಮಕ್ಕಳಿಂದ ಹಿಡಿದು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಯೊಬ್ಬರ ಬಳಿಯಲ್ಲೂ ಸ್ಮಾರ್ಟ್​ಫೋನ್ ಇದೆ. ವ್ಯಾಸಂಗದ ದೃಷ್ಟಿಯಿಂದ ಅದರ ಬಳಕೆ ಕಡ್ಡಾಯ ಎಂಬಂತಾಗಿದೆ. ಅದನ್ನು ಒಂದುಮಟ್ಟಕ್ಕೆ ಸರಿ ಎನ್ನಬಹುದಾದರೂ ಮೋಜಿಗಾಗಿ ಯುವಜನತೆ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವುದು ಅಕ್ಷರಶಃ ದುರಂತ. ಇದಕ್ಕಾಗಿ ದುಬಾರಿ ಮೊಬೈಲ್​ಫೋನ್ ಕೊಳ್ಳುವುದು, ಯಾವ ಮೊಬೈಲ್​ಫೋನ್​ನಲ್ಲಿ ಹೆಚ್ಚಿನ ಮೆಗಾಪಿಕ್ಸಲ್ ಇರುವ ಫ್ರಂಟ್ ಕ್ಯಾಮರಾ ಇದೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಹೇಗಾದರೂ ಸರಿ ಅಂಥ ಫೋನ್ ಖರೀದಿಸುವುದು ಅವ್ಯಾಹತವಾಗಿ ನಡೆಯುತ್ತಿದೆ. ಬಳಿಕ ಒಂದು ರೋಚಕ ಸೆಲ್ಪಿಗಾಗಿ ಮಾಡುವ ಕಸರತ್ತು ಜೀವಕ್ಕೆ ಕುತ್ತು ತರಬಹುದು ಎಂಬ ಅರಿವಿದ್ದರೂ ಅದರ ಕುರಿತು ಮುನ್ನೆಚ್ಚರಿಕೆ ವಹಿಸುವ ಕ್ರಮ ಅನುಷ್ಠಾನವಾಗುತ್ತಿಲ್ಲ. ಸೆಲ್ಪಿ ತೆಗೆಯುವಾಗ ಅಪಾಯದ ಸಾಧ್ಯತೆ ಜಾಸ್ತಿ. ಅದಾಗ್ಯೂ ದುಸ್ಸಾಹಸಕ್ಕೆ ಇಳಿಯುವ ಕೆಲವರು ಅಮೂಲ್ಯ ಜೀವವನ್ನೆ ಕಳೆದುಕೊಳ್ಳುತ್ತಾರೆ. ಈ ಪರಿ ಸೆಲ್ಪ್(ಲ್ಪಿ) ಕಾನ್ಪಿಡೆನ್ಸ್ ಬೇಡ.

Selfie Deaths

ಅಂಕಿ-ಅಂಶಗಳು ಹೇಳುವುದೇನು?: ಭಾರತದಲ್ಲಿ 2011ರಿಂದ 2017ರವರೆಗೆ 250ಕ್ಕೂ ಹೆಚ್ಚು ಜನರು ಸೆಲ್ಪಿಯಿಂದ ಜೀವ ಕಳೆದುಕೊಂಡಿದ್ದಾರೆ. ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಪ್ರಕಾರ, ರಷ್ಯಾ, ಅಮೆರಿಕ, ಪಾಕಿಸ್ತಾನಗಳನ್ನು ಹೊರತುಪಡಿಸಿದರೆ ಹೆಚ್ಚಿನ ಸೆಲ್ಪಿ ಸಾವುಗಳಿಗೆ ಭಾರತ ಸಾಕ್ಷಿಯಾಗುತ್ತಿದೆ. ಗ್ರೂಪ್ ಸೆಲ್ಪಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಇತರೆ ದೇಶಗಳಿಗೆ ಹೋಲಿಸಿದರೆ ಇಲ್ಲಿ ಸಂಭವಿಸುವ ಸಾವಿನ ಸರಾಸರಿ ಹೆಚ್ಚಿನ ಪ್ರಮಾಣದಲ್ಲಿ ಇರಬಹುದು ಎನ್ನುತ್ತಾರೆ ಸಂಶೋಧಕರು. ಬಿಬಿಸಿ ವರದಿ ಪ್ರಕಾರ, ಪ್ರಪಂಚದಲ್ಲಿ ಸರಾಸರಿ 22 ವರ್ಷದ ಯುವಕ-ಯುವತಿಯರ ಸಾವಿಗೆ ಕಾರಣ ಹುಡುಕಿ ಹೊರಟಾಗ ಶೇ. 72 ಯುವಕರು ಮತ್ತು ಶೇ.30 ಯುವತಿಯರನ್ನು ಸೆಲ್ಪಿ ಬಲಿ ಪಡೆದಿದೆ. 2014-15ರಿಂದ 2016-17ರವರೆಗೂ ಸೆಲ್ಪಿಗಾಗಿ ಸಾವು ಪ್ರಕರಣದಲ್ಲಿ ಕ್ರಮೇಣ ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಸೆಲ್ಪಿ ಕ್ಯಾಮರಾ, ಸೆಲ್ಪಿ ಸ್ಟಿಕ್ ಎಂಬ ಆವಿಷ್ಕಾರಗಳು ಮತ್ತು ಸೆಲ್ಪಿಯ ಹುಚ್ಚು. 2022ರ ಅಂತ್ಯದ ವೇಳೆಗೆ ವಿಶ್ವದ ಶೇ. 60ರಷ್ಟು ಸ್ಮಾರ್ಟ್​ಫೋನ್​ಗಳನ್ನು ಭಾರತಿಯರೇ ಖರೀದಿಸಿದ್ದಾರೆ. ಸದ್ಯದ ಮಟ್ಟಿಗೆ 2018ರ ವರದಿ ಬಿಟ್ಟರೆ ತದನಂತರದಲ್ಲಿ ಹೊಸ ಸಮೀಕ್ಷೆ ಪ್ರಕಟವಾಗಿಲ್ಲ. ಆ ಬಳಿಕದ ಸಮೀಕ್ಷೆಯಲ್ಲಿ ಸೆಲ್ಪಿ ಸಾವು ಇನ್ನೂ ಅಧಿಕವಾಗಿರುವ ಸಾಧ್ಯತೆಯೇ ಅಧಿಕ.

ಸೆಲ್ಪಿ ಜೋನ್ ಫಲಕವಷ್ಟೇ ಸಾಲದು: ಆಯಾ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ನೋ ಸೆಲ್ಪಿ ವಲಯಗಳನ್ನು ಗುರುತಿಸಿ, ಫಲಕ ಹಾಕಿ ಎಚ್ಚರಿಕೆ ಮೂಡಿಸುತ್ತಿದೆ. ಇದರ ಪ್ರಕಾರ, ಜನರು ಆ ಸ್ಥಳಗಳಲ್ಲಿ ಸೆಲ್ಪಿ ತೆಗೆಯುವಂತಿಲ್ಲ, ಅಲ್ಲಿ ಸೆಲ್ಪಿ ನಿರ್ಬಂಧಿಸಲಾಗಿರುತ್ತದೆ. ಹಾಗಾದರೆ, ಸೆಲ್ಪಿಪ್ರಿಯರಿಗೆ ಫೋಟೋ ಕ್ಲಿಕ್ಕಿಸಲು ಸೂಕ್ತ ಸ್ಥಳವಿಲ್ಲವೇ? ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ, ಅತಿಹೆಚ್ಚು ಜನರು ಭೇಟಿ ನೀಡುವ ಪ್ರವಾಸಿ ತಾಣ, ಎತ್ತರದ ಪ್ರದೇಶಗಳಲ್ಲಿ ಸೆಲ್ಪಿ ಡೆತ್ ಹಾಟ್​ಸ್ಪಾಟ್ ಎಂದು ಕರೆಯಲಾಗುವ ಸ್ಥಳಗಳಲ್ಲಿ ಪ್ರತ್ಯೆಕ ಸೆಲ್ಪಿ ಜೋನ್ ನಿರ್ಮಾಣ ಮಾಡುವುದು ಅತ್ಯಗತ್ಯ. ಕೇವಲ ‘ಸೆಲ್ಪಿ ಜೋನ್’ ಮತ್ತು ‘ನೋ ಸೆಲ್ಪಿ ಜೋನ್’ ಫಲಕಗಳನ್ನು ಹಾಕಿಸಿದರೆ ಸಾಲದು, ಅವಶ್ಯ ಸಿಬ್ಬಂದಿ ನೇಮಿಸುವುದು ಉತ್ತಮ. ಈ ಮೂಲಕ ಸೆಲ್ಪಿಯಿಂದ ಉಂಟಾಗುವ ಸಾವನ್ನು ನಿಯಂತ್ರಿಸಬಹುದು. ಕೆಲವೊಂದು ಜಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಫಲಕಗಳನ್ನು ಲಗತ್ತಿಸಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ವರ್ತಿಸಿರುವುದನ್ನು ನೋಡಿದ್ದೇವೆ. ಸಂದರ್ಭಕ್ಕೆ ಅನುಗುಣವಾಗಿ ನಿಯಮಗಳನ್ನು ಸರ್ಕಾರ ಮಾಡುತ್ತಲೇ ಇದೆ. ಆದರೆ, ಈ ಎಲ್ಲ ನಿಯಮಗಳು ಯಾರಿಗೆ ಹಾಕಿರುವುದು ಎಂಬುದನ್ನು ಅರಿಯುವಲ್ಲಿ ಜನರು ಎಡವುತ್ತಿದ್ದಾರೆ. ಕೆಲವೊಂದು ಸೂಕ್ಷ್ಮ ವಿಚಾರಗಳಲ್ಲಿ ಸರ್ಕಾರದ ನಿಯಮಗಳಿಗಿಂತ ಸ್ವಂತ ಯೋಚನೆಗಳು ನಮ್ಮ ಜೀವನವನ್ನು ಸಗುಮವಾಗಿರಿಸಲು ಅಗತ್ಯ. ಅಂಥವುಗಳಲ್ಲಿ ಒಂದು ಬಲವಾದ ವಿವೇಚನೆ ಸೆಲ್ಪಿ ಗೀಳಿರುವವರಿಗೆ ಬೇಕಾಗಿದೆ.

ನಿಯಂತ್ರಣ ಹಾಗೂ ಎಚ್ಚರ ಹೇಗೆ?: ಸೆಲ್ಪಿಯಿಂದ ಉಂಟಾಗುವ ಸಾವಿನ ಸಂಖ್ಯೆ ಏಕಾಏಕಿ ನಿಲ್ಲಿಸುವುದು ಕಷ್ಟಕರ. ಆದರೆ, ಇದನ್ನು ಹಂತ ಹಂತವಾಗಿ ನಿಯಂತ್ರಿಸುವ ಕ್ರಮ ಕೈಗೊಳ್ಳಬಹುದು. ಚಲಿಸುತ್ತಿರುವ ರೈಲಿನಲ್ಲಿ ಅಜಾಗರೂಕತೆಯ ಸೆಲ್ಪಿ, ಬೈಕ್​ನಲ್ಲಿ ಸ್ಟಂಟ್ ಸೆಲ್ಪಿ, ಅಪಾಯ ವಲಯಗಳಲ್ಲಿ ದುಸ್ಸಾಹಸಮಯ ಸೆಲ್ಪಿ.. ಹೀಗೆ ಹಲವಾರು ರೀತಿಯ ಸೆಲ್ಪಿ ಹುಚ್ಚಾಟಗಳನ್ನು ನಿಲ್ಲಿಸಿ, ಎಚ್ಚರಿಕೆಯಿಂದ ಫೊಟೊಗಳನ್ನು ತೆಗೆದುಕೊಳ್ಳುವುದು ಸೂಕ್ತ. ಒಂದೊಳ್ಳೆಯ ನೆನಪನ್ನು ಮೆಲುಕು ಹಾಕಲು ತೆಗೆಯುವ ಸೆಲ್ಪಿ ಸವಿ ಕ್ಷಣಗಳಾಗಿ ಉಳಿಯಬೇಕೇ ಹೊರತು ದುರಂತ ಅಂತ್ಯಕ್ಕೆ ಕಾರಣವಾಗಬಾರದು. ಬೆಸ್ಟ್ ಫೋಟೋ ಪಡೆಯಲು ಹೋಗಿ ಅದು ನಮಗೆ ನಾವೇ ಕ್ಲಿಕ್ಕಿಸಿಕೊಂಡ ಕೊನೇ ಫ್ರೇಮ್ ಆಗಬಾರದು.

Selfie Deaths

ಸೆಲ್ಪಿ ಡೆತ್ ಬಗ್ಗೆ ಹೇಳುವುದಾದರೆ, ಜನರು ಹೆಚ್ಚು ಜಾಗರೂಕತೆಯಿಂದ ಇರುವುದಿಲ್ಲ. ಅವರಿಗೊಂದು ಅದ್ಧೂರಿ ಸೆಲ್ಪಿ ತೆಗೆದುಕೊಳ್ಳಬೇಕೆಂಬ ಆಸೆ ಇರುತ್ತದೆ. ಯಾವ ಸಂದರ್ಭಗಳಲ್ಲಿ ಅದನ್ನು ಹೇಗೆ ಕ್ಲಿಕ್ಕಿಸಬೇಕೆಂಬ ಅರಿವು ಇಲ್ಲದೆ ಇರುವುದರಿಂದ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಎಲ್ಲಿ ನಿಂತುಕೊಳ್ಳಬೇಕು, ಹೇಗೆ ಪೋಸ್ ಕೊಡಬೇಕು ಎಂಬ ಬಗ್ಗೆ ಪ್ರಜ್ಞೆ ಇರದಿರುವುದು ಇಂತಹ ಅಪಾಯಕಾರಿ ಘಟನೆಗಳು ಹೆಚ್ಚಾಗಲು ಕಾರಣ. ಸೆಲ್ಪಿಗೆ ಅಷ್ಟೊಂದು ಆಸಕ್ತಿವಹಿಸುವುದು ತಪ್ಪು.

| ಪ್ರತಿಮಾ ಮೂರ್ತಿ ನಿರ್ದೇಶಕಿ, ನಿಮ್ಹಾನ್ಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net