ಸ್ವಯಂ ಆರೈಕೆ ನಿಸ್ವಾರ್ಥ

Lalitha 2
Published on

| ರಾಜೇಶ್ವರಿ ಹಿರೇಮಠ್ ಹವ್ಯಾಸಿ ಬರಹಗಾರ್ತಿ

ಸ್ವಯಂ-ಆರೈಕೆ ಎಂದರೆ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು. ಸ್ವಯಂ ಕಾಳಜಿಯನ್ನು ಅಭ್ಯಾಸ ಮಾಡುವುದು ಎಂದರೆ ಮಹಿಳೆಯರಿಗೆ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನಿರ್ವಹಿಸಲು ಅಧಿಕಾರ ನೀಡುವುದು. ಸಂತೋಷ ಮತ್ತು ಆರೋಗ್ಯಕರ ಜೀವನ ನಡೆಸಲು ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು ಅತ್ಯಗತ್ಯ. ದುರದೃಷ್ಟವಶಾತ್, ನಮ್ಮಲ್ಲಿ ಅನೇಕರು ಸ್ವಯಂ-ಆರೈಕೆಗೆ ಆದ್ಯತೆ ನೀಡುವುದಿಲ್ಲ. ನಾವು ಇತರರನ್ನು ನೋಡಿಕೊಳ್ಳುವಲ್ಲಿ ಅಥವಾ ನಮ್ಮ ಸ್ವಂತ ಅಗತ್ಯಗಳನ್ನು ಕೊನೆಗೊಳಿಸುವುದರಲ್ಲಿ ಕಾರ್ಯನಿರತರಾಗಿ ನಮ್ಮ ಅಸ್ತಿತ್ವವನ್ನು ಮರೆತು ಬಿಡುತ್ತೇವೆ.

ಸ್ವಯಂ-ಆರೈಕೆ ಅಥವಾ ಸ್ವಯಂ ಕಾಳಜಿ ನಿಮ್ಮನ್ನು ನೀವು ಆರೋಗ್ಯಕರವಾಗಿ ಮತ್ತು ಸಂತೋಷವಾಗಿಡುವ ಎಲ್ಲ ಪ್ರಯತ್ನಗಳನ್ನು ಒಳಗೊಂಡಿದೆ. ಸ್ವ-ಆರೈಕೆಯು ದೈಹಿಕ ಆರೈಕೆ ಮಾತ್ರವಲ್ಲದೆ, ಆಧ್ಯಾತ್ಮಿಕ ಮತ್ತು ಮಾನಸಿಕ ಆರೈಕೆಯನ್ನೂ ಒಳಗೊಂಡಿರುತ್ತದೆ. ಅಂದರೆ ಸ್ವಯಂ-ಅರಿವು, ಸ್ವಯಂ-ಶಿಕ್ಷಣ, ಸ್ವಯಂ ನಿಯಂತ್ರಣ ಮತ್ತು ಸ್ವಯಂ-ನಿರ್ಣಯ ಕೂಡ ಅಗತ್ಯ. ಜೀವನದಲ್ಲಿ ಸ್ವಯಂ-ಆರೈಕೆಯ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಮುಂಬರುವ ಕಷ್ಟ ಅಥವಾ ತೊಂದರೆಗಳನ್ನು ಸ್ಥಿರವಾಗಿ, ಸಮಾಧಾನವಾಗಿ ಎದುರಿಸಬಹುದು. ಸ್ವಯಂ ಕಾಳಜಿ ಸ್ವಾರ್ಥವಲ್ಲ ಎನ್ನುವ ಅರಿವು ಅನೇಕರಿಗೆ ಇಲ್ಲ. ಸ್ವ-ಆರೈಕೆ ಎಂದರೆ ನಿಮ್ಮನ್ನು ನೀವು ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುವುದು. ನಿಯಮಿತ ಸ್ವಯಂ-ಆರೈಕೆಯಿಲ್ಲವಾದರೆ, ಅನಾರೋಗ್ಯಕ್ಕೆ ತುತ್ತಾಗುವ ಸಂಭವವೇ ಹೆಚ್ಚು. ಇದರೊಂದಿಗೆ ಒತ್ತಡ, ಆತಂಕ ಮತ್ತು ಖಿನ್ನತೆಗೆ ಸುಲಭವಾಗಿ ಬಲಿಯಾಗುತ್ತೀರಿ. ಉತ್ಸಾಹ ಮತ್ತು ಸಂತೋಷವಾಗಿ ಜೀವನ ಮಾಡಬೇಕೆಂದರೆ ಸ್ವಯಂ ಆರೈಕೆ ಅಗತ್ಯವಾಗಿ ಆಗಬೇಕು. ಇದು ದೈಹಿಕ ಮತ್ತು ಬಾಹ್ಯ ನೋಟಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ನಿಮ್ಮ ಅಗತ್ಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ ನಿಮ್ಮನ್ನು ನೀವು ಪರಿವರ್ತಿಸಿಕೊಳ್ಳುವ ಸಂಪೂರ್ಣ ವಿಧಾನವಾಗಿದೆ.

ಹಲವು ಪ್ರಯೋಜನಗಳಿವೆ

  • ಇದು ಒತ್ತಡ ಕಡಿಮೆ ಮಾಡುತ್ತದೆ
  • ಆತಂಕ ಮತ್ತು ಖಿನ್ನತೆ ನಿವಾರಿಸುತ್ತದೆ
  • ಏಕಾಗ್ರತೆ ಹೆಚ್ಚಿಸುತ್ತದೆ
  • ಹತಾಶೆ ಮತ್ತು ಕೋಪ ಕಡಿಮೆ ಮಾಡುತ್ತದೆ
  • ಸಂತೋಷ ಹೆಚ್ಚಿಸುತ್ತದೆ
  • ಶಕ್ತಿಯ ಮಟ್ಟ ಹೆಚ್ಚಿಸುತ್ತದೆ
  • ಹೃದಯ ರೋಗ ಮತ್ತು ಪಾರ್ಶ್ವವಾಯು ಸಾಧ್ಯತೆ ಕಡಿಮೆ ಮಾಡುತ್ತದೆ
  • ಜೀವನದ ನಿಜವಾದ ಅರ್ಥವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ
  • ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ

ಹೀಗೆ ಮಾಡಿ ನೋಡಿ

  • ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷದ ಸಮಯ ಕಳೆಯಿರಿ
  • ನಿಯಮಿತ ವ್ಯಾಯಾಮ ಮಾಡಿ
  • ಗುಣಮಟ್ಟದ ನಿದ್ರೆಯೊಂದಿಗೆ ಸಮತೋಲಿತ ಆಹಾರ ಸೇವಿಸಿ
  • ಕೆಲಸದಿಂದ ವಿರಾಮ ಮತ್ತು ವಿಶ್ರಾಂತಿ ತುಂಬ ಅಗತ್ಯ
  • ನಿಮ್ಮ ನೆಚ್ಚಿನ ಸಂಗೀತವನ್ನು ಕೇಳುವುದರೊಂದಿಗೆ ಧ್ಯಾನದ ಅಭ್ಯಾಸ ಇರಲಿ
  • ಸಾಧ್ಯವಾಗದ ಬೇಡಿಕೆಗಳಿಗೆ ಇಲ್ಲ ಎನ್ನುವುದನ್ನು ಕಲಿಯಿರಿ
  • ನೀವಿಷ್ಟಪಡುವ ಉತ್ತಮ ಮತ್ತು ಸುಂದರವಾದ ಬಟ್ಟೆಗಳನ್ನು ಧರಿಸಿ
  • ಏನಾದರು ಹೊಸದನ್ನು ಕಲಿಯುತ್ತಿರಿ, ಇಷ್ಟವಾಗುವ ಪುಸ್ತಕಗಳನ್ನು ಓದಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net