ವಿಜ್ಞಾನ ಮಹಿಳೆಯರಿಗೇಕೆ ವೈರಾಗ್ಯದ ತಾಣ?; ಪ್ರತಿಭೆ ಇದ್ದರೂ ಮುಂದಡಿ ಇಡಲು ಹಿಂದೇಟು

Women Science
Published on

| ಮಂಜುನಾಥ್ ಬಿ.ಎಸ್.

ಉಳಿ ಏಟು ಬಿದ್ದರೆ ಬಂಡೆಯೂ ಸುಂದರ ಶಿಲೆ ಆಗುತ್ತದೆ ಎಂಬಂತೆ ಹೆಣ್ಣುಮಕ್ಕಳ ಕೈಗಳು ತಿರುಗದೇ ಇರುವ ಕ್ಷೇತ್ರಗಳೇ ಈಗಿಲ್ಲ. ಶಿಕ್ಷಣ, ರಾಜಕೀಯ, ತಂತ್ರಜ್ಞಾನ, ಸೇನೆ, ಕ್ರೀಡೆ ಹೀಗೆ ಆಕೆಯ ಸಾಧನೆಯ ಕ್ಷೇತ್ರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ..ಎಲ್ಲ ರಂಗಗಳನ್ನೂ ಆಕ್ರಮಿಸಿಕೊಂಡಿರುವ ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಅಲ್ಲೋ, ಇಲ್ಲೋ ಎಂಬಂತೆ ಇದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿರುವ ಮಹಿಳೆಗೆ ವಿಜ್ಞಾನ ಏಕೆ ರುಚಿಸಲಿಲ್ಲ ಎಂದು ಯೋಚಿಸಿದಾಗ ಹಿಂದಿನ ಕಾಲದಂತೆ ಈಗಿನ ಮಹಿಳೆಯರು ವಿಜ್ಞಾನವನ್ನು ಅಪ್ಪಿಕೊಳ್ಳುತ್ತಿಲ್ಲ ಎಂಬ ಅಂಶ ಮನದಟ್ಟಾಗುತ್ತದೆ. ರಾಕೆಟ್ ಏರಿ ಅನ್ಯಗ್ರಹವನ್ನೇ ಮುಟ್ಟಿಬರುವ ಈ ಕಾಲದಲ್ಲಿ ನಮ್ಮ ಭಾರತೀಯ ನಾರಿಯರು ವಿಜ್ಞಾನದಿಂದ ಏಕೆ ದೂರವಿದ್ದಾರೆ? ಹೀಗೊಂದು ಪ್ರಶ್ನೆ ಇಂದಿಗೂ ಕಾಡುತ್ತಲೇ ಇದೆ. ಈ ಕುರಿತ ಕಿರು ವಿಶ್ಲೇಷಣೆ ಇಲ್ಲಿದೆ.

ಅಣ್ಣಾಮಣಿ, ಅನ್ನಪೂರ್ಣಿ ಸುಬ್ರಹ್ಮಣ್ಯಂ, ರಮಣ್ ಪರಿಮಳ, ರತ್ನಶ್ರೀ, ರೋಹಿಣೆಗೋಡ್ಬಾಲೆ, ಡಾ.ವಿ.ಶಾಂತಾ, ಸೌಮ್ಯ ಸ್ವಾಮಿನಾಥನ್, ಸುಜಾತಾ ರಾಮದೊರೈ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಹೆಸರು ನೆಟ್ಟ ಮಹಿಳಾ ವಿಜ್ಞಾನಿಗಳಿವರು. ಭಾರತದಲ್ಲಿ ವಿಜ್ಞಾನ ಕ್ಷೇತ್ರ ಪುರುಷ ಪ್ರಧಾನವಾಗಿದೆ. ಹಾಗಂದ ಮಾತ್ರಕ್ಕೆ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದಲ್ಲ. ಇನ್ನೂ ಸರಳವಾಗಿ ಹೇಳುವುದಾದರೆ ಮಹಿಳೆಯರು ಈ ಕ್ಷೇತ್ರದಲ್ಲೂ ಧರ್ಮ, ಲಿಂಗಸಮಾನತೆ, ಧನಸಹಾಯದ ಸಂಕಷ್ಟಕ್ಕೀಡಾಗಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ವಿಜ್ಞಾನ ಕ್ಷೇತ್ರ ಗೌರವ ಪುರಸ್ಕಾರಗಳಲ್ಲಿ ಸಾಧಕಿಯರ ಹೆಸರು ಕೇಳುವುದೇ ಅಪರೂಪ. ಏಕೆ ಹೀಗೇ? ಎಂಬ ಪ್ರಶ್ನೆ ಇಂದಿಗೂ ಕಾಡುತ್ತಿದೆ.

ಏನಾಗಬೇಕು?: ಸಾಮಾಜಿಕ ಮಟ್ಟದಲ್ಲಿ ಬದಲಾವಣೆ ತರಲು ಹೆಣ್ಣುಮಕ್ಕಳು ನಾಯಕತ್ವದ ಗುರಿ ತಲುಪಬೇಕು. ಸದ್ಯ ಮಹಿಳಾ ವಿಜ್ಞಾನ ಕ್ಷೇತ್ರ ಉನ್ನತ ಹುದ್ದೆಯಲ್ಲಿರುವವರು ಹಾಗೂ ವಿಶೇಷ ವರ್ಗದಿಂದ ಬಂದವರಿಗೆ ಸೀಮಿತವಾಗಿದೆ. ಪುರುಷ ಅಭ್ಯರ್ಥಿಗಳೂ ಇನ್ನೂ ಹೆಚ್ಚಿನ ಹಿರಿಯ ನಾಯಕತ್ವದ ಸ್ಥಾನದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಈ ಸ್ಥಿತಿ ಬದಲಾಗಬೇಕು. ಹೆಣ್ಣುಮಕ್ಕಳನ್ನು ವಿಜ್ಞಾನ ಕ್ಷೇತ್ರಗಳಿಗೆ ಆಕರ್ಷಿಸುವಂತಹ ವಿವಿಧ ಸೌಲಭ್ಯ ವಿಸ್ತರಿಸಬೇಕು. ಜಾಗೃತಿ ಮೂಡಿಸುವಂತಹ ಕಾರ್ಯಗಳು ನಡೆಯಬೇಕು. ಭಾರತದಲ್ಲಿ ಹೆಚ್ಚು ಮಹಿಳಾ ಗ್ರಾಮೀಣ ಪ್ರತಿಭೆಗಳಿವೆ. ಆದರೆ ಬಹುತೇಕರಿಗೆ ವಿಜ್ಞಾನ ಕ್ಷೇತ್ರದ ಮಹತ್ವ, ಆಕರ್ಷಣೆಯ ಅನುಭವವಾಗಿಲ್ಲ. ಇಂಥವರನ್ನು ಗುರುತಿಸುವ ಕಾರ್ಯ, ಶಾಲಾ, ಕಾಲೇಜು ಮಟ್ಟದಿಂದಲೇ ಆಗಬೇಕು. ಹೀಗಾದಲ್ಲಿ ಇನ್ನೆರಡು ದಶಕಗಳಲ್ಲಿ ಮಹಿಳಾ ಪ್ರತಿಭಾವಂತರು ವಿಜ್ಞಾನಿಗಳಾಗುವುದರಲ್ಲಿ ಸಂಶಯವಿಲ್ಲ.

ಜಾಗತಿಕ ಮನ್ನಣೆ: ಭಾರತಕ್ಕೆ ಹೋಲಿಸಿದಲ್ಲಿ ಅನೇಕ ರಾಷ್ಟ್ರಗಳು ವಿಜ್ಞಾನದಲ್ಲಿ ಬಹಳ ಮುಂದಿವೆ. ಇದಕ್ಕೆ ಕಾರಣ ಪ್ರತಿಭೆಗಳ ಅಗಾಧಶಕ್ತಿ. ಭಾರತದಲ್ಲೂ ಮಹಿಳಾಶಕ್ತಿ ವಿಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟರೆ ನಾವೂ ಕೂಡ ಮುಂಚೂಣಿಯಲ್ಲಿ ನಿಲ್ಲಬಹುದು. ಇದು ಆರ್ಥಿಕವಾಗಲ್ಲದೆ, ಜಾಗತಿಕಮಟ್ಟದಲ್ಲಿ ವಿವಿಧ ಸಾಧನೆ, ಸಂಶೋಧನೆಗಳಿಗೂ ಪ್ರೇರಕವಾಗುತ್ತದೆ. ಬಲಾಢ್ಯ ಭಾರತಕಟ್ಟುವ ಆಶಯಕ್ಕೂ ನೀರೆರೆಯುತ್ತದೆ.

ಖ್ಯಾತ ಮಹಿಳಾ ವಿಜ್ಞಾನಿಗಳು

1. ಅಸೀಮಾ ಚಟರ್ಜಿ: ಸಾವಯವ ವಿಜ್ಞಾನಿ

2. ಇಂದಿರಾ ಹಿಂದುಜ: ಸ್ತ್ರೀರೋಗ ತಜ್ಞೆ

3. ಶುಭಾ ತೊಲೆ: ನರರೋಗತಜ್ಞೆ

4. ದರ್ಶನ್ ರಂಗನಾಥನ್: ಬಯೋ ಆರ್ಗ್ಯಾನಿಕ್

5. ಪರಂಜಿತ್ ಕುರಾನಾ: ಆರೋಗ್ಯ ತಜ್ಞೆ

ತಿರಸ್ಕಾರ ಏಕೆ?

  • ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಶ್ರಮ, ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲೇಬೇಕು, ಸಂಶೋಧನೆಯಂತಹ ಸಂದರ್ಭಗಳಲ್ಲಿ ಕುಟುಂಬ ತೊರೆದು ತಿಂಗಳುಗಟ್ಟಲೆ ಕಷ್ಟಪಡಬೇಕು. ಆದರೆ ಬೆಳಗ್ಗೆ ಕಚೇರಿಗೆ ಬಂದು ಸಂಜೆ ಮನೆಗೆ ಹೋಗಲು ಬಯಸುವ ಬಹುತೇಕ ಮಹಿಳೆಯರಿಗೆ ಇಂತಹ ಕಷ್ಟದ ಉದ್ಯೋಗ ಬೇಕಿರುವುದಿಲ್ಲ.
  • ಅತ್ಯುತ್ತಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಮುಗಿಸಿದ ಹಾಗೂ ಇಂಗ್ಲಿಷ್​ನಲ್ಲಿ ಹಿಡಿತ ಹೊಂದಿರುವವರಿಗೆ ವಿಜ್ಞಾನ ಕ್ಷೇತ್ರ ಸುಲಭವಾಗುತ್ತದೆ. ಆದರೆ ಗ್ರಾಮ ಪ್ರಧಾನ ದೇಶವಾಗಿರುವ ಭಾರತದಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ತಾಂತ್ರಿಕ ಇಂಗ್ಲಿಷ್​ಗೆ ಈಗಲೂ ಹೆದರುತ್ತಾರೆ. ಇದು ಕೂಡ ಅವರ ವಿಜ್ಞಾನ ವೈರಾಗ್ಯಕ್ಕೆ ಪ್ರಮುಖ ಕಾರಣ.
  • ವಿಜ್ಞಾನ ಕ್ಷೇತ್ರದಲ್ಲಿ ಪುರುಷರ ಪ್ರಾಬಲ್ಯವಿರುವುದು ಗುಟ್ಟೇನಲ್ಲ. ಬಹುತೇಕ ಸಂದರ್ಭದಲ್ಲಿ ಮಹಿಳೆಯರು ಮೂಲೆ ಗುಂಪಾಗುವ ಆರೋಪ ಇದ್ದೇ ಇರುತ್ತದೆ.
  • ಇನ್ನು ಲಿಂಗ, ವೃತ್ತಿ ಮತ್ಸರ, ಲೈಂಗಿಕ ಕಿರುಕುಳದಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆಂಬ ಅಭಿಪ್ರಾಯವಿದೆ.
  • ಭಾರತದ ಉದ್ಯೋಗಸ್ಥ ಮಹಿಳೆಯರಲ್ಲಿ ಬಹು ತೇಕರು ವೇತನಕ್ಕೆ ಪ್ರಾಧಾನ್ಯತೆ ಕೊಡುವುದರಿಂದ ಹೆಸರು, ಖ್ಯಾತಿಗಷ್ಟೇ ಅವಕಾಶವಿರುವ ವಿಜ್ಞಾನ ಕ್ಷೇತ್ರ ಯಾರಿಗೂ ಬೇಕಾಗಿಲ್ಲ.

ಸೌಲಭ್ಯಗಳೇನು?

  • ರಾಜೀವ್ ಗಾಂಧಿ ರಾಷ್ಟ್ರೀಯ ಶಿಶುವಿಹಾರ್ ಯೋಜನೆ ವಿಜ್ಞಾನ ಕ್ಷೇತ್ರದ ಮಹಿಳೆಯರಿಗೆ ಡೇಕೇರ್ ಸೌಲಭ್ಯ ಒದಗಿಸುತ್ತದೆ.
  • ಲೈಂಗಿಕ ಕಿರುಕುಳದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರತ್ಯೇಕ ಘಟಕಗಳಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net