

| ಡಾ. ಶ್ರೀಲತಾ ಪದ್ಯಾಣ
ಈಗೀಗ ಏಕೋ ತುಂಬಾ ಸುಸ್ತು, ಜಾಸ್ತಿ ಬೆವರುವುದು, ಮೈ ಬಿಸಿ ಆದಂತಾಗುವುದು, ಮುಖದಲ್ಲಿ ಕಪ್ಪು ಕಲೆಗಳು, ಮನಸ್ಸಿಗೆ ಬೇಜಾರು, ಯಾವುದರಲ್ಲಿಯೂ ಉತ್ಸಾಹವಿಲ್ಲದಿರುವುದು, ಮುಟ್ಟಿನಲ್ಲಿ ವ್ಯತ್ಯಾಸವಾಗುವುದು, ರಕ್ತಸ್ರಾವ ಬೇಗನೆ ನಿಲ್ಲದಿರುವುದು, ತಲೆತಿರುಗಿದಂತಾಗುವುದು ಎಂದೆಲ್ಲಾ ನಿಮ್ಮ ಮನೆಯಲ್ಲಿ ತಾಯಿ, ಪತ್ನಿ, ಗೆಳತಿ, ಸಂಬಂಧಿಕರು ಹೇಳುವುದನ್ನು ನೀವು ಗಮನಿಸಿರಬಹುದು. ಅವರಿಗಾಗುವ ಸಮಸ್ಯೆಯಾದರೂ ಏನಿರಬಹುದು ಎಂದು ಊಹಿಸಿದ್ದೀರಾ? ಅಥವಾ ಅವರು ಅಸಹಾಯಕ ಸ್ಥಿತಿಯಲ್ಲಿರುವಾಗ ನೀವು ಸ್ವಲ್ಪವಾದರೂ ಧೈರ್ಯ ತುಂಬಿ ಕೆಲಸಕ್ಕೆ ಕೈಗೂಡಿಸಿದ್ದೀರಾ? ಇಲ್ಲವೆಂದಾದಲ್ಲಿ ನೀವು ಅವರ ಕಡೆಗೆ ಇನ್ನು ಗಮನ ಹರಿಸಲೇಬೇಕು.
ಮಿದುಳಿನ ಹಾರ್ಮೋನ್ಗಳು ಅಂಡಾಶಯದ ಹಾರ್ವೇನ್ಗಳನ್ನು ಪ್ರಚೋದಿಸಿ ಮಹಿಳೆಯರಲ್ಲಿ ಪ್ರತಿ ತಿಂಗಳು ಮುಟ್ಟಾಗುವಂತೆ ಮಾಡುತ್ತದೆ. ಅಂಡಾಶಯದಿಂದ ಬಿಡುಗಡೆಗೊಂಡ ಅಂಡಾಣುಗಳು ಗರ್ಭನಾಳದ ಮೂಲಕ ಸಾಗಿ ಗರ್ಭಕೋಶ ಸೇರುತ್ತದೆ. ಅದು ಅಲ್ಲಿ ಎಂಡೊಮೆಟ್ರಿಯಮ್ ಎಂಬ ಪದರವನ್ನು ಹರಿದಾಗ ರಕ್ತಸ್ರಾವ ಉಂಟಾಗುತ್ತದೆ. ಆದರೆ ವಯಸ್ಸಾಗುತ್ತಿದ್ದಂತೆ ಮೆನೋಪಾಸ್ ಸಮಯದಲ್ಲಿ ಈಸ್ಟ್ರೋಜೆನ್ ಹಾರ್ವೇನ್ ವ್ಯತ್ಯಾಸವುಂಟಾಗಿ ಮುಟ್ಟಿನಲ್ಲಿ ಏರುಪೇರಾಗುತ್ತದೆ. ಮುಟ್ಟು ನಿಲ್ಲುತ್ತದೆ. ಕೆಲವೊಮ್ಮೆ 2-3 ತಿಂಗಳು ಮುಟ್ಟಾಗದೇ ಇರಬಹುದು ಅಥವಾ ರಕ್ತಸ್ರಾವ ಹಲವು ದಿನಗಳವರೆಗೆ ಮುಂದುವರಿಯುತ್ತ ಇರುವ ಲಕ್ಷಣಗಳೂ ಕಾಣಬಹುದು. ಒಂದರಿಂದ ಎರಡು ವರ್ಷಗಳ ಕಾಲ ಮುಟ್ಟಾಗದೆ ಇದ್ದರೆ ಮೆನೋಪಾಸ್ ಆಗಿದೆ ಎಂದರ್ಥ. ಈ ಸಂದರ್ಭದಲ್ಲಿ ಗರ್ಭಕೋಶ, ಅಂಡಾಶಯಗಳು ಚಿಕ್ಕದಾಗುತ್ತವೆ. ಲೈಂಗಿಕಾಸಕ್ತಿ ಕುಂದುವುದು, ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದರೆ ಅಲ್ಲಿಗೆ ಜೀವನ ಮುಗಿಯಿತು ಎಂದು ಹತಾಶರಾಗಬೇಕಿಲ್ಲ. ಜೀವನ ಸಾಗಿಸಬಹುದು. ಇನ್ನು, ಇತರ ಕಾರಣಗಳಿಂದ ಅಂದರೆ ಆಧುನಿಕ ಜೀವನ ಶೈಲಿಯಿಂದ ಅಕಾಲಿಕ ಮೆನೋಪಾಸ್ ಆಗುವ ಸಂಭವಗಳು ಹೆಚ್ಚು. ಯಾವುದೇ ಕಾರಣಕ್ಕೂ ಹೆದರಿ ಕುಳಿತುಕೊಳ್ಳುವುದಕ್ಕಿಂತ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳುವುದು ಉತ್ತಮ.
ಮೆನೋಪಾಸ್ ಸಮಯದಲ್ಲಿ ಮಹಿಳೆಯ ದೇಹದಲ್ಲಾಗುವ ಹಲವು ಬದಲಾವಣೆಗಳಿಂದಾಗಿ ಮಾನಸಿಕ ನೆಮ್ಮದಿ ಹಾಳಾಗಬಹುದು, ಇದರಿಂದ ಯಾವುದೇ ಕೆಲಸ ಮಾಡಲು ಹುರುಪಿರುವುದಿಲ್ಲ. ಬೇಸರ, ಉದ್ವೇಗಕ್ಕೊಳಗಾಗುತ್ತಾರೆ, ದೇಹದ ಶಕ್ತಿ ಕುಂದುತ್ತಿರುತ್ತದೆ. ಇದರಿಂದಾಗಿ ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಅವರಿಗೆ ವಿಶ್ರಾಂತಿಯ ಜೊತೆಗೆ ವ್ಯಾಯಾಮವು ಅವಶ್ಯಕವಾಗಿ ಮಾಡಬೇಕಾಗುತ್ತದೆ. ಇದನ್ನು ಅರ್ಥಮಾಡಿಕೊಂಡು ಮನೆಮಂದಿ ಎಲ್ಲರೂ ಮಹಿಳೆಯ ಮನಸ್ಸನ್ನು ಉಲ್ಲಾಸದಿಂದಿರುವಂತೆ ನೋಡಿಕೊಳ್ಳಬೇಕು. ತಾತ್ಸಾರ ಮಾಡದೆ ಪರಸ್ಪರ ಹೊಂದಾಣಿಕೆ, ಅನ್ಯೂನ್ಯತೆಯೊಂದಿಗೆ ಎಲ್ಲರೂ ಕುಳಿತು ಮಾತನಾಡುವುದು, ಅವರ ಆಲೋಚನೆಗಳಿಗೆ ತಕ್ಕಂತೆ ವರ್ತಿಸುವುದು, ಮನಸ್ಸಿಗೆ ಸಂತೋಷ ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವುದು, ಅವರಿಗೆ ಮಾಡಲಾಗದಿರುವ ಕೆಲಸಗಳಲ್ಲಿ ಸಹಾಯ ಮಾಡುವುದು ಇತ್ಯಾದಿಗಳಲ್ಲಿ ಸಹಕರಿಸಬೇಕು. ಸಕಾರಾತ್ಮಕ, ಭಾವನಾತ್ಮಕ ಬೆಂಬಲವನ್ನು ನೀಡುವುದು ಮುಖ್ಯ.