

| ಶ್ವೇತಾ ನಾಯ್ಕ್
ವಾತಾವರಣದಲ್ಲಿ ಏನೇ ಬದಲಾವಣೆ ಆದರೂ ಮೊದಲು ಹಾನಿಯಾಗುವುದು ಚರ್ಮದ ಮೇಲೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ವಾತಾವರಣ ಇರುವುದಿಲ್ಲ. ಬೆಳಗ್ಗೆ ಮತ್ತು ಸಂಜೆ ಅತಿಯಾದ ಚಳಿ ಇದ್ದರೆ ಮಧ್ಯಾಹ್ನ ಹೆಚ್ಚು ಬಿಸಿಲಿನ ಪ್ರಕರತೆ ಇರುತ್ತದೆ. ಇದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮ ಒಣಗಿದಂತಾಗುತ್ತದೆ. ಚಳಿಗಾಲದಲ್ಲಿ ನೀರಡಿಕೆ ಜಾಸ್ತಿ ಆಗುವುದಿಲ್ಲ. ಆಗ ನಾವು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತೇವೆ. ಸಹಜವಾಗಿ ಚರ್ಮ ಒಣಗಿ ಸುಕ್ಕುಗಟ್ಟಿದಂತಾಗುತ್ತದೆ.
ವಾತಾವರಣಕ್ಕೆ ತಕ್ಕಂತೆ ನಮ್ಮ ದಿನನಿತ್ಯದ ಶೈಲಿ ಯನ್ನೂ ಬದಲಾಯಿಸಿಕೊಳ್ಳಬೇಕಾಗುತ್ತದೆ.ಹಾಗೆಯೇ ಚಳಿಗಾಲದಲ್ಲಿ ಆದಷ್ಟು ಬೆಚ್ಚಗಿನ ಉಡುಪುಗಳನ್ನೇ ಧರಿಸಬೇಕು. ಬೆಳಗ್ಗೆ ವಾಕಿಂಗ್ ಹೋಗುವಾಗ ಇಡೀ ದೇಹ ಉಣ್ಣೆ ಅಥವಾ ಹತ್ತಿಯ ಬಟ್ಟೆಗಳಿಂದ ಕವರ್ ಆಗಿರುವಂತೆ ನೋಡಿಕೊಳ್ಳ ಬೇಕು. ಚಳಿ ಅಂತ ಅತಿಯಾದ ಬಿಸಿ ನೀರು ಬಳಸುವ ಅಭ್ಯಾಸ ಪ್ರತಿಯೊಬ್ಬರಲ್ಲೂ ಇದೆ. ಇದನ್ನು ಆದಷ್ಟು ಕಡಿಮೆ ಮಾಡಬೇಕು. ಮಧ್ಯಮ ಬಿಸಿ ನೀರು ಸಾಕು.
ಚರ್ಮದ ಕಾಯಿಲೆ ಇರುವವರಿಗೆ ಈ ವಾತಾವರಣ ಹೆಚ್ಚೇ ಪರಿಣಾಮ ಬೀರುತ್ತದೆ. ಅಲರ್ಜಿ, ಇಸುಬು, ಸೋರಿಯಾಸಿಸ್, ತಲೆ ಹೊಟ್ಟು, ಮಂಡಿನೋವು, ಮೊಡವೆ, ಫಂಗಲ್ ಇನ್ಫೆಕ್ಷನ್ ಜಾಸ್ತಿ ಆಗುವ ಸಂಭವ ಇರುತ್ತದೆ. ಯಾವುದೇ ಕಾಯಿಲೆಯಿಂದ ಬಳಲುವವರಿಗೆ ಇದು ಕೆಟ್ಟ ವಾತಾವರಣ. ಚಳಿ ಜಾಸ್ತಿ ಆದಂತೆ ನೋವು, ಉರಿ ಹೆಚ್ಚಾಗುತ್ತದೆ. ನೀರಿನಲ್ಲಿ ಹೆಚ್ಚು ಕೆಲಸ ಮಾಡಿದಾಗ ಬೆರಳ ಸಂದಿಯಲ್ಲಿ ಉರಿ ಅಥವಾ ತುರಿಕೆ ಶುರುವಾಗುತ್ತದೆ.
ಲೋಳೆಸರ (ಅಲೊವೆರಾ ಜೆಲ್), ಬಾದಾಮಿ ಎಣ್ಣೆ, ಬೆಣ್ಣೆ ಈ ಮೂರನ್ನೂ ಮಿಶ್ರಣ ಮಾಡಿ ಜೆಲ್ ಮಾಡಿಕೊಂಡು ಪ್ರತಿದಿನ ರಾತ್ರಿ ಮಲಗುವ ಮುನ್ನ ಮುಖ ಹಾಗೂ ತುಟಿಗೆ ಹಚ್ಚುವುದರಿಂದ ಚರ್ಮ ಮೃದುತ್ವ ಕಳೆದುಕೊಳ್ಳುವುದಿಲ್ಲ. ಸ್ನಾನಕ್ಕೆ ಮುಂಚೆ ಇಡೀ ದೇಹಕ್ಕೆ ಬೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಸವರಿಕೊಳ್ಳುವುದು ಉತ್ತಮ. ಚರ್ಮ ಒಣಗಿದಂತೆ ಕಾಂತಿಯೂ ಕಡಿಮೆಯಾಗುತ್ತಾ ಬರುತ್ತದೆ. ಹಾಗಾಗಿ ಚರ್ಮ ಒಣಗದಂತೆ ನೋಡಿಕೊಳ್ಳಬೇಕು. ಹಿಮ್ಮಡಿ ಒಡೆದರೆ ಕರಗಿಸಿದ ಜೇನು ಮೇಣ, ಕೊಬ್ಬರಿ ಎಣ್ಣೆ ಮತ್ತು ಬೇವಿನ ಎಲೆ ರಸವನ್ನು ಮಿಕ್ಸ್ ಮಾಡಿ ಪ್ರತಿದಿನ ಹಚ್ಚಿದರೆ ಬಿರುಕು ಕ್ರಮೇಣ ಕಡಿಮೆಯಾಗುತ್ತದೆ.
ದೇಹದ ಉಷ್ಣತೆಗಿಂತ ಹೊರಗಡೆ ಚಳಿ ಜಾಸ್ತಿ ಇರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳಲು ದೇಹ ಹೆಚ್ಚು ಶ್ರಮ ಪಡುವ ಸ್ಥಿತಿ ಇರುತ್ತದೆ. ಶ್ರಮಪಡುವ ಸಮಯದಲ್ಲಿ ದೇಹದ ಉಷ್ಣತೆ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನು ನಿಯಂತ್ರಣದಲ್ಲಿಡುವ ಸಲುವಾಗಿ ನಾವು ಚಳಿಗಾಲದಲ್ಲಿ ಕೆಲವೊಂದು ಆಹಾರ ಪದಾರ್ಥ ಬಳಸಬೇಕಾಗುತ್ತದೆ. ಬಿಸಿ ಪದಾರ್ಥಗಳು ನಮ್ಮನ್ನು ಆದಷ್ಟು ಬೆಚ್ಚಗಿಡುತ್ತವೆ. ತಿಳಿಸಾರು, ಸೂಪ್, ತರಕಾರಿ ರಸ, ಹಣ್ಣಿನ ರಸ, ಲವಂಗ, ಮೆಣಸು, ಶುಂಠಿ, ಬೆಳ್ಳುಳ್ಳಿ ಬಳಕೆ ಸೂಕ್ತ.
ಚಳಿಗಾಲದಲ್ಲಿ ಆದಷ್ಟು ತಂಗಳು ಪದಾರ್ಥ ಬಳಕೆ ಕಡಿಮೆ ಮಾಡಿ. ಬಿಸಿ ಆಹಾರ ಸೂಕ್ತ. ಮೆಣಸು, ಜೀರಿಗೆ, ಬೆಲ್ಲ ಹಾಕಿ ತಯಾರಿಸಿದ ಕಷಾಯ ಬಳಸಬಹುದು. ಚರ್ಮ ಸಹಜವಾಗಿರಲು, ಕಾಂತಿ ಕಳೆದುಕೊಳ್ಳದಿರಲು ಆದಷ್ಟು ನೀರು ಕುಡಿಯಿರಿ.
| ಡಾ. ವಸುಂಧರಾ ಭೂಪತಿ ಆಯುರ್ವೆದ ತಜ್ಞೆ
ಚಳಿಗಾಲದಲ್ಲಿ ವಯಸ್ಸಾದವರು ಮತ್ತು ಮಕ್ಕಳು ಹೆಚ್ಚು ದೇಹವನ್ನು ಆರೈಕೆ ಮಾಡಿಕೊಳ್ಳಬೇಕು. ಇವರ ಚರ್ಮ ಸೆನ್ಸಿಟಿವ್ ಇರುವುದರಿಂದ ಬೇಗ ಕಾಯಿಲೆ ಹರಡುವ ಸಂಭವ ಇರುತ್ತದೆ. ಹಿತಮಿತ ಆಹಾರ ಸೇವನೆಯೊಂದಿಗೆ ಚರ್ಮವನ್ನೂ ಆರೋಗ್ಯವಾಗಿಟ್ಟುಕೊಳ್ಳಬೇಕು.
| ಡಾ. ಗಿರೀಶ್ ಚರ್ಮರೋಗ ತಜ್ಞ
ಬೆಚ್ಚಗಿನ ಬಟ್ಟೆಗಳನ್ನು ಧರಿಸಿದರೆ ಶರೀರದ ಉಷ್ಣತೆ ಹೆಚ್ಚು ನಾಶವಾಗುವುದಿಲ್ಲ. ದೇಹದಲ್ಲಿ ಉಷ್ಣತೆ ಕಡಿಮೆಯಾದಂತೆ ಚರ್ಮದ ಒಂದು ಪದರ ಹೆಪು್ಪಗಟ್ಟುತ್ತದೆ. ಹಾಗಾಗಿ ಚರ್ಮ ಒಡೆಯುವುದು. ಇದನ್ನು ತಡೆಯಲು ಚೆನ್ನಾಗಿ ಬೇಯಿಸಿದ ಆಹಾರ ಸೇವಿಸಬೇಕು.
| ಡಾ.ಎಚ್.ಎಸ್. ಪ್ರೇಮಾ ಆಹಾರ ತಜ್ಞೆ
· ನೀರನ್ನು ಜಾಸ್ತಿ ಕುಡಿದಾಗ ದೇಹದಲ್ಲಿ ತೇವಾಂಶ ಹಾಗೆಯೇ ಇರುತ್ತದೆ. ಆಗ ದೇಹ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ
· ನೀರಿಗೆ ಒಂದು ಚಮಚ ತುಪ್ಪ ಅಥವಾ ರೋಸ್ ವಾಟರ್ ಹಾಕಿ ಸ್ನಾನ ಮಾಡಬೇಕು. ಇದು ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ
· ವಾರಕ್ಕೊಮ್ಮೆ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಮೈಗೆ ಹಚ್ಚಿ ಅಭ್ಯಂಗ ಸ್ನಾನ ಮಾಡಬೇಕು.
· ಸ್ನಾನ ಆದ ತಕ್ಷಣ ಚರ್ಮ ತೇವಾಂಶ ಇರುವಾಗಲೇ ಮಾಯಿಶ್ಚರೈಸರ್ ಬಳಸಬೇಕು. ಕೊಬ್ಬರಿ ಎಣ್ಣೆ ಬಳಕೆಯೂ ಒಳ್ಳೆಯದು
· ಆಹಾರದಲ್ಲಿ ಎಣ್ಣೆ ಕಾಳುಗಳನ್ನು ಹೆಚ್ಚಾಗಿ ಬಳಸಬೇಕು. ಅಂದರೆ ಶೇಂಗಾ, ಬಾದಾಮಿ ಸೂಕ್ತ
· ಚಳಿ ಅಂತ ಖಾರ, ಮಸಾಲ ಪದಾರ್ಥ ಜಾಸ್ತಿ ಬಳಸುತ್ತೇವೆ. ಇದು ಚರ್ಮವನ್ನು ಒಣಗಿಸುತ್ತದೆ. ಹೆಚ್ಚಾಗಿ ಹಾಲು, ಮೊಸರು ಬಳಸಬೇಕು. ರಾತ್ರಿ ಥಂಡಿ ಎನಿಸಿದರೆ ಮಧ್ಯಾಹ್ನದ ವೇಳೆ ಮಜ್ಜಿಗೆ, ಹಾಲು ಬಳಸಬಹುದು
· ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬಾರದು. ಸೊಪು್ಪ, ತರಕಾರಿ, ಹಣ್ಣುಗಳನ್ನು ಸೇವಿಸಬೇಕು
· ಚಳಿಯಲ್ಲಿ ಐಸ್ಕ್ರೀಮ್ ಬೇಡ. ದೇಹದ ಉಷ್ಣತೆ ಮೊದಲೇ ಕಡಿಮೆಯಾಗಿರುತ್ತದೆ. ಐಸ್ಕ್ರೀಮ್ ಸೇವನೆಯಿಂದ ಇನ್ನಷ್ಟು ಹದಗೆಡಬಹುದು
· ಎಂತಹ ಚಳಿ ಇದ್ದರೂ ಸೂರ್ಯನ ಅತಿನೇರಳೆ ಕಿರಣ ಭೂಮಿ ತಲುಪುವುದು ತಪ್ಪಲ್ಲ. ಆದ್ದರಿಂದ ಹೊರ ಹೋಗುವ ಮುನ್ನ ಸನ್ಸ್ಕ್ರೀನ್ ಬಳಕೆ ಅತಿಮುಖ್ಯ
· ಬಿಸಿಬಿಸಿ ಕಡ್ಲೆಕಾಯಿ ಬೀಜ ಸೇವಿಸಬಹುದು. ಅಥವಾ ಅಡುಗೆಯಲ್ಲಿ ಕಡಲೆಕಾಯಿ ಎಣ್ಣೆ ಅಥವಾ ಸಾಸಿವೆ ಎಣ್ಣೆ ಬಳಸಬಹುದು