

ಕನಸುಗಳಿಗೆ ಲಿಂಗ ಭೇದವಿಲ್ಲ. ಗಂಡೋ ಹೆಣ್ಣೋ ಎಂದು ನೋಡಿಕೊಂಡು ಬರುವುದಿಲ್ಲ. ಕನಸು ಕಾಣುವುದು ಹೆಣ್ಣಿನ ಹಕ್ಕು ಕೂಡ. ಯಾಕವಳಿಗೆ ಜೀವವಿಲ್ಲವೇ? ಮನಸ್ಸಿಲ್ಲವೇ? ಭಾವನೆಗಳಿಲ್ಲವೇ?. ಇದೆ ಎಂದ ಮೇಲೆ ಕನಸುಗಳೇಕೆ ಬೀಳಬಾರದು. ಬಿದ್ದ ಮೇಲೆ ಅವುಗಳನ್ನು ನನಸು ಮಾಡಿಕೊಳ್ಳಬಾರದೇಕೆ? ಎಲ್ಲರೂ ಹುಟ್ಟುವಾಗ ಒಂಟಿಯೇ. ಆದರವರ ಬಾಳಲ್ಲಿ ಬರುವ ಹಲವು ಪಾತ್ರಗಳು ಯಾರ್ಯಾರು, ಎಷ್ಟೆಷ್ಟು ಬೆಂಬಲ ನೀಡುವರೆಂಬುದು ಮುಖ್ಯವಾಗುವುದು. ಬದುಕಿನ ವಿವಿಧ ಘಟ್ಟಗಳಲ್ಲಿ ಪ್ರವೇಶ ನೀಡುವ ಪಾತ್ರಗಳ ಬಗೆಗೆ ಬಾಲ್ಯದಲ್ಲೇ ತಿಳಿದಿರದ ಅವಳಿಗೆ, ಸಣ್ಣ ವಯಸ್ಸಿನಿಂದಲೇ ತನ್ನ ಬದುಕಿಗೆ ರಂಗು ಭರಿಸಲು ಅಣಿಯಾಗುತ್ತಾಳೆ.
ಇಷ್ಟೆಲ್ಲಾ ಬಣ್ಣ ತುಂಬಿದ ಬದುಕು ಮುಂದೆ ಸಾಗುತ್ತಿರುವಾಗ, ಅವಳಿಗೂ ಮದುವೆಯ ವಯಸ್ಸು ಬರುವುದು. ಆಗ ಅವಳಿಗೆ ಎದುರಾಗುವುದು ಬಹುದೊಡ್ಡ ಪ್ರಶ್ನೆ. ಬದುಕಲ್ಲಿ ಅವಳೇನು ಸಾಧಿಸಬೇಕೆಂದು ಇಚ್ಛಿಸಿದ್ದಳೋ ಅದು ಮುಂದೆ ಸಾಧ್ಯವೇ ಎಂದು! ಇಷ್ಟು ಕಾಲದ ಜೀವನದಲ್ಲಿ ಅವಳಿಗೆ ಬಿಗ್ಗೆಸ್ಟ್ ಸಪೋರ್ಟ್ ಸಿಸ್ಟಮ್ ಅಂತ ತವರು ಏನಿತ್ತೋ, ಮುಂದದು ಗಂಡ, ಗಂಡನ ಮನೆಯವರಿಂದ ಮುಂದುವರಿಯುವುದೋ ಎಂಬ ಯಕ್ಷ ಪ್ರಶ್ನೆ. ಇಂತಹ ವಿಷಯಗಳನ್ನು ಯೋಚಿಸಿದಷ್ಟೂ ಮತ್ತಷ್ಟು ಜಟಿಲವಾಗುವ ಮನಸನ್ನು ತಹಬಂದಿಗೆ ತರಲು ಆಲೋಚಿಸಿ, ಅವೆಷ್ಟೋ ಹೆಣ್ಣುಮಕ್ಕಳು ಈಗೀಗ ಮದುವೆಯನ್ನೇ ಮುಂದೂಡುತ್ತಾರೆ ಅಥವಾ ಮದುವೆಯೇ ಆಗುವುದಿಲ್ಲ ಎಂಬ ತೀರ್ವನಕ್ಕೆ ಬರುತ್ತಾರೆ.
ಗಂಡು-ಹೆಣ್ಣು ಮೊದಲೇ ಒಬ್ಬರಿಗೊಬ್ಬರು ಪರಿಚಯವಿದ್ದರೆ ಸರಿ, ಈ ಕನಸುಗಳ ಬಗೆಗೆ ಭಾವಿ ಪತಿಯೊಂದಿಗೆ ಮುಕ್ತವಾಗಿ ಮಾತನಾಡಬಹುದು. ಒಂದು ವೇಳೆ ಪರಿಚಿತರಿಲ್ಲದಿದ್ದರೆ ಅವಳು ತನ್ನ ಕನಸುಗಳ ಬಗೆಗೆ ಮುಂಚಿತವಾಗಿಯೇ ತಿಳಿಸಿದರೆ ಒಳ್ಳೆಯದು. ಉನ್ನತ ಶಿಕ್ಷಣ ಮಾಡಬೇಕೆಂಬುದೋ ಅಥವಾ ಉತ್ತಮ ಕೆಲಸಕ್ಕೆ ಸೇರಬೇಕೆಂಬುದೋ ಹೀಗೆ ಏನು ಕನಸುಗಳಿವೆಯೋ ಅವುಗಳನ್ನು ಹಂಚಿಕೊಳ್ಳಬೇಕು. ಮದುವೆಯ ಮೊದಲೇ ಈ ವಿಷಯಗಳು ಗಂಡನಾಗುವವನಿಗೆ ತಿಳಿದರೆ ಉತ್ತಮ. ಅವನೇ ಎಲ್ಲವನ್ನು ಅರ್ಥಮಾಡಿಕೊಳ್ಳಬೇಕೆಂಬ ನಿಲುವಿರದೆ, ಮುಕ್ತವಾಗಿ ಅವಳೇ ತನ್ನ ಗುರಿಗಳನ್ನು ಹಂಚಿಕೊಳ್ಳುವ ವಾತಾವರಣ ನಿರ್ವಣವಾಗಬೇಕು.
ಇತ್ತ ಗಂಡಿನ ಮನೆಯವರದ್ದೊಂದು ರೀತಿ ನೀತಿ. ತಮ್ಮ ಮನೆ ಹೆಣ್ಣುಮಕ್ಕಳನ್ನು ಮುಂದೆ ಬರಲು ಉತ್ತೇಜಿಸಿ, ಬೇರೊಂದು ಮನೆಯಿಂದ ತಮ್ಮ ಮನೆಗೆ ಕಾಲಿಡುವ ಹೆಣ್ಣುಮಗಳನ್ನು ಅವರ ಕನಸ ಹಾದಿಯನ್ನು ಅಲ್ಲೇ ನಿಲ್ಲಿಸುವವರೂ ಇದ್ದಾರೆ. ಅದ್ಯಾಕೆ ಹೀಗೆ? ಎಂದು ಕೇಳಿದರೆ, ಅವರು ನೀಡುವ ಉತ್ತರ ಸಮಂಜಸವೇ! ಗಂಡನ ಕನಸುಗಳಿಗೆ ಹೆಂಡತಿ ಹೆಗಲು ನೀಡುವಂತೆ, ಸತಿಯ ಕನಸುಗಳಿಗೆ ಪತಿಯದ್ದೂ ಬೆಂಬಲವಿರಲಿ. ಜೊತೆ-ಜೊತೆಯಾಗಿ ಹೆಜ್ಜೆ ಇಡಬೇಕೆಂದು ಹೇಳಬೇಕಾದರೆ, ಜೊತೆಯಾಗಿ ನಡೆಯುವ ಪತ್ನಿಯ ಕೈಯನ್ನು ಎಳೆದೊಯ್ಯುವಂತಿರದೆ ಹೆಜ್ಜೆಯು ತಡವರಿಸದೆ ಎಡವದಿರಲಿ.
ಭೂತಕಾಲದ್ದು ಭೂತಕಾಲದಲ್ಲೇ ಇರಲಿ. ಪತ್ನಿಗೆ ಬೆಂಬಲ ನೀಡದಿರುವ ಹಳೇ ಕಾಲದ ಮನೋಭಾವಗಳು ವರ್ತಮಾನಕ್ಕೆ ತರದಿರುವುದು ಒಳಿತು. ಅಂದಿನವರನ್ನು ಬದಲಾಯಿಸಲು ಸಾಧ್ಯವಿಲ್ಲ. ಇಂದಿನವರಾದ ನಾವುಗಳು ನಮ್ಮದೇ ರೀತಿಯಲ್ಲಿ ಬದುಕೋಣ. ಸತಿಯ ಆಸೆಗಳಿಗೆ ಪತಿಯು ಅಡ್ಡಬರದೆ ಅಥವಾ ಪತಿಯ ಮನೆಯವರು ಅಡ್ಡಿಪಡಿಸಿದರೆ, ಪತ್ನಿಯನ್ನು ಬೆಂಬಲಿಸುವ ಗುಣ ಪತಿಯಲ್ಲಿರಲಿ. ಕಾಲ ಒಂದೇ ರೀತಿ ಇರುವುದಿಲ್ಲ. ಮಗಳೊಬ್ಬಳು ಜನಿಸಿ ಮುಂದೆ ಅಳಿಯನಾದವನು ಮಗಳ ಕನಸುಗಳಿಗೆ ಸಹಕಾರ ನೀಡದಿದ್ದಲ್ಲಿ, ತಂದೆಯಾಗಿ ಅದೆಷ್ಟು ಸಂಕಟ ಪಡುವಿರೋ ಎಂದು ಊಹಿಸಿದರೆ, ಇಂದಿನ ನಿಮ್ಮ ಪತ್ನಿಯ ಪರಿಸ್ಥಿತಿ ಅರ್ಥವಾಗುವುದು.
ಪತ್ನಿಯು ಒಬ್ಬಳು ಮಗಳು, ಅಕ್ಕನೋ ತಂಗಿಯೋ ಆಗಿರುತ್ತಾಳೆ. ಅವಳ ತವರು ಮನೆಯವರು ಅನುಭವಿಸುವ ನೋವನ್ನು ನೀವು ಆ ಸ್ಥಾನದಲ್ಲಿದ್ದು ಯೋಚಿಸಿದರೆ ಅರಿವಾಗುವುದು. ಆಗ ಪತ್ನಿಯನ್ನೆಂದೂ ಕಡೆಗಣಿಸಲಾರಿರಿ. ಸ್ತ್ರೀ ಅಂದರೆ ಅಷ್ಟೇ ಸಾಕೆ ಎಂಬ ಮಾತಿದೆ. ಸ್ತ್ರೀಯೊಬ್ಬಳು ಶಪಥಗೈದರೆ ಅವಳದನ್ನು ಸಾಧಿಸಿಯೇ ತೋರಿಸುತ್ತಾಳೆ ಎಂಬುದೂ ತಿಳಿದಿದೆ. ಅವಳಲ್ಲಿ ಧೈರ್ಯವಿದೆ, ಆತ್ಮವಿಶ್ವಾಸವಿದೆ. ಅವಳೊಬ್ಬಳೇ ಗೆದ್ದು ತೋರಿಸಬಹುದು. ಆದರೆ ಅವನ ಬೆಂಬಲ ಸಿಕ್ಕರೆಷ್ಟು ಒಳ್ಳೆಯದು! ನೋವನ್ನು ಹಂಚಿಕೊಳ್ಳಲು ಒಬ್ಬರು ಬೇಕಂತೆ, ಹಾಗೆಯೇ ಖುಷಿ ಹಂಚಿಕೊಳ್ಳಲು ಒಬ್ಬರು ಬೇಕು ತಾನೆ?
ಪ್ರೀತಿಯೊಂದಿಗೆ ಕಾಳಜಿಯೂ ಬೇಕು: ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವಳು ಎಂಬ ಮಾತೇ ಸಾಕೆ? ಯಶಸ್ವಿ ಮಹಿಳೆಯ ಹಿಂದೆ ಕೇವಲ ಅವಳ ಶ್ರಮವಷ್ಟೇ ಇರಬೇಕೆ? ತನ್ನ ಕನಸು ಸಾಕಾರಗೊಳಿಸಲು ಸಂಗಾತಿ ಸಹಕಾರ ನೀಡಿದ್ದೇ ಆಗಿದ್ದಲ್ಲಿ, ಯಶಸ್ವಿ ಮಹಿಳೆಯ ಹಿಂದೆ ಪುರುಷನೊಬ್ಬನಿದ್ದಾನೆ ಎನ್ನುವುದಕ್ಕೆ ಖಂಡಿತಾ ಹಿಂಜರಿಯಲಾರಳು, ಬೆಂಬಲ ನೀಡಿದವರ ಮರೆಯಲಾರಳು, ಸ್ವಾರ್ಥಿಯಾಗಲಾರಳು. ಸತಿ ಪತಿಯ ಅನ್ಯೂನ್ಯಕ್ಕೆ ಮತ್ತಷ್ಟು ಅಂಶಗಳು ಸೇರಲಿ. ಪ್ರೀತಿಯೊಂದಿಗೆ ಕಾಳಜಿ, ಬೆಂಬಲವಿರಲಿ. ಅವಳ ಕನಸುಗಳು ಅವನದ್ದೂ ಆಗಿರಲಿ.