

| ಭಾರತಿ ಕಮಲಶಿಲೆ
ಔದ್ಯೋಗಿಕ ರಂಗ ಮಾತ್ರವಲ್ಲದೆ ದೈಹಿಕ ಶ್ರಮದ ಮೇಲೆಯೇ ನಡೆಯುವ ಎಲ್ಲ ಕೆಲಸಗಳಲ್ಲೂ ಮಹಿಳೆಯರು ತೊಡಗಿಕೊಂಡಿದ್ದಾರೆ. ಪುರುಷರಿಗೆ ಸರಿಸಮನಾಗಿ ಕೆಲಸ ನಿರ್ವಹಿಸಿ ಶ್ರಮ ಸಂಸ್ಕೃತಿಯ ದ್ಯೋತಕವಾಗಿದ್ದು, ಶ್ರಮಯೇವ ಜಯತೆ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ. ಕೃಷಿ, ಮೀನುಗಾರಿಕೆ, ಸಣ್ಣ ಹೋಟೆಲ್ಗಳು, ಟೇಲರಿಂಗ್, ನಿರ್ಮಾಣ ಕಾಮಗಾರಿ, ಪೆಟ್ರೋಲ್ ಬಂಕ್ ಕೆಲಸ ಇತ್ಯಾದಿ ಶ್ರಮಕ್ಕೆ ಹೆಚ್ಚು ಪ್ರಾಧಾನ್ಯತೆ ಬಯಸುವ ಕೆಲಸಗಳಲ್ಲಿ ಮಹಿಳೆಯರು ಯಶಸ್ವಿಯಾಗಿ ದುಡಿಯುತ್ತಾ ಕುಟುಂಬಕ್ಕೆ ಆಧಾರವಾಗಿದ್ದಾರೆ.
ಕೃಷಿಯಲ್ಲಿ ಖುಷಿ: ಮೈದಾ ಹಿಟ್ಟಿನಂತಿದ್ದ ಬಣ್ಣವನ್ನು ಮಣ್ಣಿಗೆ ನೀಡಿ ಮಣ್ಣಿನ ಬಣ್ಣವನ್ನು ನಾನು ಪಡೆದಿದ್ದೇನೆ ಎಂದು ತಮ್ಮ ಕೃಷಿ ಕೆಲಸದ ಪರಿಯನ್ನು ಹೇಳುವ ಕೃಷಿಕ್ಷೇತ್ರದ ಸಾಧಕ ಮಹಿಳೆ ಕವಿತಾ ಮಿಶ್ರಾ ಅವರ ಮಾತು ಕೃಷಿಯ ಖುಷಿಯನ್ನು ಎತ್ತಿ ಹಿಡಿಯುತ್ತದೆ. ಕೃಷಿಯಲ್ಲಿ ಪುರುಷರಿಗೆ ಸರಿಸಮನಾಗಿ ರೈತಾಪಿ ಮಹಿಳೆಯರು, ಕೃಷಿಕೂಲಿ ಕಾರ್ವಿುಕರು ದುಡಿಯುತ್ತಿದ್ದಾರೆ. ನಾಟಿಯಿಂದ ಹಿಡಿದು ಕಣಜ ಕಟ್ಟುವವರೆಗೂ ಭತ್ತದ ಕೃಷಿಯಲ್ಲಿ ದುಡಿಯುವ ಸ್ತ್ರೀಯರ ಶ್ರಮವನ್ನು ಗೌರವಿಸಲೇಬೇಕು. ಇದಲ್ಲದೆ ಕಾಫಿ ತೋಟ, ಚಹಾ ತೋಟ, ಅಡಕೆ ತೋಟ ಇತ್ಯಾದಿ ಎಲ್ಲ ಕೃಷಿ ಮತ್ತು ಅದಕ್ಕೆ ಪೂರಕ ಹೈನುಗಾರಿಕೆಯಲ್ಲಿ ಮಹಿಳೆಯರ ಶ್ರಮ ಅನನ್ಯವಾದದ್ದು. ಭೂಮಿತಾಯಿಯೊಂದಿಗೆ ಅವಿನಾಭಾವ ಸಂಬಂಧವಿರಿಸಿಕೊಂಡು ಬಿಸಿಲು, ಮಳೆ, ಚಳಿಗಂಜದೆ ದುಡಿಯುವ ಮಹಿಳೆಯರಿಗೆ ಸಾಮಾನ್ಯವಾಗಿ ಪುರುಷರಿಗಿಂತ ಕಡಿಮೆ ಕೂಲಿ ಸಿಗುತ್ತದೆ. ಸಮಾನ ಕೆಲಸಕ್ಕೆ ಸಮಾನ ಸಂಬಳ ಹಲವೆಡೆ ಇಲ್ಲದಾಗಿದೆ.
ಕೃಷಿಯ ಆಧುನಿಕ ಸ್ಪರ್ಶದಲ್ಲೂ ಸೈ: ಯಾಂತ್ರೀಕೃತ ಕೃಷಿಯ ಭಾಗವಾಗಿ ಟ್ರಾ್ಯಕ್ಟರ್ನಲ್ಲಿ ಉಳುಮೆ ಮಾಡುವ, ತೆಂಗಿನ ಮರ ಏರುವ ಯಂತ್ರದಿಂದ ಮರಹತ್ತಿ ತೆಂಗಿನಕಾಯಿ ಕೆಳಗಿಳಿಸುವ ತನಕವೂ ಶ್ರಮಸಂಸ್ಕೃತಿ ಮೈಗೂಡಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಕೋಟೇಶ್ವರದ ಮನೋರಮಾ ಅಡಿಗ 56ನೇ ವಯಸ್ಸಿನಲ್ಲಿ ಯಂತ್ರ ಬಳಸಿ ತೆಂಗಿನ ಮರ ಏರಿ ಕಾಯಿ ತೆಗೆಯುವ ಕೆಲಸ ಸುಲಲಿತವಾಗಿ ಮಾಡುತ್ತಿದ್ದಾರೆ. ಇವರು ನಿದರ್ಶನ ಅಷ್ಟೇ. ಕೃಷಿಯನ್ನೇ ಜೀವಾಳವಾಗಿಸಿ ಕೊಂಡಿರುವ ಕೃಷಿ ಸಂಸ್ಕೃತಿಯ ಅನೇಕ ಮಹಿಳೆಯರು ನಮ್ಮ ನಡುವೆ ಇದ್ದಾರೆ.
ಸಣ್ಣ ಹೋಟೆಲ್ ಜೀವನದ ಆಧಾರ: ಸಣ್ಣ ಕ್ಯಾಂಟೀನ್ಗಳಲ್ಲಿ, ಮೆಸ್ಗಳಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಹಣ ಪಾವತಿ ಕೌಂಟರ್ನವರೆಗೂ ಮಹಿಳೆಯರು ದುಡಿಮೆಯಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಸೂರ್ಯೋದಯಕ್ಕೆ ಮುನ್ನ ಅಡುಗೆ ಒಲೆ ಮುಂದೆ ನಿಂತರೆ, ರಾತ್ರಿ 10ರತನಕವೂ ಬಿಡುವಿಲ್ಲದ ಕೆಲಸ ಮಾಡುತ್ತಾ ಹೋಟೆಲ್ಗಳನ್ನೇ ಜೀವನಾಧಾರವಾಗಿಸಿಕೊಂಡಿರುವ ಮಹಿಳೆಯರ ಶ್ರಮ ಮೆಚ್ಚುವಂಥದ್ದು. ವೈದೇಹಿ ಅವರ ಅಡುಗೆ ಮನೆ ಹುಡುಗಿ ಪದ್ಯದಲ್ಲಿ ಹೇಳುವಂತೆ, ಸಾಂಬ್ರಾಣಿ ಸಿಪ್ಪೆ ಬಿಡಿಸುತ್ತಿರುವ ತನ್ನ ಎತ್ತಿ ಒಯ್ದು ಸಾಮ್ರಾಜ್ಞಿ ಮಾಡಿ ರಾಮ ರಾಮಾ! ಲಂಕೆಗೋ ಅಯೋಧ್ಯೆಗೋ? ಎಂಬಂತೆ ಒಮ್ಮೆಲೇ ತನ್ನೆಲ್ಲಾ ಈ ಜಂಜಾಟದಿಂದ ಹೆಣ್ಣು ಬಿಡುಗಡೆ ಪಡೆಯುವಂತೆ ಮನಸ್ಸು ಮಾಡಿದರೂ, ಮುಂದೇನು? ಎಂಬ ಜೀವನದ ಪಯಣಕ್ಕಾಗಿ, ಶ್ರಮದಾಯಕ ಹೋಟೆಲ್ ಕೆಲಸದಲ್ಲೇ ಬದುಕು ಕಟ್ಟಿಕೊಂಡವರು ಬಹಳ ಜನ ಇದ್ದಾರೆ.
30 ವರ್ಷಗಳಿಂದ ನಮ್ಮ ಕುಟುಂಬದವರೇ ಚಿಕ್ಕ ಹೋಟೇಲ್ ನಡೆಸುತ್ತಿದ್ದೇವೆ. ನಾನು ಮತ್ತು ಪತಿ ದಿನವಿಡೀ ವ್ಯಾಪಾರ ನಡೆಸುತ್ತೇವೆ. ಮೂರು ಮಕ್ಕಳ ವಿದ್ಯಾಭ್ಯಾಸ ಕೂಡ ಇದೇ ದುಡಿಮೆಯಲ್ಲಿ ಮಾಡಿಸಿದ್ದೇವೆ. ಕೆಲಸಕ್ಕೆ ಸಹಾಯಕರಾಗಿ ಜನರನ್ನು ನೇಮಿಸಿಕೊಳ್ಳಲು ವೆಚ್ಚ ಅಧಿಕವಾಗುತ್ತದೆ. ಹಾಗಾಗಿ ಕುಟುಂಬದ ಸದಸ್ಯರ ಸಹಕಾರದಿಂದಲೇ ಹೊಟೇಲ್ ನಡೆಸುತ್ತೇವೆ. ಸಾಮಾನ್ಯ ಮಟ್ಟದ ಜೀವನ ನಡೆಸಲು ಈ ಪುಟ್ಟ ಹೊಟೇಲ್ ನಮಗೆ ಜೀವನಾಧಾರವಾಗಿದೆ. | ರೂಪಾ ಆರ್. ನಾಯಕ್ ಕೊಪ್ಪ
ವಿವಿಧ ರೀತಿಯ ಕಟ್ಟಡ ನಿರ್ವಣ,ರಸ್ತೆ ಕಾಮಗಾರಿಗಳಲ್ಲಿ ಮಹಿಳೆಯರು ಬೆವರು ಸುರಿಸಿ ದುಡಿಯುತ್ತಿದ್ದಾರೆ.ಇಟ್ಟಿಗೆ ಜೋಡಿಸುವುದು,ಮರಳು ಸೋಸುವುದು,ಗುಂಡಿ ಅಗೆಯುವುದು ಇತ್ಯಾದಿ ಎಲ್ಲ ಕೆಲಸಗಳನ್ನು ದೈಹಿಕ ಶ್ರಮದಿಂದ ನಡೆಸಿ ಜೀವನ ಸಾಗಿಸುತ್ತಿದ್ದಾರೆ.ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಸರಿಸುಮಾರು 40 ಮಿಲಿಯನ್ ಕಾರ್ವಿುಕರು ಈ ನಿರ್ಮಾಣ ಕಾಮಗಾರಿ ಯಲ್ಲಿ ತೊಡಗಿದ್ದಾರೆ.ಅವರಲ್ಲಿ 49% ಮಂದಿ ಮಹಿಳೆಯರಿದ್ದಾರೆ.ಅವರಲ್ಲಿ ಬಹಳಷ್ಟು ಮಹಿಳೆಯರು ಅನಕ್ಷರಸ್ಥರು,ಚಿಕ್ಕ ವಯಸ್ಸಿನಲ್ಲಿ ವಿವಾಹವಾದವರು ಇದ್ದಾರೆ.ಪುರುಷರಿಗೆ ಸರಿಸಮನಾಗಿ ಈ ಮಹಿಳೆಯರು ದೈಹಿಕ ಶ್ರಮದಿಂದ ಕೆಲಸ ಮಾಡಿದರೂ,ಪುರುಷರು ದಿನವೊಂದಕ್ಕೆ ಸರಾಸರಿ 500 ರೂ. ಸಂಬಳ ಪಡೆದರೆ,ಮಹಿಳೆಯರು 300 ರೂ.ಮಾತ್ರ ಪಡೆಯುತ್ತಾರೆ.ಈ ಕೆಲಸದ ಜೊತೆಗೆ ತನ್ನ ಕುಟುಂಬದ ಜವಾಬ್ದಾರಿ, ಮಕ್ಕಳ ಪಾಲನೆಯನ್ನೂ ಇವರು ನಿಭಾಯಿಸುತ್ತಿದ್ದಾರೆ.ತುಂಬು ಗರ್ಭಿಣಿಯರೂ ಜೀವನ ಸಾಗಿಸುವ ಹೊಣೆಗಾರಿಕೆಯ ದೃಷ್ಟಿಯಿಂದ ಈ ಕಠಿಣ ಶ್ರಮದ ಕೆಲಸಗಳನ್ನು ನಿರ್ವಹಿಸುವುದಲ್ಲದೆ,ತಮ್ಮ ಮಕ್ಕಳನ್ನು ಕೂಡ ಅದೇ ಕೆಲಸದ ಸ್ಥಳದಲ್ಲೇ ಬಿಸಿಲು,ಧೂಳಿನ ಬವಣೆಯಲ್ಲೇ ಆರೈಕೆ ಮಾಡುವುದನ್ನು ಕಾಣುತ್ತೇವೆ.ಕಠಿಣ ಶ್ರಮದ ದುಡಿಮೆಯಲ್ಲೇ ತಾಯ್ತನದ ಸುಖವನ್ನು ಇವರು ಕಾಣುವಂತಾಗಿದೆ.
ನನಗೀಗ 62 ವರ್ಷ. ನಾನು ಬಾಲಕಿಯಾಗಿದ್ದಾಗಲೇ ಬಲೆಯಿಂದ ಬೀಳುತ್ತಿದ್ದ ಮೀನುಗಳನ್ನು ಕಡಲ ದಂಡೆಯಲ್ಲಿ ಹೆಕ್ಕುತ್ತಾ, ತಾಯಿಯೊಂದಿಗೆ ಮೀನು ವ್ಯಾಪಾರ ಅಭ್ಯಾಸ ಮಾಡಿದೆ. ನನಗೆ 18 ವರ್ಷ ತುಂಬಿದ ಬಳಿಕ ಸ್ವತಂತ್ರವಾಗಿ ದೋಣಿಗಳಿಂದ ಮೀನು ಖರೀದಿಸಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೆ. ಸಾಂಸಾರಿಕ ಜೀವನದಲ್ಲಿ ಏಕಪೋಷಕಳಾಗಿ ಮಕ್ಕಳ ಜವಾಬ್ದಾರಿ ನಿಭಾಯಿಸುವ ಸ್ಥಿತಿ ಬಂದಾಗಲೂ, ಮೂರು ಮಕ್ಕಳನ್ನು ಇದೇ ದುಡಿಮೆಯಲ್ಲಿ ಸಲಹಿದ್ದೇನೆ. ನನ್ನ ಮಕ್ಕಳು ಈ ವೃತ್ತಿ ಮುಂದುವರಿಸಿಲ್ಲ. ವಯಸ್ಸಾದರೂ ಮೀನು ವ್ಯಾಪಾರದಿಂದ ದೂರ ಇರಲು ಮನಸ್ಸಾಗುತ್ತಿಲ್ಲ. ನನ್ನ ಶ್ರಮವನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. | ರತ್ನ ಮೊಗವೀರ ಬೀಜಾಡಿ, ಕೋಟೇಶ್ವರ
ಮೀನುಗಾರಿಕೆಯ ವಿವಿಧ ಹಂತಗಳಲ್ಲಿ ಮಹಿಳೆಯರು ಸೈ ಎನಿಸಿಕೊಂಡಿದ್ದಾರೆ. ಕಡಲಿನ ದೋಣಿಗಳಿಂದ ಮೀನುಗಳನ್ನು ಆಯ್ದು, ಮಾರುಕಟ್ಟೆಯಲ್ಲಿ ಮಾರುವವರೆಗೂ ಮೀನುಗಾರ ಮಹಿಳೆಯರ ಶ್ರಮ ಅಪಾರ. 2019ರ ಅಂಕಿ-ಅಂಶವೊಂದರ ಪ್ರಕಾರ ಮೀನುಗಾರಿಕೆಯನ್ನು ಉದ್ಯೋಗವಾಗಿಸಿಕೊಂಡ ಒಟ್ಟು 5.4 ಮಿಲಿಯನ್ ಜನ ಭಾರತದಲ್ಲಿದ್ದಾರೆ. ಅವರಲ್ಲಿ 3.8 ಮಿಲಿಯನ್ ಪುರುಷರು ಮತ್ತು 1.6 ಮಿಲಿಯನ್ ಮಹಿಳೆಯರಿದ್ದಾರೆ. ಅನೇಕ ಮೀನುಗಾರಿಕಾ ಕುಟುಂಬಗಳಿಗೆ ಈ ಮಹಿಳೆಯರೇ ಆಧಾರ. ಮೀನುಗಾರಿಕಾ ಬೋಟ್ಗಳಲ್ಲಿ ಪುರುಷರು ಕಡಲಿನಲ್ಲಿ ಬಹಳ ದೂರ ಹೋದಾಗ, ಮಾರುಕಟ್ಟೆಯ ಜವಾಬ್ದಾರಿ ಜತೆಗೆ ಕುಟುಂಬದ ನಿರ್ವಹಣೆಯನ್ನೂ ಮಹಿಳೆಯರೇ ಮಾಡುತ್ತಾರೆ. ಮಹಿಳೆಯರ ಸಾಧನೆಯನ್ನು ವಿವಿಧ ರಂಗಗಳಲ್ಲಿ ಗುರುತಿಸುವಾಗ ಇಂತಹ ಶ್ರಮ ಸಂಸ್ಕೃತಿಯ ಮಹಿಳೆಯರನ್ನೂ ಗುರುತಿಸುವಂತಾಗಬೇಕು. ಪ್ರತಿದಿನ ಮುಂಜಾನೆ ಸಾರ್ವಜನಿಕ ಸ್ಥಳಗಳಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಗಳಲ್ಲಿ ದಣಿವರಿಯದೆ ದುಡಿಯುವ ಪೌರ ಕಾರ್ವಿುಕ ಮಹಿಳೆಯರಿಂದ ಹಿಡಿದು, ಕಲ್ಲು ಕ್ವಾರಿಗಳಲ್ಲೂ ಕಠಿಣ ಕೆಲಸ ಮಾಡುವ ಎಲ್ಲ ಶ್ರಮಿಕ ವರ್ಗದ ಮಹಿಳೆಯರಿಗೂ ನಮ್ಮದೊಂದು ಸಲಾಂ ಹೇಳಲೇಬೇಕು.