

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು. ಅವರ ಪ್ರಾತಿನಿಧ್ಯವೂ ಅಷ್ಟೇ ಪ್ರಾಮುಖ್ಯವಾದದ್ದು. ದಶಕಗಳಿಂದ ಮಹಿಳಾ ಪ್ರಾತಿನಿಧ್ಯದ ವಿಚಾರ ಚರ್ಚೆಯಲ್ಲಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಈ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯ ಗಮನಾರ್ಹ. ಪ್ರಗತಿಗೆ ಚಾಲನೆ ನೀಡುವಲ್ಲಿ ಮಹಿಳೆಯರು ಸಮಾನ ಪಾಲುದಾರರಾಗಬೇಕು. ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಮಹಿಳೆಯರೇ ಕೇಂದ್ರ ಬಿಂದು. ದೇಶ ಪ್ರವರ್ಧಮಾನಕ್ಕೆ ಬರಬೇಕಾದರೆ, ಮಹಿಳೆಯರ ಪಾಲ್ಗೊಳ್ಳುವಿಕೆ, ಪಾಲುದಾರಿಕೆಯೇ ಪ್ರಗತಿಯ ಮಾಪನವಾಗಬೇಕು. ಸರ್ಕಾರವೂ ಈ ನಿಟ್ಟಿನಲ್ಲಿ ಗಮನಹರಿಸಿದ್ದು, ಮಹಿಳೆಯರ ಪಾಲ್ಗೊಳ್ಳುವಿಕೆಗೆ, ಅವರ ಪಾಲುದಾರಿಕೆ ಖಾತರಿಪಡಿಸುವ ಯೋಜನೆ, ಉಪಕ್ರಮಗಳನ್ನು ಜಾರಿಗೊಳಿಸಿದೆ ಎಂದು ಸ್ಮೃತಿ ಇರಾನಿ ಹೇಳಿದ್ದರು. ಇದೇ ರೀತಿ ರಾಜ್ಯದಲ್ಲೂ ಕೆಲವು ಯೋಜನೆಗಳಿವೆ.
ಮಹಿಳಾ ಇ-ಹಾತ್: ಮಹಿಳಾ ಉದ್ಯಮಿ, ಸ್ವಸಹಾಯ ಗುಂಪು ಮತ್ತು ಸರ್ಕಾರೇತರ ಸಂಸ್ಥೆ, ಅವರು ಮಾಡಿದ ಉತ್ಪನ್ನ ಮತ್ತು ಸೇವೆ ಪ್ರದರ್ಶಿಸುವ ಮತ್ತು ಬೆಂಬಲಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಒದಗಿಸಿರುವ ನೇರ ಆನ್ಲೈನ್ ಮಾರುಕಟ್ಟೆ ವೇದಿಕೆ ಮಹಿಳಾ ಇ-ಹಾತ್. ಇದು ‘ಡಿಜಿಟಲ್ ಇಂಡಿಯಾ’ ಉಪಕ್ರಮದ ಒಂದು ಭಾಗ. ಮಹಿಳೆಯರು ಡಿಡಿಡಿ.ಞಚಜಜ್ಝಿಚಛಿಜಚಚಠಿಞk.ಜಟಡ.ಜ್ಞಿನಲ್ಲಿ ಹೆಸರು ನೋಂದಾಯಿಸಿ, ವಿಶಾಲ ಮಾರುಕಟ್ಟೆಯಲ್ಲಿ ಕೆಲಸ ಪ್ರದರ್ಶಿಸುವುದಕ್ಕೆ ತಂತ್ರಜ್ಞಾನ ಬಳಸಿಕೊಳ್ಳಬಹುದು.
ಬೇಟಿ ಬಚಾವೋ, ಬೇಟಿ ಪಢಾವೋ: ಹೆಣ್ಣು ಭ್ರೂಣಹತ್ಯೆಯ ನಿಮೂಲನೆ ಮತ್ತು ಭಾರತೀಯ ಬಾಲಕಿಯರನ್ನು ಉದ್ದೇಶಿಸಿರುವ ಕಲ್ಯಾಣ ಸೇವೆಗಳ ಕುರಿತು ಜಾಗೃತಿ ಮೂಡಿಸುವ ಗುರಿ ಹೊಂದಿರುವ ಸಾಮಾಜಿಕ ಅಭಿಯಾನ. ಹೆಣ್ಣು ಮಗು ಉಳಿಸಿ ಆಂದೋಲನವನ್ನು 2015ರ ಜನವರಿ 22ರಂದು ಪ್ರಾರಂಭಿಸಲಾಗಿದೆ. 100 ಕೋಟಿ ರೂ. ಆರಂಭಿಕ ನಿಧಿಯೊಂದಿಗೆ ಶುರುವಾಗಿದ್ದು, ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಪಂಜಾಬ್, ದೆಹಲಿ ಮತ್ತು ಹರಿಯಾಣದಲ್ಲಿನ ಕ್ಲಸ್ಟರ್ಗಳನ್ನು ಗುರಿಯಾಗಿಸಿಕೊಂಡಿದೆ.
ಒನ್ ಸ್ಟಾಪ್ ಸೆಂಟರ್ ಸ್ಕೀಮ್: ‘ಸಖಿ’ ಎಂದೇ ಜನಪ್ರಿಯ. 2015ರ ಏಪ್ರಿಲ್ 1 ರಂದು ನಿರ್ಭಯಾ ನಿಧಿಯೊಂದಿಗೆ ಇದು ಜಾರಿಗೊಂಡಿತು. ಭಾರತದ ವಿವಿಧೆಡೆ 247 ಗಂಟೆ ಸಹಾಯವಾಣಿಯೊಂದಿಗೆ ಸಂಯೋಜಿತವಾಗಿರುವ ಒಂದೇ ಸೂರಿನಡಿ ಹಿಂಸಾಚಾರದ ಸಂತ್ರಸ್ತರಿಗೆ ಆಶ್ರಯ, ಪೊಲೀಸ್ ಡೆಸ್ಕ್, ಕಾನೂನು, ವೈದ್ಯಕೀಯ ಮತ್ತು ಸಮಾಲೋಚನೆ ಸೇವೆ ಒದಗಿಸಲು ಒನ್ ಸ್ಟಾಪ್ ಕೇಂದ್ರ ಸ್ಥಾಪಿಸಲಾಗಿದೆ. ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 181.
ಸ್ವಾಧಾರ್ ಗ್ರೆಹ್: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2002ರಲ್ಲಿ ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರ ಪುನರ್ವಸತಿಗಾಗಿ ಈ ಯೋಜನೆ ಪ್ರಾರಂಭಿಸಿತು. ಇದು ಸಂಕಷ್ಟದಲ್ಲಿರುವ ಮಹಿಳೆಯರು/ಬಾಲಕಿಯರಿಗೆ ವಸತಿ, ಆಹಾರ, ಬಟ್ಟೆ ಮತ್ತು ಆರೈಕೆಯನ್ನು ಒದಗಿಸುತ್ತದೆ. ವಿಧವೆಯರು, ಜೈಲಿನಿಂದ ಬಿಡುಗಡೆಯಾದ, ಕುಟುಂಬದ ಬೆಂಬಲವಿಲ್ಲದ ಮಹಿಳಾ ಕೈದಿಗಳು, ಭಯೋತ್ಪಾದಕ/ಉಗ್ರಗಾಮಿ ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯರು ಇತ್ಯಾದಿ ಒಳಗೊಳ್ಳುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿ ವೀಕ್ಷಿಸಬಹುದು.
ಎಸ್ಟಿಇಪಿ: ಮಹಿಳೆಯರಿಗಾಗಿ ತರಬೇತಿ ಮತ್ತು ಉದ್ಯೋಗ ಕಾರ್ಯ ಕ್ರಮದ ಬೆಂಬಲ (ಖಖಉಕ) ಒದಗಿಸುವ ಯೋಜನೆ ಇದು. ಮಹಿಳೆಯರಿಗೆ ಉದ್ಯೋಗ ನೀಡುವ ಕೌಶಲ ಒದಗಿಸುವ ಗುರಿ ಹೊಂದಿದೆ. ಹೆಚ್ಚಿನ ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂರ್ಪಸಬಹುದು.
ನಾರಿ ಶಕ್ತಿ ಪುರಸ್ಕಾರ: ವಿಶೇಷವಾಗಿ ದುರ್ಬಲ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ವಿಶಿಷ್ಟ ಸೇವೆಗಳನ್ನು ಸಲ್ಲಿಸುವಲ್ಲಿ ಮಹಿಳೆಯರು ಮತ್ತು ಸಂಸ್ಥೆಗಳು ಮಾಡಿದ ಪ್ರಯತ್ನ ಗಳನ್ನು ಗುರುತಿಸುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಾಗಿವೆ. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಮಾರ್ಚ್ 8 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.
ಕಾರ್ಯನಿರತ ಮಹಿಳಾ ಹಾಸ್ಟೆಲ್: ಮಹಿಳೆಯರಿಗೆ ಉದ್ಯೋಗಾವಕಾಶವಿರುವ ನಗರ, ಅರೆ-ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯವಿರುವಲ್ಲೆಲ್ಲ ಮಕ್ಕಳಿಗೆ ಡೇಕೇರ್ ಸೌಲಭ್ಯ ದೊಂದಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರ ವಸತಿ ಸೌಕರ್ಯಗಳ ಲಭ್ಯತೆ ಉತ್ತೇಜಿಸುವುದು ಯೋಜನೆಯ ಉದ್ದೇಶ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಹೆಚ್ಚಿನ ವಿವರ ವೀಕ್ಷಿಸಬಹುದು.
ಸ್ತ್ರೀಶಕ್ತಿ ಯೋಜನೆ: ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣ ಕ್ಕಾಗಿ ‘ಸ್ತ್ರೀಶಕ್ತಿ’ ಯೋಜನೆ ಆರಂಭಿಸಲಾಗಿದೆ. 176 ತಾಲೂಕುಗಳಲ್ಲಿ ಗುಂಪು ರಚನೆ ಮಾಡಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ಸುತ್ತುನಿಧಿ, ಬ್ಯಾಂಕ್ ಲಿಂಕೇಜ್, ಸಾಲದ ಮೇಲಿನ ಬಡ್ಡಿಗೆ ಶೇ.6ರ ಸಹಾಯ ಧನ, ಅಧಿಕ ಉಳಿತಾಯ ಮಾಡಿರುವ ಗುಂಪುಗಳಿಗೆ ಪೋ›ತ್ಸಾಹಧನ, ತರಬೇತಿ, ಮಾರುಕಟ್ಟೆ ಸೌಲಭ್ಯ-ನೇರ ಹಾಗೂ ಆನ್ಲೈನ್, ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಹಾಗೂ ತಾಲೂಕು ಒಕ್ಕೂಟಗಳಿಗೆ ಪ್ರಶಸ್ತಿ, ಜಿಲ್ಲಾ, ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ರಚನೆ ನಡೆಯುತ್ತವೆ.
ಟ್ರಾನ್ಸಿಟ್ ಹಾಸ್ಟೆಲ್ಸ್: ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆ ಪರಿಗಣಿಸಿ ರಾಜ್ಯ ಸರ್ಕಾರವು, ವಿವಿಧ ಉದ್ಯೋಗ ಸಂದರ್ಶನಗಳಿಗೆ ಹಾಜರಾಗುವ, ಇಂಜಿನಿಯರಿಂಗ್/ ವೈದ್ಯಕೀಯ/ ಇತರ ಶೈಕ್ಷಣಿಕ ಪ್ರವೇಶ ಪರೀಕ್ಷೆಗೆ ಹಾಜರಾಗುವ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಮಹಿಳೆಯರಿಗೆ ವಸತಿಗಾಗಿ 11 ಟ್ರಾನ್ಸಿಟ್ ಹಾಸ್ಟೆಲ್ ಪ್ರಾರಂಭಿಸಿದೆ. ಆದಾಯದ ಮಿತಿ ಲೆಕ್ಕಿಸದೆ ಮಹಿಳೆಯರಿಗೆ. ಉಚಿತ ವಸತಿ, ಉಪಹಾರ, ಊಟ ಮತ್ತು ಬಿಸಿನೀರಿನ ಸ್ನಾನದ ಸೌಲಭ್ಯ ಮತ್ತು ಲಾಕರ್ ಸೌಲಭ್ಯವೂ ಲಭ್ಯವಿದೆ.