ಆಗಸದೆತ್ತರಕ್ಕೆ ಹಾರುವಾಸೆ; ಆಗುತ್ತಿಲ್ಲವೇಕೆ?

Lalitha
Published on

| ಡಾ.ಕೆ.ಎಸ್. ಶುಭ್ರತಾ ಮನೋವೈದ್ಯೆ, ಶಿವಮೊಗ್ಗ

ಸ್ವಾತಿ ವೃತ್ತಿಯಿಂದ ವೈದ್ಯೆ. ತಜ್ಞವೈದ್ಯರ ಸಂಸ್ಥೆಯಲ್ಲಿ ತುಂಬಾ ಬಿರುಸಿನಿಂದ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಕೆಲವರು ಅವಳಿಗೆ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆಗೆ ನಿಲ್ಲು ಎಂದು ಒತ್ತಾಯಿಸುತ್ತಾರೆ. ಸ್ವಾತಿಯ ತಲೆನೋವೆಂದರೆ ಈ ಮೀಟಿಂಗ್​ಗಳು. ಸಂಸ್ಥೆಯ ಮೀಟಿಂಗ್​ಗಳು ಆಗುವುದೇ ರಾತ್ರಿ 9ರ ಮೇಲೆ. ಅದೂ ಹೆಚ್ಚಾಗಿ ಪುರುಷರೇ ಇರುತ್ತಾರೆ. ಮನೆಯಲ್ಲಿ ಚಿಕ್ಕ ಮಕ್ಕಳನ್ನು ಅಪ್ಪ ನೋಡಿಕೊಳ್ಳುತ್ತೇನೆಂದರೂ ಕೇಳುವುದಿಲ್ಲ. ರಾತ್ರಿ ಮಲಗುವ ಸಮಯದಲ್ಲಿ ಅಮ್ಮನೇ ಬೇಕು. ಅಮ್ಮನ ಬೆಚ್ಚಗಿನ ಅಪ್ಪುಗೆ ಇಲ್ಲದಿದ್ದರೆ ಆಗುವುದಿಲ್ಲ.

ಗೌರಿ ನಲವತ್ತೈದರ ಯುವತಿ. ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್. ದೊಡ್ಡ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾಳೆ. ಕಂಪನಿ ನಿರ್ದೇಶಕಿ ಸ್ಥಾನಕ್ಕೆ ಹೋಗುವ ಎಲ್ಲ ಅರ್ಹತೆಯೂ ಅವಳಿಗಿದೆ. ಆದರೆ ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ಪ್ರಯಾಣ ಮಾಡಬೇಕು. ಅಲ್ಲಿ ಪಾರ್ಟಿಗಳಿಗೆ ಹೋಗಬೇಕು. ಪಾರ್ಟಿಗಳಲ್ಲಿ ಪುರುಷರೇ ಹೆಚ್ಚು. ಫೆಲೋಷಿಪ್ ಎಂದು ಪಾನಮತ್ತರೂ ಆಗುತ್ತಾರೆ. ಗೌರಿಗೆ ಈ ಪಾರ್ಟಿಗಳಲ್ಲಿ ಭಾಗವಹಿಸುವುದು ಇರಿಸು-ಮುರುಸಿನ ವಿಚಾರ. ಆದರೆ ಈ ಪಾರ್ಟಿಗಳಿಗೆ ಹೋಗದಿದ್ದರೆ ಚುನಾವಣೆಗಳಲ್ಲಿ ನಿಂತು ವೋಟು ತೆಗೆದುಕೊಂಡು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ ಹಿತೈಷಿಗಳು. ಗೌರಿ ಈ ಕಾರಣಕ್ಕೇ ಪಾರ್ಟಿಯೂ ಬೇಡ, ನಿರ್ದೇಶಕಿ ಸ್ಥಾನವೂ ಬೇಡ ಎಂದು ತನ್ನ ಮಹತ್ವಾಕಾಂಕ್ಷೆ ಅದುಮಿಕೊಂಡಿದ್ದಾಳೆ.

ಪ್ರಸ್ತುತ ಪರಿಸ್ಥಿತಿಯ ಅವಲೋಕನ: ಬೋರ್ಡ್​ರೂಮ್ ವರದಿ ಪ್ರಕಟಿಸಿದ ಡೆಲಾಯ್್ಟ ಗ್ಲೋಬಲ್​ನ ಮಹಿಳೆಯರ ಏಳನೇ ಆವೃತ್ತಿಯು ಭಾರತದಲ್ಲಿ ಬೋರ್ಡ್ ಸ್ಥಾನಗಳಲ್ಲಿ ಶೇ.17.1ರಷ್ಟು ಸ್ಥಾನಗಳನ್ನು ಮಹಿಳೆಯರು ಹೊಂದಿರುತ್ತಾರೆ ಎಂದು ತಿಳಿಸಿತು. 2013 ಪ್ರತಿ ಮಂಡಳಿಯಲ್ಲಿ ಒಬ್ಬ ಮಹಿಳಾ ಸದಸ್ಯರು ಕಡ್ಡಾಯವಾಗಿರಬೇಕೆಂಬ ಕಾಯ್ದೆ ಬಂದ ವರ್ಷ. ಈ ಕಾರಣದ ಸಲುವಾಗಿ 2014ರ ಸರ್ವೆಯಲ್ಲಿ ಬೋರ್ಡ್ ರೂಮ್ಳಲ್ಲಿರುವ ಮಹಿಳೆಯರ ಸಂಖ್ಯೆ ಶೇ.9ರಷ್ಟು ಜಾಸ್ತಿಯಾಗಿತ್ತು. ಆದರೆ 2018 ಬರುವಷ್ಟರಲ್ಲಿ ಈ ಸಂಖ್ಯೆ ಇಳಿಮುಖವಾಗೇ ಸಾಗಿದೆ ಎನ್ನುವುದು ಖೇದನೀಯ. ಬೋರ್ಡ್ ರೂಂನಲ್ಲಿರುವ ನಿರ್ದೇಶಕಿಯರ ಮಾತು ಬಿಡಿ, ನಾವು-ನೀವು ಇರುವ ಸಂಸ್ಥೆಗಳಲ್ಲಿ ಒಮ್ಮೆ ನೋಡಿ. ಮಹಿಳಾ ಸಂಸ್ಥೆಗಳನ್ನು ಬಿಟ್ಟರೆ ಬೇರೆ ಸಂಸ್ಥೆಗಳಲ್ಲಿ ಎಷ್ಟು ಮಹಿಳೆಯರು, ಅಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ? ಒತ್ತಾಯಪೂರ್ವಕವಾಗಿ ಕೆಲವೇ ಕೆಲವು ಮಹಿಳೆಯರನ್ನು, ಕೆಲ ಹುದ್ದೆಗಳಿಗೆ ತಂದು ಕೂರಿಸು ತ್ತಾರೆ. ಬೆರಳೆಣಿಕೆಯಷ್ಟು ಅನ್ನಿಸುತ್ತದೆ. ಅವರು ಕೂಡ ನಾನಾ ಕಾರಣ ಗಳಿಂದ ಬರುವುದೇ ಕಡಿಮೆ. ಗ್ರಾಮ ಪಂಚಾಯಿತಿಯಂತಹ ಕೆಲವೆಡೆ ಸಾಮಾನ್ಯವಾಗಿ ಮಹಿಳೆಯರನ್ನು ಹೆಸರಿಗೆ ಮುಖ್ಯಸ್ಥರನ್ನಾಗಿ ಮಾಡಿ ರುತ್ತಾರೆ. ಆದರೆ ಗಂಡನೇ ಅಧಿಕಾರ ನಡೆಸುತ್ತಿರುತ್ತಾನೆ. ಹುದ್ದೆಗಳಲ್ಲಿ ಮೇಲೇರಿದಂತೆ, ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನಬಹುದು.

ಮೇಲೇರಲಾಗದ ಕಾರಣಗಳು

ಮನಸ್ಥಿತಿ!: ಹೆಣ್ಣು ಮಕ್ಕಳನ್ನು ಸಬ್​ಇನ್ಸ್ ಫೆಕ್ಟರ್ ಆಗಿ, ಪ್ರಾಂಶುಪಾಲರಾಗಿ, ಒಂದು ಸಂಸ್ಥೆಯ ಅಧ್ಯಕ್ಷೆಯಾಗಿ ನೋಡುವುದಕ್ಕೇ ಜನರು ಹಿಂಜರಿಯುತ್ತಾರೆ. ಒಂದೊಮ್ಮೆ ಹಾಗಾದರೂ, ಆ ಹೆಣ್ಣಿನ ರೂಪದ ಬಗ್ಗೆ ಕಮೆಂಟ್ ಮಾಡುವವರೇ ಹೆಚ್ಚು. ಆ ಹೆಣ್ಣಿನ ಕಾರ್ಯವೈಖರಿ ಬಗ್ಗೆ ಹಾಸ್ಯ ಮಾಡುವವರ ಸಂಖ್ಯೆಯೂ ಕಡಿಮೆಯಿಲ್ಲ. ಹೇಗಾದರೂ ಅವರಿಗೆ ಕಿರಿಕಿರಿ ಮಾಡಿ, ಸ್ಥಾನ ತ್ಯಜಿಸುವಂತೆ ಮಾಡುವವರೂ ವಿರಳವೇನಲ್ಲ. ಸಮಾಜ ಮತ್ತು ಪುರುಷರನ್ನು ಬಿಡಿ. ಸ್ವತಃ ಮಹಿಳೆಯರಿಗೂ ತಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರುವುದಿಲ್ಲ. ಇದನ್ನು ನಿಭಾಯಿಸಲು ನನ್ನಿಂದ ಸಾಧ್ಯ ಎಂಬ ನಂಬಿಕೆಯಿರುವುದಿಲ್ಲ.

ಪ್ರಾಯೋಗಿಕ ಸಮಸ್ಯೆಗಳು: ಯುವತಿಯರು ಅಧ್ಯಯನ ಮುಗಿಸಿ, ಉದ್ಯೋಗಕ್ಕೆ ಸೇರುತ್ತಾರೆ. ಅದೇ ಸಮಯದಲ್ಲೇ ಮದುವೆಯೂ ಆಗುತ್ತದೆ. ಮೂವತ್ತರ ಒಳಗೆ ಒಂದು ಮಗುವಾಗಿ ಬಿಟ್ಟರೆ ಒಳ್ಳೆಯದು ಎನ್ನುತ್ತದೆ ವಿಜ್ಞಾನ. ಗರ್ಭಿಣಿ, ಬಾಣಂತಿ ಎಂದು ಆರೇಳು ತಿಂಗಳು ರಜೆ ಬೇಕೇ ಬೇಕು. ಕಂಪನಿಯಲ್ಲಿ ಮಹಿಳೆಯೊಬ್ಬಳಿಗೆ ಟೀಂ ಲೀಡರ್ ಸ್ಥಾನವನ್ನು ಕೊಡುವ ಮುಂಚೆ, ಇದೆಲ್ಲವನ್ನೂ ಯೋಚಿಸುತ್ತಾರೆ, ಅಲ್ಲವೇ? ಅರ್ಹತೆಗಿಂತ ಅವರಿಗೆ ಮುಂದೆ ಆಗುವ ಅನುಪಸ್ಥಿತಿಯೇ ದೊಡ್ಡದಾಗಿ ಕಾಣಿಸುತ್ತದೆ. ‘‘ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರೂ’ ಎನ್ನುವ ಕಾಲ ಈಗ. ಒಂದೂವರೆ ತಿಂಗಳ ಬಾಣಂತಿಯರೂ ಕೆಲಸಕ್ಕೆ ಬರಲು ತಯಾರಿರುತ್ತಾರೆ. ಆದರೆ ಅವರಿಗೆ ಎದೆ ಹಾಲು (Expressed Breast milk) ತೆಗೆಯಲು ಬೇರೆ ಕೊಠಡಿಯ ಸೌಕರ್ಯ ಎಷ್ಟು ಆಫೀಸ್​ಗಳಲ್ಲಿರುತ್ತದೆ? ಹೆಣ್ಣು ಮಕ್ಕಳ ಕರಿಯರ್​ನ ಸುಮಾರು ಎರಡು ವರ್ಷ ಒಂದು ಮಗು ಆಗುವುದರಲ್ಲೇ ಕಳೆದುಹೋಗುತ್ತದೆ.

ಗಾಜಿನ ಛಾವಣಿ: ಮಹಿಳೆಯರನ್ನು ನಾಯಕತ್ವದ ಸ್ಥಾನದಲ್ಲಿ ನೋಡಲು ಅಮೂರ್ತವಾದ ಪದರವೊಂದು ಸಮಾಜದಲ್ಲಿ ಅಡ್ಡಗೋಡೆಯಾಗಿ ನಿಲ್ಲುತ್ತದೆ. ಇದನ್ನೇ ಗಾಜಿನ ಛಾವಣಿ (Glass ceiling)ಎನ್ನುತ್ತೇವೆ. ನಾಯಕತ್ವವು ಪುರುಷನ ಹಕ್ಕು ಎಂಬ ಪೂರ್ವಗ್ರಹ, ಕುಟುಂಬ ಮತ್ತು ಸಮಾಜದಲ್ಲಿ ಪುರುಷರಿಗೆ ಆದ್ಯತೆ, ಮಹಿಳೆಯರ ಮೂಲಭೂತ ಸ್ವಾತಂತ್ರ್ಯವನ್ನು ನಿರಾಕರಿಸುವ ಕೆಲ ಸಾಮಾಜಿಕ, ಸಾಂಸ್ಕೃತಿಕ, ಧಾರ್ವಿುಕ ಆಚರಣೆ ಇತ್ಯಾದಿಗಳು ಈ ಗಾಜಿನ ಛಾವಣಿಯನ್ನು ನಿರ್ವಿುಸುತ್ತವೆ.

ಉದ್ಯೋಗ-ಕುಟುಂಬ ಸಮತೋಲನ: ಉದ್ಯೋಗ ಮತ್ತು ಕುಟುಂಬದ ಮಧ್ಯೆ ನಾನು ಹೇಗೆ ನನ್ನ ಸಮಯವನ್ನು ಹಂಚಲಿ? ಎಂಬುದೇ ದೊಡ್ಡ ಚಿಂತೆಯಾಗಿ ಕಾಡುತ್ತದೆ. ‘ಎರಡೂ ಬೇಕು’ ಎನ್ನುತ್ತಾರೆ ಬಹಳಷ್ಟು ಮಹಿಳೆಯರು. ಈ ಸಮತೋಲನವನ್ನು ಕಾಪಾಡಿಕೊಳ್ಳುವುದೂ ಮಹಿಳಾ ನಾಯಕತ್ವಕ್ಕೆ ತಡೆಗೋಡೆಯೇ? ಮಹಿಳೆಯರು ಹೊರ ಹೋಗಿ ಪುರುಷನಿಗೆ ಸಮಾನವಾಗಿ ದುಡಿಯುತ್ತಿದ್ದಾರೆ ಎಂದುಕೊಂಡರೂ, ಮಹಿಳೆಯರಿಗೆ ಮನೆಯ-ಸಂಸಾರದ-ಮಕ್ಕಳ ಜವಾಬ್ದಾರಿ ಇದ್ದೇ ಇದೆ. ಉದ್ಯೋಗಸ್ಥ ಮಹಿಳೆಯರಿಗೆ ಇದರಿಂದಾಗಿ ಒಂದು ರೀತಿಯ ‘ಪಶ್ಚಾತ್ತಾಪ ಭಾವನೆ’ ಕಾಡುತ್ತದೆ. ಈ ಗಿಲ್ಟಿ ಫೀಲಿಂಗ್ ಹೋಗಲಾಡಿಸಲು ಎಲ್ಲವನ್ನೂ ಒಂಟಿಯಾಗಿ ನಿರ್ವಹಿಸುವ ‘ಸೂಪರ್ ಉಮನ್’ ಆಗಲು ಯತ್ನಿಸುತ್ತಾರೆ. ಕಡೆಗೊಂದು ದಿನ ಒತ್ತಡಕ್ಕೆ ಒಳಗಾಗಿ ಯಾವುದಾದರೊಂದು ಕಡೆ, ಹೆಚ್ಚಾಗಿ ಉದ್ಯೋಗದ ಸ್ಥಳದಲ್ಲೇ ರಾಜಿಯಾಗಿ ಕಡಿಮೆ ಸಂಬಳ/ಕೆಳಗಿನ ಹುದ್ದೆಗೇ ತೃಪ್ತಿಯಾಗುತ್ತಾರೆ.

ಪರಿಹಾರ ಇದೆಯೇ?

  • ‘‘ನಾನು ಮಾಡಬಲ್ಲೆ, ನನ್ನಿಂದ ಸಾಧ್ಯವಿದೆ’ ಎಂಬ ನಂಬಿಕೆ ಮಹಿಳೆಯರಿಗೆ ಬೇಕು. ಅದಿದ್ದರೆ ಮಾತ್ರ ಸಾಧಿಸಿ ತೋರಿಸಬಹುದು. ಮಹಿಳೆಯರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಬೇಕು. ಆ ಸಾಮರ್ಥ್ಯಕ್ಕೆ ತಕ್ಕಂತೆ ಬದುಕಿನ ಗುರಿ ಇಟ್ಟುಕೊಳ್ಳಬೇಕು.
  • ವಿಶೇಷ ಸೌಲಭ್ಯಗಳಿರಬೇಕು; ಬಾಣಂತಿಯರಿಗಾಗಿ ಕೊಠಡಿಗಳು, ಬದಲಾವಣೆಗೆ ಸಾಧ್ಯವಿರುವ (Flexible) ಕೆಲಸದ ವೇಳಾಪಟ್ಟಿ, ಮನೆಯಲ್ಲೇ ಕುಳಿತು ಕೆಲಸ ಮಾಡುವ ಸೌಲಭ್ಯ (Work from home option) ಇತ್ಯಾದಿ.
  • ಮನೆಯಲ್ಲಿ, ಮನೆಯ ಕೆಲಸಗಳನ್ನು ಮಾಡಲು ಮಹಿಳೆಗೆ ನೆರವು ಬೇಕು. ಗಂಡ, ಅತ್ತೆ-ಮಾವ, ಅಮ್ಮ-ಅಪ್ಪ ಅಥವಾ ಪರಿಚಾರಕಿ ಯಾರೇ ಕೆಲಸ ಹಂಚಿಕೊಂಡರೂ ಪರವಾಗಿಲ್ಲ.
  • ಮಹಿಳೆಯರ ಸ್ಥಾಯಿಭಾವ ಮಾರ್ದವತೆ, ಅವರು ಮುಖಂಡರಾಗಲು ಸಾಧ್ಯವಿಲ್ಲ ಎಂಬ ಪೂರ್ವಾಗ್ರಹ ಹೊಡೆದೋಡಿಸಬೇಕು. ಒಬ್ಬ ತಾಯಿಗೆ ಶಿಕ್ಷಣ ನೀಡಿದರೆ, ಇಡೀ ಕುಟುಂಬಕ್ಕೆ ನೀಡಿದಂತೆ. ಮಹಿಳೆಯರು ಸಂಸಾರವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಕೆಲಸ ಮಾಡುವ ಸಾಮರ್ಥ್ಯ ಮಹಿಳೆಯರಿಗೆ ಇರುತ್ತದೆ. ಅಂತೆಯೇ, ಒಂದು ಸಂಘ ಅಥವಾ ಸಂಸ್ಥೆಯನ್ನು ಮುನ್ನಡೆಸುವ ಶಕ್ತಿಯೂ ಅವರಿಗೆ ಇರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net