

ವಾಷಿಂಗ್ಟನ್ : "ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರ ಪ್ರಭಾವಿ ಸಹೋದರಿ ಕಿಮ್ ಯೋ ಜೊಂಗ್ ವಿಶ್ವದಲ್ಲೇ ಅತ್ಯಂತ ಕ್ರೂರಿ, ಆಕೆಯನ್ನು ಚರಿತ್ರೆಯಲ್ಲೇ ಬಹಳ ಅಪಾಯಕಾರಿ ಮಹಿಳೆ ಎಂದು ಕರೆಯುವುದು ತಪ್ಪಲ್ಲ" ಹೌದು, ಇದು ಇತ್ತೀಚೆಗೆ ಬಿಡುಗಡೆಯಾದ "ದಿ ಸಿಸ್ಟರ್" ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.
ಕಿಮ್ ಜೊಂಗ್ ಉನ್ ಸಹೋದರಿಗೆ ಸಂಬಂಧಿಸಿದ ಮೊದಲ ಫೋಟೋ 90ರ ದಶಕದ ಪ್ರಾರಂಭದಲ್ಲಿ ಖಂಡಾಂತರ ಬಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಸಮಯದಲ್ಲಿ ಹೊರಬಂತು. ಆಗ ಆಕೆಗೆ 10ವರ್ಷ. ಅಂದಿನಿಂದ ಕಿಮ್ ಆಡಳಿತದಲ್ಲಿ ಈಕೆ ಮೂಗು ತೂರಿಸುತ್ತಿದ್ದಾಳೆ. ಆತನ ಹುಚ್ಚು ತೀರ್ಮಾನಗಳ ಹಿಂದೆ ಈಕೆ ಕೈವಾಡ ಇರುತ್ತದೆ ಎಂಬ ಆರೋಪಗಳು ಜಗತ್ತಿನಾದ್ಯಂತ ಕೇಳಿ ಬರುತ್ತಲೇ ಇವೆ.
ಇದನ್ನೂ ಓದಿ: ಹಮಾಸ್ ಉಗ್ರರ ದಾಳಿ ಖಂಡಿಸಿದ ಮೊದಲ ಮುಸ್ಲಿಂ ರಾಷ್ಟ್ರ
ತಾಜಾ ಸುದ್ದಿಯೇನೆಂದರೆ ಉತ್ತರ ಕೊರಿಯಾ ಮೂಲದ, ಪ್ರಸ್ತುತ ಅಮೆರಿಕಾದಲ್ಲಿ ವಾಸವಿರುವ ಬರಹಗಾರ್ತಿ ಸುಂಗ್ ಯೂನ್ ಲೀ ಇತ್ತೀಚೆಗೆ ಬರೆದ ಪುಸ್ತಕದಲ್ಲಿ ಕಿಮ್ ಯೋ ಜೋಂಗ್ ವಿಶ್ವದಲ್ಲೇ ಅತಿಭಯಂಕರ ಮಹಿಳೆಯಾಗಿ ಹೇಗೆ ಬದಲಾಗಿದ್ದಾಳೆಂದು ತಿಳಿಸಿದ್ದಾರೆ. ಈ ಪುಸ್ತಕದ ಹೆಸರು "ದಿ ಸಿಸ್ಟರ್" ಎಂದಿದ್ದು, ಟ್ಯಾಗ್ ಲೈನ್ ಆಗಿ "ನಾರ್ತ್ ಕೊರಿಯಾ ಕಿಮ್ ಯೋ ಜೊಂಗ್, ದಿ ಮೋಸ್ಟ್ ಡೇಂಜರೆಸ್ ವುಮೆನ್" ಎಂದು ಬರೆದಿದ್ದಾರೆ. ಇದಕ್ಕೆ ಕಾರಣಗಳನ್ನೂ ಕೊಡಲಾಗಿದೆ.
ಕಿಮ್ ಜೊಂಗ್ ಉನ್ ಆರೋಗ್ಯ ಕ್ಷೀಣಿಸುತ್ತಿರುವುದರಂದ ಆತನ ಸಹೋದರಿ ಕಿಮ್ ಯೋ ಜೊಂಗ್ ಅವರಿಗೆ ದೇಶದ ಆಡಳಿತ ವಹಿಸಿಕೊಡುವ ಅವಕಾಶವಿದೆ ಎಂಬ ಮಾತುಗಳು ಇತ್ತೀಚಿನ ವರ್ಷಗಳಲ್ಲಿ ಕೇಳಿಬರುತ್ತಲೇ ಇವೆ. ಕಿಮ್ಗೆ ಆಕೆ ಐಕೈಕ ಸಹೋದರಿಯಾಗಿದ್ದು, ಆಡಳಿತದಲ್ಲಿ ಆಕೆಯ ಹಸ್ತಕ್ಷೇಪ ತೀವ್ರವಾಗಿದೆ. ಯಾವಾಗಲೂ ಆಕೆ ಸಹೋದರನ ಪಕ್ಕದಲ್ಲೇ ಕಾಣಿಸಿಕೊಳ್ಳುತ್ತಾಳೆ. ಇತ್ತೀಚೆಗೆ ಕಿಮ್ ಜತೆ ರಷ್ಯಾಗೆ ತೆರಳಿದ್ದಳು. ಅಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಸಹೋದರನಿಗೆ ಸಹಕರಿಸಿದ್ದಳು.
ವುಡ್ರೋ ವಿಲ್ಸನ್ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಸ್ಕಾಲರ್ಸ್ ಸದಸ್ಯೆಯೂ ಆಗಿರುವ ಪುಸ್ತಕ ಬರೆದ ಸುಂಗ್ ಯೂನ್ ಲೀ ಸುಂಗ್ ಯೂನ್ ಲೀ ಪ್ರಕಾರ, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಸ್ಥಾನ ಖಾಲಿಯಾಗುತ್ತಿದ್ದಂತೆ ಆ ಸ್ಥಾನದಲ್ಲಿ ಮುಲಾಜಿಲ್ಲದೆ ಈಕೆ ಕುಳಿತುಕೊಳ್ಳುತ್ತಾಳೆ. ಕಳೆದ ಕೆಲವು ವರ್ಷಗಳಿಂದ ಆಕೆಯ ಸಹೋದರನಿಗೆ ಪ್ರತಿಯೊಂದು ತೀರ್ಮಾನ ತೆಗೆದುಕೊಳ್ಳಲು ಸಹ ನೆರವಾಗುತ್ತಿದ್ದಾಳೆ. ಆಕೆಗೆ ತನ್ನ ಸಹೋದರನ ಪ್ರತಿ ರಹಸ್ಯ ಗೊತ್ತಿದೆ. ಆತನ ಮಾವನ ಹತ್ಯೆ ಪ್ರಕರಣದಲ್ಲೂ ಕರುಣೆ ಮರೆತು ಸಹೋದರನ ಬೆನ್ನಿಗೆ ನಿಲ್ಲುತ್ತಾಳೆ ಎನ್ನುತ್ತಾರೆ.
ಉತ್ತರ ಕೊರಿಯಾ ಕ್ಲೋಸ್ಡ್ ಸೊಸೈಟಿ ಹೊಂದಿರುವ ಕಾರಣ ಅಗತ್ಯ ಸಮಾಚಾರ ಬೇರೆಯವರು ಪಡೆದುಕೊಳ್ಳುವುದು ಅಸಾಧ್ಯ. ಆದರೆ ಈ ಪುಸ್ತಕದಲ್ಲಿ ಕಿಮ್ ಯೋ ಜೊಂಗ್ ಕುರಿತು ಹಲವು ಮಾಹಿತಿಗಳನ್ನು ಸಂಗ್ರಹಿಸಿ ದಾಖಲಿಸಲಾಗಿದೆ. 2020ರಲ್ಲೇ ಕಿಮ್ ತನ್ನ ಸಹೋದರಿಗೆ ಅಧಿಕಾರದ ಪ್ರಮುಖ ಜವಾಬ್ದಾರಿ ವಹಿಸಿಕೊಟ್ಟಿದ್ದಾನೆ. ಪ್ರಸ್ತುತ ದೇಶದಲ್ಲಿನ ಎಲ್ಲ ಆಡಳಿತಾತ್ಮಕ ವ್ಯವಹಾರಗಳನ್ನು ಆಕೆಯೇ ನೋಡಿಕೊಳ್ಳುತ್ತಾಳೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ದಕ್ಷಿಣ ಕೊರಿಯಾದ ಗ್ಯಾಂಗ್ನೆಂಗ್ನಲ್ಲಿ 2018ರಲ್ಲಿ ಜರುಗಿದ ವಿಂಟರ್ ಒಲಂಪಿಕ್ಸ್ನಲ್ಲಿ ಕಿಮ್ ಯೋ ಜೊಂಗ್ ಮಹಿಳೆಯರ ಐಸ್ ಹಾಕಿಯಲ್ಲಿ ಭಾಗವಹಿಸಿ, ಆಕೆ ಸ್ನೇಹಪೂರ್ವಕವಾಗಿ ನಡೆದುಕೊಂಡಳೆಂದು ಅಲ್ಲಿನ ಜನ ಆಕೆಯನ್ನು ಕೊಂಡಾಡಿದ್ದರು. ರಾಜಕುಮಾರಿ ಎಂದೂ ಕರೆದಿದ್ದರು. ಆದರೆ ಅಧಿಕಾರದಲ್ಲಿ ಭಾಗಿಯಾದ ನಂತರ ಕಿಮ್ನಿಂದ ಕ್ರೂರತ್ವ ವಾರಸತ್ವವಾಗಿ ಬಂದಿದೆ. ಅಹಂಕಾರ ಯುವರಾಣಿ ಎಂದು ಉತ್ತರಕೊರಿಯನ್ನರೇ ದೂರುತ್ತಿರುತ್ತಾರೆ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.
ಕಿಮ್ ಯೋ ಜೊಂಗ್ ಅವರನ್ನು ಹತ್ತಿರದಿಂದ ನೋಡುವುದು ಕಷ್ಟ. ಆಕೆ ಪರಮಾಣು, ಶಸ್ತ್ರಸಜ್ಜಿತ ರಾಷ್ಟ್ರದ ಪರಮಾಧಿಕಾರ ನಾಯಕಿಯಾಗುವ ಕನಸು ಕಾಣುತ್ತಿದ್ದಾಳೆ. ಕಿಮ್ ಜನರ ಮೇಲೆ ನಡೆಸುವ ದೌರ್ಜನ್ಯಗಳಿಗೆ ಬೆಂಮಲಿಸುತ್ತಿದ್ದಾಳೆ. ಪುಸ್ತಕದ ಟಿಪ್ಪಣಿಗಳಂತೆ ಕಿಮ್ ಯೋ ಜೊಂಗ್ ವಿಶ್ವದ ಅತ್ಯಂತ ಅಪಾಯಕಾರಿ ಮಹಿಳೆ ಎಂದು ಪರಿಗಣಿಸಲಾಗಿದೆ.