

ಮಾರನೆಯ ದಿನ ಅದೇ ಇ-ಮೇಲ್ ಅಕೌಂಟ್ನಿಂದ ಮುಕೇಶ್ ಅಂಬಾನಿಯವರ ಮೇಲ್ಗೆ, ‘ನೀವು ನನಗೆ 100 ಕೋಟಿ ರೂ.ಗಳನ್ನು ಕೂಡಲೇ ರವಾನಿಸದೆ ಹೋದರೆ ನಿಮಗೆ ಗುಂಡು ಹೊಡೆದು ಕೊಲೆ ಮಾಡಲಾಗುವುದು’ ಎಂದು ಬರೆದಿದ್ದ ಇನ್ನೊಂದು ಪತ್ರ ಬಂದಿತು. ಈ ಮಾಹಿತಿಯೂ ಪೊಲೀಸರಿಗೆ ರವಾನೆಯಾಯಿತು. ಅಕ್ಟೋಬರ್ 30ರಂದು ಮೂರನೆಯ ಇ-ಮೇಲ್ ಬಂದಿತು. ಅದರಲ್ಲಿ ಬೇಡಿಕೆಯ ಮೊತ್ತವನ್ನು ರೂ. 400 ಕೋಟಿಗಳಿಗೆ ಏರಿಸಿದ್ದ ಬೆದರಿಕೆದಾರ ತನ್ನ ಹೆಸರನ್ನು ಶಾದಾಬ್ ಹುಸೇನ್ ಎಂದು ನಮೂದಿಸಿದ್ದ. ಇ-ಮೇಲ್ನ ವಿಷಯವೇನೆಂದು ನಮೂದಿಸುವ ಜಾಗದಲ್ಲಿ ‘ನನ್ನನ್ನು ಹಿಡಿಯಲು ನಿಮಗೆ ಸಾಧ್ಯವಿಲ್ಲ’ ಎಂದಷ್ಟೇ ಬರೆದಿದ್ದ ಆತ, ತನ್ನ ಪತ್ರದಲ್ಲಿ, ‘ನನಗೆ 400 ಕೋಟಿ ರೂ.ಗಳನ್ನು ಕೂಡಲೇ ರವಾನಿಸದೆ ಹೋದರೆ ಕೊಲೆ ನಿಶ್ಚಿತ’ ಎಂದಿದ್ದ. ಆದರೆ ಹಣವನ್ನು ಎಲ್ಲಿಗೆ, ಯಾರ ಮೂಲಕ ರವಾನಿಸಬೇಕು ಮುಂತಾದ ಮಾಹಿತಿಯನ್ನು ಕೊಟ್ಟಿರಲಿಲ್ಲ.
ಇದೊಂದು ಹುಡುಗಾಟದ ಸಂದೇಶ ಎಂದು ಮೇಲ್ನೋಟಕ್ಕೆ ಎನಿಸಿದರೂ, ಈ ಬಗ್ಗೆ ಪೊಲೀಸರು ಮುಂದಿನ ತನಿಖೆಯನ್ನು ಮುಂಬೈ ಸೈಬರ್ ಪೊಲೀಸರಿಗೊಪ್ಪಿಸಿದರು. ಬೆದರಿಕೆಯ ಮೂರು ಮೇಲ್ಗಳು ಎಲ್ಲಿಂದ ಬಂದಿವೆ ಎಂದು ಅರಿಯಲೆತ್ನಿಸಿದಾಗ ತನಿಖಾಧಿಕಾರಿಗೆ ದೊಡ್ಡ ತೊಂದರೆಯೊಂದು ಎದುರಾಯಿತು. ಆರೋಪಿ ಯಾಹೂ, ಜಿ-ಮೇಲ್ ಮುಂತಾದ ಸಾಮಾನ್ಯ ಇ-ಮೇಲ್ ಸೇವೆಗಳನ್ನು ಬಳಸದೆ ಸಂಕೇತ ಭಾಷೆಯಲ್ಲಿ ಪರಿವರ್ತನೆಯಾಗುವ ‘ಮೇಲ್ ಫೆನ್ಸ್’ ಎನ್ನುವ ಸೇವೆ ಬಳಸಿದ್ದ. ‘ಮೇಲ್ ಫೆನ್ಸ್’ ಸುರಕ್ಷಿತ ಸೇವೆಯಾಗಿದ್ದು, ಇದರಲ್ಲಿನ ಪತ್ರಗಳನ್ನು ಕದ್ದು ಓದಲು ಸಾಧ್ಯವಿಲ್ಲ. ಯಾರ ವಿಳಾಸಕ್ಕೆ ಮೇಲ್ ಕಳುಹಿಸಲಾಗಿದೆಯೋ ಅವರ ಕಂಪ್ಯೂಟರ್ ಮಾತ್ರ ಬಂದ ಪತ್ರವನ್ನು ಓದಬಹುದು. ಈ ಪತ್ರಗಳು ಸಂಕೇತಭಾಷೆಯಲ್ಲಿ ರವಾನೆಯಾಗುವುದರಿಂದ ಮಾರ್ಗಮಧ್ಯದಲ್ಲಿ ಯಾರಾದರೂ ಆ ಪತ್ರವನ್ನೋದಲು ಯತ್ನಿಸಿದರೆ ಪತ್ರದಲ್ಲಿ ಬರೆದಿರುವುದೇನು ಎನ್ನುವುದು ಅವರಿಗೆ ತಿಳಿಯುವುದೇ ಇಲ್ಲ.
ಅಂದರೆ ಕಳುಹಿಸುವವರು ಮತ್ತು ಪಡೆಯುವವರ ಹೊರತಾಗಿ ಬೇರೆ ಯಾರಿಗೂ ಪತ್ರವನ್ನು ಓದಲು ಸಾಧ್ಯವಿಲ್ಲ. ನಮ್ಮ ಇನ್ಬಾಕ್ಸನ್ನು ಯಾರಾದರೂ ಹ್ಯಾಕ್ ಮಾಡಿದರೂ ಹ್ಯಾಕರ್ಗಳಿಗೆ ಅದರಲ್ಲಿ ಡೇಟಾ ಏನಿದೆ ಎಂದು ತಿಳಿಯುವುದಿಲ್ಲ. ಇದರಿಂದ ಸರ್ಕಾರವೂ ಸೇರಿದಂತೆ ನಮ್ಮ ಮಾಹಿತಿ ಯಾರಿಗೂ ಸೋರಿಕೆಯಾಗುವುದಿಲ್ಲ. ಮೇಲ್ ಫೆನ್ಸ್ ಬೆಲ್ಜಿಯಂ ದೇಶದ ಇ-ಮೇಲ್ ಸೇವೆಯಾಗಿದ್ದು, ಆ ದೇಶದಲ್ಲಿ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಖಾಸಗಿತನದ ರಕ್ಷಣೆಗೆ ಹೆಚ್ಚು ಒತ್ತನ್ನು ನೀಡಲಾಗುತ್ತದೆಯಾದ್ದರಿಂದ ನಮ್ಮ ಡೇಟಾ ಸುರಕ್ಷಿತವಾಗಿರುತ್ತದೆ. ಈ ಸೇವೆಗಾಗಿ ಹೆಚ್ಚಿನ ಶುಲ್ಕವನ್ನು ನೀಡಬೇಕು. ಭಾರತ ಸೇರಿದಂತೆ ಪ್ರಮುಖ ವಾಣಿಜ್ಯ ಸಂಸ್ಥೆಗಳು ಮೇಲ್ ಫೆನ್ಸ್ ಹಾಗೂ ಅದರಂತಹ ಸುರಕ್ಷಿತ ಸೇವೆಗಳನ್ನು ಬಳಸುತ್ತವೆ.
ಆರೋಪಿಯು ಬೆಲ್ಜಿಯಂ ದೇಶದಲ್ಲಿ ಕುಳಿತು ಮೇಲ್ ಕಳುಹಿಸಿರಬಹುದು ಎಂದು ಮುಂಬೈ ಸೈಬರ್ ಪೊಲೀಸರು ಆರಂಭದಲ್ಲಿ ಊಹಿಸಿದರು. ಬೆಲ್ಜಿಯಂ ಪೊಲೀಸರ ಹಾಗೂ ಮೇಲ್ ಫೆನ್ಸ್ ಸಂಸ್ಥೆಯ ಸಹಾಯವನ್ನು ತನಿಖೆಗಾಗಿ ಯಾಚಿಸಿದರು. ತನ್ನ ಸೇವೆ ಖಾಸಗಿ ಸೇವೆಯಾಗಿರುವುದರಿಂದ ಪೊಲೀಸರು ಕೋರಿದ ಮಾಹಿತಿ ನೀಡಲಾಗುವುದಿಲ್ಲ ಎಂದು ಹೇಳಿದ ಮೇಲ್ ಫೆನ್ಸ್ ಸಂಸ್ಥೆ ಪೊಲೀಸರ ವಿನಂತಿಯನ್ನು ತಿರಸ್ಕರಿಸಿತು. ಆದರೆ ಹಲವು ನಿರಂತರ ಪ್ರಯತ್ನಗಳ ನಂತರ ಅಲ್ಲಿನ ಅಧಿಕಾರಿಗಳು ಭಾರತದಲ್ಲಿ ಯಾರ್ಯಾರು ತನ್ನ ಸೇವೆ ಬಳಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ತನಿಖಾಧಿಕಾರಿಗೆ ಕೊಡಲು ಒಪ್ಪಿತು.
ಭಾರತದಲ್ಲಿ ಸುಮಾರು 150 ಜನರು ಮೇಲ್ ಫೆನ್ಸ್ ಕಂಪನಿಯ ಇ-ಮೇಲ್ ಅಕೌಂಟ್ಗಳನ್ನು ಬಳಸುತ್ತಿದ್ದಾರೆಂದು ತಿಳಿದಾಗ ಸೈಬರ್ ಪೊಲೀಸರು ಆ ಎಲ್ಲ ಅಕೌಂಟ್ಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಒಂದು ಅಕೌಂಟಿನ ಹೊರತಾಗಿ ಬೇರೆ ಯಾವ ಅಕೌಂಟಿನಿಂದಲೂ ಮುಕೇಶ್ ಅಂಬಾನಿಯವರಿಗೆ ಇ-ಮೇಲ್ ಕಳುಹಿಸಿದ ಐದು ದಿನಗಳಲ್ಲಿ ಯಾವುದೇ ಇ-ಮೇಲ್ ರವಾನೆಯಾಗಿರಲಿಲ್ಲ. ಹಾಗಾಗಿ ಅದೇ ಅಕೌಂಟನ್ನು ಪೊಲೀಸರು ಪರಿಶೀಲಿಸತೊಡಗಿದಾಗ ಅದನ್ನು ಇತ್ತೀಚೆಗಷ್ಟೆ ತೆರೆಯಲಾಗಿದೆ ಎಂದು ತಿಳಿದುಬಂದಿತು. ಆಗ ಪೊಲೀಸರು ಮತ್ತೊಮ್ಮೆ ಮೇಲ್ ಫೆನ್ಸ್ ಸಂಸ್ಥೆಯನ್ನು ಸಂರ್ಪಸಿದರು. ಆ ಅಕೌಂಟ್ ಯಾರ ಹೆಸರಿನಲ್ಲಿದೆ ಅಥವಾ ಎಲ್ಲಿದೆ ಎನ್ನುವುದನ್ನಾದರೂ ತಿಳಿಸಿ ಎಂದು ಅದನ್ನು ಕೋರಿದರು. ಆದರೆ ಆ ವಿದೇಶಿ ಸಂಸ್ಥೆ ತನಿಖಾಧಿಕಾರಿಗೆ ಸಹಕಾರ ನೀಡಲಿಲ್ಲ.
ಯಾವ ಅಕೌಂಟಿನಿಂದ ಕಳಿಸಲಾಗಿದೆ ಎಂದು ತಿಳಿಯದಿದ್ದರೆ ಪರವಾಗಿಲ್ಲ, ಕಡೆಗೆ ಯಾವ ಕಂಪ್ಯೂಟರ್ನಿಂದ ಅದನ್ನು ಕಳುಹಿಸಲಾಯಿತು ಎಂದು ತಿಳಿದರೆ ಆರೋಪಿ ಪತ್ತೆಯಾಗುತ್ತಾನೆ ಎಂದು ಭಾವಿಸಿದ ಪೊಲೀಸರು ಅದೇ ನಿಟ್ಟಿನಲ್ಲಿ ತನಿಖೆ ಆರಂಭಿಸಿದರು. ಹೀಗಾಗಿ ಆ ಕಂಪ್ಯೂಟರ್ನ ಐ.ಪಿ ಅಡ್ರಸ್ ಹುಡುಕಲಾರಂಭಿಸಿದರು. ಆಗ ಇನ್ನೊಂದು ತೊಂದರೆ ಎದುರಾಯಿತು. ಆರೋಪಿ ತಾನು ಸಂದೇಶ ಕಳುಹಿಸಿರುವ ಕಂಪ್ಯೂಟರಿನ ಮಾಹಿತಿಯನ್ನು ಮರೆಮಾಚಲು ವಿ.ಪಿ.ಎನ್, ಅಂದರೆ ವರ್ಚುಯಲ್ ಪ್ರೈವೆಟ್ ನೆಟ್ವರ್ಕ್, ಉಪಯೋಗಿಸಿದ್ದ.
ವಿ.ಪಿ.ಎನ್ ಜಾಲವನ್ನು ಉಪಯೋಗಿಸಿದಾಗ ನಾವು ಯಾವ ಕಂಪ್ಯೂಟರ್ ಬಳಸುತ್ತಿದ್ದೇವೆ, ಆ ಕಂಪ್ಯೂಟರ್ ಯಾವ ದೇಶದಲ್ಲಿ, ಯಾವ ನಗರದಲ್ಲಿದೆ ಎಂದು ತೋರಿಸುವ ಐ.ಪಿ.ಅಡ್ರಸ್ ಮರೆಮಾಚಿರುತ್ತದೆ. ವಿ.ಪಿ.ಎನ್ ಸರ್ವರ್ ಬಳಸಿದಾಗ ನಮಗೆ ಇಂಟರ್ನೆಟ್ ಸೇವೆಗಳನ್ನು ಕೊಡುವ ಸಂಸ್ಥೆಗೆ ನಾವು ಯಾವ ಜಾಲತಾಣಗಳಿಗೆ ಹೋಗಿದ್ದೇವೆ ಎಂದು ತಿಳಿಯುವುದಿಲ್ಲ. ಉದಾಹರಣೆ ಕೊಡುವುದಾದರೆ ಇರಾನ್ ದೇಶದಲ್ಲಿ ಫೇಸ್ಬುಕ್ಗೆ ನಿರ್ಬಂಧವಿರುವುದರಿಂದ ಆ ದೇಶದ ಜನರು ಫೇಸ್ಬುಕ್ ನೋಡಬೇಕಾದರೆ ವಿ.ಪಿ.ಎನ್ ಜಾಲದ ಮೊರೆಹೋಗಬೇಕು. ಈ ಜಾಲದ ಮೂಲಕ ಫೇಸ್ಬುಕ್ ನೋಡಿದರೆ ಯಾರಿಗೂ ನಾವು ಇರಾನಿನಿಂದ ಫೇಸ್ಬುಕ್ ನೋಡುತ್ತಿದ್ದೇವೆಂದು ತಿಳಿಯುವುದಿಲ್ಲ. ಇನ್ನೊಂದು ವಿಶೇಷವೆಂದರೆ ನಾವು ಇಂಟರ್ನೆಟ್ ಮುಖಾಂತರ ಯಾವ ಡೇಟಾವನ್ನು ಕಳಿಸುತ್ತೇವೆಯೋ ಇಲ್ಲವೆ ಯಾವ ಡೇಟಾವನ್ನು ಲಭಿಸಿಕೊಳ್ಳುತ್ತೇವೆಯೋ ಅದೂ ಯಾರಿಗೂ ತಿಳಿಯುವುದಿಲ್ಲ.
ಇದು ಸಾಲದೆಂಬಂತೆ ಯಾರಾದರೊಬ್ಬರು ನಮ್ಮ ಕಂಪ್ಯೂಟರ್ಗೆ ಕನ್ನ ಹಾಕಿದರೂ ಅದರಲ್ಲಿರುವ ಡೇಟಾವನ್ನು ಅವರಿಗೆ ಓದಲು ಬರುವುದೇ ಇಲ್ಲ. ಹೀಗಾಗಿ ಹೊರಗಿನವರಿಗೆ ಯಾರಿಗೂ ನಮ್ಮ ಕಂಪ್ಯೂಟರ್ನ ಚಟುವಟಿಕೆಗಳ ಬಗ್ಗೆ ಯಾವ ಮಾಹಿತಿಯೂ ಸಿಗುವುದಿಲ್ಲ. ವಿ.ಪಿ.ಎನ್ ಬಳಸುವಾಗ ಬೇರೆಯವರಿಗೆ ನಮ್ಮ ಕಂಪ್ಯೂಟರ್ ಒಂದು ದಿನ ಅಮೆರಿಕದಲ್ಲಿ, ಒಂದು ದಿನ ರಷ್ಯಾದಲ್ಲಿ, ಒಂದು ದಿನ ಫ್ರಾನ್ಸ್ನಲ್ಲಿ ಇರುವಂತೆ ತೋರುತ್ತದೆ. ಈ ಕಾರಣದಿಂದ ಬಹಳ ಕ್ರಿಮಿನಲ್ಗಳು ವಿ.ಪಿ.ಎನ್ ಸರ್ವರ್ಗಳನ್ನು ಬಳಸುತ್ತಾರೆ. ಹೀಗಾಗಿ ಆರೋಪಿಯ ಕಂಪ್ಯೂಟರಿನ ಐ.ಪಿ. ಅಡ್ರೆಸ್ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಯಿತು. ಛಲಬಿಡದ ಪೊಲೀಸರು ಆರೋಪಿ ಬಳಸುತ್ತಿದ್ದ ಇ-ಮೇಲ್ ಅಕೌಂಟ್ ಮೇಲೆ 24 ಗಂಟೆಗಳ ನಿಗಾ ವಹಿಸಿದರು. ಒಂದು ವೇಳೆ ಸದರಿ ಇ-ಮೇಲ್ಗೆ ಯಾವುದಾದರೂ ಸಂದೇಶ ಬಂದರೆ ಇಲ್ಲವೆ ಆ ಅಕೌಂಟ್ ಓಪನ್ ಆದರೆ ತಿಳಿಯಬೇಕು ಎನ್ನುವುದೇ ಅವರ ಉದ್ದೇಶವಾಗಿತ್ತು. ಹೀಗಿರುವಾಗ ಒಂದು ರಾತ್ರಿ ಸುಮಾರು ಒಂದು ಗಂಟೆಗೆ ಆರೋಪಿಯ ಅಕೌಂಟ್ ಓಪನ್ ಆಯಿತು. ಆತ ಬೇರೆ-ಬೇರೆ ವಿ.ಪಿ.ಎನ್ ಸರ್ವರ್ಗಳ ಉಪಯೋಗ ಮಾಡುವ ಸಂದರ್ಭದಲ್ಲಿ ಕೇವಲ ಅರ್ಧ ನಿಮಿಷದ ಅವಧಿಗೆ ಅವನ ಭಾರತದ ಐ.ಪಿ.ವಿಳಾಸವು ತನಿಖಾಧಿಕಾರಿಗೆ ದೊರಕಿತು.
ಅದು ಸಿಕ್ಕ ಕೂಡಲೇ ಪೊಲೀಸರಿಗೆ ಆ ಕಂಪ್ಯೂಟರ್ ಎಲ್ಲಿದೆ ಎಂದು ಹುಡುಕುವುದು ಕಷ್ಟವಾಗಲಿಲ್ಲ. ಆರೋಪಿಯ ಕಂಪ್ಯೂಟರ್ ಗುಜರಾತ್ನ ಅಹ್ಮದಾಬಾದ್ ನಗರದ ಬಳಿಯಿರುವ ಕಲೋಳ್ನಲ್ಲಿರುವುದಾಗಿ ತಿಳಿದುಬಂದಿತು. ಕೂಡಲೇ ಮುಂಬೈ ಪೊಲೀಸರು ಅಲ್ಲಿಗೆ ಧಾವಿಸಿ ಕಂಪ್ಯೂಟರ್ನ್ನು ಪತ್ತೆ ಮಾಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಸದರಿ ಕಂಪ್ಯೂಟರ್ ಗುಜರಾತ್ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಪೊಲೀಸ್ ಹೆಡ್ಕಾನ್ಸ್ಟೇಬಲ್ನ ಮನೆಯಲ್ಲಿತ್ತು. ಮುಂದಿನ ವಿಚಾರಣೆಯಲ್ಲಿ ಕಂಪ್ಯೂಟರನ್ನು ಹೆಡ್ಕಾನ್ಸ್ಟೇಬಲ್ನ ಮಗ 21 ವರ್ಷದ ಕಾಂತ್ ಎನ್ನುವವನು ಬಳಸುತ್ತಿದ್ದನೆಂದು ತಿಳಿಯಿತು. ಬಿ.ಕಾಂ. ಓದುತ್ತಿದ್ದ ಈ ಯುವಕ ತಾನು ಕಂಪ್ಯೂಟರ್ ಬಳಕೆಯಲ್ಲಿ ಹೆಚ್ಚಿನ ಪರಿಣಿತಿ ಗಳಿಸಿದ್ದೇನೆ ಎಂದು ತನ್ನ ಸ್ನೇಹಿತರಿಗೆ ತೋರಿಸಲು ಈ ಕೃತ್ಯವನ್ನೆಸಗಿದ್ದ. ತನಗೆ ಮುಕೇಶ್ ಅಂಬಾನಿಯವರಿಂದ ಹಣ ಪಡೆಯಲು ಇಲ್ಲವೆ ಅವರನ್ನು ಕೊಲೆ ಮಾಡುವ ಉದ್ದೇಶವೇ ಇರಲಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ.
‘ನೀನು ಶಾದಾಬ್ ಖಾನ್ ಎನ್ನುವ ಹೆಸರನ್ನು ಏಕೆ ಬಳಸಿದೆ?’ ಎಂದು ಪ್ರಶ್ನಿಸಿದಾಗ ಆತ, ‘ನಾನು ಮೊದಲ ಇ-ಮೇಲ್ ತಯಾರಿಸಿದ ದಿನದಂದು ಪಾಕಿಸ್ತಾನಿ ತಂಡ ಕ್ರಿಕೆಟ್ ಮ್ಯಾಚೊಂದನ್ನು ಆಡುತ್ತಿತ್ತು. ಅದರಲ್ಲಿ ಆ ತಂಡದ ನಾಯಕ ಶಾದಾಬ್ ಖಾನ್ ತನ್ನ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದ. ಹೀಗಾಗಿ ಅವನ ಹೆಸರು ಹಾಕಿದೆ. ನಾನು ಕಳಿಸಿದ ಇ-ಮೇಲ್ ಪಾಕಿಸ್ತಾನದಿಂದ ಬಂದಿದೆಯೆಂದು ತಿಳಿಯಲಿ ಎನ್ನುವ ಉದ್ದೇಶ ನನ್ನದಾಗಿತ್ತು’ ಎಂದ. ಅವನನ್ನು ಬಂಧಿಸಿದ ಮುಂಬೈ ಪೊಲೀಸರು ಅವನನ್ನು ತಮ್ಮೊಡನೆ ಮುಂಬೈಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಕೆಲ ದಿನಗಳ ನ್ಯಾಯಾಂಗ ಬಂಧನದಲ್ಲಿದ್ದ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ‘ಹುಲಿಯ ಕೆಣಕುವುದು ಹುಲಿ, ಕಪಿಯನಣಕಿಪುದು ಕಪಿ, ಹುಲಿಕಪಿಗಳವಿತಿರದ ನರಜಂತುವೆಲ್ಲಿ? ಮಲಗಿರುವಮೃಗವನಂತಿರಲು ಬಿಡುವುದೆ ಜಾಣು, ಕುಲುಕದಿರು ಬಾಲವನು ಮಂಕುತಿಮ್ಮ’ ಎನ್ನುವ ಕಗ್ಗದಂತೆ ಹುಡುಗಾಟಕ್ಕಾಗಿ ಬಲಿಷ್ಠರನ್ನು ಕೆಣಕಿದ ಯುವಕ ತೊಂದರೆಗೆ ಸಿಲುಕುವಂತಾಯಿತು.