

| ಭಾರತಿ ಎ.ಕೊಪ್ಪ
ಮೊದಲು ತಾಯ ಹಾಲ ಕುಡಿದು,
ಲಲ್ಲೆಯಿಂದ ತೊದಲಿ ನುಡಿದು,
ಕೆಳೆಯರೊಡನೆ ಬೆಳೆದು ಬಂದ
ಮಾತದಾವುದು
ಎಂಬ ಬಿ.ಎಂ.ಶ್ರೀ ಯವರ ಪದ್ಯದ ಸಾಲುಗಳಂತೆ, ತಾಯಿಯ ಮಡಿಲಿನಿಂದ ಮೊದಲುಗೊಂಡು, ಓರಗೆಯ ಮಕ್ಕಳೊಡನೆ ತುಂಟಾಟವಾಡುತ್ತಾ ಉಲಿವ ನಮ್ಮೆಲ್ಲರ ತಾಯ್ನುಡಿ ಕನ್ನಡವೇ ಆಗಿದೆ.ಕನ್ನಡಿಗರ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ತಾಯಂದಿರ, ಮಹಿಳೆಯರ ಪಾತ್ರ ಗಣನೀಯವಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಒಂದಿಷ್ಟು ಇ-ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಿದೆ. ಗ್ರಂಥಾಲಯ ಇಲಾಖೆಯ 2021ರ ಅಂಕಿ-ಅಂಶದಂತೆ ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯದಲ್ಲಿ ಈವರೆಗೆ ನೋಂದಣಿಯಾದವರ ಸಂಖ್ಯೆ 1 ಕೋಟಿ ಗಡಿ ದಾಟಿದೆ. ಕರ್ನಾಟಕದಲ್ಲಿ 26 ನಗರ ಕೇಂದ್ರ ಗ್ರಂಥಾಲಯಗಳು, 30 ಜಿಲ್ಲಾ ಕೇಂದ್ರಗಳಲ್ಲಿ 703 ಶಾಖೆಗಳು,5766 ಗ್ರಾಮ ಪಂಚಾಯತಿ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ.ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರು ಎಂಬಂತೆ ತಾಯಂದಿರು ಬಿಡುವಿನ ವೇಳೆಯಲ್ಲಿ ಗ್ರಂಥಾಲಯದ ಕನ್ನಡ ಪುಸ್ತಕಗಳನ್ನು ತಂದು ಓದುವ ಸಂಸ್ಕೃತಿಯನ್ನು ಬೆಳೆಸಿಕೊಂಡರೆ ಮಕ್ಕಳು ಕೂಡಾ ಅನುಕರಿಸುತ್ತಾರೆ. ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಾಯಿಸಿಕೊಂಡು ಇ-ಸಾರ್ವಜನಿಕ ಗ್ರಂಥಾಲಯ ಸೌಲಭ್ಯ ಮೂಲಕವೂ ಮನೆಯಲ್ಲೇ ಪುಸ್ತಕಗಳನ್ನು ಓದಬಹುದಾಗಿದೆ. ಮಹಿಳೆಯರು ಕನ್ನಡ ಪುಸ್ತಕಗಳ ಸಂಗ್ರಹದ ಹವ್ಯಾಸವನ್ನಿಟ್ಟುಕೊಂಡು ಮನೆಯಲ್ಲೇ ಒಂದು ಪುಟ್ಟ ಗ್ರಂಥಾಲಯವನ್ನು ಮಾಡಿಕೊಳ್ಳಬಹುದಾಗಿದೆ.
ನಾಗಾಲೋಟದ ಜೀವನದಲ್ಲಿ ಔದ್ಯೋಗಿಕ ಮಹಿಳೆಯರಂತೂ ಬೆಳಗ್ಗೆ ಎದ್ದು ಕಚೇರಿಗೆ ಹೊರಡುವ ತನಕವೂ ಮನೆಯಲ್ಲಿ ಅನೇಕ ಕೆಲಸಗಳ ಒತ್ತಡದಲ್ಲಿರುತ್ತಾರೆ. ಮನೆಗೆ ದಿನಪತ್ರಿಕೆ ಪ್ರತಿದಿನ ಬರುತ್ತಿದ್ದರೂ ಅದನ್ನು ಓದಲು ಮೀಸಲಿಡುವ ಸಮಯ ಬಹಳ ಕಡಿಮೆ. ಗೃಹಿಣಿಯರೂ ಇದಕ್ಕೆ ಹೊರತಾಗಿಲ್ಲ. ಕನ್ನಡ ದಿನಪತ್ರಿಕೆಯಲ್ಲಿ ಬರುವ ಅಂಕಣಗಳು, ಪುರವಣಿಗಳು, ದೈನಂದಿನ ಸಮಾಚಾರಗಳು ಒಂದು ರೀತಿಯಲ್ಲಿ ಪ್ರಪಂಚದ ಆಗು-ಹೋಗುಗಳ ಕನ್ನಡಿ ಇದ್ದಂತೆ. ಮಹಿಳೆಯರು ತಮ್ಮ ಆಯ್ಕೆಯ ಕನ್ನಡದ ಯಾವುದೇ ದಿನಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ದೈನಂದಿನ ಆಗುಹೋಗುಗಳ ಅರಿವು ಮೂಡುತ್ತದೆ. ಜೊತೆಗೆ ಮಂಗಳೂರು ಸಮಾಚಾರ ಎಂಬ ಕನ್ನಡದ ಮೊದಲ ದಿನಪತ್ರಿಕೆಯಿಂದ ಇಂದಿನವರೆಗೆ ಪ್ರಜಾಪ್ರಭುತ್ವದ ಕಾವಲುಗಾರನಂತಿರುವ ಕನ್ನಡ ಪತ್ರಿಕೋದ್ಯಮಕ್ಕೆ ಪೋ›ತ್ಸಾಹ ನೀಡಿದಂತಾಗುತ್ತದೆ. ನಿಯತಕಾಲಿಕಗಳ ಓದು ಕೂಡ ಜ್ಞಾನದ ಆಗರವಾಗಿರುವುದರ ಜತೆಗೆ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ತಾಯಂದಿರು ಕನ್ನಡ ದಿನಪತ್ರಿಕೆ ಮತ್ತು ನಿಯತಕಾಲಿಕೆ ಓದುವುದರಿಂದ ಮಕ್ಕಳಿಗೂ ಓದುವ ಹವ್ಯಾಸ ಬೆಳೆದು ಭಾಷಾ ಕೌಶಲ ಬಲಗೊಳ್ಳುತ್ತದೆ.
ಆಧುನಿಕ ಮಹಿಳೆಯರು ಆಂಗ್ಲಭಾಷೆಯಲ್ಲಿ ಮಾತನಾಡುವುದನ್ನೇ ಬಹಳಷ್ಟು ಅಭ್ಯಾಸ ಮಾಡಿಕೊಂಡಿದ್ದಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಆಂಗ್ಲಭಾಷೆಯಲ್ಲಿ ಮಾತನಾಡುವ ಮಹಿಳೆಯರು ಹೆಚ್ಚಾಗಿ ಕಾಣಸಿಗುತ್ತಾರೆ. ವ್ಯಾವಹಾರಿಕ ಜೀವನದಲ್ಲಿ ಬೇರೆ ಬೇರೆ ಭಾಷೆಗಳ ಬಳಕೆ ಅಗತ್ಯವೆನಿಸಿದರೂ, ಮನೆಯಲ್ಲಿ ಕನ್ನಡ ಭಾಷೆ ಮಾತನಾಡುವುದು ಅತ್ಯಗತ್ಯ. ಅದರಲ್ಲೂ ತಾಯಂದಿರು ಮಗುವಿನ ಭಾಷಾ ಬೆಳವಣಿಗೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ.ಮನೆಯ ಸದಸ್ಯರೊಂದಿಗೆ ಕನ್ನಡದಲ್ಲೇ ಮಾತನಾಡುವುದರಿಂದ ಕನ್ನಡದ ಕಂಪು ಮುಂದಿನ ತಲೆಮಾರಿಗೂ ಹರಡುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿದ್ದರೂ, ಉನ್ನತ ಹುದ್ದೆ ಅಲಂಕರಿಸಿದ್ದರೂ ಮನೆಯ ಭಾಷೆ, ಮನದ ಭಾಷೆ ಕನ್ನಡವಾಗಿರಬೇಕು. ಸುಧಾ ಮೂರ್ತಿ, ಕವಿತಾ ಮಿಶ್ರಾ, ಹೇಮಾವತಿ.ವಿ.ಹೆಗ್ಗಡೆಯವರಂತಹ ಸಾಧಕ ಮಹಿಳೆಯರು ನಿರರ್ಗಳವಾಗಿ ಕನ್ನಡವನ್ನು ಮಾತನಾಡುವುದು ಕನ್ನಡತಿಯರಿಗೆ ಆದರ್ಶವಾಗಿದೆ.
ಸಾಮಾನ್ಯವಾಗಿ ಬಹುತೇಕ ಮಹಿಳೆಯರು ಮನೆಯಲ್ಲಿ ಬಿಡುವು ಸಿಕ್ಕಿದ ಕೂಡಲೇ ದೂರದರ್ಶನ, ಸಾಮಾಜಿಕ ಜಾಲತಾಣಗಳಲ್ಲೇ ಕಾಲ ಕಳೆಯಲು ಬಯಸುತ್ತಾರೆ. ಸಂಜೆಯ ವೇಳೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಒಗಟುಗಳನ್ನು ಕೇಳಿ ಉತ್ತರ ಪಡೆಯುವ ಆಟ, ಮಕ್ಕಳಿಗೆ ಗಾದೆ ಮಾತು ಹೇಳಿಕೊಡುವ ಪರಿಪಾಠ ಇಟ್ಟುಕೊಂಡರೆ ಸಾವಿರಾರು ವರ್ಷಗಳಿಂದ ಜನರ ಬಾಯಲ್ಲಿ ಉಳಿದ ಈ ಅಮೂಲ್ಯ ಒಗಟು, ಗಾದೆಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಿದಂತಾಗುತ್ತದೆ. ಕಥೆಗಳನ್ನು ಹೇಳುವುದು ಒಂದು ಕಲೆಯೇ ಆಗಿದೆ. ಮನೆಯ ಮಕ್ಕಳಿಗೆ ತಾಯಂದಿರು ದಿನಕ್ಕೊಂದು ಕಥೆ ಹೇಳುವ ಅಭ್ಯಾಸ ಇಟ್ಟುಕೊಂಡರೆ ಮಕ್ಕಳ ಕಲ್ಪನಾ ಲೋಕ ಗರಿಗೆದರುತ್ತದೆ. ಮನೆಯಲ್ಲಿ ಕನ್ನಡದ ಕಲರವವಾದಂತಾಗುತ್ತದೆ.
ಭಾಷೆಯ ನಿರಂತರ ಹರಿವಿನಲ್ಲಿ ಸಾಹಿತ್ಯ ಪ್ರಬಲ ಮಾಧ್ಯಮವಾಗಿದೆ. ಮಹಿಳೆಯರು ಸಾಹಿತ್ಯಿಕವಾಗಿ ತೊಡಗಿಕೊಂಡಾಗ ಮನದ ಭಾವನೆಗಳನ್ನು ಅಕ್ಷರದ ರೂಪದಲ್ಲಿ ಪಡಿಮೂಡಿಸಲು ಸಾಧ್ಯವಾಗುತ್ತದೆ. ಒಬ್ಬ ಉತ್ತಮ ಓದುಗ, ಉತ್ತಮ ಬರಹಗಾರನಾಗಬಲ್ಲ ಎಂಬ ಮಾತಿದೆ. ಹಾಗಾಗಿ ಹೆಚ್ಚು ಹೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳುವುದರಿಂದ ಬರವಣಿಗೆ ಅಭ್ಯಾಸವಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ವಚನಗಾರ್ತಿ ಅಕ್ಕಮಹಾದೇವಿಯವರಿಂದ ಮೊದಲುಗೊಂಡು ಇಂದಿನವರೆಗೂ ಅನೇಕ ಮಹಿಳಾ ಸಾಹಿತಿಗಳು ತಮ್ಮದೇ ಛಾಪು ಮೂಡಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಂಜನಗೂಡು ತಿರುಮಲಾಂಬ, ತ್ರಿವೇಣಿ, ಎಂ.ಕೆ.ಇಂದಿರಾ, ಗೀತಾ ನಾಗಭೂಷಣ, ಅನುಪಮಾ ನಿರಂಜನ, ವೈದೇಹಿ, ಸಾರಾ ಅಬೂಬಕರ್, ವೀಣಾ ಶಾಂತೇಶ್ವರ ಮುಂತಾದವರು ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅದ್ಭುತ ಕಾಣಿಕೆಯನ್ನು ನೀಡಿದ್ದಾರೆ.
ಕನ್ನಡ ಪುಸ್ತಕಗಳ ಉಡುಗೊರೆ: ಮನೆಗೆ ಅತಿಥಿಗಳು ಆಗಮಿಸಿದಾಗ ಅಥವಾ ಓರಗೆಯ ಮಕ್ಕಳ ಹುಟ್ಟು ಹಬ್ಬದಂತಹ ಕಾರ್ಯಕ್ರಮಗಳು ಇದ್ದಾಗ, ಹಾಗೆಯೇ ಸಭೆ ಸಮಾರಂಭಗಳಲ್ಲಿ ಸ್ನೇಹಿತರನ್ನು ಭೇಟಿಯಾದಾಗ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಪುಸ್ತಕ ಓದುವ ಹವ್ಯಾಸವನ್ನು ಪ್ರೇರೇಪಿಸಿದಂತಾಗುತ್ತದೆ. ಲೇಖಕರ ಬರವಣಿಗೆಗೆ ಪೋ›ತ್ಸಾಹ ನೀಡಿದಂತಾಗುತ್ತದೆ.
ಮಕ್ಕಳಿಗೆ ಕನ್ನಡ ಭಾಷಾ ಶಿಕ್ಷಣ: ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣ ನೀಡಿದರೆ ಮಾತ್ರ ಯಶಸ್ವಿ ವ್ಯಕ್ತಿಗಳಾಗುತ್ತಾರೆ ಎಂಬ ತಪ್ಪು ಗ್ರಹಿಕೆ ಅನೇಕ ತಾಯಂದಿರಿಗಿದೆ. ಶಿಕ್ಷಣದ ಮಾಧ್ಯಮವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೆ ಇರುವುದು ಒಪ್ಪುವ ವಿಚಾರವೇ. ಆದರೆ ಕರ್ನಾಟಕದ ಎಲ್ಲ ಶಾಲೆಗಳಲ್ಲಿ 1ರಿಂದ 10 ನೇ ತರಗತಿಯವರೆಗೆ ಕನ್ನಡವನ್ನು ಪ್ರಥಮ ಭಾಷೆ ಅಥವಾ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯವಾಗಿ ಬೋಧಿಸುವ ವ್ಯವಸ್ಥೆ ಇದೆ. ಒಂದು ಭಾಷೆಯಾಗಿ ಮಕ್ಕಳು ಕನ್ನಡವನ್ನು ಕಲಿಯುವಾಗ ತಮ್ಮ ಮಕ್ಕಳು ಸ್ಪಷ್ಟವಾಗಿ, ಸುಲಲಿತವಾಗಿ ಕನ್ನಡ ಕಲಿಯಲು ತಾಯಂದಿರು ಪ್ರೇರೇಪಿಸಬೇಕು.
ಕನ್ನಡ ಚಲನಚಿತ್ರಗಳ ವೀಕ್ಷಣೆ: ಕುಟುಂಬದ ರಜಾ ಕಾಲದ ಪ್ರವಾಸ, ವಾರಾಂತ್ಯದ ಸಂತಸದ ಚಟುವಟಿಕೆಗಳ ಯೋಜನೆ ರೂಪಿಸುವವರು ಸಾಮಾನ್ಯವಾಗಿ ಕುಟುಂಬದಲ್ಲಿ ಮಹಿಳೆಯರೇ ಆಗಿರುತ್ತಾರೆ. ವಾರಾಂತ್ಯದ ಕಾರ್ಯಕ್ರಮಗಳಲ್ಲಿ ಚಲನಚಿತ್ರ ವೀಕ್ಷಣೆ ಎಂದಾದಾಗ ಮೊದಲ ಆದ್ಯತೆ ಕನ್ನಡ ಚಲನಚಿತ್ರಗಳ ವೀಕ್ಷಣೆಯೇ ಆಗಿರಬೇಕು. ಕೋಟಿ ಕೋಟಿ ಹಣ ಗಳಿಸುತ್ತಾ, ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕಾಂತಾರ ಚಲನಚಿತ್ರ, ಅಪ್ಪುವಿನ ಪ್ರೀತಿಯ ಗೌರವಾರ್ಥವಾಗಿ ಗಂಧದ ಗುಡಿಗೆ ಚಿತ್ರಮಂದಿರದತ್ತ ಬಹುಸಂಖ್ಯೆಯಲ್ಲಿ ಲಗ್ಗೆ ಇಟ್ಟಂತೆ, ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸುವ ಮೂಲಕ ಕನ್ನಡ ಸಿನೆಮಾ ಲೋಕವನ್ನು ಪೋ›ತ್ಸಾಹಿಸಬೇಕಿದೆ.
ಈ ನೆಲದ ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾಯಿಸುವಲ್ಲಿ ಸ್ತ್ರೀಯರ ಪಾತ್ರ ಬಹಳ ಪ್ರಮುಖವಾದದ್ದು. ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ನಮ್ಮ ಕನ್ನಡ ಭಾಷೆ ವೈವಿಧ್ಯಮಯವಾದದ್ದು. ಉತ್ತರ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ, ಮೈಸೂರು ಭಾಗ, ಹೀಗೆ ಆಯಾ ಭಾಗದ ಭಾಷಾ ವೈವಿಧ್ಯವೇ ಬೇರೆ. ಎಲ್ಲ ಭಾಗದ ಭಾಷೆಯನ್ನು ನಮ್ಮ ಕನ್ನಡ ಎಂದು ಪ್ರೀತಿಯಿಂದ ಒಪ್ಪಿಕೊಳ್ಳಬೇಕು. ಈ ನೆಲದ ಶಿಲ್ಪಕಲೆ, ಜನಪದ ಕಲೆ, ಹಬ್ಬ-ಹರಿದಿನಗಳ ಆಚರಣೆ ಎಲ್ಲವೂ ನಮ್ಮ ಹೆಮ್ಮೆ ಎಂಬುದನ್ನು ಮನೆಯ ಮಕ್ಕಳಿಗೆ ತಿಳಿಸಿಕೊಡುವಂತಾಗಬೇಕು. ಕನ್ನಡ ಭಾಷೆಯ ಕಾಳಜಿ ನವೆಂಬರ್ ತಿಂಗಳಿಗೆ ಸೀಮಿತವಾದುದಲ್ಲ. ಮಹಿಳೆಯರು ಒಬ್ಬ ತಾಯಿಯಾಗಿ, ಗೃಹಿಣಿಯಾಗಿ,ಉದ್ಯೋಗಸ್ಥೆಯಾಗಿ ಎಲ್ಲಾ ರಂಗಗಳಲ್ಲಿ ತನಗೆ ಸಾಧ್ಯವಾದಷ್ಟು ಕನ್ನಡದ ಬಳಕೆ ಮಾಡಿದರೆ, ಕನ್ನಡ ಪರ ಕಾಳಜಿ ತೋರಿದರೆ ಅದಕ್ಕಿಂತ ಮಿಗಿಲಾದ ಕನ್ನಡ ಸೇವೆ ಬೇರೊಂದಿಲ್ಲ. ಈ ನೆಲದ ಋಣ ತೀರಿಸಲು, ತಾಯಿ ಭುವನೇಶ್ವರಿಯ ಸೇವೆ ಮಾಡಲು, ಕನ್ನಡದ ಸೌಧವನ್ನು ಕಟ್ಟಿ ಬೆಳೆಸಲು ಎಲ್ಲ ಕನ್ನಡತಿಯರೂ ಕಂಕಣಬದ್ಧರಾಗೋಣ.