ಮಗಳ ಮದುವೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ನೇಣು ಹಾಕಿಕೊಂಡ ತಂದೆ; ಮದ್ಯಪಾನ ಮಾಡಿದ್ದಕ್ಕೆ ಬೈದಿದ್ದೇ ಕಾರಣ?

Pub crime
Published on

ನವದೆಹಲಿ: ಪಾನಮತ್ತ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದರಲ್ಲೂ ಮದುವೆ ದಿನವೂ ಕುಡಿದುಕೊಂಡು ಬಂದಿದ್ದಕ್ಕೆ ಬೈದ ಕಾರಣ ಈತ ಬೇಸರಗೊಂಡು ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.

ಉತ್ತರಪ್ರದೇಶದ ಲಖನೌ ಹೊರವಲಯದ ಮೋಹನ್​​ಲಾಲ್​ಗಂಜ್ ಪ್ರದೇಶದ ಟಿಕ್ರಾಸಾನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುನೀಲ್ ಕುಮಾರ್​ ದ್ವಿವೇದಿ (58) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ತನ್ನ ಮನೆಯಲ್ಲೇ ನೇಣು ಹಾಕಿಕೊಂಡಿದ್ದು, ಸಂಬಂಧಿಕರು ಕೋಣೆಗೆ ಹೋಗಿ ನೋಡಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸುನೀಲ್ ಮದ್ಯವ್ಯಸನಿಯಾಗಿದ್ದು, ಮನೆಯವರ ವಿರೋಧದ ನಡುವೆಯೂ ಕುಡಿತ ಮುಂದುವರಿಸಿದ್ದ. ಭಾನುವಾರ ಮಗಳ ಮದುವೆ ಇದ್ದರೂ ಆತ ಶನಿವಾರವೂ ಕುಡಿದುಕೊಂಡೇ ಮನೆಗೆ ಬಂದಿದ್ದ. ಅಲ್ಲದೆ ಮದುವೆಗಾಗಿ ಬಂದಿದ್ದ ಸಂಬಂಧಿಕರಿಗೂ ಪಾನಮತ್ತನಾಗಿ ಬೈದಿದ್ದ. ಅದಕ್ಕೆ ಪ್ರತಿಯಾಗಿ ಬೈದಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪುತ್ರ ಅಂಕುರ್ ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net