ಸಕಾರಾತ್ಮಕ ಮನೋಭಾವವಿರಲಿ: ಪರೀಕ್ಷೆ ಫಲಿತಾಂಶದ ಬಗ್ಗೆ ಅನಗತ್ಯ ಆತಂಕ ಬೇಡ

Student
Published on

ವಿದ್ಯಾರ್ಥಿಗಳಿಗೆ ಪರೀಕ್ಷೆ ನಂತರ ಈಗ ಫಲಿತಾಂಶದ ಸಮಯ ಸಮೀಪಿಸುತ್ತಿದೆ. ಮಾರ್ಚ್ 11ರಿಂದ 28ರವರೆಗೆ 5, 8 ಮತ್ತು 9ನೇ ತರಗತಿಯ ಮಕ್ಕಳಿಗೆ ನಡೆದಿದ್ದ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶ ಸೋಮವಾರದಂದು ಪ್ರಕಟವಾಗಲಿದೆ. ಫಲಿತಾಂಶವನ್ನು ಎಲ್ಲ ಶಾಲೆಗಳಲ್ಲಿ ಪ್ರಕಟಿಸುವಂತೆ ಶಿಕ್ಷಣ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಪರೀಕ್ಷೆ ನಡೆಯುವ ಸಂದರ್ಭದಲ್ಲೇ ಈ ತರಗತಿಗಳ ಮಕ್ಕಳು ಸಾಕಷ್ಟು ಗೊಂದಲಕ್ಕೆ ಒಳಗಾಗಿ, ಪೇಚಿಗೆ ಸಿಲುಕಿದ್ದರು. ಮೌಲ್ಯಾಂಕನ ಪರೀಕ್ಷೆ ನಡೆಸಬೇಕೇ ಬೇಡವೇ ಎಂಬ ವಿಷಯವು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ನ ಮೆಟ್ಟಿಲು ಹತ್ತಿತ್ತು.

ಎರಡು ವಿಷಯಗಳ ಪರೀಕ್ಷೆ ಬರೆದ ಬಳಿಕ ದಿಢೀರನೆ ಮುಂದಿನ ವಿಷಯಗಳ ಪರೀಕ್ಷೆ ನಿಂತುಹೋಗಿತ್ತು. ಈ ಡೋಲಾಯಮಾನ ಸ್ಥಿತಿಯಿಂದಾಗಿ ಮಕ್ಕಳು, ಪಾಲಕರು ಮತ್ತು ಶಿಕ್ಷಕರು ಹೈರಾಣಾಗಿದ್ದರು. ನಂತರ ಕೋರ್ಟ್ ತೀರ್ಪಿನಂತೆ ಪರೀಕ್ಷೆ ನಡೆದು, ಫಲಿತಾಂಶ ಪ್ರಕಟಣೆಗೆ ಕೊನೆಗೂ ವೇದಿಕೆ ಸಿದ್ಧವಾಗಿದೆ. ಇದಲ್ಲದೆ, ಇನ್ನು ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶವೂ ಹೊರಬರಲಿದೆ. ಶೈಕ್ಷಣಿಕ ವಲಯದಲ್ಲಿ ಭಾರಿ ಮಹತ್ವ ಮತ್ತು ಸ್ಪರ್ಧೆಗೆ ಸಾಕ್ಷಿಯಾಗಿರುವ ಈ ಪರೀಕ್ಷೆಗಳ ಫಲಿತಾಂಶ ಹೇಗೆ ಬಂದರೂ ಮಕ್ಕಳು ಅದನ್ನು ಸಕಾರಾತ್ಮಕ ಮನೋಭಾವದಿಂದ ಸ್ವೀಕರಿಸಬೇಕು. ಎಷ್ಟು ಅಂಕಗಳು ಲಭಿಸುತ್ತವೆ ಎಂಬುದರ ಬಗ್ಗೆ ಆತಂಕ ಇಟ್ಟುಕೊಳ್ಳಬಾರದು. ನಿರೀಕ್ಷೆಯಷ್ಟು ಅಂಕಗಳು ಬರದಿದ್ದರೆ ತಪು್ಪ ನಿರ್ಣಯಕ್ಕೆ ಕೈಹಾಕಬಾರದು.

ಈ ವಿಷಯದಲ್ಲಿ ಪಾಲಕರು ಮತ್ತು ಶಿಕ್ಷಕರ ಹೊಣೆಗಾರಿಕೆಯೂ ದೊಡ್ಡದಿದೆ. ಫಲಿತಾಂಶವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ರೀತಿಯಲ್ಲಿ ಮಕ್ಕಳ ಮನಸ್ಸನ್ನು ರೂಪಿಸುವುದು ಅಗತ್ಯ. ಹೆಚ್ಚಿನ ಅಂಕ ಗಳಿಕೆಗೆ ತೀವ್ರ ಒತ್ತಡ ಹೇರುವುದು, ಕಡಿಮೆ ಅಂಕ ಗಳಿಸಿದವರನ್ನು ಅವಮಾನಿಸುವುದು, ಹೀಯಾಳಿಸುವುದು ಸರ್ವಥಾ ಸಲ್ಲದು. ಅಷ್ಟಕ್ಕೂ ಇದು ಇಡೀ ಜೀವನವನ್ನು ನಿರ್ಧರಿಸುವ ಪರೀಕ್ಷೆ ಏನಲ್ಲ ಎಂಬುದನ್ನು ವಿದ್ಯಾರ್ಥಿಗಳು ನೆನಪಿಟ್ಟುಕೊಳ್ಳಬೇಕು.

ನಿರೀಕ್ಷೆಯಷ್ಟು ಅಂಕಗಳು ಬರಲಿಲ್ಲವೆಂದೋ ಅಥವಾ ಅನುತ್ತೀರ್ಣಗೊಂಡ ಕಾರಣಕ್ಕೋ ಮಕ್ಕಳು ಆತ್ಮಹತ್ಯೆಗೆ ಯತ್ನಿಸುವ, ಮನೆಯನ್ನು ತೊರೆಯುವ ಘಟನೆಗಳನ್ನು ಪ್ರತಿ ವರ್ಷವೂ ನೋಡುತ್ತೇವೆ. ಮಕ್ಕಳಲ್ಲಿ ತೀವ್ರ ಆತಂಕ ಮನೆ ಮಾಡಿರುವುದು ಮತ್ತು ಪಾಲಕರ ಅತಿಯಾದ ನಿರೀಕ್ಷೆಗಳು ಇಂಥ ಘಟನೆಗಳಿಗೆ ಕಾರಣ. ಜೀವನದಲ್ಲಿ ಆಯ್ಕೆಗಳಿಗೆ ಕೊರತೆ ಇಲ್ಲ. ಹಾಗಾಗಿ, ವೈಫಲ್ಯಕ್ಕೆ ಕುಗ್ಗದೆ, ವಾಸ್ತವ ಸಂಗತಿಯನ್ನು ಮೊದಲು ಅವಲೋಕಿಸಿ, ಮುಂದಿರುವ ಬೇರೆ ಅವಕಾಶಗಳು ಮತ್ತು ಆಯ್ಕೆಗಳತ್ತ ಗಮನ ಹರಿಸಬೇಕು. ತಮಗೆ ಇಷ್ಟವಾಗುವ ಕ್ಷೇತ್ರದಲ್ಲಿ, ವಿಷಯದಲ್ಲಿ ತೊಡಗಿಕೊಳ್ಳುವ ಮೂಲಕ ವೈಫಲ್ಯವನ್ನು ಯಶಸ್ಸಾಗಿ ಪರಿವರ್ತಿಸಬಹುದು. ಇದಕ್ಕೆ ಬೇಕಿರುವುದು ದೃಢ ಮನೋಭಾವ, ಪ್ರಬಲ ಇಚ್ಛಾಶಕ್ತಿ ಮತ್ತು ಸಕಾರಾತ್ಮಕ ಮನೋಭಾವ. ಈ ಮೌಲ್ಯಗಳು ಬೆಳೆಯಲು ಪಾಲಕರೂ ಸಹಕರಿಸಬೇಕು.

ಇದರ ಜೊತೆಗೆ, ಮುಂದಿನ ವರ್ಷವಾದರೂ 5, 8 ಮತ್ತು 9ನೇ ತರಗತಿಗಳ ಪರೀಕ್ಷೆ ವಿಷಯದಲ್ಲಿ ಮತ್ತೆ ಗೊಂದಲ ಸೃಷ್ಟಿಯಾಗದಂತೆ ರಾಜ್ಯ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ನೋಡಿಕೊಳ್ಳಬೇಕು. ಕೊನೆಯ ಕ್ಷಣದಲ್ಲಿ ಯಾವುದೋ ತೀರ್ವನಕ್ಕೆ ಬರುವ ಬದಲು, ಪರೀಕ್ಷೆಗೆ ಸಾಕಷ್ಟು ಸಮಯ ಇರುವಾಗಲೇ ವಿವೇಚನಾಯುಕ್ತ ನಿರ್ಧಾರ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net