ಸೆಮಿಕಾನ್ ನವಮನ್ವಂತರ: ಆರಂಭದಲ್ಲೇ ದೊಡ್ಡ ಹೂಡಿಕೆ ಪಡೆದ ಕರ್ನಾಟಕ; ರಾಜ್ಯಗಳ ನಡುವೆ ಪೈಪೋಟಿ ಶುರು

Semicon
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಗೆ ಅನಿವಾರ್ಯವಾದ ಸೆಮಿಕಂಡಕ್ಟರ್​ಗೆ ಇತರ ದೇಶದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿರುವಾಗಲೇ, ಇದರ ಲಾಭ ಪಡೆದುಕೊಳ್ಳಲು ರಾಜ್ಯಗಳ ನಡುವೆ ಪೈಪೋಟಿ ನಡೆದಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆರಂಭದಿಂದಲೂ ನೇತೃತ್ವ ವಹಿಸಿಕೊಂಡು ಮುನ್ನುಗ್ಗಿರುವ ಬೆಂಗಳೂರು ಸೆಮಿಕಂಡಕ್ಟರ್ ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಮೆರೆಯಲು ಸಜ್ಜಾಗಿರುವಾಗಲೇ, ನೆರೆಯ ಹೈದರಾಬಾದ್, ಚೆನ್ನೈ, ಪುಣೆ ಸೇರಿ ವಿವಿಧ ನಗರಗಳನ್ನು ಶೋಕೇಸ್ ಮಾಡಿ ಅಲ್ಲಿನ ಸರ್ಕಾರಗಳು ಚಿತೆôಸಿವೆ. ಎಲೆಕ್ಟ್ರಿಕ್ ವೆಹಿಕಲ್ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆ ಆರಂಭದಲ್ಲಿ ಬೆಂಗಳೂರಿನಲ್ಲಿ ಹೆಚ್ಚು ನಡೆದರೂ ಬಳಿಕ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಅಚ್ಚರಿ ರೀತಿಯಲ್ಲಿ ಗಮನ ನೀಡಿ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಸಿ ತಮ್ಮತ್ತ ಸೆಳೆದುಕೊಂಡವು. ಮೈಮರೆತು ಕೂತ ಕರ್ನಾಟಕ ಎಚ್ಚೆತ್ತುಕೊಳ್ಳುವಾಗಲೇ ಸಾಕಷ್ಟು ಬೆಳವಣಿಗೆಗಳು ನಡೆದುಹೋಗಿದ್ದವು.

ಇದೀಗ ಸೆಮಿಕಂಡಕ್ಟರ್ ವಿಚಾರದಲ್ಲಿ ಚೈನಾ ಸೇರಿ ವಿವಿಧ ದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಮತ್ತು ಈ ಕ್ಷೇತ್ರದಲ್ಲಿರುವ ಅವಕಾಶಗಳ ಲಾಭ ದೇಶಕ್ಕಾಗಬೇಕೆಂದು ಕೇಂದ್ರ ಸರ್ಕಾರ ನೀಲಿನಕ್ಷೆಯೊಂದನ್ನು ಸಿದ್ಧಪಡಿಸುತ್ತಿದೆ. ಇದರ ಭಾಗವಾಗಿ ಮೂರು ದಿನಗಳ ‘ಸೆಮಿಕಾನ್ ಇಂಡಿಯಾ 2022 ’ ಬೆಂಗಳೂರಲ್ಲಿ ಆಯೋಜಿಸಿದ್ದು, ಇಬ್ಬರು ಕೇಂದ್ರ ಸಚಿವರು ಖುದ್ದು ಇದರ ನೇತೃತ್ವ ತೆಗೆದುಕೊಂಡಿದ್ದರು. ಇಲ್ಲೂ ನೆರೆಯ ರಾಜ್ಯಗಳು ಸೆಮಿಕಂಡಕ್ಟರ್ ಕ್ಷೇತ್ರದ ದಿಗ್ಗಜರ ಸಮಾಗಮಗೊಳಿಸಿ, ಇಡೀ ವಿಶ್ವವೇ ಈ ಕಾರ್ಯಕ್ರಮದ ಮೇಲೆ ಗಮನ ಸೆಳೆಯುವ ಪ್ರಯತ್ನವನ್ನು ತಕ್ಕಮಟ್ಟಿಗೆ ನೀಡಿದೆ. ‘ಮೇಕಿನ್ ಇಂಡಿಯಾ, ಡಿಸೈನ್ ಇನ್ ಇಂಡಿಯಾ’, ‘ಚರಕದಿಂದ ಚಿಪ್​ವರೆಗೆ’, ‘ಆತ್ಮನಿರ್ಭರ ಭಾರತ್- ಸೆಮಿಕಂಡಕ್ಟರ್ ಭಾರತ್’ ಎಂಬ ಹೊಸ ಹೊಳಹುಗಳು ಅಲ್ಲಿ ಕಾಣಿಸಿತು.

ಇನ್ನೊಂದು ಪ್ರಮುಖ ಸಂಗತಿ ಎಂದರೆ, ಸೆಮಿಕಂಡಕ್ಟರ್ ಕ್ಷೇತ್ರದ ಮುಂದಿನ ಅಲೆಯ ಕುರಿತಂತೆ ವಿಚಾರ ವಿನಿಮಯ ನಡೆಯಿತು. ಭವಿಷ್ಯದ ಆಟೊಮೊಬೈಲ್ ಕ್ಷೇತ್ರ, ಕಂಪ್ಯೂಟರ್ ಆನ್ ವೀಲ್ಸ್, ಸೆಮಿಕಂಡಕ್ಟರ್ ಕ್ಷೇತ್ರದ ರಾಜಧಾನಿಯಾಗಿ ಭಾರತ, ಭವಿಷ್ಯದ ತಂತ್ರಜ್ಞಾನದ ಪಾಲುದಾರಿಕೆಗಳು, ಸೆಮಿಕಂಡಕ್ಟರ್ ಸರಬರಾಜಿನಲ್ಲಿ ಭಾರತದ ಪಾತ್ರ, ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಹೀಗೆ ವಿವಿಧ ಆಯಾಮಗಳಲ್ಲಿ ಚರ್ಚೆಗಳು ನಡೆದಿದ್ದು, ಇಲ್ಲಿ ಮೂಡಿದ ಅಥವಾ ಕಲೆಹಾಕಿದ ಸಂಗತಿಯ ಸಮಗ್ರ ವರದಿ ಶೀಘ್ರವೇ ಪ್ರಧಾನಿಯವರ ಕೈ ಸೇರಲಿದೆ. ಅಂದಹಾಗೆ, ಕೋವಿಡ್ ಸಂದರ್ಭ ಆಟೋಮೊಬೈಲ್ ಕ್ಷೇತ್ರವೂ ತತ್ತರಿಸಿತ್ತು. ಕರೊನಾ ಸೋಂಕು ತಗ್ಗಿದ ನಂತರ ಕಾರುಗಳನ್ನು ಗ್ರಾಹಕರಿಗೆ ಪೂರೈಸಲು ಚಿಪ್​ಗಳ ಕೊರತೆ ಗಂಭೀರವಾಗಿ ಕಾಣಿಸಿತ್ತು. ಜತೆಗೆ ಎಲೆಕ್ಟ್ರಿಕ್ ವೆಹಿಕಲ್​ಗಳಿಗೂ ಚಿಪ್ ಅನಿವಾರ್ಯತೆ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಭಾರತ ಸೆಮಿಕಂಡಕ್ಟರ್​ಗೆ ಬೇರೆ ದೇಶವನ್ನು ನೆಚ್ಚಿಕೊಳ್ಳದೆ ಸ್ವಯಂ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಗಮನಹರಿಸಿತ್ತು.

ಮೂರು ಗುರಿ

  • ಸೆಮಿಕಂಡಕ್ಟರ್​ನಲ್ಲಿ ಪ್ರಾಮುಖ್ಯತೆ ವಹಿಸುವ ಫ್ಯಾಬ್, ಫೌಂಡ್ರಿಸ್, ಎಟಿಎಂಪಿ (ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್, ಪ್ಯಾಕೇಜಿಂಗ್) ಇಕೋ ಸಿಸ್ಟಂ ರಚನೆಗೆ ಪ್ರೋತ್ಸಾಹ
  • ಉತ್ಪಾದನೆಯಲ್ಲಿ ಪ್ರಮುಖಪಾತ್ರ ವಹಿಸುವ ಸಾಮಗ್ರಿ (ಕೆಮಿಕಲ್, ಮಿನರಲ್, ಗ್ಯಾಸ್) ಲಭ್ಯತೆಗೆ ಕ್ರಮ
  • ಸೆಮಿಕಂಡಕ್ಟರ್ ಉತ್ಪಾದನಾ ಚೈನ್ ಸೇವೆಗೆ ನೆರವು

ರಾಜ್ಯಗಳ ಮುಂದೆ ವರದಿ: ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆಯ ಲಾಭ ಪಡೆದುಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ವರದಿಯೊಂದನ್ನು ಸಿದ್ಧಪಡಿಸಿದ್ದು, ಭಾರತದಲ್ಲಿನ ಕಚ್ಛಾವಸ್ತು ಲಭ್ಯತೆ, ಪೈಪೋಟಿ, ಪ್ರಸ್ತುತ ಬೇಡಿಕೆ ಹೆಚ್ಚಿರುವ ಕ್ಷೇತ್ರ, ಏನೆಲ್ಲ ಅವಕಾಶಗಳಿವೆ ಎಂಬುದನ್ನು ಸ್ಥೂಲವಾಗಿ ನೀಡಿದೆ. ವಿಶೇವೆಂದರೆ, ಚಿಪ್ ಬಳಕೆಯಲ್ಲಿ ಬೇಕಾಗುವ ರಾಸಾನಿಯಕವು ರಾಜ್ಯದ ಬೆಳಗಾವಿಯಲ್ಲಿ ಸಿಗಲಿದೆ, ಕರ್ನಾಟಕದಲ್ಲಿ ಬಾಕೆ್ಸೈಟ್ ಕೂಡ ಲಭ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೇವಲ ಆರ್ಥಿಕ ಪ್ರೋತ್ಸಾಹಕಗಳು ಮಾತ್ರವಲ್ಲದೆ, ಒಟ್ಟಾರೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ವಾತಾವರಣವನ್ನು ನಿರ್ವಿುಸುವುದೂ ಮುಖ್ಯ ಎನ್ನುವುದನ್ನು ಕರ್ನಾಟಕ ಸರ್ಕಾರ ಅರಿತಿದೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸೆಮಿಕಂಡಕ್ಟರ್ ಪಾಲಿಸಿಯಿಂದ ಭಾರತದಾದ್ಯಂತ ಯುವ ಪ್ರತಿಭೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೊಸ ಅವಕಾಶಗಳನ್ನು ಯುವ ಸಮೂಹ ಬಳಸಿಕೊಳ್ಳಲಿ ಎಂಬ ಉದ್ದೇಶ ದಿಂದ ನಮ್ಮ ಇಲಾಖೆ ಹೆಚ್ಚಿನ ಶ್ರಮ ಹಾಕುತ್ತಿದೆ. | ರಾಜೀವ್ ಚಂದ್ರಶೇಖರ್ ಕೇಂದ್ರ ಕೌಶಲಾಭಿವೃದ್ಧಿ, ಎಲೆಕ್ಟ್ರಾನಿಕ್ ಖಾತೆ ರಾಜ್ಯ ಸಚಿವ

ಏಳು ರಾಜ್ಯಗಳು ಸೂಕ್ತ: ಭಾರತದಲ್ಲಿ ಚಿಪ್ ಅವಶ್ಯಕತೆ ಇರುವ ಕ್ಷೇತ್ರಗಳನ್ನು ಪಟ್ಟಿ ಮಾಡಲಾಗಿದೆ ಹಾಗೆಯೇ ಯಾವ ರಾಜ್ಯಗಳು ಈ ಕ್ಷೇತ್ರದ ಬೆಳವಣಿಗೆಗೆ ಸೂಕ್ತ ಎಂದು ಕೇಂದ್ರ ಪಟ್ಟಿ ಮಾಡಿದೆ. ಇದರಲ್ಲಿ ಕರ್ನಾಟಕ, ಗುಜರಾತ್, ಒಡಿಶಾ, ಚತ್ತೀಸ್​ಗಡ, ಮಹಾರಾಷ್ಟ್ರ, ಹರ್ಯಾಣ, ಆಂಧ್ರಪ್ರದೇಶದಲ್ಲಿ ಕೌಶಲ ಹಾಗೂ ಸಾಮಗ್ರಿ ಲಭ್ಯತೆಗೆ ಹೆಚ್ಚು ಸೂಕ್ತ ಸ್ಥಳ ಎಂದು ಕೇಂದ್ರ ಗುರುತಿಸಿದೆ.

ಮುಂದೇನು?: ಜಾಗತಿಕವಾಗಿ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಶೇ.10 ರಷ್ಟಾದರೂ ಭಾರತದ ಪಾಲಿರಬೇಕೆಂದು ಕೇಂದ್ರ ಬಯಸಿದೆ. ಈ ನಿಟ್ಟಿನಲ್ಲಿ ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಗಳ ಕುರಿತು ಯೋಜನೆ ರೂಪಿಸಲಿದೆ. ಮುಖ್ಯವಾಗಿ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲು ಗಮನ ನೀಡಲಿದೆ. ಯಾವ ನಗರಗಳು ಸೂಕ್ತ ಎಂದು ಗಮನಿಸಿ, ಅಲ್ಲಿನ ಸರ್ಕಾರಗಳೊಂದಿಗೆ ಚರ್ಚೆ ನಡೆಸಿ, ಪ್ರಕ್ರಿಯೆಗೆ ವೇಗ ನೀಡಲಿದೆ. ಸದ್ಯಕ್ಕೆ ಬೆಂಗಳೂರು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಸಾಫ್ಟ್ ವೇರ್ ಉತ್ಪಾದನೆ, ಕೌಶಲಪೂರಿತ ಮಾನವ ಸಂಪನ್ಮೂಲ ಲಭ್ಯತೆಯು ಬೆಂಗಳೂರಿನಲ್ಲಿ ಹೇರಳವಾಗಿದೆ. ಈ ಅಂಶವನ್ನು ಬಳಸಿಕೊಂಡು ಬೆಂಗಳೂರು ಮತ್ತು ಅದರ ಸುತ್ತಮುತ್ತ ಅವಕಾಶ ಸೃಷ್ಟಿಗೆ ಪ್ರಯತ್ನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net