ಕರಾಟೆ ಗೀತಾ ಎಂಟ್ರಿ; ಮುಂಬೈ ಭೂಗತ ಲೋಕದಲ್ಲಿ ಮೆರೆದ ಗುಜರಾತಿ ಮಹಿಳೆ ಭಾಗ -1

Karate Geetha
Published on
ಅಂದು 2000 ಅಕ್ಟೋಬರ್ 24. ದೀಪಾವಳಿ ಹಬ್ಬಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿತ್ತು. ಮುಂಬೈ ನಗರದ ಘಾಟಕೋಪರ್ ಬಡಾವಣೆಯಲ್ಲಿನ ದೊಡ್ಡ ಚಿನ್ನಾಭರಣ ಅಂಗಡಿಯಾದ ಷಾ ಅಂಡ್ ಬ್ರದರ್ಸ್ ಗಿರಾಕಿಗಳಿಂದ ಗಿಜಿಗಿಡುತ್ತಿತ್ತು. ರಾತ್ರಿ ಸುಮಾರು 8 ಗಂಟೆ ವೇಳೆಗೆ ಈ ಅಂಗಡಿಯ ಮುಂದೆ ಒಂದು ಬಿಳಿಯ ಕಾರು, ಮತ್ತೊಂದು ವ್ಯಾನ್ ಬಂದು ನಿಂತವು. ವ್ಯಾನಿನಿಂದಿಳಿದ ಐದಾರು ಜನರು ಅಂಗಡಿಯ ಮ್ಯಾನೇಜರ್ ಬಳಿಗೆ ಹೋದರು. ‘ನಾವು ರೆವಿನ್ಯೂ ಇಂಟೆಲಿಜೆನ್ಸ್ ಇಲಾಖೆಯ ಅಧಿಕಾರಿಗಳು. ನಮ್ಮ ಸಾಹೇಬರು ಬಂದಿದ್ದಾರೆ, ನಿಮ್ಮ ಅಂಗಡಿಯ ತಪಾಸಣೆ ನಡೆಸಬೇಕಾಗಿದೆ’ ಎಂದರು. ಆತ ಉತ್ತರ ನೀಡುವಷ್ಟರಲ್ಲಿ ಅಂಬಾಸಿಡರ್ ಕಾರಿನಿಂದ ಒಬ್ಬ ಸೂಟುಧಾರಿ ವ್ಯಕ್ತಿ ಇಳಿದ. ಅವನೊಡನೆ ಒಬ್ಬ ಯುವತಿಯೂ ಇದ್ದಳು. ಆತ ಮ್ಯಾನೇಜರ್ ಬಳಿ ಬಂದೊಡನೆ, ತನ್ನ ಪರಿಚಯ ಪತ್ರ ತೋರಿಸಿ, ‘ನೀವು ಕೊಲ್ಲಿ ರಾಷ್ಟ್ರಗಳಿಂದ ಚಿನ್ನವನ್ನು ಸ್ಮಗ್ಲಿಂಗ್ ಮಾಡಿರುವ ದೂರು ಬಂದಿದೆ. ನಿಮ್ಮ ಅಂಗಡಿಯ ತಪಾಸಣೆ ಮಾಡಬೇಕಾಗಿದೆ’ ಎಂದ. ‘ಸರ್, ನಿಮಗೆ ಸುಳ್ಳು ಕಂಪ್ಲೇಂಟ್ ಬಂದಿದೆ. ನಮ್ಮ ಅಂಗಡಿಯಲ್ಲಿ ಯಾವುದೇ ಕಾನೂನು ಬಾಹಿರ ಕೆಲಸ ಮಾಡುವುದಿಲ್ಲ. ನೀವು ತಪಾಸಣೆ ಮಾಡಲು ನಮಗೇನೂ ಅಭ್ಯಂತರವಿಲ್ಲ. ತಾವೇ ನೋಡುತ್ತಿರುವ ಹಾಗೆ ಈಗ ಅಂಗಡಿಯಲ್ಲಿ ಗಿರಾಕಿಗಳಿದ್ದಾರೆ, ನಾಳೆ ಮುಂಜಾನೆ ಬಂದರೆ ನಿಮಗೆ ಎಲ್ಲ ದಾಖಲೆಗಳನ್ನೂ ತೋರಿಸುವೆ’ ಎಂದ ಅಲ್ಲಿಗೆ ಬಂದ ಅಂಗಡಿಯ ಮಾಲೀಕ. ‘ನಿಮ್ಮ ಪಾಡಿಗೆ ನೀವು ವ್ಯಾಪಾರ ಮಾಡಿ. ನಾವು ನಿಮ್ಮ ನೌಕರರನ್ನು ನಿಮ್ಮ ಸ್ಟ್ರಾಂಗ್ ರೂಂನಲ್ಲಿ ಒಬ್ಬೊಬ್ಬರನ್ನಾಗಿ ಪ್ರಶ್ನೆ ಮಾಡುತ್ತೇವೆ. ನಮಗೆ ಆ ಕೋಣೆಯನ್ನು ತೋರಿಸಿ’ ಎಂದ ಆ ಸೂಟುಧಾರಿ ವ್ಯಕ್ತಿ.

ಸ್ಟ್ರಾಂಗ್ ರೂಂಗೆ ತನ್ನ ಜತೆಗೆ ಬಂದವರೊಂದಿಗೆ ಹೋದ ಆ ವ್ಯಕ್ತಿ ಆ ಸಮಯದಲ್ಲಿ ಕೆಲಸ ಮಾಡುತ್ತಿದ್ದ 15 ನೌಕರರನ್ನು ಒಬ್ಬೊಬ್ಬರನ್ನಾಗಿ ಅಲ್ಲಿಗೆ ಕರೆಸಿದ. ಅಲ್ಲಿಗೆ ಅಂಗಡಿಯ ನೌಕರರು ಬರುತ್ತಿದ್ದಂತೆ ಸೂಟುಧಾರಿಯ ಸಹಚರರು, ಅವರುಗಳ ಮೇಲೆ ಮುಗಿಬಿದ್ದು ಕೈ ಕಾಲುಗಳನ್ನು ಕಟ್ಟಿ ಬಾಯಿಗೆ ಟೇಪ್ ಬಿಗಿದರು. ಎಲ್ಲ ನೌಕರರನ್ನೂ ಕಟ್ಟಿ ಹಾಕಿದ ನಂತರ ಮ್ಯಾನೇಜರ್ ಮತ್ತು ಮಾಲೀಕನನ್ನು ಅಲ್ಲಿಗೆ ಕರೆಸಿ, ಅವರನ್ನೂ ಕಟ್ಟಿಹಾಕಿದರು. ನಂತರ ಅಂಗಡಿಯಲ್ಲಿದ್ದ ಗಿರಾಕಿಗಳನ್ನು ಹೊರಗೆ ಕಳಿಸಿ ಅಂಗಡಿಯ ಮುಂಬಾಗಿಲನ್ನು ಮುಚ್ಚಿ ಅಂಗಡಿಯಲ್ಲಿದ್ದ ಅಷ್ಟೂ ಆಭರಣಗಳನ್ನು ದೋಚಿದರು. ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಕಳವು ಮಾಡಿ ಬಂದ ವಾಹನಗಳಲ್ಲಿ ಹೊರಟುಹೋದರು.

ದರೋಡೆ ಪ್ರಕರಣ ದಾಖಲಿಸಿದ ಮುಂಬೈ ಪೊಲೀಸರು 1987ರಲ್ಲಿ ನಗರದಲ್ಲಿ ಇದೇ ರೀತಿಯ ಪ್ರಕರಣವಾದದ್ದನ್ನು ನೆನಪಿಸಿಕೊಂಡರು. ಆಗ ಸುಮಾರು 2 ಕೋಟಿ ರೂ ಮೌಲ್ಯದ ಆಭರಣಗಳು ಕಳವಾಗಿದ್ದು ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ, ಈಗ ನಡೆದಿದ್ದ ಪ್ರಕರಣದಲ್ಲಿ ಹಲವಾರು ನಿಮಿಷಗಳ ಸಿಸಿಟಿವಿ ಫುಟೇಜುಗಳು ಲಭ್ಯವಿದ್ದವು. ಅವುಗಳನ್ನು ವಿಶ್ಲೇಷಿಸಿದಾಗ ಸೂಟುಧಾರಿ ವ್ಯಕ್ತಿ ಕುಖ್ಯಾತ ಅಪರಾಧಿ ಜಯಂತಿಲಾಲ್ ಕಿನೀಟ್ ಅಮೀನ್ ಎನ್ನುವುದು ತಿಳಿಯಿತು. ಈ ಹಿಂದೆ ಆತ ಮುಂಬೈ ಜೈಲೊಂದರಿಂದ ಪರಾರಿಯಾಗಿದ್ದ. ಕೂಡಲೇ ಪೊಲೀಸರು ಅವನಿಗಾಗಿ ವ್ಯಾಪಕ ಬಲೆ ಬೀಸಿದರು. ಬರೋಡ ನಗರದಲ್ಲಿ ಅಮೀನ್ ಸಿಕ್ಕಿಬಿದ್ದ. ಅವನ ಮಾಹಿತಿಯ ಮೇರೆಗೆ ಅವನೊಡನೆ ಆಭರಣಗಳ ಅಂಗಡಿಯ ದರೋಡೆಯಲ್ಲಿ ಪಾಲ್ಗೊಂಡಿದ್ದ 7 ಜನರನ್ನೂ ಬಂಧಿಸಲಾಯಿತು. ಅವರ ತಂಡದಲ್ಲಿದ್ದ ಹೆಣ್ಣುಮಗಳು ಗೀತಾ ಪರ್ವರ್ ಅದೇ ಮೊದಲ ಬಾರಿಯ ಅಪರಾಧಿ ಎಂದು ತಿಳಿಯಿತು. ಆರೋಪಿಗಳಿಂದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಚಾರ್ಜ್​ಷೀಟ್ ಸಲ್ಲಿಸಲಾಯಿತು. ಎಲ್ಲರಿಗೂ 5 ರಿಂದ 7 ವರ್ಷಗಳ ಜೈಲು ಶಿಕ್ಷೆಯಾಯಿತು.

ಅಮೀನ್ ತಂಡದ ಏಕೈಕ ಹೆಣ್ಣುಮಗಳಾಗಿದ್ದ ಗೀತಾ, ಬರೋಡಾ ಜಿಲ್ಲೆಯ ಸಣ್ಣ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದಳು. ಅವಳ ಮಾತಾಪಿತರು ಅದೇ ಗ್ರಾಮದ ನಿವಾಸಿ ಪ್ರಕಾಶ್ ಎನ್ನುವವನ ಜೊತೆ ಅವಳ ವಿವಾಹ ಮಾಡಿದರು. ಆಗವಳಿಗೆ 16 ವರ್ಷಗಳಾಗಿದ್ದವು. ಪ್ರಕಾಶ್ ಟೇಲರಿಂಗ್ ಮಾಡಿಕೊಂಡಿದ್ದ. ಅದರಲ್ಲಿ ಬರುತ್ತಿದ್ದ ಆದಾಯ ಕುಟುಂಬ ನಿರ್ವಹಣೆಗೆ ಸಾಲದಾದಾಗ, ಆತ ಸಣ್ಣಪುಟ್ಟ ಕಳ್ಳತನ ಮಾಡತೊಡಗಿದ. ಎರಡನೆಯ ಬಾರಿ ಕಳ್ಳತನ ಮಾಡಿದಾಗ ಆತ ಪೊಲೀಸ್ ಅತಿಥಿಯಾದ. ಒಂದು ವರ್ಷ ಜೈಲಿಗೆ ಹೋದ. ಆಗ ಗೀತಾ ತನ್ನ ತವರು ಮನೆಯಲ್ಲಿ ವಾಸಿಸತೊಡಗಿದಳು. ಪ್ರಕಾಶ್ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಕಿನೀಟ್ ಅಮೀನ್ ಎಂಬ ಕುಖ್ಯಾತ ಅಪರಾಧಿಯ ಗ್ಯಾಂಗ್ ಸೇರಿದ. ಗುಜರಾತ್​ನ ಮೆಹಸಾನ ಜಿಲ್ಲೆಯನ್ನು ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿದ್ದ ಅಮೀನ್, ಪಾಕಿಸ್ತಾನದಿಂದ ಬರುತ್ತಿದ್ದ ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿದ್ದ. ಇವನ್ನು ಮುಖ್ಯವಾಗಿ ಮುಂಬೈನಲ್ಲಿ ಮಾರಾಟ ಮಾಡುತ್ತಿದ್ದ. ಇಷ್ಟು ಸಾಲದೆಂಬಂತೆ ಆತ ಭಾರಿ ಪ್ರಮಾಣದ ದರೋಡೆಗಳನ್ನೂ ನಡೆಸತೊಡಗಿದ್ದ. ಅವನ ಗ್ಯಾಂಗಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರಿದ್ದರು. 1998ರಲ್ಲಿಯೇ ಆತ ಎರಡು ಮಾದಕ ವಸ್ತುಗಳ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಮುಂಬೈನ ಜೈಲೊಂದರಲ್ಲಿ ವಿಚಾರಣಾಧೀನ ಕೈದಿಯಾಗಿದ್ದ. ಆನಂತರ ಜೈಲಿನಿಂದ ತಪ್ಪಿಸಿಕೊಂಡು ತನ್ನ ಹೆಸರನ್ನು ಆದಿತ್ಯ ಪಟೇಲ್ ಎಂದು ಬದಲಿಸಿಕೊಂಡು ಕ್ರಿಮಿನಲ್ ಚಟುವಟಿಕೆಗಳನ್ನು ಮುಂದುವರಿಸಿದ್ದ.

ಅಮೀನ್​ನ ಗ್ಯಾಂಗ್ ಸೇರಿದ ಬಳಿಕ ಪ್ರಕಾಶ್ ಮೆಹಸಾನಾಗೆ ಬಂದು ಅಲ್ಲಿ ಮನೆಮಾಡಿದ. ಅವನ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿತು. ಮನೆಗೆ ಹೆಚ್ಚು ಹೆಚ್ಚು ಹಣ ತರತೊಡಗಿದ್ದ. ಅದರೆ, ಒಮ್ಮೆ ಆತ ದರೋಡೆ ಮಾಡುವಾಗ ಪೊಲೀಸರಿಗೆ ಸಿಕ್ಕಿಬಿದ್ದ. ಅವನಿಗೆ ಎರಡು ವರ್ಷಗಳ ಜೈಲು ಶಿಕ್ಷೆಯಾಯಿತು. ಅಷ್ಟರಲ್ಲಿ ಗೀತಾಳ ಮಾತಾಪಿತರೂ ಮೃತಪಟ್ಟಿದ್ದರು. ಆಗ 18 ವರ್ಷ ವಯಸ್ಸಾಗಿದ್ದ ಗೀತಾಗೆ ಮುಂದೇನು ಮಾಡುವುದೆಂದು ತಿಳಿಯದಾಯಿತು. ಏಕೆಂದರೆ ಆಗ ಅವಳಿಗೆ ಮಗ ಜನಿಸಿದ್ದ. ಮನೆಯಲ್ಲಿ ದಿನಸಿ ತರಲೂ ಹಣವಿಲ್ಲದಾದಾಗ ಆಕೆ ಅಮೀನ್​ನ ಬಳಿಗೆ ಹೋಗಿ ತನ್ನ ಕಷ್ಟಸುಖಗಳನ್ನು ಹೇಳಿದಳು. ಅವಳ ಮೇಲೆ ಕರುಣೆ ತೋರಿದ ಅಮೀನ್, ಪ್ರಕಾಶ್ ಜೈಲಿನಲ್ಲಿರುವವರೆವಿಗೂ ಅವಳ ಕುಟುಂಬದ ಖರ್ಚುವೆಚ್ಚವನ್ನು ತಾನೇ ನೋಡಿಕೊಳುವ ಆಶ್ವಾಸನೆಯಿತ್ತ. ‘ನನಗೆ ಮನೆಯಲ್ಲಿ ಒಬ್ಬಳೇ ಇದ್ದು ಬೇಸರವಾಗುತ್ತಿದೆ. ನೀವು ಇಷ್ಟು ದೊಡ್ಡ ವ್ಯವಹಾರ ನಡೆಸುತ್ತಿರುವಿರಿ. ನನಗೂ ಒಂದು ಕೆಲಸ ಕೊಡಬಾರದೇಕೆ?’ ಎಂದು ಆಕೆ ಅಮೀನ್​ನನ್ನು ಕೇಳಿದಳು.

‘ಖಂಡಿತಾ ನಿನಗೆ ಕೆಲಸ ಕೊಡುವೆ, ಆದರೆ, ಸದ್ಯಕ್ಕೆ ನನ್ನ ಹೆಚ್ಚಿನ ವ್ಯವಹಾರಗಳು ಇರುವುದು ಮುಂಬೈನಲ್ಲಿ. ನೀನು ಮುಂಬೈಗೆ ಹೋಗಿ ನನಗಾಗಿ ಕೆಲಸ ಮಾಡುವುದಾದರೆ ನಾಳೆಯಿಂದಲೇ ಕೆಲಸಕ್ಕೆ ಬಾ’ ಎಂದ. ಮುಂದುವರಿದ ಆತ, ‘ಹೇಗಿದ್ದರೂ ನಿನ್ನ ಗಂಡ ಇನ್ನೆರಡು ವರ್ಷ ಜೈಲಿನಿಂದ ಹೊರಬರುವುದಿಲ್ಲ. ಅವನು ಬರುವವರೆಗೆ ನಿನಗೆ ಮುಂಬೈನಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಮಾಡುತ್ತೇನೆ’ ಎಂದ. ಮಾರನೆಯ ದಿನವೇ ಪ್ರಕಾಶನಿದ್ದ ಜೈಲಿಗೆ ಹೋಗಿ ಅವನನ್ನು ಭೇಟಿಯಾದ ಗೀತಾ ಅಮೀನ್ ತನಗೆ ಕೆಲಸ ಕೊಡುವ ಬಗ್ಗೆ ತಿಳಿಸಿ ಅವನ ಸಲಹೆ ಕೇಳಿದಳು. ‘ಹೇಗಿದ್ದರೂ ನೀನು ಒಬ್ಬಂಟಿಯಾಗಿರುವ ಕಾರಣ ಮುಂಬೈಗೆ ಹೋಗು. ನಮ್ಮ ಮುಂಬೈ ಗ್ಯಾಂಗ್​ನಲ್ಲಿ ಸ್ತ್ರೀಯರೂ ಇದ್ದಾರೆ. ನಿನಗೆ ಅಮೀನ್ ಸೂಕ್ತ ವ್ಯವಸ್ಥೆ ಮಾಡುತ್ತಾನೆ’ ಎಂದ.

ಮುಂದಿನ ವಾರವೇ ಗೀತಾ ತನ್ನ ಕೂಸಿನೊಡನೆ ಮುಂಬೈಗೆ ಬಂದಳು. ಅವಳಿಗೆ ಇತರ ಇಬ್ಬರು ಸ್ತ್ರೀಯರೊಡನೆ ಕೋಣೆಯೊಂದರಲ್ಲಿ ಇಳಿದುಕೊಳ್ಳುವ ವ್ಯವಸ್ಥೆಯನ್ನು ಅಮೀನ್​ನ ಗ್ಯಾಂಗ್ ಸದಸ್ಯರು ಮಾಡಿಕೊಟ್ಟರು. ‘ನಮ್ಮ ತಂಡದ ಜನರು ಮುಂಬೈ ಹಾಗೂ ಆಸುಪಾಸಿನಲ್ಲಿರುವ ಜೈಲುಗಳಲ್ಲಿದ್ದಾರೆ. ಅವರಿಗೆ ಮೊಬೈಲ್ ಫೋನ್​ಗಳನ್ನು ಈಗಾಗಲೇ ನಾವು ಜೈಲಿನೊಳಗೆ ಕಳುಹಿಸಿದ್ದೇವೆ. ಆದರೆ, ಅದರ ಬ್ಯಾಟರಿಗಳ ಚಾರ್ಜ್ ಮುಗಿದಾಗ ಚಾರ್ಜ್ ಮಾಡುವ ವ್ಯವಸ್ಥೆ ಜೈಲಿನಲ್ಲಿಲ್ಲ. ಹೀಗಾಗಿ, ನಾವು ಅವರಿಗೆ ಚಾರ್ಜ್ ಆದ ಬ್ಯಾಟರಿಗಳನ್ನು ಕೊಡುವ ವ್ಯವಸ್ಥೆ ಮಾಡಿದ್ದೇವೆ. ನಿನ್ನ ಕೆಲಸವೆಂದರೆ ಅವರಿಗೆ ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಕೊಟ್ಟು ಅವರ ಬಳಿಯ ಡಿಸ್ಚಾರ್ಜ್ ಆದ ಬ್ಯಾಟರಿಗಳನ್ನು ತಂದು ನಿನ್ನ ಕೋಣೆಯಲ್ಲಿ ಚಾರ್ಜ್ ಮಾಡಬೇಕು’ ಎಂದು ತಂಡದ ಸದಸ್ಯನೊಬ್ಬ ಸೂಚಿಸಿದ. ಜೈಲುಗಳಲ್ಲಿರುವ ಕೈದಿಗಳನ್ನು ಅವರ ಕುಟುಂಬದ ಸದಸ್ಯರು ವಾರಕ್ಕೊಮ್ಮೆ ಭೇಟಿಯಾಗಿ ತಿಂಡಿ ತಿನಿಸು, ಹಣು್ಣಹಂಪಲುಗಳನ್ನು ಕೊಡುವ ಅವಕಾಶವಿದೆ. ಇದರ ಪ್ರಯೋಜನ ಪಡೆದ ಅಮೀನ್​ನ ಗ್ಯಾಂಗ್ ಪ್ರತಿ ದಿನವೂ ಗೀತಾಳನ್ನು ಬೇರೆ ಬೇರೆ ಜೈಲುಗಳಿಗೆ ಕಳುಹಿಸಿ ಅಲ್ಲಿದ್ದ ತಮ್ಮ ತಂಡದ ಸದಸ್ಯರುಗಳಿಗೆ ಬ್ಯಾಟರಿಗಳನ್ನು ಕೊಡುವ ವ್ಯವಸ್ಥೆ ಮಾಡಿದರು. ಕೆಲವೇ ದಿನಗಳಲ್ಲಿ ಗೀತಾ ಮೂರೂ ಜೈಲುಗಳ ಅಧಿಕಾರಿಗಳ ಪರಿಚಯ ಮಾಡಿಕೊಂಡಿದ್ದಲ್ಲದೆ, ಜೈಲುಗಳ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಳು. ಮುಂಬೈನಲ್ಲಿ ಒಬ್ಬಂಟಿಯಾಗಿ ಜೈಲುಗಳಿಗೆ ಓಡಾಡುತ್ತಿದ್ದ ಗೀತಾ ಕಾಮುಕರ ಕಣಿ್ಣಗೆ ಬಿದ್ದಳು. ಹೀಗಾಗಿ ಪ್ರತಿದಿನವೂ ಆಕೆ ಲೈಂಗಿಕ ಕಿರುಕುಳ ಅನುಭವಿಸಬೇಕಾಯಿತು. ತನ್ನ ಪರಿಚಯದವಳೊಬ್ಬಳ ಎದುರು ಆಕೆ ಸಮಸ್ಯೆಯನ್ನು ಹೇಳಿಕೊಂಡಾಗ, ‘ನೀನು ಏಕೆ ಕರಾಟೆ ಕಲಿಯಬಾರದು? ಹತ್ತಿರದಲ್ಲಿರುವ ಮೈದಾನವೊಂದರಲ್ಲಿ ಹೆಣ್ಣು ಮಕ್ಕಳಿಗೆಂದೇ ಕರಾಟೆ ತರಬೇತಿ ಕೊಡಲಾಗುತ್ತಿದೆ’ ಎಂದಳು. ಅಂತೆಯೇ ಗೀತಾ ಕರಾಟೆ ತರಬೇತಿಗೆ ದಾಖಲಾದಳು. ಕೇವಲ ಮೂರು ತಿಂಗಳಲ್ಲಿ ಆಕೆ ಅತ್ಯುತ್ತಮ ಕರಾಟೆ ಪಟುವಾದಳು. ಅನಂತರ ತನ್ನ ತಂಟೆಗೆ ಯಾರು ಬಂದರೂ ಕರಾಟೆ ಏಟುಗಳನ್ನು ನೀಡಿ ಅವರನ್ನು ಹಿಮ್ಮೆಟ್ಟಿಸತೊಡಗಿದಳು. ಅವಳು ಕೊಡುತ್ತಿದ್ದ ಪೆಟ್ಟುಗಳು ಎಷ್ಟು ತೀವ್ರವಾಗಿರುತ್ತಿದ್ದವೆಂದರೆ ಹಲವು ರೌಡಿಗಳು ಆಸ್ಪತ್ರೆ ಸೇರಬೇಕಾಯಿತು. ಹೀಗಾಗಿ ಅವಳಿಗೆ ಮುಂಬೈನ ಭೂಗತ ಲೋಕದಲ್ಲಿ ‘ಕರಾಟೆ ಗೀತಾ’ ಎಂಬ ಅನ್ವರ್ಥನಾಮ ಬಂದು ಎಲ್ಲರೂ ಅವಳನ್ನು ಕಂಡರೆ ಹೆದರತೊಡಗಿದರು.

(ಮುಂದುವರಿಯುವುದು)

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net