

|ಅನೀಶ್ ಬಿ. ಕೊಪ್ಪ
ಮಿದುಳಿಗೆ ಮೇವು ನೀಡುವ ಆಪ್ಗಳಲ್ಲೊಂದು ‘ಜಿಲೇಬಿ’. ಕನ್ನಡದ ಕುರಿತ ಜ್ಞಾನಾರ್ಜನೆ ಮತ್ತು ಕನ್ನಡ ವ್ಯಾಕರಣದ ಕಲಿಕೆಯಲ್ಲಿ ಈ ಆಪ್ ಪ್ರಮುಖವಾದುದು. ಗೂಗಲ್ ಪ್ಲೇಸ್ಟೋರ್ನಲ್ಲಿ ಉಚಿತವಾಗಿ ಲಭ್ಯವಿರುವ ಈ ಆಪ್, ಪದವೊಂದನ್ನು ತೋರಿಸಿ ಅದಕ್ಕೆ ಸಂಬಂಧಿಸಿದ ಮತ್ತೊಂದು ಪದವನ್ನು ಬಿಟ್ಟ ಸ್ಥಳಗಳಲ್ಲಿ ತುಂಬುವಂತೆ ಕೇಳುತ್ತದೆ. ಅದರೊಂದಿಗೆ ಬಹು ಆಯ್ಕೆ ಪ್ರಶ್ನೆಯ ಮಾದರಿಯಲ್ಲಿ ಸಹಾಯಕ್ಕೆ ನಾಲ್ಕು ಆಯ್ಕೆಗಳನ್ನೂ ನೀಡುತ್ತದೆ.
ಸರಿಯಾದ ಪದ ಆಯ್ಕೆ ಮಾಡಿದಲ್ಲಿ ಆಟಗಾರ ನಿಗದಿತ ಅಂಕ ಮತ್ತು ಸ್ಟಾರ್ ಪಡೆದು ಮುಂದಿನ ಹಂತಕ್ಕೆ ಹೋಗುತ್ತಾನೆ. ದೇಸೀ ಕ್ವಿಜ್ ವಿಭಾಗದಲ್ಲಿ ಕನ್ನಡಕ್ಕೆ ಮತ್ತು ಕನ್ನಡ ನಾಡಿಗೆ ಸಂಬಂಧಪಟ್ಟ 5000ಕ್ಕೂ ಹೆಚ್ಚು ಪ್ರಶ್ನೆಗಳಿದ್ದು, ರಾಜ್ಯದ ಪ್ರಮುಖ ಪ್ರೇಕ್ಷಣೀಯ ಸ್ಥಳ, ಸಾಮಾನ್ಯ ಜ್ಞಾನ, ಸಿನಿಮಾ, ಕ್ರೀಡೆ, ಗಾದೆ, ಸಾಹಿತ್ಯ ಸಂಬಂಧಿತ ಪ್ರಶ್ನೆಗಳಿವೆ. ಪದ ಪತ್ತೆಹಚ್ಚು, ಪದ ಸಂಪರ್ಕದಂತಹ ಜ್ಞಾನಾರ್ಜನೆಗೆ ಪೂರಕವಾಗುವಂತೆ 8-ಇನ್ 1 ಗೇಮ್ ಪ್ಯಾಕ್ ಮಾದರಿಯಲ್ಲಿ ಮನರಂಜನೆ ಮತ್ತು ಬುದ್ಧಿ ಕಸರತ್ತಿನ ಆಟಗಳೂ ಇದರಲ್ಲಿವೆ. ಇವುಗಳನ್ನು ಮಲ್ಟಿಪ್ಲೇಯರ್ ಮೂಡ್ನಲ್ಲಿ ಕೂಡ ಆಡಬಹುದು. ಅಂತರ್ಜಾಲದ ಸಂಪರ್ಕ ಇಲ್ಲದಿದ್ದರೂ ಬಳಸಬಹುದಾದ ಈ ಆಪ್, ಬಳಕೆದಾರಸ್ನೇಹಿಯಾಗಿದೆ.
ಪರಿಚಯಾತ್ಮಕ ಕಲಿಕೆಗೆ ಮಕ್ಕಳು: ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿರುವ ‘ಮಕ್ಕಳು’ ಆಪ್ ಮಕ್ಕಳಿಗೆ ನಲಿಯುತ್ತಾ ಕಲಿಯಲು ಸಹಕಾರಿಯಾಗುವುದರೊಂದಿಗೆ ಜ್ಞಾನಬುತ್ತಿಯನ್ನು ತೆರೆದಿಡುತ್ತದೆ. ಆಂಗ್ಲ ಭಾಷಾ ಪದಗಳನ್ನೂ ಕನ್ನಡದಲ್ಲಿ ಗುರುತಿಸಲು ಸಹಕಾರಿಯಾಗುವಂತೆ ಪ್ರಾಥಮಿಕ ಹಂತದ ಮಕ್ಕಳಿಗೆ ಚಿತ್ರ ಸಹಿತ ಪದಗಳ ಉಚ್ಚಾರ ಮತ್ತು ಓದನ್ನು ಕಲಿಸಿಕೊಡುತ್ತದೆ. ಇದರೊಂದಿಗೆ ವರ್ಣಮಾಲೆ, ಮಗ್ಗಿ, ದಿನಬಳಕೆಯ ವಸ್ತುಗಳ ಹೆಸರು, ಸಾಮಾನ್ಯ ಜ್ಞಾನಕ್ಕೆ ಪೂರಕವಾಗಿ ಪ್ರಸಿದ್ಧ ವ್ಯಕ್ತಿಗಳು, ಕನ್ನಡದ ಪ್ರಮುಖ ಸಾಹಿತಿಗಳು ಮತ್ತು ಪ್ರೇಕ್ಷಣೀಯ ಸ್ಥಳಗಳ ಚಿತ್ರಸಹಿತ ಹೆಸರುಗಳು ಇದರಲ್ಲಿವೆ. ಪರಿಚಯಾತ್ಮಕ ಕಲಿಕೆಗೆ ಇದೊಂದು ಉತ್ತಮ ತಾಂತ್ರಿಕ ವೇದಿಕೆ.
ವ್ಯಾಕರಣದ ಸರಾಗ ಕಲಿಕೆಗೆ ಸುಲಭ ಕನ್ನಡ: ತರಗತಿಯಲ್ಲಿ ಕಲಿತ ಪಾಠದಲ್ಲಿನ ವ್ಯಾಕರಣಾಂಶಗಳನ್ನು ಪುನರ್ಮನನ ಮಾಡಿಕೊಂಡು ದೃಢಗೊಳಿಸಲು ‘ಸುಲಭ ಕನ್ನಡ ವ್ಯಾಕರಣ’ ಆ್ಯಪ್ ಉಪಯುಕ್ತವಾಗಿದೆ. ಕನ್ನಡದ ವ್ಯಾಕರಣ ಎಂದರೆ ಕಬ್ಬಿಣದ ಕಡಲೆ ಎನ್ನುವವರಿಗೆ ಈ ಆಪ್ ಉಪಯುಕ್ತವಾಗಿದೆ. ಕನ್ನಡ ವರ್ಣಮಾಲೆ, ನಾಮಪದ, ಕ್ರಿಯಾಪದ, ಸರ್ವನಾಮ ಗಳು, ವಚನಗಳು, ಲಿಂಗಗಳು, ವಿಭಕ್ತಿ ಪ್ರತ್ಯಯಗಳು, ವಾಕ್ಯಗಳ ಬಗೆಗೆ ಆಪ್ನ ವ್ಯಾಕರಣ ವಿಭಾಗದಲ್ಲಿ ವಿವರಿಸಲಾಗಿದೆ. ತತ್ಸಮ-ತದ್ಭವ, ಛಂದಸ್ಸು, ಕರ್ತರಿ-ಕರ್ಮಣಿ ಪ್ರಯೋಗಗಳು, ಸಂಧಿಗಳು, ಸಮಾಸಗಳು, ಸಮಾನಾರ್ಥಕ ಪದಗಳು, ದೇಶ್ಯ-ಅನ್ಯದೇಶ್ಯ ಪದಗಳು, ಗಾದೆ, ನುಡಿಗಟ್ಟು ಇತ್ಯಾದಿ ಭಾಷಾಭ್ಯಾಸಕ್ಕೆ ಸಂಬಂಧಿಸಿದ ಅಂಶಗಳನ್ನು ಆಪ್ನ ಭಾಷಾಭ್ಯಾಸ ವಿಭಾ ಗವು ಒಳಗೊಂಡಿದೆ. ಇದರಿಂದ ಭಾಷೆಯ ಒಳಹರಿವನ್ನು ತಿಳಿಯಬಹುದು.
ಹೊಸಬರಿಗೆ ಲರ್ನ್ ಕನ್ನಡ: ಹೊಸದಾಗಿ ಕನ್ನಡ ಕಲಿಯುವ ಮಕ್ಕಳಿಗೆ ‘ಲರ್ನ್ ಕನ್ನಡ’ ಆಪ್ ನೆರವು ನೀಡುತ್ತದೆ. ನಿತ್ಯದ ಕೋರ್ಸ್ಗಳನ್ನು ಒದಗಿಸುವ ಈ ಆಪ್, ಕಲಿಕಾರ್ಥಿಗಳ ಅನುಕೂಲಕ್ಕೆ ತಕ್ಕಂತೆಯೂ ಕನ್ನಡ ಪಾಠಗಳನ್ನು ಮಾಡುತ್ತದೆ. ಬಿಡುವಿನ ವೇಳೆಯಲ್ಲಿ ಕನ್ನಡ ಕಲಿಯಲು ಇದು ಸಹಕಾರಿ. ಜತೆಗೆ ಐಡಬ್ಲು್ಯಟಿ (ಇನ್ಸ್ಟಂಟ್ ವರ್ಡ್ ಟ್ರಾನ್ಸಲೇಷನ್) ಸೇವೆಯನ್ನೂ ಒದಗಿಸುತ್ತದೆ. ಈ ಮೂಲಕ ಇಂಗ್ಲಿಷ್ ಪದಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಕಲಿಕೆ ಸಾಗುತ್ತದೆ. ಕನ್ನಡ ಪದಗಳ ಉಚ್ಚಾರಣೆ ಹೇಗಿರಬೇಕೆಂಬುದನ್ನೂ ಇದು ಕಲಿಸಿಕೊಡುತ್ತದೆ. ಒಮ್ಮೆ ಕೋರ್ಸ್ ಪೂರ್ಣಗೊಂಡರೆ ಬಳಕೆದಾರರು ಆಪ್ ಕೇಳುವ ಕಠಿಣ ಪ್ರಶ್ನೆಗಳಿಗೆ ಉತ್ತರಿಸ ಬೇಕಾಗುತ್ತದೆ. ಕನ್ನಡೇತರರು ಕನ್ನಡ ಕಲಿಯಲು ಅತ್ಯುಪಯುಕ್ತ ಆಪ್.
ಕನ್ನಡ ಸ್ಟೋರೀಸ್ ಎಂಬ ಕಥೆಗಳ ಖಜಾನೆ: ಕಥೆಗಳು ಮಕ್ಕಳನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ದು, ಚಿಂತನಾ ಲಹರಿಯನ್ನು ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ‘ಕನ್ನಡ ಸ್ಟೋರೀಸ್’ ಆಪ್ ವಿಭಿನ್ನ ಕಥಾವಸ್ತುಗಳನ್ನೊಳಗೊಂಡ ಮಕ್ಕಳ ಕಥೆಗಳನ್ನು ಓದಲು ಅನುವು ಮಾಡಿಕೊಡುತ್ತದೆ. ಈ ಕಥೆಗಳು, ಪೂರಕ ಚಿತ್ರಗಳೊಂದಿಗೆ ಮೂಡಿ ಬಂದಿದ್ದು, ಮಕ್ಕಳನ್ನು ಓದಿಸಿಕೊಳ್ಳುತ್ತಾ ಮುಂದೆ ಸಾಗುವಂತೆ ಮಾಡುತ್ತದೆ. ಅಂತರ್ಜಾಲದ ಸಂಪರ್ಕದಿಂದ ಮಾತ್ರ ಈ ಆಪ್ ಬಳಸಲು ಸಾಧ್ಯ.