

ಅದು 15 ಮತ್ತು 16ನೇ ಶತಮಾನದ ನಡುಭಾಗದ ಅವಧಿ. ವಿಜಯನಗರ ಸಾಮ್ರಾಜ್ಯದ ಉಚ್ಛಾ›ಯ ಮತ್ತು ಪತನ ಎರಡೂ ನಡೆದುಹೋದ ಸಂದರ್ಭ. ಇದು ಕನಕದಾಸರ ಕಾಲ. ತಿಮ್ಮಪ್ಪ ಆನಂತರ ತಿಮ್ಮಪ್ಪನಾಯಕನಾಗಿ, ಕನಕಪ್ಪನಾಗಿ ಕೊನೆಗೆ ಕನಕದಾಸರಾಗಿ ಪರಿವರ್ತನೆಗೊಂಡ ವಿಕಾಸದ ನಡೆ. ಅವರ ಹಂತ ಹಂತವಾದ ವ್ಯಕ್ತಿತ್ವದ ಸ್ಥಿತ್ಯಂತರದ ಜೊತೆಗೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರವೂ ನಡೆಯಿತು. ಅವರು ಪ್ರಭುತ್ವವನ್ನು ಕಳಚಿ ದಾಸತ್ವವನ್ನು ಸ್ವೀಕರಿಸಿದ ಮೇಲೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘರ್ಷ ಪ್ರಖರವಾಗಿ ಕನಕರ ಅರಿವಿಗೆ ಬರುತ್ತದೆ. ಈ ಸಂಘರ್ಷಕ್ಕೆ ಪ್ರಧಾನ ಧಾತುಗಳೆಂದರೆ ಕನಕರು ಎದುರಿಸಬೇಕಾದ ಅಸಮ ಸಮಾಜದ ವ್ಯಗ್ರರೂಪ ಮತ್ತು ಮನುಷ್ಯನ ಕ್ರಿಯಾಶೀಲತೆಗೆ ಕಂಟಕವಾಗಿರುವ ಜಾತಿ.
ಕಾಲ-ಧರ್ಮದ ಪರಿವರ್ತನೆಗೆ ಸಿಕ್ಕಿ ಸೆಳೆಯಲ್ಪಟ್ಟ ಕನಕದಾಸರು ಬಯಸಿ ಭಾಗವತರಾಗಬೇಕೆಂದು ತಾವಾಗಿ ಹೋದರೇನೋ ನಿಜ; ಆದರೆ ನಿಮ್ನವರ್ಗದ ಇವರಿಗೆ ಸುಲಭವಾಗಿ ಭಾಗವತದ ಬಾಗಿಲು ತೆರೆಯಲಿಲ್ಲ. ಕನಕರು ಧೃತಿಗೆಡಲಿಲ್ಲ. ಅವರೊಳಗಿದ್ದ ‘ಕವಿ’ ಮತ್ತು ‘ಭಕ್ತ’ ಇನ್ನಷ್ಟು ಜಾಗೃತಗೊಂಡರು. ಈ ಜಾತಿಯನ್ನು ಜೀವ-ಬದುಕಿಗೆ ಧಾರ್ವಿುಕ ಹಾಗೂ ಸಾಂಸ್ಕೃತಿಕ ರಾಜಕಾರಣವನ್ನಾಗಿಯೂ; ಕಾವ್ಯ ರಚನೆಗೆ ಪ್ರೇರಕ ಅಸ್ಮಿತೆಯನ್ನಾಗಿಯೂ ಬಳಸಿಕೊಂಡರು.
ಈ ಸಾಮಾಜಿಕ ಎಚ್ಚರ ಮತ್ತು ಪಾರಮಾರ್ಥಿಕ ಚಿಂತನೆಗಳ ಪರಿಣಾಮವಾಗಿ ಕನಕರು ಕೀರ್ತನೆಗಳನ್ನು ಹಾಡುತ್ತ ಜನಸಂಚಾರಿಯಾದರು. ಧ್ಯಾನ-ಧ್ಯಾನಿಸುತ್ತ ಕಾವ್ಯರಚನೆ ಮಾಡಿದರು. ಕನಕದಾಸರು ಪಂಥ ಮೀರಿ ನಿಂತ ದಾರ್ಶನಿಕತ್ವದ ಬಗೆ ಇದು! ಕನಕರದು ಹಲವು ವ್ಯಕ್ತಿತ್ವಗಳ ಏಕಧಾರೆ. ಅವರದು ಬಹುತ್ವದ ನೆಲೆ. ವರ್ತಮಾನಕ್ಕೆ ಸಲ್ಲುತ್ತಲೇ ಸಾಗಿ ಬಂದ ವಿಚಾರಧಾರೆ. ಹೀಗಾಗಿ ಕನಕ ಸಾಹಿತ್ಯವನ್ನು ಸಾಮಾಜಿಕ-ಸಾಂಸ್ಕೃತಿಕ-ಧಾರ್ವಿುಕ ನೆಲೆಗಳಲ್ಲಿ ವಿವೇಚಿಸಬೇಕಾದ ಅಗತ್ಯವಿದೆ.
ಬಾಲ್ಯವನ್ನು ಅನುಭವಿಸಿ ತರುವಾಯ ಲೌಕಿಕ ಜಂಜಾಟಗಳನ್ನು ಕಂಡ ಮೇಲೆ ಕನಕರಿಗೆ ಸಹಜವಾಗಿ ತಲ್ಲಣ ಶುರುವಾಗುತ್ತದೆ. ಜ್ಞಾನಾರ್ಜನೆಯ ದಾಹದಿಂದ ಹೊರಟಾಗ ಆ ಹೊತ್ತಿಗೆ ಪ್ರಭಾವಶಾಲಿಯಾಗಿದ್ದ ವೈಷ್ಣವ ಧರ್ಮವನ್ನು ಆಶ್ರಯಿಸುತ್ತಾರೆ. ಹಾಗೂ ಕರ್ಮಸಿದ್ಧಾಂತದ ಪ್ರತಿಪಾದನೆಯ ಧರ್ಮನಿಷ್ಠರಂತೆ ಕಾಣುತ್ತಾರೆ. ಇದು ಅವರ ಒಂದು ಮುಖ. ಆದರೆ ಇದಕ್ಕಿಂತ ಪ್ರಧಾನವಾಗಿ, ಸಮಾಜಮುಖಿ ಕಾಳಜಿ, ಮಾನವೀಯ ತುಡಿತವನ್ನೇ ಮೂಲ ಮಾತೃಕೆಯಾಗಿರಿಸಿಕೊಂಡ ಬಗೆ ಎರಡನೆಯ ಮುಖ. ಭಕ್ತಿಮಾರ್ಗದಲ್ಲಿಯೇ ಸಮಾಜವನ್ನು ಕೈಗೆತ್ತಿಕೊಂಡು ವಿಶ್ಲೇಷಿಸುತ್ತ ಹೋಗುವುದು ಬಹುತ್ವದ ವ್ಯಕ್ತಿತ್ವವುಳ್ಳ ಕನಕದಾಸರಿಗೆ ಸಾಧ್ಯವಾಗುತ್ತದೆ.
ಇಲ್ಲಿಯೇ ಅವರ ಬಯಲು ನಡೆಯಲ್ಲಿ ಲೋಕದೃಷ್ಟಿಯ ನಿಚ್ಚಳ ಚಹರೆಗಳು ಗೋಚರಿಸುವುದು. ಉದಾಹರಣೆಗೆ- ‘ತೊರೆದು ಜೀವಿಸಬಹುದೆ’ ಎಂದು ಹಂಬಲಿಸಿದ ಭಕ್ತ; ‘ದಾಸದಾಸರ ಮನೆಯ ದಾಸ ನಾನು’ ಎಂರ್ದಪಿಸಿಕೊಂಡ ದಾಸ; ‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು’ ಎಂಬ ಸಂತ; ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ’ ಎಂಬ ದಾರ್ಶನಿಕ; ‘ನಾನು, ನೀನು ಎನ್ನದಿರೊ ಹೀನ ಮಾನವಾ ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡಲೊ’ ಎಂಬ ವಿಮರ್ಶಕ; ‘ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನೇನಾದರು ಬಲ್ಲಿರಾ’ ಎಂದು ಪ್ರತಿರೋಧಿಸಿದ ಕ್ರಾಂತಿಕಾರಿ ಮನೋಧರ್ವಿು; ‘ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ ನೋಡ ಬನ್ನೀರೆ’ ಎಂಬುವ ಜನಪದ ಕಲಾಕಾರ; ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ತತ್ವಜ್ಞಾನಿ ಮುಂತಾಗಿ ವಾಗ್ಗೇಯಕಾರನಾಗಿ, ಕವಿಯಾಗಿ, ಕೃಷಿಕನಾಗಿ-ಹೀಗೆ ವಿಭಿನ್ನ ಸ್ತರಗಳಲ್ಲಿ ವ್ಯಕ್ತವಾಗುವ ಪರಿಯನ್ನು ಕಾಣಬಹುದು. ಈ ಎಲ್ಲ ವ್ಯಕ್ತಿತ್ವಗಳ ಅಭಿವ್ಯಕ್ತಿಯ ಮೂಲಬಿಂದು ಸಮಾಜವೇ ಆಗಿದೆ ಎಂಬುದನ್ನು ಮರೆಯಲಿಕ್ಕಾಗದು. ಅವರ ಭಕ್ತಿಕಾವ್ಯವೆಂದು ಬಗೆಯಲಾದ ‘ಹರಿಭಕ್ತಿಸಾರ’ದಲ್ಲಿ ಬರುವ ‘ರಕ್ಷಿಸು ನಮ್ಮನನವರತ’ ಎಂಬ ಪ್ರತಿಪಾದನೆಯನ್ನು ಗಮನಿಸಬಹುದು.
‘ರಕ್ಷಿಸು ನಮ್ಮನನವರತ’ ಎಂಬ ಕರೆ ದೇಹದ ಪ್ರೀತಿಯನ್ನು, ಸಮೂಹದೊಳಿತನ್ನು ಒಳಗೊಂಡಿದೆ. ಶಾಶ್ವತವಾದ, ಚಿರಒಡಲಿನ ನೆಲದ ಬಯಕೆ ಇದು. ಈ ಕರೆ ವ್ಯಕ್ತಿಘಟಕಕ್ಕೆ ಸಂಬಂಧಿಸಿದ ಸಾಂಸ್ಥಿಕ ಸ್ವರೂಪದ್ದಲ್ಲ; ಸಂವೇದನಾಶೀಲವಾದದ್ದು. ಈ ಕಾರಣದಿಂದಲೇ ಕನಕದಾಸರ ಈ ಪ್ರಾರ್ಥನೆ ವೈಯಕ್ತಿಕ ನೆಲೆಯಲ್ಲಿ ತನ್ನಂತರಂಗದ ಸ್ವಗತವೆಂಬಂತೆ ನಿಲ್ಲುವುದಿಲ್ಲ. ‘ನಮ್ಮನ್ನ’ ಎಂದು ಸಂಬೋಧಿಸುತ್ತಲೇ ಸಾರ್ವತ್ರಿಕಗೊಳಿಸುತ್ತಾರೆ.
ಸಮಾಜದ ಮನುಷ್ಯರೆಲ್ಲರು ಒಗ್ಗೂಡಿ ಸಮಾನತೆಯ ಬಾಳ್ವೆ ನಡೆಸಬೇಕೆಂಬ ಕನಸಿದೆಯಲ್ಲ ಅದು ನೆಲದ ಕಂಪನದಿಂದ ಮೂಡಿದ್ದು. ಈ ನಿಲುವಿಗೆ ಬರಬೇಕಾದರೆ ಅವರು ಮೊದಲು ತಮ್ಮನ್ನು ಬಂಧಿಸಿಬಿಡಬಹುದಾಗಿದ್ದ ಎರಡು ‘ತನ’ಗಳನ್ನು ನಿಗ್ರಹಿಸಿಕೊಳ್ಳುತ್ತಾರೆ. ಅದೆಂದರೆ ಒಂದು ‘ಅಹಂ’; ಇನ್ನೊಂದು ‘ಕುಲಂ’. ಮಾನವೀಯ ಮೌಲ್ಯದ ದೊಡ್ಡ ಕಳಂಕಗಳಾದ ಅಹಂಕಾರ ಮತ್ತು ಜೀವಮೌಲ್ಯಕ್ಕೆ ಬೆಲೆಕೊಡದ ಕುಲ-ಜಾತಿ. ಇವುಗಳನ್ನು ನಿರಸನಗೊಳಿಸಿಕೊಳ್ಳುವುದರ ಮೂಲಕ ಅವರು ಮನುಷ್ಯತ್ವದ ಮೌಲ್ಯಕ್ಕೆ ಸಾಕ್ಷಿಯಾಗುತ್ತಾರೆ.
ಕನಕದಾಸರು ಕುಲದ ಪ್ರಶ್ನೆಯನ್ನು ಎತ್ತಿಕೊಂಡ ಈ ಕೀರ್ತನೆಯನ್ನು ಗಮನಿಸಿ: ‘ಆತ್ಮ ಯಾವ ಕುಲ, ಜೀವ ಯಾವ ಕುಲ, ತತ್ವೇಂದ್ರಿಯಗಳ ಕುಲ ಪೇಳಿರಯ್ಯ’ ಎಂದು ಕೇಳುತ್ತಾರೆ. ಮನುಷ್ಯನ ಅಸ್ತಿತ್ವದ ಆದಿಮ ಮೂಲದ ಕಡೆಗೆ ಈ ಪ್ರಶ್ನೆ ಚಾಚುತ್ತದೆ. ಅವರಿಗೆ ಗೊತ್ತಿದೆ: ಆದಿಮ ಸಮುದಾಯದ ಚರಿತ್ರೆ ಇದ್ದೂ ಇಲ್ಲದಂತಾಗಿದೆ ಅಥವಾ ಅಸ್ಪಷ್ಟವಾಗಿದೆ. ಈ ಸಮುದಾಯಕ್ಕೆ ತಮ್ಮ ಚರಿತ್ರೆಯ ಬಗೆಗಿನ ಅರಿವೂ ಅಷ್ಟಕಷ್ಟೆ. ತಮ್ಮ ಚರಿತ್ರೆಯನ್ನು ಪುನರ್ನಿರ್ವಣ ಮಾಡುವ ರಾಜಕೀಯ ಇಚ್ಛಾಶಕ್ತಿಯೂ ಇವರಿಗಿಲ್ಲ. ಧರ್ಮ-ಜಾತಿ ಆಧಾರದ ಮೇಲೆ ಕಟ್ಟುತ್ತ ಬಂದಿರುವ ಚರಿತ್ರೆ ಪರಿಪೂರ್ಣವಲ್ಲ. ಅದಕ್ಕೆ ಕನಕರು ಚರಿತ್ರೆಯನ್ನು ನುಡಿ ಮತ್ತು ಸಂಸ್ಕೃತಿ ಮೂಲಕ ಪುನರ್ ನಿರೂಪಿಸಬೇಕಿರುವ ಅಗತ್ಯವನ್ನು ಪ್ರತಿಪಾದಿಸುತ್ತಾರೆ. ಯಾಕೆಂದರೆ ಈ ಆದಿಮ ಸಮುದಾಯ ಘನವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿರುವುದೇ ಈ ತನ್ನ ನುಡಿ ಮತ್ತು ಸಂಸ್ಕೃತಿಯ ಮೂಲಕ ಎಂಬುದು ಅವರ ನಂಬುಗೆ. ಇದನ್ನು ಕಾವ್ಯದರ್ಶನದ ಮುಖಾಂತರ ಸೂಚಿಸುತ್ತಾರೆ.
‘ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನೇನಾದರು ಬಲ್ಲಿರಾ’ ಎಂದು ಒಂದು ಕೀರ್ತನೆಯಲ್ಲಿ ಪ್ರಶ್ನೆ ಎತ್ತುತ್ತಾರೆ. ಈ ಪ್ರಶ್ನೆ ಕೇವಲ ಕನಕದಾಸರ ವೈಯಕ್ತಿಕ ಪ್ರಶ್ನೆಯಲ್ಲ. ಅಲಕ್ಷ್ಯಕ್ಕೊಳಗಾದ ಸಮೂಹದ ಪ್ರಶ್ನೆ. ಕಾಲಕಾಲಕ್ಕೂ ನಿರಂತರವಾಗಿ ಬಂದ ಅಸಮಾನತೆ, ಅಹಂಕಾರ, ಡಾಂಭಿಕತನಗಳಿಗೆ ಪ್ರತಿರೋಧ ಒಡ್ಡಿದ ಬಗೆ. ಹೀಗೆ ಸಮುದಾಯ ಚರಿತ್ರೆಗೆ ಬೇಕಾದ ಆತ್ಮಾಭಿಮಾನದ ಬಗೆಯನ್ನು ಮತ್ತು ನಿಸರ್ಗ ವಿವೇಕದ ಎಚ್ಚರವನ್ನು ವಿವರಿಸಿಕೊಡುವ ಮೂಲಕ ವರ್ತಮಾನದ ಸಂಕಟಗಳನ್ನು ಎದುರಿಸುವ ಬಗೆಯನ್ನು ಮನಗಾಣಿಸುತ್ತಾರೆ.
ಕನಕರ ಕಾವ್ಯಗಳು ಮತ್ತು ಕೀರ್ತನೆಗಳನ್ನು ಗಮನಿಸಿದರೂ ಅವುಗಳಲ್ಲಿ ವ್ಯಕ್ತವಾಗುವ ಭಕ್ತಿ ಸಂಚಾರಿಯಾದರೂ ಮನುಷ್ಯ ಸಮಾಜದ ಕಾಳಜಿ ಸ್ಥಾಯಿಯಾಗಿಯೇ ಅಲ್ಲಿ ಕೆಲಸ ಮಾಡುತ್ತದೆ. ಅದೇ ಕವಿಯ ತಲ್ಲಣಗಳಿಗೆ ಮೂಲ. ಕುಲವನ್ನು ಅವರು ನಿರಸನ ಮಾಡಿಕೊಂಡರೂ ಕುಲವೇ ಅವರಿಗೆ ಕಾಲ್ತೊಡಕಾಗಿದೆ. ಅದನ್ನು ಅವರು ನಿರ್ವಚಿಸಿಕೊಳ್ಳುವ ರೀತಿ ಗಮನಾರ್ಹ. ಅವರು ಎಲ್ಲಿಗೇ ಹೋದರೂ ಒಳಗೆ ಪ್ರವೇಶ ಸಿಗುವುದಿಲ್ಲ. ಹೊರಗಡೆಯೇ ನಿಲ್ಲಿಸಲ್ಪಡುತ್ತಾರೆ. ಅದಕ್ಕೆ ಅವರು ಚಿಂತೆ ಮಾಡುವುದಿಲ್ಲ. ನೋಡಿ- ‘ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ’ ಎಂದು ತಮ್ಮನ್ನು ತಾವು ಸಾಂಸ್ಕೃತಿಕವಾಗಿ ಸ್ಥಾಪಿಸಿಕೊಳ್ಳುತ್ತಾರೆ. ತನ್ನ ಹಿಂದಿರುವ ಸಮುದಾಯಕ್ಕೆ
ಆತ್ಮಸ್ಥೆ ೖರ್ಯ ತುಂಬುವ ಅಗತ್ಯವನ್ನು ಅವರು ಕಂಡುಕೊಂಡಿದ್ದಾರೆ. ಇದು ಒಬ್ಬ ದಾರ್ಶನಿಕನ ಕೆಲಸ.
ಈ ಆಶಯವನ್ನು ಅವರ ‘ರಾಮಧಾನ್ಯಚರಿತ್ರೆ’ಯ ಭತ್ತ-ರಾಗಿಯ ಪ್ರಸಂಗದಿಂದ ಗ್ರಹಿಸಿಕೊಳ್ಳಬಹುದು. ಈ ಕಾವ್ಯದಲ್ಲಿ ನಡೆಯುವುದು ಮೇಲ್ನೋಟಕ್ಕೆ ಕಾಣುವಂತೆ, ಭತ್ತ ರಾಗಿಯ ಜಗಳವಲ್ಲ. ಶತಮಾನದಿಂದ ಸಾಗಿ ಬಂದ ಜಾತಿ, ವರ್ಗ, ವರ್ಣ ಸಂಘರ್ಷಗಳ ಚರಿತ್ರೆಯ ಒಂದು ಮಾದರಿ. ಗೌತಮಮುನಿಯ ಆಶ್ರಮದಲ್ಲಿ ಧಾನ್ಯಗಳಿಂದ ಸಿದ್ಧಪಡಿಸಿದ್ದ ಭಕ್ಷ್ಯಗಳನ್ನು ಸವಿದು ವಿಶ್ರಾಂತಿಗೆ ಕೂತಾಗ ಶ್ರೀರಾಮಚಂದ್ರ ಹನುಮಂತನಿಗೆ ಈ ತಿನಿಸುಗಳನ್ನು ತಯಾರಿಸಿದ ಧಾನ್ಯಗಳ ಬಗ್ಗೆ ‘ಇವರ ರುಚಿ ಎಂತೆನಲು’ ಎಂದು ಬೆಸೆಗೊಳ್ಳುತ್ತಾನೆ. ಅದಕ್ಕೆ ಹನುಮಂತ ವಿನೀತ ಭಾವದಲ್ಲಿ ಪ್ರಭುಗೆ, ‘ರುಚಿ ಪರಿಕಿಸುವುದಲ್ಲ, ಧಾನ್ಯದ ತನುವಿನೀಕ್ಷಿಸಬೇಕು’ ಎಂದು ಹೇಳುತ್ತಾನೆ. ಇದು ಏನು ಹೇಳುತ್ತದೆಂದರೆ-ನಾವು ಕಣ್ತೆರೆದು ನೋಡಬೇಕಿರುವುದು-‘ತುದಿ ನಾಲಿಗೆ ಮೇಲಾಡುವ ರುಚಿಯನ್ನಲ್ಲ; ಆ ರುಚಿಯನ್ನು ಉತ್ಪಾದಿಸುವ ಶಕ್ತಿಮೂಲದ ತನುವನ್ನು’. ಇಂಥ ಹಲವಾರು ಘಟನೆಗಳು ಅಲ್ಲಲ್ಲಿ ಬರುತ್ತವೆ.
ದಿಟ-ಕನಕದಾಸರು ಭಕ್ತ. ಆದರೆ ಅವರು ಆರಾಧಿಸುವ ಭಕ್ತಿ ಕೇವಲ ಪಾರಾಯಣಕ್ಕೆ ಸೀಮಿತವಾಗುವುದಿಲ್ಲ. ಜ್ಞಾನೋಪಾಸನೆಗೆ, ಸಮಾಜಸುಧಾರಣೆಗೆ ತೊಡಗುತ್ತದೆ. ಭಕ್ತಿಯನ್ನು ಸಾಮಾಜೀಕರಣಗೊಳಿಸಿದ್ದು ಕನಕದಾಸರ ವಿನೂತನವಾದ ಕೊಡುಗೆ. ಇವತ್ತಿನ ವರ್ತಮಾನಕ್ಕೂ ಕನಕದಾಸರು ಹೆಚ್ಚು ಪ್ರಸ್ತುತ; ಕಾಲಾತೀತ. ಅದೇ ಅವರ ಜೀವನದರ್ಶನ ಮತ್ತು ಕಾವ್ಯಸಾಮರ್ಥ್ಯ.
(ಲೇಖಕರು ಸಾಹಿತಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಅಧಿಕಾರಿ)