ಕಗ್ಗದ ಬೆಳಕು: ಬಹಿರಂಗದ ಆಚರಣೆಯಿಂದ ಅಂತರಂಗ ಶುದ್ಧಿಯಾಗಬೇಕು

565
Published on
ಹಮ್ಯಾರ್ಗ್ರಕೇರಿ ಸೋಪಾನದಿನತೀತನಹೆ| ನಿರ್ಮಮತೆಗೇರಿ ಕರ್ವತೀತನಪ್ಪೆ|| ಬ್ರಹ್ಮಪದದಿಂದ ಧರ್ವಧರ್ಮಗಳ ನಿಯಮ| ನಿರ್ವಲ್ಯವಾಗುವುದು-ಮಂಕುತಿಮ್ಮ||802||

ಉಪ್ಪರಿಗೆಯನ್ನು ಏರಿದ ಮೇಲೆ ಮೆಟ್ಟಿಲುಗಳಿಗೆ ನೀನು ಅತೀತನಾಗು ತ್ತೀಯ. ಮಮಕಾರವನ್ನು ತೊರೆದ ಮೇಲೆ ಕರ್ವಬಂಧನದಿಂದ ಅತೀತನಾಗುತ್ತೀಯ. ಬ್ರಹ್ಮಪದವನ್ನು ತಲುಪಿದ ಮೇಲೆ ಧರ್ಮ ಅಧರ್ಮಗಳ ನಿಯಮಗಳು ನೈರ್ಮಲ್ಯವಾಗುತ್ತದೆ ಎನ್ನುತ್ತದೆ ಈ ಕಗ್ಗ.

ನದಿಯ ಇನ್ನೊಂದು ದಡದಲ್ಲಿರುವ ಮಂದಿರವನ್ನು ಕಾಣಲೆಂದು ಹೊರಟ ಯಾತ್ರಿಯು ತುಂಬಿ ಹರಿಯುವ ಹೊಳೆಯನ್ನು ದಾಟಲು ದೋಣಿಯನ್ನು ಬಳಸುತ್ತಾನೆ. ತಾನೇ ಹುಟ್ಟು ಹಾಕುತ್ತಾ ಕಷ್ಟಪಟ್ಟು ಆಚೆಯ ದಡವನ್ನು ಸೇರಿ ಮಂದಿರದೆಡೆಗೆ ನಡೆಯುತ್ತಾನೆ. ಹಾಗೆ ಹೋಗುವಾಗ ತನ್ನನ್ನು ಸುರಕ್ಷಿತವಾಗಿ ನದಿ ದಾಟಿಸಿದ ದೋಣಿಯನ್ನು ಬಿಟ್ಟು ಹೋಗಬೇಕಲ್ಲ ಎಂಬ ಮೋಹಕ್ಕೆ ಒಳಗಾಗುವುದಿಲ್ಲ. ಅಥವಾ ದೋಣಿಯಿಂದ ಇಳಿಯದೆ ನದಿಯಲ್ಲೇ ಸುತ್ತಾಡುತ್ತಿರುವುದಿಲ್ಲ. ನದಿ ದಾಟುವುದಕ್ಕಷ್ಟೇ ದೋಣಿಯ ಬಳಕೆ, ಆನಂತರದ ಪ್ರಯಾಣಕ್ಕೆ ಅದು ಪ್ರಯಾಸ. ಗಮ್ಯವನ್ನು ತಲುಪಿದ ಮೇಲೆ ಬಳಸಿದ ದಾರಿಯ ಸ್ಮರಣೆ ಇರಬೇಕೆ ಹೊರತು ಮಮಕಾರವಿರಬಾರದು.

ಸುಂದರವಾಗಿ ಜೋಡಿಸಿದ ಮೆಟ್ಟಲುಗಳನ್ನು ಹತ್ತಿ ಉಪ್ಪರಿಗೆ ಯನ್ನು ತಲುಪಿದ ವ್ಯಕ್ತಿಗೆ ಗುರಿ ತಲುಪಿದ ಆನಂದವಿರಬೇಕು. ತುಳಿದ ಮೆಟ್ಟಿಲುಗಳ ಚಿಂತೆ ಕಾಡಬಾರದು. ಉಪ್ಪರಿಗೆಯನ್ನು ಕಾಣುವುದಕ್ಕೆ ಮೆಟ್ಟಿಲುಗಳನ್ನು ಏರುವುದು ಅನಿವಾರ್ಯವಾಗಿರುವಂತೆಯೇ ಅದನ್ನು ಜೊತೆಗೆ ಕೊಂಡೊಯ್ಯದೆ ನಿರ್ವೇಹಿಯಾಗಿರುವುದೂ ಅತ್ಯಗತ್ಯ. ರೈತನು ಶ್ರಮವಹಿಸಿ ಕಾಳಜಿಯಿಂದ ಬೆಳೆದ ಬೆಳೆಯು ಕೊಯಿಲಿನ ಹಂತಕ್ಕೆ ಬಂದಾಗ ಬೆಳೆಯ ಮೇಲಿನ ಮೋಹದಿಂದ ಕಟಾವು ಮಾಡದಿರುವುದಿಲ್ಲ. ಉತ್ತಮ ಫಸಲನ್ನು ಪಡೆಯುವುದೇ ಬೇಸಾಯದ ಉದ್ದೇಶವಾಗಿರುವುದರಿಂದ ಕೊಯಿಲು ಮಾಡುವುದರ ಬಗೆಗೆ ರೈತನು ನಿರ್ಮಮ ಭಾವದಿಂದ ಇರುತ್ತಾನೆ.

ಹಣಕಾಸಿನ ಸಮಸ್ಯೆಯಿಂದ ಸರಿಯಾದ ಚಿಕಿತ್ಸೆಯು ಸಿಗದೆ ಸಾವು-ಬದುಕಿನ ನಡುವೆ ತೊಯ್ದಾಡುತ್ತಿದ್ದ ಮಗುವಿಗೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಗುರುತನ್ನು ಹೇಳದೆಯೆ ಸಹಾಯ ಮಾಡಿದ. ಸಹಾಯ ಮಾಡುವುದನ್ನು ಕರ್ತವ್ಯವೆಂದು ಭಾವಿಸಿದ್ದರಿಂದ ಪ್ರತಿಯಾಗಿ ಆತನು ಏನನ್ನೂ ಬಯಸಲಿಲ್ಲ. ಹೀಗೆ ತಾವು ಮಾಡಿದ ಕಿಂಚಿತ್ ಸೇವೆಗೆ, ಸಹಾಯಕ್ಕೆ ಹೊಗಳಿಕೆಯನ್ನೂ ನಿರೀಕ್ಷಿಸದೆ ಇರುವ ಸರಳತೆಯು ಬಲು ವಿರಳ. ಲೋಕ ಸಂಸಾರದೊಳಗೆ ಫಲಾಪೇಕ್ಷೆಯಿಂದ ಕರ್ಮವನ್ನು ಮಾಡುವುದರಿಂದಲೇ ವೈಷಮ್ಯಗಳು ಹುಟ್ಟಿಕೊಳ್ಳುತ್ತವೆ. ಹೆತ್ತವರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡೇ ಮಕ್ಕಳನ್ನು ಬೆಳೆಸುತ್ತಾರೆ. ಮಕ್ಕಳ ಭವಿಷ್ಯವನ್ನು ನಾವು ರೂಪಿಸಿದೆವು ಎಂದು ಬೀಗುವವರನ್ನು, ಅಧಿಕಾರ ಚಲಾಯಿಸುವವರನ್ನೂ ನೋಡುತ್ತೇವೆ. ಕರ್ತವ್ಯವನ್ನು ಮಾಡಿದ್ದೇನೆ ಎಂಬ ಭಾವದಲ್ಲಿರುವವರನ್ನು ಸ್ವಾರ್ಥ-ಮೋಹಗಳು ಕಾಡುವುದಿಲ್ಲ. ಸಂಸಾರದಲ್ಲಿ ಸುಖವಿದ್ದಾಗ ಅದು ದೇವರ ಪ್ರಸಾದವೆಂದು, ದುಃಖವು ಎದುರಾದಾಗ ಅದನ್ನು ಜೀವಶೋಧಕ್ಕೆಂದು ಭಾವಿಸಿ ಕರ್ಮ ಮಾಡುವವನು ಸ್ಥಿತಪ್ರಜ್ಞನಾಗಿರುತ್ತಾನೆ.

ಹೀಗೆ ಜೀವನದಿಂದಲೇ ಜೀವಸಂಸ್ಕಾರವನ್ನು ಪಡೆಯುತ್ತಾ ಬ್ರಹ್ಮಪದಕ್ಕೇರಿದವನಿಗೆ, ಆತ್ಮಸಾಕ್ಷಾತ್ಕಾರವನ್ನು ಹೊಂದಿದವನಿಗೆ ಧರ್ವಧರ್ಮಗಳ ಕಟ್ಟುಪಾಡುಗಳು ದೇವರಿಗೆ ಅರ್ಪಿಸಿದ ಮೇಲೆ ತ್ಯಾಜ್ಯವಾದ ನೈರ್ವಲ್ಯದ ಹಾಗೆಯೇ. ಪೂಜೆ,ಹೋಮ-ಹವನ, ವೇದ-ಪುರಾಣಗಳ ಪಾರಾಯಣ, ವ್ರತ-ನಿಯಮ ಮುಂತಾದ ಧಾರ್ವಿುಕ ಆಚರಣೆಗಳು ಬ್ರಹ್ಮಜ್ಞಾನವನ್ನು ಹೊಂದಲು ಇರುವ ರಹದಾರಿಗಳು. ಮನಸ್ಸನ್ನು ಏಕಾಗ್ರವಾಗಿಸಿ, ಆತ್ಮಜ್ಞಾನವನ್ನು ಪಡೆಯಲಿರುವ ಉನ್ನತ ಮಾರ್ಗಗಳು.

ಈ ಕ್ರಿಯಾ ಮಾರ್ಗದಲ್ಲಿ ಶ್ರದ್ಧೆಯಿಂದ ಮುನ್ನಡೆದು ಬ್ರಹ್ಮಪದವನ್ನು ಹೊಂದಿದವರು ಎಲ್ಲೆಡೆಯೂ ವಿಶ್ವಾತ್ಮ ಚೈತನ್ಯವಿರುವುದನ್ನು ಅರಿಯಬಲ್ಲರು. ಲೋಕ ಬದುಕಿನಲ್ಲಿ ಹದಗೊಂಡು ಔನ್ನತ್ಯಕ್ಕೆ ಏರಿದುದರಿಂದ ಲೌಕಿಕದ ಸುಖ-ಭೋಗಗಳು ಅವರಿಗೆ ಕ್ಷುಲ್ಲಕವೆನ್ನಿಸುತ್ತದೆ. ಜೊತೆಗೆ ಧ್ಯಾನ-ಪೂಜೆಗಳಂತಹ ಆಚರಣೆಗಳಿಂದ ಅತೀತರಾಗಿರುತ್ತಾರೆ. ದೇವರ ಅಲಂಕಾರಕ್ಕೆಂದು ಬಳಸಿದ ಹೂವು-ತುಳಸಿಗಳು ಮರುದಿನಕ್ಕೆ ನೈರ್ವಲ್ಯವಾಗುತ್ತವೆ. ಅಂತೆಯೇ ಅಧ್ಯಾತ್ಮ ಸಾಧನೆಗಾಗಿ ರೂಢಿಸಿಕೊಂಡ ಅಭ್ಯಾಸಗಳು ಸಾಧನೆಯ ನಂತರ ಸಾಮಾನ್ಯವಾಗಿ ಬಿಡುತ್ತವೆ.

ದೇವರನ್ನು ಅರಿತ ಮೇಲೆ ಎಲ್ಲವನ್ನೂ ಅರಿತಂತೆ, ಎಲ್ಲವನ್ನೂ ಪಡೆದಂತೆ. ಬದುಕಿನ ನಿಜವಾದ ಸಾರ್ಥಕತೆಯನ್ನು ಹೊಂದಿದ ನಂತರ ಹುಡುಕಾಟವಿರುವುದಿಲ್ಲ. ಗುರಿ ಸೇರಿದ ಮೇಲೆ ಮತ್ತೆ ತಿರುಗಿ ಬರುವುದಕ್ಕಿಲ್ಲ. ಹಾಗಾಗಿ ಯಾವುದೇ ಧಾರ್ವಿುಕ ಆಚರಣೆಗಳು, ಆಧ್ಯಾತ್ಮಿಕ ಸಾಧನಾ ಪಥಗಳು ಬ್ರಹ್ಮಜ್ಞಾನವನ್ನು ಪಡೆಯಲು ಸಹಾಯಕವೇ ಹೊರತು ಅದುವೇ ಜೀವನದ ಉದ್ದೇಶವಲ್ಲ. ಉದ್ದೇಶವನ್ನು ಮರೆತು ಆಚರಣೆಯಲ್ಲೇ ಕಳೆದುಹೋಗುವಂತಾದರೆ ಮಾಡುವ ಕ್ರಿಯೆಯೆಲ್ಲವೂ ನಾಟಕ ವೆನ್ನಿಸಬಹುದು. ಬಹಿರಂಗದ ಆಚರಣೆಗಳಿಂದ ಅಂತರಂಗವು ಶುದ್ಧಿಯಾಗಬೇಕು. ಒಳಹೊರಗು ಒಂದಾಗಿ ವಿವೇಚನೆಯಿಂದ ಕೈಗೊಳ್ಳುವ ಸಾಧನೆಯು ಅತ್ಮೋತ್ಕರ್ಷಕ್ಕೆ ಕಾರಣವಾಗುತ್ತದೆ. ಸತ್ಯದ ಸಾಕ್ಷಾತ್ಕಾರವಾಗುತ್ತದೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net