

| ಶ್ರೀರಕ್ಷಾ ಶಂಕರ್ ಎಸ್ಡಿಎಂ ಸ್ನಾತಕೋತ್ತರ ಕೇಂದ್ರ, ಉಜಿರೆ
ಭೂಮಿಯನ್ನು ಹದಗಳಿಸಿ, ನಾಟಿಮಾಡಿ, ಕಳೆ ಕಿತ್ತು, ಔಷಧ ಸಿಂಪಡಿಸಿ ಕೊನೆಗೆ ಫಸಲು ಕೊಯ್ದು ಮಾರಾಟ ಮಡುವುದು ನಾವು ನೋಡುವ ಸಾಮಾನ್ಯ ಭೂ ಕೃಷಿ ವಿಧಾನ. ಆದರೆ, ಇತ್ತೀಚೆಗೆ ಕೃಷಿ ಮಾಡಲು ಭೂಮಿಯ ಕೊರತೆ, ಲಭ್ಯ ಭೂಮಿಯಲ್ಲಿ ಫಲವತ್ತತೆ ಹೊಂದಿರದ ಕಾರಣ ಅದೆಷ್ಟೋ ಮಂದಿ ಕೃಷಿಯಿಂದ ದೂರ ಉಳಿದಿದ್ದಾರೆ. ಇದಕ್ಕೆ ಪರ್ಯಾಯವಾಗಿ ಮಣ್ಣಿನ ಸಹಾಯವಿಲ್ಲದೆ ಕೃಷಿ ಮಾಡಲು ಸಾಧ್ಯ ಎಂದು ತೋರಿಸಿದ್ದಾರೆ ಕರಾವಳಿಯ ಶಂಕರಪುರದ ಜೋಸೆಫ್ ಲೋಬೋ. ಹೈಡ್ರೋಪೋನಿಕ್ಸ್ ಅಂದರೆ ‘ಜಲಕೃಷಿ’ ಮೂಲಕ ಹೂ-ಹಣ್ಣು ಮತ್ತು ತರಕಾರಿ ಬೆಳೆದು, ಜಲಕೃಷಿಯಲ್ಲಿ ಮಲ್ಲಿಗೆ ಬೆಳೆದ ಮೊದಲ ಕರಾವಳಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಏನಿದು ಜಲಕೃಷಿ?: ಜಲಕೃಷಿ ಎಂದರೆ ಮಣ್ಣನ್ನು ಬಳಸದೇ ನೀರು ಅಥವಾ ಪೋಷಕಾಂಶಯುಕ್ತ ವಸ್ತುಗಳನ್ನು ಬಳಸಿ ಮಾಡುವ ಕೃಷಿ. ಇದು ಜಪಾನ್ ಹಾಗೂ ಇಸ್ರೇಲ್ ದೇಶಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಕೃಷಿ ವಿಧಾನ. ಭಾರತದಲ್ಲಿ ಈ ವಿಧಾನವು ಕಡಿಮೆ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ. ಉಡುಪಿಯ ಶಂಕಾರಪುರ ಕರಾವಳಿಯ ಮಲ್ಲಿಗೆ ರಾಜಧಾನಿ ಎಂದೇ ಪ್ರಖ್ಯಾತ. ಇಲ್ಲಿನ ರೈತರ ಮೂಲ ಬೆಳೆಯೇ ಮಲ್ಲಿಗೆ. ಆದರೆ, ಜೋಸೆಫ್ ಲೋಬೋ ಎಲ್ಲ ರೈತರಿಗಿಂತ ಭಿನ್ನವಾಗಿ ಲ್ಲುವುದು ಜಲಕೃಷಿ ವಿಧಾನದಿಂದ. ಕರೊನಾ ಸಮಯದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ‘ಜಲಕೃಷಿ’ ಹಿಂದಿನ ವರ್ಷಗಳಿಗಿಂತ ಹೆಚ್ಚು ಇಳುವರಿ ನೀಡುವ ಮೂಲಕ ಜೋಸೆಫ್ ಅವರನ್ನು ಈ ಪ್ರಯೋಗದಲ್ಲಿ ಯಶಸ್ವಿಯಾಗಿಸಿದೆ. ಮಣ್ಣನ್ನು ಬಳಸದೇ ತೆಂಗಿನ ನಾರಿನಿಂದ ತಯಾರಾಗುವ ಕೋಕೋಪಿಟ್ ಹಾಗೂ ಕೋಕೋ ಮ್ಯಾನ್ಯೂರ್ ಬಳಸಿ ಮಲ್ಲಿಗೆ ಸೇರಿ ಮೂವತ್ತಕ್ಕೂ ಹೆಚ್ಚು ತಳಿಯ ವಿವಿಧ ಹೂ ಮತ್ತು ಹಣ್ಣುಗಳನ್ನು ಜೋಸೆಫ್ ಬೆಳೆದಿದ್ದಾರೆ. ಮಣ್ಣಿಗಿಂತ ಹೆಚ್ಚು ಕಾಲ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿರುವ ತೆಂಗಿನ ನಾರಿನ ಪದಾರ್ಥಗಳಲ್ಲಿ ಗಿಡಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಸೇರಿಸಲಾಗಿರುತ್ತದೆ. ಇದರಿಂದ ಹೆಚ್ಚು ಇಳುವರಿ ನೀಡಲು ಸಾಧ್ಯವಾಗುತ್ತದೆ.
ಮಾಡುವುದು ಹೇಗೆ?: ರಂಧ್ರಗಳಿರುವ ಬುಟ್ಟಿಯಲ್ಲಿ ಮೊಳಕೆಯೊಡೆದು ಬೇರು ಬಂದಿರುವ ಗಿಡವನ್ನು ಕೋಕೋಪಿಟ್, ಕೋಕೋ ಮ್ಯಾನ್ಯೂರ್ನಲ್ಲಿ ನೆಡಬೇಕು. ಒಂದು ಬಕೆಟ್ನಲ್ಲಿ ನೀರು ಅಥವಾ ಜೀವಾಮೃತ ಎಂದರೆ ಗೋವಿನ ತ್ಯಾಜದಲ್ಲಿ ಗಿಡವನ್ನು ನೆಟ್ಟ ಬುಟ್ಟಿಯನ್ನು ಇರಿಸಿ ಸೂರ್ಯನ ಬೆಳಕು ಕೊಂಚಮಟ್ಟಿಗೆ ಬೀಳುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಗಿಡಗಳು ಅತೀ ಶೀಘ್ರವಾಗಿ ಫಸಲು ನೀಡುತ್ತವೆ. ಅಲ್ಲದೆ ಈ ರೀತಿ ಬೆಳೆದ ಸಸ್ಯಗಳಲ್ಲಿ ರೋಗಗಳು ಕಡಿಮೆ. ಕುರಚಲು, ಪೋದೆ ಜಾತಿ ಅಲ್ಲದೆ, ಕಡಿಮೆ ಎತ್ತರ ಬೆಳೆಯುವ ಸಸ್ಯಗಳು ಜಲಕೃಷಿಗೆ ಸೂಕ್ತ ಎನ್ನುತ್ತಾರೆ ಜೋಸೆಫ್.