ಜನಮತ | ಹೆದ್ದಾರಿಗಳ ಪಕ್ಕದಲ್ಲಿ ಹಣ್ಣುಗಳ ಗಿಡ ಬೆಳೆಸಿ

Highway indicative image
Published on

ರಾಷ್ಟ್ರಾದ್ಯಂತ ಸುಗಮ, ಸುರಕ್ಷಿತ, ಅವಘಡರಹಿತ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ ಕಾರ್ಯವನ್ನು ಭರದಿಂದ ಮುಂದುವರಿಸಿದೆ. ಹೆದ್ದಾರಿಗಳ ಎರಡೂ ಬದಿಯಲ್ಲಿರುವ ಸಶಕ್ತ, ಫಲಕೊಡುವ, ಪಕ್ಷಿಸಂಕುಲದ ಆಶ್ರಯತಾಣ ಮತ್ತು ಆರೋಗ್ಯಕ್ಕೆ ಪೂರಕವಾದ ಆಹಾರ, ಹಣ್ಣು ಕೊಡುವ, ಪಾದಚಾರಿಗಳಿಗೆ ನೆರಳು ಕೊಡುತ್ತಿದ್ದ ಗಿಡಗಳನ್ನು ರಸ್ತೆ ವಿಭಜಕಗಳಾಗಿ ಬಳಸುವಂತೆ ಪರಿಸರ ಪ್ರೇಮಿಗಳ ಮನವಿಗೆ ಮನ್ನಣೆ ನೀಡದೆ ನಿರ್ದಾಕ್ಷಿಣ್ಯವಾಗಿ ಕಡಿದುರುಳಿಸಲಾಗಿದೆ.

ಹೆದ್ದಾರಿ ವಿಭಜಕದಲ್ಲಿ ಹೂವಿನ ಗಿಡಗಳನ್ನು ಹಾಗೂ ಹೆದ್ದಾರಿಯ ಎರಡೂ ಬದಿಯಲ್ಲಿ ಪಕ್ಷಿ ಸಂಕುಲದ ಆಶ್ರಯಕ್ಕೆ ಹಣ್ಣು ನೀಡುವ ಮರಗಳನ್ನು ಬೆಳಸಲು 2004ರಲ್ಲಿ ಹೆದ್ದಾರಿ ಮತ್ತು ಸಾರಿಗೆ ಇಲಾಖೆ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪನವರಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ಸಚಿವರು ರಸ್ತೆ ವಿಭಜಕದಲ್ಲಿ ವಿವಿಧ ನಮೂನೆಯ ಹೂವಿನ ಗಿಡಗಳನ್ನು ನೆಡುವ ಕುರಿತು ಕ್ರಮ ಜರುಗಿಸಿದರು. ಆದರೆ, ಅವರು ಸಹಾಯಕ ರೈಲು ಸಚಿವರಾಗಿ ಬದಲಾದ ಕಾರಣ ಹೆದ್ದಾರಿಯ ಪಕ್ಕ ಮರಗಳನ್ನು ನೆಡುವ ಕಾರ್ಯ ಸ್ಥಗಿತಗೊಂಡಿತು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವರಾಗಿ ಅಧಿಕಾರವಹಿಸಿಕೊಂಡರು. ಹೆದ್ದಾರಿಯ ಪಕ್ಕ ಫಲಕೊಡುವ ಮರಗಳನ್ನು ಬೆಳೆಸಲು ಕ್ರಮ ಜರುಗಿಸುವ ಕುರಿತು ಇಲಾಖೆಯೊಂದಿಗೆ 2003ರಿಂದ ನಡೆಸಿದ ಪತ್ರವ್ಯವಹಾರವನ್ನು ಗಡ್ಕರಿ ಅವರಿಗೆ ತಿಳಿಸಿ, ಹೆದ್ದಾರಿಯ ಬದಿಗೆ ಮಾವು, ಬೇವು, ಬಸರಿ, ಅತ್ತಿ ಮರ, ಹಲಸು, ನೇರಳೆ, ಹುಣಸೆ ಮತ್ತು ಆಲದ ಮರಗಳನ್ನು ನೆಡಲು ಕ್ರಮ ಜರುಗಿಸುವಂತೆ ಮನವಿ ಮಾಡಲಾಯಿತು. ಅದಕ್ಕವರು ಸದಭಿಪ್ರಾಯ ವ್ಯಕ್ತಪಡಿಸಿದ್ದರು.

2019ರಲ್ಲಿ ಮತ್ತೆ ಹೆದ್ದಾರಿ ಮತ್ತು ಸಾರಿಗೆ ಸಚಿವರಾದ ಗಡ್ಕರಿ ದೇಶದ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ 125 ಕೋಟಿ ಮರಗಳನ್ನು ಬೆಳೆಸಲು ಕ್ರಮ ಜರುಗಿಸುವದಾಗಿ ಘೊಷಿಸಿದ್ದು, ಸ್ವಾಗತಾರ್ಹ ಸಂಗತಿ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ನೂರು ವರ್ಷಗಳ ನಂತರ ಆಗಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದೆಯೂ ಮರಗಳ ಮಾರಣಹೋಮವಾಗದಂತೆ ಮರಗಳನ್ನು ಈಗಿನ ರಸ್ತೆಯ ಅಂಚಿನಿಂದ ಸೂಕ್ತ ಅಂತರದಲ್ಲಿ ಬೆಳೆಸುವದು ಅತ್ಯವಶ್ಯಕ.

ರಸ್ತೆಗಳ ಪಕ್ಕದಲ್ಲಿರುವ ಜಮೀನುಗಳ ಮಾಲೀಕರಿಗೆ ತಮ್ಮ ಜಮೀನಿನ ಅಂಚಿನಲ್ಲಿ ಬೆಳೆಸುವ ಮರಗಳನ್ನು ಸಂರಕ್ಷಿಸುವ ಮತ್ತು ಉಸ್ತವಾರಿ ನೋಡಿಕೊಳ್ಳುವ ಜವಾಬ್ದಾರಿ ವಹಿಸಿ ಅವುಗಳಿಂದ ಬರುವ ಫಲವನ್ನು ಪಡೆಯುವ ಅವಕಾಶ ಒದಗಿಸಬೇಕು. ಉಪಯುಕ್ತ ಮರಗಳ ಪಾಲನೆ-ಪೋಷಣೆ ಮಾಡುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

| ಬಸವರಾಜ ಹುಡೇದಗಡ್ಡಿ, ವಕೀಲರು, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net