

ಲಾಸ್ ಎಂಜಲೀಸ್: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಲು ಹೃದಯವನ್ನು ಹೆಲಿಕಾಪ್ಟರ್ನಲ್ಲಿ ಒಯ್ಯುವಾಗ ಹೆಲಿಕಾಪ್ಟರ್ ಉರುಳಿ ಬಿದ್ದಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆದಿದೆ. ಅದೃಷ್ಟವಶಾತ್ ಹೃದಯವನ್ನು ಕಾಪಾಡಿಕೊಳ್ಳಲಾಗಿದ್ದು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
ಲಾಸ್ ಎಂಜಲೀಸ್ನ ಕೆಕ್ ಆಸ್ಪತ್ರೆಯ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಅನ್ನು ಇಳಿಸುವ ಏರ್ಪಾಡು ಮಾಡಲಾಗಿತ್ತು. ಹೃದಯ ದಾನಿಯಿಂದ ಪಡೆದ ಹೃದಯವನ್ನು ಹೊತ್ತು ಬಂದಿದ್ದ ಹೆಲಿಕಾಪ್ಟರ್ ಇನ್ನೇನು ಕೆಲ ಕ್ಷಣಗಳಲ್ಲಿ ಆಸ್ಪತ್ರೆಯ ಮೇಲ್ಭಾಗದಲ್ಲಿ ಇಳಿಯಬೇಕಿತ್ತು. ಕೊನೆಯ ಸೆಕೆಂಡಿನಲ್ಲಿ ಹೆಲಿಕಾಪ್ಟರ್ ತಿರುಗಲಾರಂಭಿಸಿದೆ. ಎರಡು ಮೂರು ಸುತ್ತು ತಿರುಗುತ್ತಾ ಇಳಿದ ಹೆಲಿಕಾಪ್ಟರ್, ಅಡ್ಡವಾಗಿ ಬಿದ್ದಿದೆ. ತಕ್ಷಣ ಕಾರ್ಯನಿರತವಾದ ರಕ್ಷಣಾ ಸಿಬ್ಬಂದಿ,ಹೆಲಿಕಾಪ್ಟರ್ನ ಮಧ್ಯಭಾಗದಲ್ಲಿದ್ದ ಹೃದಯವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಹೃದಯ ಕೈಗೆ ಸಿಕ್ಕುತ್ತಿದ್ದಂತೆ ಅದನ್ನು ವೈದ್ಯಕೀಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ.
ಹೆಲಿಕಾಪ್ಟರ್ನ ಪೈಲೆಟ್ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮತ್ತಿಬ್ಬರು ಸಿಬ್ಬಂದಿ ಹೆಲಿಕಾಪ್ಟರ್ನಲ್ಲಿ ಇದ್ದು, ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)