

ಇಂದಿಗೂ ಜನಸಾಮಾನ್ಯರ ನಡುವೆ ನಮ್ಮ ಶತ್ರು ಯಾರು ಎನ್ನುವುದರ ಕುರಿತಾಗಿ ಕೇಳಿದರೆ ಪಾಕಿಸ್ತಾನದ ಹೆಸರು ಮೊದಲು ಕೇಳಿ ಬರುತ್ತಾದರೂ ಚೀನಾ ನಮ್ಮ ಶತ್ರುವೋ ಅಥವಾ ಮಿತ್ರನೋ ಎನ್ನುವ ಕುರಿತು ಒಂದು ರೀತಿಯ ಅಸಮಂಜಸವಿದೆ ಎನ್ನುವುದು ಸತ್ಯ. ಚೀನಾದೊಂದಿಗೆ ಸಾಮರಸ್ಯದ ಸಂಬಂಧ ಸ್ಥಾಪನೆಗಾಗಿ ಭಾರತ ರಿಯಾಯಿತಿಯ ಮೇಲೆ ರಿಯಾಯಿತಿ ನೀಡುತ್ತ ಬಂದಿತಾದರೂ ಚೀನಾ ಅವೆಲ್ಲವುಗಳನ್ನು ಪರಿಗಣಿಸದೆ ಧೂರ್ತತನ ತೋರುತ್ತ ಬಂದಿದೆ. ಇದೀಗ ಸಮಯ ಬಂದಿದೆ. ಚೀನಾ ನಮ್ಮ ಮಿತ್ರರಾಷ್ಟ್ರವಲ್ಲ, ಎಂದಿದ್ದರೂ ಅದು ಶತ್ರುರಾಷ್ಟ್ರ ಎನ್ನುವುದನ್ನು ಸಮಸ್ತ ಭಾರತೀಯರಿಗೆ ಸ್ಪಷ್ಟಪಡಿಸುವುದೇ ಒಳಿತು. ಶತ್ರುಗಳ ಸಾಮಾನುಗಳನ್ನು ಖರೀದಿಸುವುದು ಎಂದರೆ ಗಡಿಯಲ್ಲಿ ಚೀನೀಯರಿಗೆ ಸೆಡ್ಡು ಹೊಡೆದು ನಿಂತಿರುವ ಸೈನಿಕರ ತ್ಯಾಗ-ಬಲಿದಾನಗಳಿಗೆ ಅನಾದರ ಮಾಡಿದಂತೆಯೇ ಸರಿ.
ಗಲ್ವಾನ್ ಕಣಿವೆಯಲ್ಲಿ ನಮ್ಮ ಯೋಧರು ಚೀನೀಯರ ವಿಶ್ವಾಸಘಾತದ ಪರಿಣಾಮವಾಗಿ ಹುತಾತ್ಮರಾದ ನಂತರದಲ್ಲಿ ಸಹೋದ್ಯೋಗಿಯೋರ್ವರು ಚೀನೀ ಮೊಬೈಲ್ ಕೊಂಡ ಸಂಭ್ರಮಾಚರಣೆ ಕಂಡು ಮನಸ್ಸು ಖಿನ್ನವಾಯಿತು. ಸಾವಿರಾರು ಮೈಲು ದೂರದ ಗಡಿಯಲ್ಲಿ ನಮ್ಮ ಸೈನಿಕರನ್ನು ಕೊಂದ ಕಪಟಿಗಳ ಕುರಿತು ನಮಗೆ ರೋಷ ಏಕಿಲ್ಲ? ವಸ್ತುಸ್ಥಿತಿಯನ್ನು ಅರಿಯದೆ, ಕೇವಲ ತಾನು ಚೆನ್ನಾಗಿದ್ದರೆ ಸಾಕು ಎನ್ನುವ ಅಸಡ್ಡೆತನ, ವಿಲಾಸಿ ಬದುಕನ್ನು ಬದುಕುತ್ತ ತಮ್ಮದೇ ಪ್ರಪಂಚದಲ್ಲಿ ಕಳೆದುಹೋಗುತ್ತಿರುವ ಸೋ ಕಾಲ್ಡ್ ಸಭ್ಯ ನಾಗರಿಕರಿಗೆ, ಯುವಜನಾಂಗಕ್ಕೆ ಏನನ್ನಬೇಕು? ಕೊನೆಗೂ ಸರ್ಕಾರ ಚೀನೀ ಮೊಬೈಲ್ ಆಪ್ಗಳನ್ನು ನಿಷೇಧ ಮಾಡಲು ನಿರ್ಧರಿಸಿದೆ. ಜನಸಾಮಾನ್ಯರಿಗೆ ನಮ್ಮ ಶತ್ರು-ಮಿತ್ರರ ಪರಿಚಯ ಮಾಡಿಸದೇ ಹೋದರೆ ಭಾರಿ ಅನಾಹುತವಾದೀತು. ನಂಬಲನರ್ಹ ದ್ರೋಹಿಗಳ ಜತೆಯಲ್ಲಿ ವ್ಯಾಪಾರ-ವಹಿವಾಟು ಸಾಮಾನ್ಯವಿರಲು ಹೇಗೆ ಸಾಧ್ಯ?
| ಚಂದ್ರಶೇಖರ ನಾವಡ, ಮಾಜಿ ಸೈನಿಕರು, ಬೈಂದೂರು