ಅನಿವಾಸಿ ಭಾರತೀಯರ ವಾಪಸಾತಿಗೆ ಪ್ರತಿರೋಧ ಸರಿಯೇ?

Air
Published on
ವಿದೇಶದಿಂದ ವಾಪಸ್ ಬರುತ್ತಿರುವ ಅನಿವಾಸಿ ಭಾರತೀಯರ ಬಗ್ಗೆ ಆಗುತ್ತಿರುವ ಚರ್ಚೆ, ಟೀಕೆ-ಟಿಪ್ಪಣಿಗಳ ಬಗ್ಗೆ ಸುದೀರ್ಘ ಲೇಖನ ಬರೆಯುವಷ್ಟು ವಿಷಯವಿದ್ದರೂ ಸಂಕ್ಷಿಪ್ತವಾಗಿ ಒಂದಿಷ್ಟು ಪ್ರತಿಕ್ರಿಯೆ.

ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋದವರು ಯಾವುದೋ ಮಹಾಪರಾಧ ಮಾಡಿದಂತೆ, ಹಾಗೂ ಈಗ ಮಾಡಬಾರದ ಪಾಪ ಮಾಡಿ ರೋಗ ಅಂಟಿಸಿಕೊಂಡು ಸ್ವದೇಶಕ್ಕೆ ವಾಪಸ್ಸು ಬರುತ್ತಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ಹಾಗೆ ಟೀಕಿಸುವವರು ಮೊದಲಿಗೆ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವಂಥ ಪರಿಸ್ಥಿತಿಯನ್ನು ದೇಶದಲ್ಲಿ ತಂದಿಟ್ಟವರು ಯಾರು ಎಂಬ ಬಗ್ಗೆ ಯೋಚಿಸಬೇಕು. ಎರಡು ವರ್ಷಗಳ ಹಿಂದೆ ಸಿಇಟಿ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದಲ್ಲಿ 4414ನೇ ಸ್ಥಾನ ಪಡೆದ ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆ ಆಯ್ಕೆ ಆಗದೆ, ಮೀಸಲಾತಿ ವರ್ಗದಲ್ಲಿ 36797ನೇ ಸ್ಥಾನ ಪಡೆದ ವಿದ್ಯಾರ್ಥಿ ಆಯ್ಕೆಯಾಗಿದ್ದರೆಂದು ವರದಿಗಳು ಹೇಳುತ್ತವೆ. ಇದೇ ಪರಿಸ್ಥಿತಿ ಉದ್ಯೋಗ ಪಡೆಯುವುದರಲ್ಲೂ ಇದೆ. ಅದೆಷ್ಟೇ ಪ್ರತಿಭಾವಂತರಿರಲಿ, ವಯಸ್ಸು ಮೀರುತ್ತಿದ್ದರೂ ಸೂಕ್ತ ಉದ್ಯೋಗ ದೊರೆಯದೆ, ವಿದೇಶದಲ್ಲಿ ಉತ್ತಮ ಅವಕಾಶ ದೊರೆತರೆ ಹೋಗುವುದರಲ್ಲಿ ತಪ್ಪೇನಿದೆ?

ಇನ್ನು ಎರಡನೆಯದಾಗಿ ಅನಿವಾಸಿ ಭಾರತೀಯರಿಂದ 2018-19ರ ಸಾಲಿನಲ್ಲಿ ನಮ್ಮ ದೇಶಕ್ಕೆ ಹರಿದು ಬಂದ ವಿದೇಶಿ ವಿನಿಮಯ ಮೊತ್ತ -ಠಿ; 1.80 ಲಕ್ಷ ಕೋಟಿಗೂ ಹೆಚ್ಚು ಎಂದು ಅಂಕಿ-ಅಂಶಗಳು ಹೇಳುತ್ತವೆ. ಇದು ಕರ್ನಾಟಕ ಸರ್ಕಾರದ ಆಯವ್ಯಯ ಮೊತ್ತದ ಆಸುಪಾಸಿನಲ್ಲಿದೆ. ಮೂರನೆಯದಾಗಿ, ಈಗ ವಾಪಸ್ಸು ಬರುತ್ತಿರುವವರು ಔದ್ಯೋಗಿಕ, ವಿದ್ಯಾರ್ಥಿ ವೀಸಾ ಅವಧಿ ಮುಗಿದವರು ಅಥವಾ ವಿದೇಶದಲ್ಲಿ ಉದ್ಯೋಗದಲ್ಲಿ ಇರುವ ತಮ್ಮ ಅವಲಂಬಿತರೊಂದಿಗೆ ಪ್ರವಾಸಿ ವೀಸಾದಲ್ಲಿ ಹೋದವವರಾಗಿದ್ದು ಸಾಮಾನ್ಯ ಸಂದರ್ಭದಲ್ಲಿ ಅವರಷ್ಟಕ್ಕೆ ಬರುತ್ತಿದ್ದರು. ಈಗಲೂ ಅವರನ್ನು ಸರ್ಕಾರ ಉಚಿತವಾಗಿ ಕರೆದುಕೊಂಡು ಬರುತ್ತಿಲ್ಲ. ನಾಲ್ಕನೆಯದಾಗಿ, ಈಗ ಬರುವವರೆಲ್ಲರೂ ಸೋಂಕಿತರು, ಅವರು ಭಾರತಕ್ಕೆ ಬರುವುದರಿಂದ ಇಲ್ಲಿ ರೋಗ ಹಬ್ಬುತ್ತದೆ ಎಂಬಂತೆ ಬಿಂಬಿಸುತ್ತಿರುವುದು ಶುದ್ಧತಪ್ಪು. ಮಾರ್ಚ್ ತಿಂಗಳಲ್ಲಿ ಇಟಲಿ, ಇರಾನ್ ಮುಂತಾದ ದೇಶಗಳಲ್ಲಿ ಇದ್ದವರನ್ನು ಸೂಕ್ತ ಪರೀಕ್ಷೆ ಮಾಡಿದ ನಂತರವಷ್ಟೇ ಕರೆತರಲಾಗಿತ್ತು, ಮಾತ್ರವಲ್ಲ ಹಾಗೆ ಬಂದವರನ್ನು ಒಂದು ತಿಂಗಳ ಕಾಲ ದೆಹಲಿಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಿ, ಅವರು ಸಂಪೂರ್ಣವಾಗಿ ಸೋಂಕುರಹಿತರು ಎಂದು ದೃಢೀಕರಿಸಿದ ನಂತರವಷ್ಟೇ ಅವರ ಮನೆಗಳಿಗೆ ಕಳುಹಿಸಲಾಗಿದೆ.

ಭಾರತದಲ್ಲಿ ಸೋಂಕು ಹರಡಲು ನಮ್ಮಲ್ಲಿ ಕೆಲವರ ಅಸಹಕಾರ ಮತ್ತು ರಾಜಕೀಯ ಮೇಲಾಟಗಳೇ ಕಾರಣ ಹೊರತು, ಅನಿವಾಸಿ ಭಾರತೀಯರಲ್ಲ. ಈಗಲೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಕರೆತರಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೊನೆಯದಾಗಿ, ‘ಅಲ್ಲಿಯೇ ಇದ್ದು ಎಲ್ಲವೂ ಸರಿಯಾದ ನಂತರ ಬನ್ನಿ’ ಎನ್ನುವ ಸಲಹೆ ಬಗ್ಗೆ- ಯಾವುದೇ ವೀಸಾ ಮೇಲೆ ವಿದೇಶಕ್ಕೆ ಹೋದರೆ ನಿಗದಿತ ಅವಧಿಯಲ್ಲಿ ವಾಪಸ್ಸು ಹೋಗಲೇ ಬೇಕು. ಅನಧಿಕೃತವಾಗಿ ಅಡಗಿಕೊಂಡಿರಲು ಅದು ಭಾರತವಲ್ಲ. ಅನಧಿಕೃತವಾಗಿ ಬಂದದ್ದೂ ಅಲ್ಲದೆ ಅಡಗಿಕೊಂಡಿರಲು ಆಶ್ರಯ ನೀಡುವಷ್ಟು ‘ಉದಾರ ಮನಸ್ಸಿನ’ ರಾಜಕೀಯ ಧುರೀಣರು ಭಾರತದಲ್ಲಿ ಮಾತ್ರ ಸಿಗುತ್ತಾರೆ, ಬೇರೆ ದೇಶಗಳಲ್ಲಿ ಅಲ್ಲ. ಆದ್ದರಿಂದ ಅನಿವಾಸಿ ಭಾರತೀಯರ ಬಗ್ಗೆ ಇರುವ ಕೀಳರಿಮೆ ತೊಲಗಲಿ.

| ಮೋಹನದಾಸ ಕಿಣಿ ಕಾಪು (ಉಡುಪಿ ಜಿಲ್ಲೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net