ಜನಮತ | ಅವಲೋಕನಕ್ಕಿದು ಸಕಾಲ

Janamatha1
Published on

ಈ ಹಿಂದೆ ಮೇಲ್ಮನೆ (ವಿಧಾನ ಪರಿಷತ್) ಚಿಂತಕರ ಕೂಟವಾಗಿತ್ತು. ಘಟಾನುಘಟಿ ನಾಯಕರಿದ್ದರು. ಸಮಾಜದಲ್ಲಿರುವ ಘನವೆತ್ತರ ಅನುಭವವನ್ನು ರಾಷ್ಟ್ರ ನಿರ್ವಣದಲ್ಲಿ ಬಳಸಿಕೊಳ್ಳಲು ಇರುವ ಮಾಧ್ಯಮವಾಗಿತ್ತು. ಹಿರಿಯರ ಮನೆ ಎನ್ನುವುದು ಇದಕ್ಕಿರುವ ಇನ್ನೊಂದು ಹೆಸರು. ಜೊತೆಗೆ ಬುದ್ಧಿವಂತರ ಸದನ ಎಂದು ಭಾವಿಸಲಾಗಿತ್ತು. ಇದು ವಯಸ್ಸಿನ ಹಿರಿತನ ಮಾತ್ರವಲ್ಲ ಅನುಭವ, ಚಿಂತನೆಗಳ ಹಿರಿತನವೂ ಹೌದು. ಕೆಲವೊಮ್ಮೆ ಮುತ್ಸದಿಗಳನ್ನು ಸಕ್ರಿಯ ರಾಜಕೀಯಕ್ಕೆ ಕರೆತರುವ ಹಾದಿಯೇ ಮೇಲ್ಮನೆ. ಆದರೆ ಈಗ ಸೋತವರನ್ನು ಅಧಿಕಾರದಲ್ಲಿ ಕೂರಿಸುವ ಮನೆಯಾಗಿದೆ. ಕರ್ನಾಟಕದಲ್ಲಿ ವಿಧಾನ ಪರಿಷತ್ ಈಗ ಹೇಗಿದೆ ಎಂದರೆ ‘ಫೇಲಾದ ವಿದ್ಯಾರ್ಥಿಗೆ ಸರ್ಕಾರದ ಉನ್ನತ ಹುದೆ’ ನೀಡುವುದು ಎಂಬಂತಾಗಿದೆ.

ಸಮಾಜಸೇವೆ, ಸಹಕಾರ, ಕಲೆ, ಸಾಹಿತ್ಯ ಮುಂತಾದ ಕ್ಷೇತ್ರಗಳಿಂದ ತಜ್ಞರನ್ನು ರಾಜ್ಯ ಸರ್ಕಾರದ ಶಿಫಾರಸಿನಂತೆ ರಾಜ್ಯಪಾಲರು ನೇಮಕ ಮಾಡಬೇಕು ಎಂಬ ನಿಯಮವಿದೆ. ಶಿಕ್ಷಣ ಕ್ಷೇತ್ರದ ಪ್ರಮುಖರು, ಪದವೀಧರ ಕ್ಷೇತ್ರದ ತಜ್ಞರು ಹಾಗೂ ಸ್ಥಳೀಯ ಸಂಸ್ಥೆಗಳ ಅನುಭವಿಗಳು ಮೇಲ್ಮನೆ ಸದಸ್ಯರಾಗಬೇಕು ಎಂಬ ಉನ್ನತ ಆಲೋಚನೆಯಿಂದ ಹೀಗೆ ಮಾಡಲಾಗಿದೆ. ವಿಧಾನಸಭೆಯಲ್ಲಿ ಶಾಸಕರು ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ಎಡವಿದಲ್ಲಿ ಎಚ್ಚರಿಸುವ ಸದನ ಇದಾಗಿದೆ.

ವಿಧಾನ ಪರಿಷತ್​ಗೆ ಹಿಂದೆ ಇರುವಷ್ಟು ಮಹತ್ವ ಈಗ ಇಲ್ಲ ಎನ್ನುವುದು ನಿಜ. ದುಡ್ಡಿನ ಥೈಲಿ ಇರುವವರು, ಸಿನಿಮಾದವರು, ಕ್ರೀಡಾಪಟುಗಳು ರಾಜಕೀಯ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಮನೆಯಾಗಿದೆ. ಅಂತೆಯೇ ಹಿಂಬಾಗಿಲಿನ ರಾಜಕೀಯ ಮಾಡುವವರಿಗೆ ವೇದಿಕೆಯಾಗಿ ಬದಲಾಗಿದೆ. ಅಧಿಕಾರಕ್ಕಾಗಿ ಮೇಲಾಟ ನಡೆಸುವ ನಾಯಕರು ಮತ್ತು ರಾಜಕೀಯ ಪಕ್ಷಗಳಿಂದ ಮೇಲ್ಮನೆಯ ಘನತೆಗೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ವಿಧಾನ ಪರಿಷತ್ ಅವಶ್ಯಕತೆ ಇದೆಯೇ ಎಂದು ಅವಲೋಕಿಸಲು ಇದು ಸಕಾಲ. ಈ ಬಗ್ಗೆ ಚಿಂತನ-ಮಂಥನ ನಡೆದು ಸಮರ್ಪಕ ನಿರ್ಧಾರಕ್ಕೆ ಬರುವುದು ಅವಶ್ಯ.

| ದೇವೇಂದ್ರಗೌಡ ಜಿರ್ಲಿ ವದಗನಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net