

ಸಮಾಜಶಾಸ್ತ್ರ ವಿಷಯ ಸಾಂಪ್ರದಾಯಿಕ; ಅದಕ್ಕೆ ಉದ್ಯೋಗಾವಕಾಶಗಳು ಇಲ್ಲ ಎಂದು ಕೆಲವರು ವಿದ್ಯಾರ್ಥಿಗಳಲ್ಲಿ ತಪ್ಪುಕಲ್ಪನೆ ಮೂಡಿಸುತ್ತಿದ್ದಾರೆ. ಎಲ್ಲ ಅಧ್ಯಯನ ಕ್ಷೇತ್ರಗಳು ಉದ್ಯೋಗಾವಕಾಶಗಳ ದೃಷ್ಟಿಯಿಂದ ಬೆಳೆಯುತ್ತವೆ. ಈ ಕ್ಷೇತ್ರ ಕೂಡ ಈ ಬೆಳವಣಿಗೆಯಿಂದ ಹೊರತಾಗಿಲ್ಲ. ಎಂ.ಎ ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳು, ಸಾಮಾಜಿಕ ಸ್ಥಿರೀಕರಣ, ಸಾಮಾಜಿಕ ಅಂತರ ವರ್ತನೆ, ಸಂಸ್ಕೃತಿಯ ಕುರಿತು ಅಧ್ಯಯನ ಮಾಡುತ್ತದೆ. ಇದಲ್ಲದೆ ವಿಶೇಷ ವಲಯಗಳ ಮೇಲೆ ಅಂದರೆ ಅನ್ವಯಿಕ ಸಮಾಜಶಾಸ್ತ್ರ, ಚಿಕಿತ್ಸಾ ಸಮಾಜಶಾಸ್ತ್ರ, ಕ್ರಿಯಾ ಸಮಾಜಶಾಸ್ತ್ರ, ಸಾಂಸ್ಕೃತಿಕ ಸಮಾಜಶಾಸ್ತ್ರ ಅಲ್ಲದೆ ಸಮೂಹಗಳ ವರ್ತನೆ, ಅಪರಾಧ ಮತ್ತು ಬಾಲಾಪರಾಧ, ಸಮುದಾಯ, ಸಾಮಾಜೀಕರಣ ಸಂಸ್ಕೃತಿ, ಸಹಕಾರ, ಸ್ಪರ್ಧೆ, ಸಂಘರ್ಷ, ಹೊಂದಾಣಿಕೆ, ಸಂಶೋಧನೆ ಮತ್ತು ಪರಿಸರದ ಬಗ್ಗೆ ಬೆಳಕು ಚೆಲ್ಲುತ್ತದೆ.
ಸಮಾಜಶಾಸ್ತ್ರ ಪದವಿ ಓದಿದವರು ಎಂ.ಎ ಸಮಾಜಶಾಸ್ತ್ರ, ಸಮಾಜಕಾರ್ಯ, ಮನೋವಿಜ್ಞಾನ ಮತ್ತು ಇತರ ಸಾಮಾಜಿಕ ವಿಜ್ಞಾನ ವಿಷಯಗಳಲ್ಲಿ ಎಂ.ಎ. ಓದಬಹುದು. ಸಹಕಾರಿ, ಸಂಶೋಧನಾ ಕ್ಷೇತ್ರ, ಶಿಕ್ಷಣ, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಸಂವಹನ ಕ್ಷೇತ್ರ, ಸೇವಾ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಪತ್ರಿಕೋದ್ಯಮ, ಕೈಗಾರಿಕೆ, ಸಾರ್ವಜನಿಕ ಸಂಬಂಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತವೆ. ಸಾಮಾಜಿಕ ಕಾರ್ಯಕರ್ತ, ಕುಟುಂಬ ಸಮಾಲೋಚಕ, ಸಂಶೋಧನಾ ಸಹಾಯಕರಾಗಿ, ಪುನರ್ ನಿರ್ಮಾಣ ಮತ್ತು ಪುನರ್ವಸತಿ ಕ್ಷೇತ್ರಗಳಲ್ಲಿ, ಯೋಜನಾ ನಿರ್ದೇಶಕರಾಗಿ, ಆಪ್ತಸಮಾಲೋಚಕರಾಗಿ, ತಾಲೂಕು ಸಂಯೋಜಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಹುದ್ದೆಗಳನ್ನು ಪಡೆಯಬಹುದು. ಇದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೂಡ ಸಮಾಜಶಾಸ್ತ್ರದ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳು ಬರುತ್ತವೆ. ಕೆಪಿಎಸ್ಸಿ ಪರೀಕ್ಷೆ ಮೂಲಕವಾಗಿ ಹಲವಾರು ಉದ್ಯೋಗ ಅವಕಾಶಗಳನ್ನು ಪಡೆಯಬಹುದು. ಹೀಗಾಗಿ, ಸಮಾಜಶಾಸ್ತ್ರ ವಿಷಯವನ್ನು ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಪಡೆದುಕೊಂಡು ಅಧ್ಯಯನ ಮಾಡಿದರೆ ಉದ್ಯೋಗಾವಕಾಶಗಳ ಜೊತೆಗೆ ಸಾಮಾಜಿಕ ಸಂಬಂಧವನ್ನು ಕಂಡುಕೊಳ್ಳಬಹುದು.
| ಶಿವನಗೌಡ ಪೊಲೀಸ್ ಪಾಟೀಲ್ ಉಪನ್ಯಾಸಕರು, ಕೊಪ್ಪಳ