

ದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿರುವ ಪ್ರಧಾನಮಂತ್ರಿ ಜನಧನ್ ಯೋಜನೆಗೆ ಈಗ 10 ವರ್ಷಗಳು ಸಂದಿವೆ. ಅಭೂತಪೂರ್ವ ಚುನಾವಣಾ ವಿಜಯದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು 2014ರ ಆಗಸ್ಟ್ 28ರಂದು ಘೊಷಿಸಿದ ಬ್ಯಾಂಕಿಂಗ್ ಕ್ಷೇತ್ರದ ಯೋಜನೆ ಇದು.
ದಾಖಲೆಯ ಖಾತೆಗಳು: 2024ರ ಆಗಸ್ಟ್ವರೆಗೆ ಒಟ್ಟು 53 ಕೋಟಿ ಜನಧನ್ ಬ್ಯಾಂಕ್ ಖಾತೆಗಳ ನೋಂದಣಿಯಾಗಿದೆ. ಇದು ಯುರೋಪಿಯನ್ ಯೂನಿಯನ್ನ ಒಟ್ಟು ಜನಸಂಖ್ಯೆಗಿಂತ ಹೆಚ್ಚು. ಈ ಖಾತೆಗಳ ಒಟ್ಟಾರೆ ಠೇವಣಿ 2.31 ಲಕ್ಷ ಕೋಟಿ ರೂ.ಗಳಿಗೂ ಮೀರಿದೆ. ಯೋಜನೆಯ ಫಲಾನುಭವಿಗಳಲ್ಲಿ ಶೇ. 57ರಷ್ಟು, ಅಂದರೆ 30 ಕೋಟಿ ಮಹಿಳೆಯರಿದ್ದಾರೆ. ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನವರು ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಲ್ಲಿ ನೆಲೆಸಿದವರು. ಯೋಜನೆ ಜಾರಿಗೆ ಬಂದ ಮೊದಲ ಒಂದು ವರ್ಷದಲ್ಲೇ 17.9 ಕೋಟಿ ಹೊಸ ಖಾತೆಗಳನ್ನು ತೆರೆಯಲಾಗಿದ್ದು ಈವರೆಗೆ ಒಟ್ಟು 53.31 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ದೇಶದ ತಳರ್ಸ³ ಹಣಕಾಸು ಚಲಾವಣೆಗೆ ಇದು ಕಾರಣವಾಗಿ ದೇಶದ ಆರ್ಥಿಕ ಪ್ರಗತಿಗೆ ಮಾರ್ಗವಾಯಿತು.
ಮಹಿಳಾ ಸಬಲೀಕರಣ: ಜನಧನ್ ಬ್ಯಾಂಕ್ ಖಾತೆಗಳನ್ನು ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರೇ ಹೊಂದಿರುವುದರಿಂದ ಅವರಲ್ಲಿ ಸಹಜವಾಗಿರುವ ಉಳಿತಾಯದ ಕಲ್ಪನೆಗೆ ಹೆಚ್ಚಿನ ಬಲ ಬಂದಿರುವುದು ನಿರ್ವಿವಾದ. ಇದರಿಂದ ದೇಶದ ಪ್ರತಿ ಮಹಿಳೆಯು ಹಣಕಾಸು ನಿರ್ವಹಣೆಯಲ್ಲಿ ಸ್ವತಂತ್ರವಾಗಿ ವ್ಯವಹರಿಸುವ ಬಲ ಹೊಂದಿದ್ದು ದೇಶದ ಪ್ರಗತಿಯಲ್ಲಿ ತನ್ನದೂ ಪಾತ್ರವಿದೆ ಎಂಬ ಹೆಮ್ಮೆಯ ಭಾವನೆಗೆ ಕಾರಣವೂ ಆಗಿದೆ ಮತ್ತು ಮಹಿಳಾ ಪ್ರಣಿತ ಅಭಿವೃದ್ಧಿಯತ್ತ ಇರುವ ಮಹತ್ವದ ಮೆಟ್ಟಿಲಾಗಿದೆ.
ಜನಧನ್ ಪಾತ್ರ: 2014ರಲ್ಲಿ 25.59 ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ 95.40 ಕೋಟಿಗೆ ಏರಿದೆ. ಸುಮಾರು 30 ಕೋಟಿಯಷ್ಟು ಜನಧನ್ ಮಹಿಳಾ ಖಾತೆದಾರರು (ಇದು ರಷ್ಯಾ ಜನಸಂಖ್ಯೆಯ ಎರಡು ಪಟ್ಟು) ಇಂದು ಸ್ವತಃ ತಾವೇ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಇದರ ಪ್ರಮಾಣ 2018ರಲ್ಲಿ ಶೇ. 53 ಇದ್ದದ್ದು 2019-20ರ ವೇಳೆಗೆ ಶೇ. 79ಕ್ಕೆ ಏರಿತ್ತು. ಇದು ಮಹಿಳೆಯರಿಗೆ ದೊರೆತ ಸಬಲೀಕರಣದ ಮಹತ್ವದ ಭಾಗ. ಒಟ್ಟು ನೀಡಲಾದ 44.4 ಕೋಟಿ ಮುದ್ರಾ ಸಾಲಗಳಲ್ಲಿ 30.6 ಕೋಟಿ ಸಾಲಗಳ ಭಾಗ ಮಹಿಳೆಯರದೇ ಆಗಿದ್ದು ಇದು ಒಟ್ಟು ಮಂಜೂರಾದ ಸಾಲಗಳ ಶೇ. 69ರಷ್ಟಿರುವುದು ಜನಧನ್ ಯೋಜನೆಯ ಧನಾತ್ಮಕ ಪರಿಣಾಮ. ಎಸ್ಬಿಐ ವರದಿ ಪ್ರಕಾರ, ಜನಧನ್ ಯೋಜನೆಯ ಮಹಿಳಾ ಸಬಲೀಕರಣದ ಸಾಮಾಜಿಕ ಹಾಗೂ ನೈತಿಕ ಪರಿಣಾಮವೆಂದರೆ ಅಪರಾಧಗಳ ಗಣನೀಯ ಇಳಿಕೆ; ಆಲ್ಕೋಹಾಲ್- ತಂಬಾಕು ಸೇವನೆ ಇಳಿಕೆ.
ನೇರ ಹಣ ವರ್ಗಾವಣೆ: 2014ರಲ್ಲಿ ಜನಧನ್ ಯೋಜನೆ ಘೊಷಿಸಿದಾಗ ‘ಕೇವಲ ಬ್ಯಾಂಕ್ ಖಾತೆ ತೆರೆಯುವುದರಿಂದ ಏನು ಲಾಭ’ ಎಂದು ಮೂಗು ಮುರಿದವರೇ ಹೆಚ್ಚು. ಇಷ್ಟೊಂದು ಸಂಖ್ಯೆಯ ಶೂನ್ಯ ಬ್ಯಾಲನ್ಸ್ ಅಕೌಂಟ್ಗಳ ನಿರ್ವಹಣಾ ವೆಚ್ಚ ಕೊಡುವವರಾರು ಎಂದೂ ಕೆಲವರು ಅಪಹಾಸ್ಯ ಮಾಡಿದ್ದರು. ಇಂದು ಈ ಖಾತೆಗಳ ಒಟ್ಟು ಠೇವಣಿಯೇ 2.31 ಲಕ್ಷ ಕೋಟಿ ರೂ. ಮೀರಿದ್ದು ಈಗ ಈ ಸಮಸ್ಯೆಯೇ ಇಲ್ಲ. ಆಗ ಈ ಯೋಜನೆಯನ್ನು ಅಪಹಾಸ್ಯ ಮಾಡಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಅಕ್ಕಿ ನೀಡುವ ಬದಲು ಅದರ ದರವನ್ನು ಡಿಬಿಟಿ ಮೂಲಕ ಜನರಿಗೆ ತಲುಪಿಸುತ್ತಿರುವುದು ಯಾವ ಖಾತೆಗಳ ಮೂಲಕ ಎಂಬುದನ್ನು ಮತ್ತೊಮ್ಮೆ ತಿಳಿಯುವುದು ಸೂಕ್ತ. ಈ ಯೋಜನೆ ಮುಂಬರುವ ದಿನಗಳಲ್ಲಿ ದೇಶದ ಸರ್ವತೋಮುಖ ಆರ್ಥಿಕ ಅಭಿವೃದ್ಧಿ, ಬಡತನ ನಿಮೂಲನೆ, ಮಹಿಳಾ ಸಬಲೀಕರಣ, ನೇರ ಹಣ ವರ್ಗಾವಣೆ ಮತ್ತು ಅಂತರ್ಜಾಲ ಆಧಾರಿತ ಹಣಕಾಸು ವ್ಯವಹಾರಗಳ ಸಾಧನೆಗೆ ಯಂತ್ರವಾಗಿ ಪರಿಣಮಿಸಬಲ್ಲದು. ಡಿಜಿಟಲ್ ಪರಿವರ್ತನೆ ಸ್ವೀಕೃತಿಗಷ್ಟೇ ಸೀಮಿತವಾಗಿರದೆ ವಿವಿಧ ಯೋಜನೆಗಳಲ್ಲಿ ಮಧ್ಯವರ್ತಿಗಳ ಶೋಷಣೆಗೂ ಅಂತ್ಯ ಹಾಡಿದೆ. ಜನಧನ್ ಮೂಲಕ, 47 ವರ್ಷಗಳಲ್ಲಿ ಆಗುವುದನ್ನು ಕೇವಲ ಆರು ವರ್ಷಗಳಲ್ಲಿ ಭಾರತ ಸಾಧಿಸಿದೆ. ಇದನ್ನು ವಿಶ್ವಬ್ಯಾಂಕಿನ 2023ರ ಜಿ-20 ವರದಿಯಲ್ಲಿಯೂ ಬಣ್ಣಿಸಲಾಗಿದೆ. ಈ ಡಿಜಿಟಲ್ ಪರಿವರ್ತನೆ ಭಾರತದ 10 ವರ್ಷಗಳ ಅಭೂತಪೂರ್ವ ಆರ್ಥಿಕ ಬೆಳವಣಿಗೆಯ ಹೃದಯವೇ ಆಗಿದೆ ಎಂದು ‘ಆಧಾರ್’ ವ್ಯವಸ್ಥೆಯ ಪ್ರಥಮ ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ಹೇಳಿರುವುದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಜನಧನ್ ಯೋಜನೆಯ ಇನ್ನೊಂದು ವಿಶೇಷ- ಇದು ಜನರ ಹಾಗೂ ಸರ್ಕಾರದ ನಡುವಿನ ಕಂದಕವನ್ನು ಕಡಿಮೆ ಮಾಡಿದ್ದು ಹಾಗೂ ಸಾಮಾನ್ಯ ಜನಕೇಂದ್ರಿತ ಆರ್ಥಿಕ ಮುನ್ನಡೆಗೆ ಆಧಾರಶಿಲೆಯಾಗಿ ಪರಿಣಮಿಸಿದ್ದು. ಸರ್ಕಾರದ ಯಾವುದೇ ಯೋಜನೆಯ ಅನುಷ್ಠಾನವಿರಲಿ, ಪ್ರಧಾನಿ ಕಿಸಾನ್ ಸಮ್ಮಾನ್, ನರೇಗಾದ ಏರಿಕೆಯಾದ ಸಂಭಾವನೆ, ಜೀವವಿಮೆ ಹಾಗೂ ಆರೋಗ್ಯ ವಿಮೆ- ಹೀಗೆ ಹತ್ತು ಹಲವು ಸಾಮಾಜಿಕ ಕಲ್ಯಾಣ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಲಭ್ಯತೆಯನ್ನು ತಳರ್ಸ³ಯಾಗಿ ಜನರಿಗೆ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ತಲುಪಿಸುವಲ್ಲಿ ಜನಧನ್ ಪಾತ್ರ ಅಗಾಧವಾದುದು.
ಯೋಜನೆಗಳ ಅನುಷ್ಠಾನ: ಸರ್ಕಾರದ ನೇರ ಹಣ ವರ್ಗಾವಣೆ ಹಾಗೂ ಇತರ ಆಡಳಿತಾತ್ಮಕ ಸುಧಾರಣೆಗಳು ಸಾರ್ವಜನಿಕ ವಿತರಣಾ ಸೇವಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಪರಿವರ್ತನೆ ತಂದಿವೆ. ಸರ್ಕಾರದ 53 ಇಲಾಖೆಗಳಿಗೆ ಸಂಬಂಧಿಸಿದ ಉಜ್ವಲ ಗ್ಯಾಸ್ ಯೋಜನೆ, ಬೆಳೆವಿಮಾ ಹಣ, ಕಿಸಾನ್ ಸಮ್ಮಾನ್ ಹಣ, ನರೇಗಾ, ವಿವಿಧ ಜೀವವಿಮಾ ಹಣ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗೂ ಇತರ ಹಲವು ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಹಣ ಸೇರಿದಂತೆ ದೇಶವ್ಯಾಪಿ 316 ಯೋಜನೆಗಳ ಲಾಭ ತಲುಪುವಂತೆ ಸರ್ಕಾರಕ್ಕೆ ಆಧಾರವಾಗಿ ನಿಂತ ಜನಧನ್ ಯೋಜನೆಯ ಕ್ರಾಂತಿಕಾರಿ ವ್ಯವಸ್ಥೆಯ ಪಾತ್ರ ಅಷ್ಟಿಷ್ಟಲ್ಲ.
(ಲೇಖಕರು ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು)