ಬಂಗಾಳದಲ್ಲಿ ಈ ವರ್ಷ ಯಾವ ಗಾಳಿ ಬೀಸಬಹುದು?

ಬಂಗಾಳದಲ್ಲಿ ಈ ವರ್ಷ ಯಾವ ಗಾಳಿ ಬೀಸಬಹುದು?
ಬಂಗಾಳದಲ್ಲಿ ಈ ವರ್ಷ ಯಾವ ಗಾಳಿ ಬೀಸಬಹುದು?
Published on
(ಮುಂದುವರಿಯುವುದು)
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಇಂದು ತಾವು ತೆಗೆದುಕೊಳ್ಳುವ ನಿರ್ಣಯಗಳೂ, ರೂಪಿಸಿ ಅನುಷ್ಠಾನಗೊಳಿಸುವ ಕಾರ್ಯಯೋಜನೆಗಳ ಪರಿಣಾಮಗಳನ್ನು ತಾವೇ ಅನುಭವಿಸಬೇಕಾಗುತ್ತದೆ ಎಂಬ ಅರಿವು ನಾಯಕರಿಗಿದ್ದರೆ ಅವರು ಭವಿಷ್ಯದ ಕುರಿತು ಗಂಭೀರವಾಗಿ ಆಲೋಚಿಸಿ ನಿರ್ಣಯ ತೆಗೆದುಕೊಳ್ಳುತ್ತಾರೆ. ನನ್ನದು ಇನ್ನೆಷ್ಟು ದಿನ, ನಾನಿಲ್ಲದ ದೇಶ ಏನಾದರೇನು ಎಂಬ ಮನೋಭಾವ ಹೊಂದಿದ ಹಿರಿಯರ ಕೈಯಲ್ಲಿ ದೇಶ (ಅಥವಾ ರಾಜ್ಯ) ಇದ್ದರೆ ಬಹುತೇಕ ಸಂದರ್ಭಗಳಲ್ಲಿ ಒಳ್ಳೆಯದೇನೂ ಆಗಿರುವುದಿಲ್ಲ. ಇದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ.
ನಬಿನ್ ಹೆಗಲ ಮೇಲಿರುವ ಜಬಾಬ್ದಾರಿ ಸಣ್ಣದೇನಲ್ಲ. ಬಿಜೆಪಿಗೆ ಕಬ್ಬಿಣದ ಕಡಲೆಯಾಗಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಬಿಜೆಪಿಗೆ ಸುಪರಿಚಿತ ಅಖಾಡಗಳಾಗಿರುವ ಮಹಾರಾಷ್ಟ್ರ ಅಥವಾ ಹರಿಯಾಣದ ಚುನಾವಣೆಗೆ ಇವುಗಳನ್ನು ಹೋಲಿಸಲಾಗುವುದಿಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಆರೆಸ್ಸೆಸ್ ಕುರಿತು ಆಡಿದ ಅನಪೇಕ್ಷಣೀಯ ಮಾತುಗಳು ತಂದಿಟ್ಟ ನಕಾರಾತ್ಮಕ ಪರಿಣಾಮಗಳನ್ನು ನಿತಿನ್ ನೆನಪಿನಲ್ಲಿಟ್ಟುಕೊಂಡಿರುತ್ತಾರೆ ಎಂದು ಆಶಿಸಲು ಅವಕಾಶವಿದೆ. ಈ ಪೀಠಿಕಾಪದಗಳೊಂದಿಗೆ ಪಶ್ಚಿಮ ಬಂಗಾಳ, ತಮಿಳುನಾಡು ಚುನಾವಣೆಗಳ ಕುರಿತಾಗಿ ಬಿಜೆಪಿಯ ರಣನೀತಿ ಏನಾಗಿರಬೇಕು ಎಂದು ಲೆಕ್ಕಾಚಾರ ಹಾಕೋಣ.
ಹಿಮಾಲಯದ ತಪ್ಪಲಿನಿಂದ ಸಮುದ್ರದವರೆಗೆ ಹರಡಿರುವ ಪಶ್ಚಿಮ ಬಂಗಾಳ ಭೌಗೋಳಿಕವಾಗಿ ದೇಶದ ಅತಿ ದೊಡ್ಡ ರಾಜ್ಯಗಳಲ್ಲೊಂದಾಗಿರದಿದ್ದರೂ ಜನಸಂಖ್ಯೆ ಮಾನದಂಡ ತೆಗೆದುಕೊಂಡರೆ ಆ ರಾಜ್ಯಕ್ಕೆ ಆ ಸ್ಥಾನ ಸಿಕ್ಕೇಸಿಗುತ್ತದೆ. ಹಿಂದೊಮ್ಮೆ ಅದು ಎಲ್ಲ ದೃಷ್ಟಿಗಳಿಂದಲೂ ದೇಶದ ಬೃಹತ್ ಘಟಕಗಳಲ್ಲೊಂದಾಗಿತ್ತು. ಭೌಗೋಳಿಕತೆ ಹಾಗೂ ಜನಸಂಖ್ಯೆ ಜತೆಗೆ ಧಾರ್ವಿುಕ ಹಾಗೂ ಸಾಂಸ್ಕೃತಿಕ ವೈವಿಧ್ಯಗಳೂ ಬಂಗಾಳಕ್ಕೆ ಭಾರತದಲ್ಲಿ ಅಗ್ರಮಾನ್ಯ, ವಿಶಿಷ್ಟ, ಸಂಕೀರ್ಣ ಸ್ಥಾನವನ್ನು ನೀಡಿದ್ದವು. ಅಂತಿಮವಾಗಿ ಅದರ ಧಾರ್ವಿುಕ ವೈವಿಧ್ಯವೇ ಅದಕ್ಕೆ ಮುಳುವಾಯಿತು.
ಧರ್ಮದ ಆಧಾರದ ಮೇಲೆ ಭಾರತವನ್ನು ಒಡೆದು ಪಾಕಿಸ್ತಾನವನ್ನು ಸೃಷ್ಟಿಸುವ ಬೇಡಿಕೆ ತೀಕ್ಷ ್ಣವಾದದ್ದೇ ಬಂಗಾಳದಲ್ಲಿ. ಅದಕ್ಕೆ ಬಲಿಯಾಗಿ ಬಂಗಾಳ ಎರಡಾಗುವ ದಿನ ಬಂದಾಗ ಅಲ್ಪಕಾಲಕ್ಕಾದರೂ ಧಾರ್ವಿುಕ ವೈರುಧ್ಯವನ್ನು ಬದಿಗೊತ್ತಿ ಬಂಗಾಲಿ ಅಸ್ಮಿತೆಯನ್ನು ಗುರುತಿಸಿ ಗೌರವಿಸುವ ಚಿಂತನೆ ನಡೆದದ್ದುಂಟು. ಎಚ್.ಎಸ್. ಸುಹ್ರವರ್ದಿ, ಶ್ಯಾಮಾಪ್ರಸಾದ್ ಮುಖರ್ಜಿ ಸೇರಿದಂತೆ ಹಲವು ಬಂಗಾಳಿ ನಾಯಕರು ಭಾರತ-ಪಾಕಿಸ್ತಾನಗಳೊಂದಿಗೆ ಬಂಗಾಳವೂ ಒಂದು ಸ್ವತಂತ್ರ ರಾಷ್ಟ್ರವಾಗುವ ಬಗ್ಗೆ ವಿಚಾರ ಮಾಡಿದ್ದುಂಟು. ಆದರೆ ಆ ಆಲೋಚನೆ 36 ತಾಸುಗಳಲ್ಲಿ ಮೂಲೆಗುಂಪಾಯಿತು. ಅದಕ್ಕೆ ಕಾರಣಗಳಿದ್ದವು.
ಸುಹ್ರವರ್ದಿ ನೇತೃತ್ವದಲ್ಲಿ ಮುಸ್ಲಿಂ ಲೀಗ್ 1946ರ ಆಗಸ್ಟ್ 16ರಂದು ಕಲ್ಕತ್ತಾದಲ್ಲಿ ನಡೆಸಿದ ಹಿಂದೂಗಳ ಮಾರಣಹೋಮ, ‘ದ ಗ್ರೇಟ್ ಕಲ್ಕತ್ತಾ ಕಿಲಿಂಗ್ಸ್’ ಎಂದು ಇತಿಹಾಸದಲ್ಲಿ ಕುಖ್ಯಾತವಾದ ಆ ದುರಂತ ಶ್ಯಾಮಾಪ್ರಸಾದ್ ಮುಖರ್ಜಿ ಮತ್ತಿತರ ಹಿಂದೂಗಳನ್ನು ಬಂಗಾಲಿ ಅಸ್ಮಿತೆಗಾಗಿ ಹಿಂದೂಗಳ ಭವಿಷ್ಯವನ್ನು ಮಣ್ಣಾಗಿಸುವ ಚಿಂತನೆಯಿಂದ ಶಾಶ್ವತವಾಗಿ ದೂರ ಒಯ್ದಿತು. ದೇಶ ವಿಭಜನೆಯೊಂದಿಗೆ, ಬಂಗಾಳದ ವಿಭಜನೆಯನ್ನೂ ಅವರು ನೋವಿನಿಂದ ಒಪ್ಪಿಕೊಂಡರು. ತಮ್ಮ ತೀರ್ಮಾನ ಅದೆಷ್ಟು ಒಳ್ಳೆಯದಾಯಿತು ಎನ್ನುವುದನ್ನು ದೇಶ ವಿಭಜನೆಯಾದ ಮರುಗಳಿಗೆಯೇ ಎರಗಿದ ಮತೀಯ ಹಿಂಸಾಚಾರ ಅವರಿಗೆ ಮನವರಿಕೆ ಮಾಡಿಕೊಟ್ಟಿತು. ಆ ದುರಂತದ ನೆನಪು ಇಂದಿನ ಬಿಜೆಪಿಯ ಮೂಲರೂಪವಾದ ಜನಸಂಘವನ್ನು ಸ್ಥಾಪಿಸುವ ಅವರ ನಿರ್ಧಾರ ಹಾಗೂ ಕಾಶ್ಮೀರವನ್ನು ಪೂರ್ಣವಾಗಿ ಭಾರತದಲ್ಲಿ ಒಗ್ಗೂಡಿಸುವ ಅವರ ಚಟುವಟಿಕೆಗಳ ಹಿಂದೆ ಪ್ರಮುಖವಾಗಿತ್ತು.
ವಿಭಜನೆ ಪರಿಣಾಮವಾಗಿ ಫಲವತ್ತಾದ ನೆಲದ ಮುಕ್ಕಾಲು ಭಾಗ ಕಳೆದುಕೊಂಡರೂ ದೇಶದ ಆರ್ಥಿಕ ಬದುಕಿನಲ್ಲಿ ಪಶ್ಚಿಮ ಬಂಗಾಳ ಹಿರಿದಾದ ಸ್ಥಾನವನ್ನು ಒಂದೆರಡು ದಶಕಗಳವರೆಗೆ ಉಳಿಸಿಕೊಂಡೇ ಇತ್ತು. ಅದಕ್ಕೆ ಕಾರಣ ಪ್ರಾರಂಭಿಕ ರಾಜ್ಯ ಸರ್ಕಾರಗಳು ಹಮ್ಮಿಕೊಂಡ ಅಭಿವೃದ್ಧಿ ಯೋಜನೆಗಳು. 1950ರ ದಶಕದಲ್ಲಿ ದೇಶದ ನಿವ್ವಳ ರಾಷ್ಟೀಯ ಉತ್ಪಾದನೆಗೆ (ಜಿಡಿಪಿ) ಪಶ್ಚಿಮ ಬಂಗಾಳದ ಕೊಡುಗೆ 10.5% ಇತ್ತು. ಅಂದರೆ ವಿಭಜನೆಯ ಹೊಡೆತವನ್ನೂ ತಾಳಿಕೊಂಡು ಆ ರಾಜ್ಯ ಪ್ರಗತಿಪಥದಲ್ಲಿ ಹೇಗೆ ಮುಂದುವರಿದಿತ್ತು ಎನ್ನುವುದನ್ನು ಸೂಚಿಸುತ್ತದೆ.
ಆದರೆ ನಂತರದ ದಿನಗಳಲ್ಲಿ ರಾಜ್ಯ ಸರ್ಕಾರಗಳಲ್ಲಿ ಕಂಡುಬಂದ ಭ್ರಷ್ಟಾಚಾರ, ತೀವ್ರಗೊಳ್ಳತೊಡಗಿದ ಸಾಮಾಜಿಕ ಅಸಮಾನತೆ, ಭುಗಿಲೆದ್ದ ನಕ್ಸಲ್​ವಾದ ರಾಜ್ಯವನ್ನು ಅಧೋಗತಿಯತ್ತ ದೂಡತೊಡಗಿತ್ತು. ಅವುಗಳೊಂದಿಗೆ ತುರ್ತಪರಿಸ್ಥಿತಿಯ ಅವಾಂತರಗಳು, ಅವುಗಳಲ್ಲಿ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರಾಯ್ ಅವರ ತಥಾಕಥಿತ ಪಾತ್ರ ಕಾಂಗ್ರೆಸ್​ನ ವಿರುದ್ಧ ಜನರನ್ನು ಕೆರಳಿಸಿತು. ಅದೆಲ್ಲದರ ಲಾಭ ಪಡೆದುಕೊಂಡದ್ದು ಸಿಪಿಐ (ಎಂ), 1977ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ. ಆನಂತರ ರಾಜ್ಯದ ಆರ್ಥಿಕ ಪ್ರಗತಿ ಋಣಾತ್ಮಕತೆಗೆ ತಿರುಗಿದ್ದು ಇನ್ನೂ ಸರಿಹೋಗಿಲ್ಲ.
ಹಾಗೆಯೇ ದೇಶದ ಸಾಂಸ್ಕೃತಿಕ ಬದುಕಿನಲ್ಲೂ ರಾಜ್ಯ ತನ್ನ ಗರಿಮೆಯ ಸ್ಥಾನದಿಂದ ಕೆಳಗಿಳಿಯಿತು. ಕಮ್ಯೂನಿಸ್ಟ್ ಆಳ್ವಿಕೆಯಲ್ಲಿ ಸಾಂಸ್ಕೃತಿಕ ಚಿಂತನೆ, ಚಟುವಟಿಕೆಗಳು ಸರ್ಕಾರದ ಯೋಜನೆಗಳಲ್ಲಿ ಮಾನ್ಯತೆ ಕಳೆದುಕೊಂಡವು. ಬದಲಿಗೆ ಮತ್ತೆಮತ್ತೆ ಚುನಾವಣೆಗಳನ್ನು ಗೆಲ್ಲಲು ಸಿಪಿಐ (ಎಂ) ಅನುಸರಿಸತೊಡಗಿದ ಮಾರ್ಗಗಳೂ ಹಿಂಸಾಚಾರ ಮತ್ತು ಪುಕ್ಕಟೆ ವಿತರಣೆ. ಇದು 1980ರ ದಶಕದಲ್ಲೇ ದೊಡ್ಡದಾಗಿ ಕಾಣಿಸಿಕೊಂಡಿತು. ಕಾಂಗ್ರೆಸ್ ಮುಂದಿಟ್ಟ ಆರ್ಥಿಕ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಜನತೆ ಜ್ಯೋತಿ ಬಸು ಸರ್ಕಾರದ ಪುಕ್ಕಟೆ ಕೊಡುಗೆಗಳಿಗೆ ಮನಸೋತು, ಹಿಂಸಾಚಾರಕ್ಕೆ ಬೆದರಿ ಕಮ್ಯೂನಿಸ್ಟರನ್ನು ಮತ್ತೆಮತ್ತೆ ಗೆಲ್ಲಿಸಿದರು. ಕಮ್ಯೂನಿಸ್ಟರ ‘ಕೆಂಪುಕೋಟೆ’ಯನ್ನು ಕೊನೆಗೂ ಮುರಿದದ್ದು ಮಮತಾ ಬ್ಯಾನರ್ಜಿ. ಅದಕ್ಕಾಗಿ ಅವರು ಅನುಸರಿಸಿದ್ದು ಅದೇ ಹಿಂಸಾಚಾರ ಮತ್ತು ಅಭಿವೃದ್ಧಿ ನಿರಾಕರಣೆ. ಅದು ಮೊದಲಿಗೆ ದೊಡ್ಡದಾಗಿ ವ್ಯಕ್ತವಾದದ್ದು 2007ರಲ್ಲಿ ಸಿಂಗೂರ್​ನಲ್ಲಿ.
ದಶಕಗಳ ನಕಾರಾತ್ಮಕ ರಾಜಕಾರಣದಿಂದ ಎಚ್ಚೆತ್ತು, ರಾಜ್ಯದ ಆರ್ಥಿಕ ದುರ್ಗತಿಯನ್ನು ನಿವಾರಿಸುವ ಕಾರ್ಯಯೋಜನೆಯ ಅರೆಮನಸ್ಸಿನ ಪ್ರಯತ್ನವಾಗಿ ಬುದ್ಧದೇವ್ ಭಟ್ಟಾಚಾರ್ಯರ ಕಮ್ಯೂನಿಸ್ಟ್ ಸರ್ಕಾರ ಹಮ್ಮಿಕೊಂಡ ಟಾಟಾ ನ್ಯಾನೋ ಕಾರು ಕಾರ್ಖಾನೆಯ ಯೋಜನೆಯನ್ನು ವಿರೋಧಿಸಿದ ಮಮತಾ ಬ್ಯಾನರ್ಜಿ ತನ್ನ ಹೋರಾಟ ರೈತರ ಜಮೀನು ಅವರ ಕೈತಪ್ಪಿಹೋಗುವುದನ್ನು ತಡೆಯಲು ಎಂದರು. ಅವರ ವಾದವನ್ನು ಅಲ್ಲಿನ ಜನ ಒಪ್ಪಿಕೊಂಡು ಬೆಂಬಲಿಸಿದ್ದು ಅವರು ರೈತರ ಪರ ಎಂದೇನೂ ಅಲ್ಲ, ಬದಲಿಗೆ ಅಭಿವೃದ್ಧಿ ಯೋಜನೆಗಳು ಬಂಗಾಳಿ ಮನಸ್ಥಿತಿಯಿಂದ ಅದೆಷ್ಟು ದೂರ ಸರಿದುಹೋಗಿದ್ದವು ಎನ್ನುವುದರ ದಾರುಣ ಉದಾಹರಣೆ ಅದಾಗಿತ್ತು.
ಸಿಂಗೂರ್​ನಲ್ಲಿ ನೆಲೆ ಸಿಗದ ಟಾಟಾ ಸಂಸ್ಥೆಗೆ ಸಕಲ ಸೌಲಭ್ಯಗಳನ್ನು ಚಿನ್ನದ ತಟ್ಟೆಯಲ್ಲಿಟ್ಟು ಆಹ್ವಾನಿಸಿದ್ದು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ಗುಜರಾತ್ ಮತ್ತು ಪಶ್ಚಿಮ ಬಂಗಾಳ ಯಾವ ವಿಭಿನ್ನ ಹಾದಿಗಳನ್ನು ಆಯ್ಕೆ ಮಾಡಿಕೊಂಡಿದ್ದವು ಎನ್ನುವುದನ್ನು 19 ವರ್ಷಗಳ ಹಿಂದಿನ ಸಿಂಗೂರ್ ಪ್ರಕರಣ ಮಾರ್ವಿುಕವಾಗಿ ಹೇಳಿತು. ಅದಾದ 4 ವರ್ಷಕ್ಕೆ ಮಮತಾ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು, 7 ವರ್ಷಗಳಲ್ಲಿ ಮೋದಿ ಪ್ರಧಾನಿಯಾದರು. ಇಂದು ಅವರಿಬ್ಬರೂ ಪಶ್ಚಿಮ ಬಂಗಾಳದಲ್ಲಿ ಎದುರುಬದುರಾಗಿ ನಿಂತಿದ್ದಾರೆ. ಮಮತಾ ಅಲ್ಲಿನ ಅನಭಿಷಿಕ್ತ ಸಾಮ್ರಾಜ್ಞಿ, ಮೋದಿ ಅಲ್ಲಿಲ್ಲದ ಹೊಸ ನಾಯಕತ್ವವನ್ನು ಸೃಷ್ಟಿಸಲು ಹೆಣಗುತ್ತಿದ್ದಾರೆ. ಮಮತಾರದು ಜನಕಲ್ಯಾಣವನ್ನು ಪರಿಗಣಿಸದ ಸ್ವಾರ್ಥ ಅಧಿಕಾರಲಾಲಸಿ ರಾಜಕಾರಣ. ಮೋದಿಯವರದು ಜನಪರ ಕಾಳಜಿ. ಸಾಮಾನ್ಯ ಸಂದರ್ಭದಲ್ಲಿ ಬಿಜೆಪಿ ಜನರ ಪ್ರಥಮ ಆಯ್ಕೆಯಾಗಬಹುದು. ಆದರೆ ಪಶ್ಚಿಮ ಬಂಗಾಳ ಸಹಜ ರಾಜ್ಯವಲ್ಲ. ಕಮೂನಿಸ್ಟ್ ಕಾರ್ಯಕರ್ತರನ್ನು ತಮ್ಮ ತೃಣಮೂಲ ಕಾಂಗ್ರೆಸ್​ನಲ್ಲಿ ಒಗ್ಗೂಡಿಸಿಕೊಂಡೇ ಮಮತಾ ‘ಕೆಂಪುಕೋಟೆ’ಯನ್ನು ಶಿಥಿಲಗೊಳಿಸಿದ್ದು. ಅಷ್ಟೇ ಆಗಿದ್ದರೆ ಸಹನೀಯವಾಗಬಹುದಿತ್ತೇನೋ. ಕಮ್ಯೂನಿಸ್ಟರೊಂದಿಗೆ ಅವರ ಹಿಂಸಾಪ್ರಧಾನ ಋಣಾತ್ಮಕ ರಾಜಕಾರಣವನ್ನೂ ಮಮತಾ ತಮ್ಮ ಟಿಎಂಸಿಯ ಭಾಗವಾಗಿಸಿಕೊಂಡರು. ಅಷ್ಟಕ್ಕೆ ನಿಲ್ಲದೇ ಹಿಂಸಾಚಾರ ಹಾಗೂ ಬೀದಿಕಾಳಗಗಳನ್ನು ಪಕ್ಷದ ಚುನಾವಣಾ ವಿಜಯಗಳ ಮೂಲಮಂತ್ರವಾಗಿಸಿದರು.
ಮಮತಾರ ಪೂರ್ಣ ಬೆಂಬಲ ಪಡೆದ ಟಿಎಂಸಿ ಕಾರ್ಯಕರ್ತರು ರಾಜಕೀಯ ವಿರೋಧಿಗಳನ್ನಷ್ಟೇ ತಮ್ಮ ಹಿಂಸೆಗೆ ಗುರಿಯಾಗಿಸಿಕೊಂಡಿಲ್ಲ. ಕೇಂದ್ರೀಯ ಸಂಸ್ಥೆಗಳಾದ ಎನ್​ಐಸಿ, ಇಡಿ, ಸಿಬಿಐ ಅಧಿಕಾರಿಗಳಿರಲಿ, ಬಿಎಸ್​ಎಫ್ ಯೋಧರೂ ಟಿಎಂಸಿ ಗೂಂಡಾಗಳ ದಾಳಿಗಳಿಗೆ ಸಿಕ್ಕಿದ್ದಾರೆ. ಇನ್ನು ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳ ನಂತರ ಬಿಜೆಪಿ ಕಾರ್ಯಕರ್ತರ ಮತ್ತು ಬೆಂಬಲಿಗರ ಮೇಲಿನ ಹಿಂಸಾಚಾರ ಸ್ವತಂತ್ರ ಭಾರತದ ಇತಿಹಾಸದ ಕಪ್ಪುಪುಟಗಳಾಗಿವೆ. ಇಂದು ರಾಜ್ಯ ಬಿಜೆಪಿ ಮತ್ತು ಅದರ ಪರವಾಗಿ ನಿಂತ ಪ್ರಧಾನಿ ಮೋದಿ ಎದುರಿಸಬೇಕಾಗಿರುವುದು ಈ ವಾಸ್ತವವನ್ನು.
‘ಸುಸಂಸ್ಕೃತ ಬಂಗಾಳಿ ಗೃಹಿಣಿಯಷ್ಟು ಗೌರವಾರ್ಹ ಸ್ತ್ರೀ ಬೇರೆಲ್ಲೂ ಕಾಣಸಿಗಳು’ ಎಂದು ಸುಪ್ರಸಿದ್ಧ ಭಾರತಶಾಸ್ತ್ರಜ್ಞರಾದ ಪರ್ಸಿಔಲ್ ಸ್ಪಿಯರ್ ಬರೆಯುತ್ತಾರೆ. ಇಂದು ಟಿಎಂಸಿ ನಾಯಕಿ ಮತ್ತು ಮಹುವಾ ಮೊಯಿತ್ರಾ ಸೇರಿದಂತೆ ಪಕ್ಷದ ಮಹಿಳಾ ನಾಯಕಗಣವನ್ನು ನೋಡಿದರೆ ವಿದ್ವಾಂಸ ಸ್ಪಿಯರ್ ಕಂಡ ಲೋಕ ಬೇರೆಯದು ಅನಿಸದಿರಲಾರದು. ಇವರ ಮಾತುಗಳು, ಕೃತ್ಯಗಳು ಹಾಗೂ ರಾಜಕೀಯ ಸ್ಥಾನಗಳಿಗಾಗಿ ಅನುಸರಿಸುವ ತಂತ್ರಗಳು, ಅದೆಲ್ಲದರಿಂದ ಸೃಷ್ಟಿಯಾಗಿರುವ ರಾಜಕೀಯ, ಸಾಮಾಜಿಕ, ಹಾಗೂ ಧಾರ್ವಿುಕ ವಿಷವರ್ತಲಗಳನ್ನು ದಾಟುವ ರಣನೀತಿಗಳು ಬಿಜೆಪಿಯಲ್ಲಿವೆಯೇ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net