ಮುಳುಗುತಿದೆ ಜಕಾರ್ತಾ: ಉದಯಿಸಲಿದೆ ನುಸಂತರಾ; ಕೈತಪ್ಪಲಿದೆ ರಾಜಧಾನಿ ಪಟ್ಟ

Jakartha
Published on
ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ವಿಶ್ವದ ಮಹಾನಗರಗಳಲ್ಲಿ ಒಂದು. ಇಂಡೋನೇಷ್ಯಾದ ಸಂಸ್ಕೃತಿ, ಪಾಕ ವೈವಿಧ್ಯ, ಆಕರ್ಷಕ ರಾತ್ರಿಜೀವನ, ಶಾಪಿಂಗ್ ಮುಂತಾದ ಸಂಗತಿಗಳಿಂದಾಗಿ ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುವ ಈ ನಗರಿ ಇನ್ನು ಕೆಲ ದಿನಗಳಲ್ಲಿ ದೇಶದ ರಾಜಧಾನಿ ಪಟ್ಟವನ್ನು ಕಳೆದುಕೊಳ್ಳಲಿದೆ. ರಾಜಧಾನಿ ಎಂಬ ಕಿರೀಟ ಧಾರಣೆ ಮಾಡಲು ನೂತನ ನಗರಿ ನಿರ್ಮಾಣಗೊಳ್ಳುತ್ತಿದೆ. ಹಾಗಾದರೆ ಜಕಾರ್ತಾಗೆ ಆಗಿದ್ದಾದರೂ ಏನು?

ಜನ ಮತ್ತು ವಾಹನ ದಟ್ಟಣೆಯಿಂದ ಕೂಡಿದೆ; ತೀವ್ರವಾಗಿ ಕಲುಷಿತಗೊಂಡಿದೆ; ಭೂಕಂಪಕ್ಕೆ ತುತ್ತಾಗುವ ಸಾಧ್ಯತೆ ಇದೆ.... ಅಲ್ಲದೆ, ಜಾವಾ ಸಮುದ್ರದಲ್ಲಿ ವೇಗವಾಗಿ ಮುಳುಗುತ್ತಿದೆ... ಈ ಎಲ್ಲ ನಕಾರಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ರಾಜಧಾನಿಯನ್ನು ಜಕಾರ್ತಾದಿಂದ ಬೊರ್ನಿಯೊ ದ್ವೀಪಕ್ಕೆ ಸ್ಥಳಾಂತರಿಸಲು ಇಂಡೋನೇಷ್ಯಾ ಸರ್ಕಾರ ನಿರ್ಧಾರ ಕೈಗೊಂಡಿದೆ. ನೂತನ ರಾಜಧಾನಿ ನಿರ್ವಣಕ್ಕೆ ತ್ವರಿತಗತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಹೊಸ ರಾಜಧಾನಿ ಸುಸ್ಥಿರ ಅರಣ್ಯ ನಗರವಾಗಲಿದೆ. ಪರಿಸರಪೂರಕ ಅಭಿವೃದ್ಧಿ ಕೈಗೊಳ್ಳಲು ಇಲ್ಲಿ ಅವಕಾಶವಿದೆ. 2045ರ ವೇಳೆಗೆ ಇಂಗಾಲದ ಹೊರಸೂಸುವಿಕೆ ನಿಯಂತ್ರಿಸಿ ಶೂನ್ಯ ಮಾಲಿನ್ಯ ಸಾಧಿಸುವ ಗುರಿ ತಲುಪಲು ಇಲ್ಲಿ ಸಾಧ್ಯವಾಗಲಿದೆ ಎಂದು ಎಂದು ಇಂಡೋನೇಷ್ಯಾ ಅಧಿಕಾರಿಗಳು ಹೇಳುತ್ತಾರೆ. ಆದರೆ, ಈ ದ್ವೀಪದಲ್ಲಿ ನೂತನ ರಾಜಧಾನಿ ನಿರ್ವಣದಿಂದ ಅಪಾರ ಪ್ರಮಾಣದಲ್ಲಿ ಅರಣ್ಯನಾಶ ಉಂಟಾಗುತ್ತದೆ. ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳ ಆವಾಸಸ್ಥಾನ ನಾಶವಾಗುವ ಭೀತಿ ತಲೆದೋರುತ್ತದೆ. ಅಲ್ಲದೆ, ಸ್ಥಳೀಯ ಸಮುದಾಯಗಳ ವಸತಿಗಳಿಗೂ ಅಪಾಯವನ್ನುಂಟು ಮಾಡುತ್ತದೆ ಎಂದು ಪರಿಸರವಾದಿಗಳು ತಕರಾರು ಎತ್ತಿದ್ದರು. ಆದರೆ ಸರ್ಕಾರ ಇದನ್ನು ಕಿವಿಗೆ ಹಾಕಿಕೊಂಡಿಲ್ಲ. ನೂತನ ರಾಜಧಾನಿಯತ್ತ ಮುಂದಡಿ ಇಟ್ಟಿದೆ.

ಜಕಾರ್ತಾ ಮಹಾನಗರದ ಗಾಳಿ ಮತ್ತು ಅಂತರ್ಜಲ ಕಲುಷಿತಗೊಂಡಿದೆ. ಇದು ಮೇಲಿಂದ ಮೇಲೆ ಪ್ರವಾಹಕ್ಕೆ ಒಳಗಾಗುತ್ತಿದೆ. ಇಲ್ಲಿನ ಬೀದಿಗಳು ಜಲಾವೃತಗೊಳ್ಳುತ್ತಿವೆ. ದಟ್ಟಣೆಯ ಕಾರಣದಿಂದಾಗಿ ಆರ್ಥಿಕತೆಗೆ ವಾರ್ಷಿಕವಾಗಿ 4.5 ಶತಕೋಟಿ ಡಾಲರ್ (37 ಸಾವಿರ ಕೋಟಿ ರೂಪಾಯಿ) ನಷ್ಟ ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೊ ಅವರು ಜಕಾರ್ತಾವನ್ನು ಬಾಧಿಸುತ್ತಿರುವ ಈ ಸಮಸ್ಯೆಗಳಿಗೆ ಮುಕ್ತಿ ಹಾಡುವ ಉದ್ದೇಶದೊಂದಿಗೆ ಹೊಸ ರಾಜಧಾನಿಯ ನಿರ್ವಣದ ಯೋಜನೆ ರೂಪಿಸಿದ್ದಾರೆ. ಇದರಿಂದ ಜಕಾರ್ತಾದ ಜನಸಂಖ್ಯೆ ಹಾಗೂ ಒತ್ತಡ ಕಡಿಮೆಯಾಗಲಿದೆ ಹಾಗೂ ಸುಸ್ಥಿರ ನಗರದೊಂದಿಗೆ ದೇಶಕ್ಕೆ ಹೊಸ ರಾಜಧಾನಿಯೊಂದು ದೊರೆಯುತ್ತದೆ ಎಂದು ಲೆಕ್ಕ ಹಾಕಲಾಗಿದೆ.

ಸಮುದ್ರಪಾಲು

ಪ್ರಸ್ತುತ ರಾಜಧಾನಿ ಜಕಾರ್ತಾ ಅಂದಾಜು 1 ಕೋಟಿ ಜನರಿಗೆ ನೆಲೆ ಒದಗಿಸಿದೆ. ಸುತ್ತಮುತ್ತಲ ಪ್ರದೇಶವನ್ನೂ ಒಳಗೊಂಡ ಬೃಹತ್ ಮಹಾನಗರವನ್ನು ಪರಿಗಣಿಸಿದರೆ ಈ ಜನಸಂಖ್ಯೆ 3 ಪಟ್ಟು ಆಗುತ್ತದೆ. ಅಂದರೆ, ಅಂದಾಜು 3 ಕೋಟಿ ಜನರ ವಾಸಸ್ಥಳ ಇದಾಗಿದೆ. ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಮುಳುಗುತ್ತಿರುವ ನಗರ ಎಂದು ಜಕಾರ್ತಾವನ್ನು ಪರಿಗಣಿಸಲಾಗಿದೆ. ಈ ಮಹಾನಗರದ ಮೂರನೇ ಒಂದು ಭಾಗವು, ಅಂದರೆ ಶೇ. 33ರಷ್ಟು ಪ್ರದೇಶವು 2050ರ ವೇಳೆಗೆ ಮುಳುಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅಂತರ್ಜಲವನ್ನು ಅನಿಯಂತ್ರಿತವಾಗಿ ವ್ಯಾಪಕ ಪ್ರಮಾಣದಲ್ಲಿ ಹೊರತೆಗೆದಿರುವುದು. ಅಲ್ಲದೆ, ಹವಾಮಾನ ಬದಲಾವಣೆಯಿಂದಾಗಿ ಜಾವಾ ಸಮುದ್ರದ ಉಬ್ಬರ ಹೆಚ್ಚಾಗಿ ಭೂಪ್ರದೇಶವನ್ನು ಕಡಲು ಆಪೋಶನ ತೆಗೆದುಕೊಳ್ಳುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ.

ಭೀತಿಯಲ್ಲಿವೆ ಹಲವು ಮಹಾನಗರಗಳು

ಜಾಗತಿಕ ತಾಪಮಾನ ಹೆಚ್ಚಳ ಮತ್ತು ಸಮುದ್ರ ಮಟ್ಟ ಏರಿಕೆಯ ಕಾರಣದಿಂದ ಜಗತ್ತಿನಾದ್ಯಂತ ಹಲವು ಪ್ರಮುಖ ನಗರಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ. ಬಾಂಗ್ಲಾದೇಶದ ಚಿತ್ತಗಾಂಗ್, ಥೈಲ್ಯಾಂಡ್​ನ ಬ್ಯಾಂಕಾಕ್, ನೆದರಲೆಂಡ್​ನ ಆಮಸ್ಟರ್​ಡ್ಯಾಂ, ಅಮೆರಿಕದ ನ್ಯೂ ಒರ್ಲಿಯಾನ್ಸ್, ಫಿಲಿಪ್ಪಿನ್ಸ್​ನ ಮನಿಲಾ, ಬ್ರಿಟನ್​ನ ಲಂಡನ್ ಮತ್ತು ಕಾರ್ಡಿಫ್, ಚೀನಾದ ಶೆನ್​ಜೆನ್, ವಿಯೆಟ್ನಾಂನ ಹೊ ಚಿನ್ ಮಿನ್ ಸಿಟಿ, ಜಪಾನ್​ನ ಟೊಕಿಯೊ ಮುಂತಾದ ಮಹಾನಗರಗಳು ಈ ಪಟ್ಟಿಯಲ್ಲಿವೆ. ಭಾರತದಲ್ಲಿ ಕೂಡ ಮುಂಬೈ, ಮಂಗಳೂರು, ಕೊಚ್ಚಿ. ಚೆನ್ನೈ, ಕೊಲ್ಕತಾ, ತಿರುವನಂತಪುರಂ, ತೂತುಕುಡಿ, ಖಿದಿರಪುರ್, ಪರಾದೀಪ್, ವಿಶಾಖಪಟ್ಟಣ, ಮರ್ಮಗೋವಾ, ಮುಂತಾದ ಕರಾವಳಿ ನಗರಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ.

ಸ್ಥಳೀಯರಿಗೆ ತೊಂದರೆ

ನೂತನ ರಾಜಧಾನಿ ಪ್ರದೇಶದಲ್ಲಿ ಬಾಲಿಕ್ ಮೂಲ ನಿವಾಸಿಗಳಿದ್ದಾರೆ. ನೂರಕ್ಕೂ ಅಧಿಕ ಬಾಲಿಕ್ ಜನರಿರುವ ಐದು ಗ್ರಾಮಗಳನ್ನು ನಿರ್ಮಾಣ ಕಾರ್ಯಗಳ ಹಿನ್ನೆಲೆಯಲ್ಲಿ ಈಗ ಸ್ಥಳಾಂತರಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿರ್ಮಾಣ ಪ್ರದೇಶ ವ್ಯಾಪ್ತಿ ಹೆಚ್ಚಿದಂತೆ ಇನ್ನಷ್ಟು ಗ್ರಾಮಗಳು ಸ್ಥಳಾಂತರಗೊಳ್ಳುವ ನಿರೀಕ್ಷೆಯಿದೆ. ಹೊಸ ರಾಜಧಾನಿಯು ಸ್ಥಳೀಯ ಸಮುದಾಯದ ಮುಖಂಡರಿಂದ ಬೆಂಬಲ ಪಡೆದಿದ್ದು, ಈ ಜನರಿಗೆ ಪರಿಹಾರ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಸರ್ಕಾರ ನೀಡುವ ಪರಿಹಾರ ಹಣವನ್ನು ಸ್ಥಳಾಂತರಗೊಳ್ಳುವ ಜನರು ತೆಗೆದುಕೊಳ್ಳುವುದು ಅನಿವಾರ್ಯ ಎಂಬಂತಾಗಿದ್ದು, ಈ ಪರಿಹಾರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಹಾಗೂ ನ್ಯಾಯೋಚಿತವಾಗಿದೆಯೇ ಎಂಬುದು ಕೂಡ ಸ್ಥಳೀಯರಿಗೆ ಗೊತ್ತಿಲ್ಲ ಎಂದು ಮೂಲ ನಿವಾಸಿಗಳ ನಾಯಕ ಸಿಬುಕ್ದಿನ್ ಆಕ್ಷೇಪಿಸುತ್ತಾರೆ.

ಅರಣ್ಯ ನಾಶದ ಆಕ್ಷೇಪ

ಒರಾಂಗುಟನ್, ಚಿರತೆ ಮತ್ತು ಇತರ ವನ್ಯಜೀವಿಗಳಿಗೆ ನೆಲೆಯಾಗಿರುವ ಬೋರ್ನಿಯೊದ ಪೂರ್ವ ಕಾಲಿಮಂಟನ್ ಪ್ರಾಂತ್ಯದಲ್ಲಿ ವಿಸ್ತಾರವಾದ 2,56,000 ಹೆಕ್ಟೇರ್ (990 ಚದರ ಮೈಲು) ಪ್ರದೇಶದಲ್ಲಿ ನಗರವನ್ನು ನಿರ್ವಿುಸುವುದರಿಂದ ಉಂಟಾಗಬಹುದಾದ ಪಾರಿಸರಿಕ ಪರಿಣಾಮಗಳ ಬಗೆಗೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಮಸ್ಯೆಗಳನ್ನು ಅವಲೋಕನ ಮಾಡುವ ‘ಫಾರೆಸ್ಟ್ ವಾಚ್ ಇಂಡೋನೇಷ್ಯಾ’ ಎಂಬ ಸರ್ಕಾರೇತರ ಸಂಸ್ಥೆಯೊಂದು ನವೆಂಬರ್ 2022 ರಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಹೊಸ ರಾಜಧಾನಿ ಪ್ರದೇಶವು ಅರಣ್ಯ ಉತ್ಪಾದನೆ ಕಾಡು ಆಗಿದೆ. ಇಲ್ಲಿ ನಿರ್ಮಾಣ ಚಟುವಟಿಕೆ ನಡೆಸುವುದು ಅರಣ್ಯನಾಶಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ. ಅಲ್ಲದೆ, ಹೊಸ ರಾಜಧಾನಿ ನಿರ್ವಣದ ನಂತರ ಈ ಪ್ರದೇಶದಲ್ಲಿ ಉಳಿಯುವ ನೈಸರ್ಗಿಕ ಅರಣ್ಯದ ರಕ್ಷಣೆಯ ಕುರಿತಂತೆಯೂ ಯಾವುದೇ ಖಚಿತತೆ ಇಲ್ಲ ಎಂದು ಹೇಳಿದೆ. ಮುಂದಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಉಷ್ಣತೆ ಹೆಚ್ಚುವ ಸಾಧ್ಯತೆ ಅಧಿಕವಾಗಿದೆ ಎಂಬ ಆತಂಕವೂ ಇದೆ.

ನುಸಂತರಾ ಎಂಬ ದ್ವೀಪಸಮೂಹ

ರಾಜಧಾನಿ ಜಕಾರ್ತಾವನ್ನು ಬೋರ್ನಿಯೊ ದ್ವೀಪದಲ್ಲಿನ ಪೂರ್ವ ಕಾಲಿಮಂಟನ್ ಪ್ರಾಂತ್ಯಕ್ಕೆ ಬದಲಾಯಿಸುವ ಮಸೂದೆಯನ್ನು 2022ರ ಜನವರಿಯಲ್ಲಿ ಇಂಡೋನೇಷ್ಯಾ ಸಂಸತ್ತು ಅಂಗೀಕರಿಸಿದೆ. ಹೊಸ ರಾಜಧಾನಿಗೆ ನುಸಂತರಾ ಎಂದು ನಾಮಕರಣ ಮಾಡಲಾಗಿದೆ. ಅಧ್ಯಕ್ಷ ಜೊಕೊ ವಿಡೋಡೊ ಅವರು 2019ರಲ್ಲಿಯೇ ಹೊಸ ರಾಜಧಾನಿಯ ಯೋಜನೆಯನ್ನು ಮೊದಲು ಘೊಷಿಸಿದ್ದರು. ಇಂಡೋನೇಷ್ಯಾದ ಅಧಿಕೃತ ಭಾಷೆಯಾದ ಜಾವಾ ಭಾಷೆಯಲ್ಲಿ ನುಸಂತರಾ ಎಂದರೆ ದ್ವೀಪಸಮೂಹ ಎಂದರ್ಥ. ಜಕಾರ್ತಾದ ಈಶಾನ್ಯಕ್ಕೆ 2,000 ಕಿಲೋಮೀಟರ್ ದೂರದಲ್ಲಿ ನೂತನ ರಾಜಧಾನಿ ಇದೆ. ಮೊದಲ ಹಂತದಲ್ಲಿ ಇಲ್ಲಿ ಸರ್ಕಾರಿ ಕಚೇರಿ ಮತ್ತು ವಸತಿ ಕಟ್ಟಡಗಳನ್ನು ನಿರ್ವಿುಸಲಾಗುತ್ತಿದೆ. ಆರಂಭಿಕ ಅಂದಾಜಿನ ಪ್ರಕಾರ, 15 ಲಕ್ಷ ನಾಗರಿಕ ಸೇವಕರನ್ನು ನೂತನ ನಗರಕ್ಕೆ ಸ್ಥಳಾಂತರಿಸಲು ಯೋಜಿಸಲಾಗಿದೆ. ಈ ಸಂಖ್ಯೆಯನ್ನು ಅಂತಿಮಗೊಳಿಸಲು ಸಚಿವಾಲಯಗಳು ಮತ್ತು ಸರ್ಕಾರಿ ಏಜೆನ್ಸಿಗಳು ಇನ್ನೂ ಕೆಲಸ ಮಾಡುತ್ತಿವೆ. ಹೊಸ ರಾಜಧಾನಿ ‘ಅರಣ್ಯ ನಗರ’ ಪರಿಕಲ್ಪನೆ ಒಳಗೊಂಡಿದೆ ಎಂದು ನುಸಂತರಾ ರಾಷ್ಟ್ರೀಯ ರಾಜಧಾನಿ ಪ್ರಾಧಿಕಾರದ ಮುಖ್ಯಸ್ಥ ಬಾಂಬಾಂಗ್ ಸುಸಾಂಟೊನೊ ಹೇಳುತ್ತಾರೆ.

ಆಗಸ್ಟ್​ನಲ್ಲಿ ಉದ್ಘಾಟನೆ

ಇಂಡೋನೇಷ್ಯಾದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮುಂದಿನ ವರ್ಷ ಆಗಸ್ಟ್ 17ರಂದು ನೂತನ ರಾಜಧಾನಿಯನ್ನು ಉದ್ಘಾಟಿಸುವ ನಿರೀಕ್ಷೆಯಿದೆ. 2045ರಲ್ಲಿ ಇಂಡೋನೇಷ್ಯಾವು ಸ್ವಾತಂತ್ರ್ಯದ ನೂರನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದೆ. ಈ ಹೊತ್ತಿಗೆ ನೂತನ ರಾಜಧಾನಿ ಸಂಪೂರ್ಣವಾಗಿ ನಿರ್ವಣವಾಗಬಹುದು ಎಂದು ಅಂದಾಜಿಸಲಾಗಿದೆ.

ದ್ವೀಪಗಳ ರಾಷ್ಟ್ರ

ಆಗ್ನೇಯ ಏಷ್ಯಾದ ಇಂಡೋನೇಷ್ಯಾವು 18,110 ದ್ವೀಪಗಳ ದೇಶವಾಗಿದೆ. 27 ಕೋಟಿಗಿಂತಲೂ ಅಧಿಕ ಜನಸಂಖ್ಯೆಯನ್ನು ಹೊಂದುವ ಮೂಲಕ ಪ್ರಪಂಚದ 4ನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದೆ. ಪ್ರಜಾತಂತ್ರ ಆಡಳಿತ ವ್ಯವಸ್ಥೆ ಇಲ್ಲಿದೆ. ಕೈಗಾರಿಕಾ ಪ್ರಗತಿ ಕಾಣುವುದರೊಂದಿಗೆ ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಿದೆ. ವಾರ್ಷಿಕ ತಲಾದಾಯವು 2022ರಲ್ಲಿ 4783 ಡಾಲರ್​ಗೆ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net