

ಹದಿನೈದನೆಯ ಶತಮಾನದ ಅಂತ್ಯದಲ್ಲಿ ಅಟ್ಲಾಂಟಿಕ್ ಸಾಗರದಾಚೆಯ ನಾಡುಗಳು ಪತ್ತೆಯಾಗುತ್ತಿದ್ದಂತೇ ಆರಂಭವಾದ ಯೂರೋಪಿಯನ್ನರ ನೆಲದಾಹ ಮತ್ತು ಸಂಪತ್ತಿನ ಹಸಿವು ಮಧ್ಯ ಅಮೆರಿಕದ ಮಾಯಾ ಮತ್ತು ಅಜ್ಟೆಕ್ ನಾಗರಿಕತೆಗಳನ್ನು ಇತಿಹಾಸದಿಂದಲೇ ಅಳಿಸಿಬಿಟ್ಟವು. ಯೂರೋಪಿಯನ್ನರ ಸೇನೆಗಳೊಂದಿಗೆ ಸಿಡುಬಿನಂತಹ ಪೌರ್ವಾತ್ಯ ಸಾಂಕ್ರಾಮಿಕ ರೋಗಗಳ ದಾಳಿಯಲ್ಲಿ ಆ ಎರಡು ಜನಾಂಗಗಳೂ ನಾಮಾವಶೇಷವಾಗಿಹೋದವು. ಇನ್ನು ದಕ್ಷಿಣ ಅಮೆರಿಕದ ಇಂಕಾ ನಾಗರಿಕತೆಯದ್ದು ಇನ್ನೊಂದು ಕಣ್ಣೀರ ಕಥೆ. ಇಂಕಾಗಳ ಸ್ವರ್ಣಸಂಪತ್ತೇ ಅವರಿಗೆ ಮುಳುವಾಯಿತು. ಸೂರ್ಯಾರಾಧಕ ಇಂಕಾಗಳ ಸಾಮ್ರಾಜ್ಯದುದ್ದಕ್ಕೂ ಎಲ್ಲೆಲ್ಲೂ ಕಂಡ ಆ ಹಳದಿ ಲೋಹದ ಅಗಾಧತೆಯನ್ನು ಕಂಡು ಕರುಬಿ, ಅಲ್ಲೆಲ್ಲೋ ದಟ್ಟಾರಣ್ಯದ ನಡುವೆ ಚಿನ್ನದ ಬೆಟ್ಟಗಳೋ, ಎಲ್ ಡೊರಾಡೋ ಎಂಬ ಸ್ವರ್ಣನಗರಿಯೋ ಇರಬಹುದೆಂದು ದೊಡ್ಡದೊಡ್ಡ ಸೇನೆಗಳೊಂದಿಗೆ ಇಂದಿನ ಕೊಲಂಬಿಯಾದಿಂದ ಬೊಲಿವಿಯಾದವರೆಗಿನ ವಿಶಾಲ ಪ್ರದೇಶವನ್ನು ಜಾಲಾಡಿದ ಸ್ಪಾ್ಯನಿರಾರ್ಡರಿಗೆ ಸಿಕ್ಕಿದ ಚಿನ್ನದ ಪ್ರಮಾಣಕ್ಕೆ ಲೆಕ್ಕವಿಲ್ಲ, ಆ ಸ್ವರ್ಣದಾಹದ ಹಾದಿಯಲ್ಲಿ ಅವರು ಬಲಿಗೊಟ್ಟ ಇಂಕಾಗಳಿಗೂ ಲೆಕ್ಕವಿಲ್ಲ. ಅಂತಿಮವಾಗಿ ಸ್ಪಾ್ಯನಿಷ್ ರೈತ-ಯೋಧ ಫ್ರಾನ್ಸಿಸ್ಕೋ ಪಿಝಾರೋ 1536ರಲ್ಲಿ ಕೊನೆಯ ಇಂಕಾ ಸಾಮ್ರಾಟ ಅತಾಹುವಾಲ್ಪಾನನ್ನೇ ಸೆರೆಹಿಡಿದು; ಇಪ್ಪತ್ತು ಅಡಿ ಉದ್ದ, ಇಪ್ಪತ್ತು ಅಡಿ ಅಗಲ, ಇಪ್ಪತ್ತು ಅಡಿ ಎತ್ತರದ ಕೋಣೆ ತುಂಬುವಷ್ಟು ಚಿನ್ನ ಕೊಟ್ಟರೆ ಬಿಡುಗಡೆ ಮಾಡುವುದಾಗಿ ಕರಾರು ಹಾಕಿದ. ಅತಾಹುವಾಲ್ಪಾ ಅಷ್ಟೂ ಚಿನ್ನವನ್ನು ಸಂಗ್ರಹಿಸಿ ಕೊಟ್ಟ. ಅಷ್ಟನ್ನು ಬಾಚಿಕೊಂಡೂ ಪಿಶಾಚಿ ಪಿಝಾರೋ ಸಾಮ್ರಾಟ ಅತಾಹುವಾಲ್ಪಾನನ್ನು ಇರಿದು ಕೊಂದ. ಇಂದು ಪೆರುವಿನ ಕುಝೊ್ಕೕ, ಮಾಚುಪಿಚು, ಬೊಲಿವಿಯಾದ ಟಿಯಾಹುವಾನಾಕೋದಾಂತಹ ಹಲವುಹತ್ತು ಅಗಾಧ ಅವಶೇಷಗಳು ಇಂಕಾ ನಾಗರಿಕತೆಯ ಮೂಕಸಾಕ್ಷಿಗಳಾಗಿ ನಿಂತಿವೆ. ನಂತರದ ಯೂರೋಪಿನ ಗ್ರೀಕ್ ಮತ್ತು ರೋಮನ್ ನಾಗರಿಕತೆಗಳನ್ನು ಆಪೋಶನ ತೆಗೆದುಕೊಂಡು ಅವುಗಳನ್ನು ಪ್ರಾಕ್ತನ ಸ್ಥಳಗಳು ಮತ್ತು ಮ್ಯೂಸಿಯಂಗಳಿಗಷ್ಟೇ ಸೀಮಿತಗೊಳಿಸಿದ್ದು ಕ್ರಿಶ್ಚಿಯಾನಿಟಿ.
ಹೀಗೆ ಬಾಳಿ ಅಳಿದ ನಾಗರಿಕತೆಗಳು ತಮ್ಮ ಅಂತ್ಯದ ಬಗ್ಗೆ ಸರಿಸುಮಾರು ಖಚಿತ ಕುರುಹುಗಳನ್ನು ಬಿಟ್ಟುಹೋಗಿವೆ. ಆದರೆ ಇದೇ ಮಾತನ್ನು ನಮ್ಮ ಭಾರತೀಯ ಉಪಖಂಡದಲ್ಲಿ ಆಗಿಹೋದ ಸಿಂಧೂ-ಸರಸ್ವತಿ ನಾಗರಿಕತೆಯ ಬಗ್ಗೆ ಹೇಳಲಾಗುವುದಿಲ್ಲ. ಹಾಗೆ ನೋಡಿದರೆ ಈ ನಾಗರಿಕತೆಯ ಬಗೆಗಿನ ನಮ್ಮತಿಳಿವಳಿಕೆಯ ಸೀಮಿತತೆ ಅದರ ಅಂತ್ಯಕ್ಕಷ್ಟೇ ಸೀಮಿತವಲ್ಲ, ಅದರ ಆದಿಯಂತೂ ಇನ್ನೂ ನಿಗೂಢ, ರೋಚಕ ಮತ್ತು ಆ ಕಾರಣಗಳಿಂದಲೇ ಪ್ರಶ್ನೆಗಳ ಆಗರ. ನಾಗರಿಕತೆಯ ಕುರುಹಾದ ಸುಟ್ಟ ಮಣ್ಣಿನ ಇಟ್ಟಿಗೆಗಳು ಸಿಂಧೂ ನದಿಪಾತ್ರದ ಹಲವೆಡೆ ರೈತರಿಗೆ ನೆಲದಡಿಯಲ್ಲಿ ರಾಶಿರಾಶಿ ಸಿಕ್ಕಿ, ಅವು ದೇವರ ಕೊಡುಗೆಯೆಂದು ನಂಬಿ ಮನೆ ಕಟ್ಟಿಕೊಳ್ಳಲು ಬಳಸುತ್ತಿದ್ದ ಇತಿಹಾಸ ಕ್ರಿ.ಶ. ಏಳನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಹಾಗೆಯೇ, 1860-70ರ ದಶಕಗಳಲ್ಲಿ ಆ ಪ್ರದೇಶದಲ್ಲಿ ಬ್ರಿಟಿಷರು ರೈಲುಮಾರ್ಗ ನಿರ್ವಿುಸಲು ಹೊರಟಾಗಲೂ ಇಟ್ಟಿಗೆಗಳು ಹಾಗೂ ಅವುಗಳಿಂದ ನಿರ್ವಣವಾದ ಗೋಡೆಗಳು ಹಲವೆಡೆ ಸಿಕ್ಕಿ ಕುತೂಹಲ ಮೂಡಿಸಿದರೂ ಅವೆಲ್ಲವೂ ಪ್ರಾಚೀನ ಭವ್ಯ ನಾಗರಿಕತೆಯೊಂದರ ಕುರುಹುಗಳು ಎಂದು ಸ್ಪಷ್ಟ ಸೂಚನೆಗಳು ಸಿಗತೊಡಗಿದ್ದು 1921-22ರಲ್ಲಿ. ಪ್ರಾಕ್ತನಶಾಸ್ತ್ರಜ್ಞ ಜಾನ್ ಮಾರ್ಷಲ್ರಿಂದ ಆರಂಭಗೊಂಡು ಜೆ. ಫ್ಲೀಟ್, ರಾಯ್ ಬಹಾದುರ್, ದಯಾ ರಾಮ್ ಸಾಹ್ನಿ ಮತ್ತು ಮಾದೋ ಸರೂಪ್ ವತ್ಸ್ ಅಂದು ಪಂಜಾಬ್ನ ಮಾಂಟ್ಗೋಮರಿ ಜಿಲ್ಲೆಯ (ಇಂದಿನ ಪಾಕಿಸ್ತಾನದ ಸಹಿವಾಲ್ ಜಿಲ್ಲೆ) ಹರಪ್ಪಾ ಎಂಬ ಸ್ಥಳದಲ್ಲಿ ನಡೆಸಿದ ಉತ್ಖನನಗಳಲ್ಲಿ ಅಂದಾಜು 3,300 ವರ್ಷಗಳ ಹಿಂದೆ ಅಲ್ಲೊಂದು ನಾಗರಿಕ ವಸತಿ ಇತ್ತೆಂಬುದು ಪತ್ತೆಯಾಯಿತು. ನಂತರ ಅದೇ ಸಿಂಧೂ ನದಿಯ ದಕ್ಷಿಣ ತೀರದಲ್ಲಿ ಸಿಂಧ್ನ ಮೊಹೆಂಜೋದಾರೋ ಎಂಬ ಸ್ಥಳದಲ್ಲಿ ಇನ್ನೂ ದೊಡ್ಡದಾದ ನಗರದ ಅವಶೇಷಗಳನ್ನು ಆರ್.ಡಿ. ಬ್ಯಾನರ್ಜಿ ಬೆಳಕಿಗೆ ತಂದರು. ನಂತರದ ದಶಕಗಳಲ್ಲಿ ಸಿಂಧ್ನಲ್ಲೇ ಚಾನ್ಹುದಾರೋ; ಅತ್ತಲಿನ ಬಲೂಚಿಸ್ತಾನದಲ್ಲಿ ಸಾಕ್ತಜೆಂಡರ್ ಮತ್ತು ಮೆಹ್ರ್ಘರ್; ಇತ್ತ ಪೂರ್ವ ಪಂಜಾಬ್ನ ರೋಪಾರ್; ರಾಜಸ್ತಾನದ ಕಾಲಿಬಂಗನ್; ಗುಜರಾತ್ನ ಲೋಥಾಲ್ ಎಂಬಲ್ಲೊಂದು ಬಂದರುಕಟ್ಟೆ ಸೇರಿದಂತೆ ಆಗ್ನೇಯ ಅಫ್ಘಾನಿಸ್ತಾನ, ಇಡೀ ಪಾಕಿಸ್ತಾನದ ಜತೆಗೆ ಭಾರತದ ಪಶ್ಚಿಮ ರಾಜಸ್ತಾನ, ಇಡೀ ಗುಜರಾತ್, ಪಂಜಾಬ್ ಮತ್ತು ಹರಿಯಾಣಾಗಳನ್ನೂ ದಾಟಿ ಪಶ್ಚಿಮ ಉತ್ತರ ಪ್ರದೇಶಗಳಲ್ಲಿ ಪತ್ತೆಯಾದ ನಗರಗಳ ಅನೇಕ ಅವಶೇಷಗಳು ಆ ನಾಗರಿಕತೆ ತನ್ನ ಸಮಕಾಲೀನ ಈಜಿಪ್ಷಿಯನ್ ಮತ್ತು ಮೆಸೊಪೊಟೇಮಿಯನ್ ನಾಗರಿಕತೆಗಳಿಗಿಂತಲೂ ವಿಶಾಲವಾಗಿತ್ತು ಎಂದು ಸಾರಿದವು. ಭೂಪಟದಲ್ಲಿ ಸಿಂಧೂ ನಾಗರಿಕತೆ ರಾಜಸ್ತಾನವನ್ನು ಬಿಟ್ಟು ಅದರ ಉತ್ತರ ಮತ್ತು ದಕ್ಷಿಣದಲ್ಲಿ ವಿಸ್ತರಿಸುತ್ತಾ ಹೋಗಿರುವಂತೆ ಕಾಣುತ್ತದೆ. ಆದರೆ, ಇದಕ್ಕೆ ಇಡೀ ರಾಜಸ್ತಾನವನ್ನೂ ಸೇರಿಸಬೇಕಾದ ಅಗತ್ಯವಿದೆ. ಇಂದು ಥಾರ್ ಮರುಭೂಮಿಯಾಗಿರುವ ಅದರ ನಟ್ಟನಡುವೆ ಪುರಾತನ ಕಾಲದಲ್ಲಿ ಜೀವನದಿಯೊಂದು ಹರಿಯುತ್ತಿದ್ದ ಕುರುಹುಗಳಿವೆ. ಅಂದರೆ ನಾಲ್ಕು-ಐದು ಸಾವಿರ ವರ್ಷಗಳ ಹಿಂದೆ ಅಲ್ಲಿ ಮರುಭೂಮಿ ಇರಲಿಲ್ಲ ಹಾಗೂ ಆ ನೆಲವೂ ಜನವಸತಿಗೆ ಯೋಗ್ಯವಾಗಿತ್ತು ಮತ್ತು ಆ ಕಾರಣದಿಂದಲೇ ಸಿಂಧೂ ನಾಗರಿಕತೆ ಅಲ್ಲಿಗೂ ವಿಸ್ತರಿಸಿತ್ತು ಎಂದು ಊಹಿಸಬಹುದಾಗಿದೆ. ಇಂದಿನ ಆ ಮರುಭೂಮಿಯಲ್ಲೂ ವ್ಯಾಪಕ ಉತ್ಖನನಗಳು ಸಾಧ್ಯವಾದರೆ ಅವಶೇಷಗಳು ಪತ್ತೆಯಾಗುವ ಸಾಧ್ಯತೆಯಿದೆ.
ಇತರ ಸಮಕಾಲೀನ ನಾಗರಿಕತೆಗಳಲ್ಲಿ ಕಾಣಸಿಗದ ಸುವ್ಯವಸ್ಥಿತ ಹಾಗೂ ವಿಶಾಲ ನಗರಗಳು ಇಲ್ಲಿದ್ದವು. ಈ ನಗರ ನಾಗರಿಕತೆಯಲ್ಲಿ ಐದು ಸಾವಿರ ವರ್ಷಗಳ ಹಿಂದೆ ನಲವತ್ತರಿಂದ ಐವತ್ತು ಲಕ್ಷ ಜನರಿದ್ದರೆಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ಸಿಂಧೂ ನಾಗರಿಕತೆಯ ಲಿಪಿಯನ್ನಿನ್ನೂ ಬಿಡಿಸಲು ಸಾಧ್ಯವಿಲ್ಲದ ಕಾರಣ ಆ ಜನರ ಸಾಮಾಜಿಕ ವ್ಯವಸ್ಥೆ, ಧಾರ್ವಿುಕ ನಂಬಿಕೆಗಳು ಹಾಗೂ ಜೀವನಮೌಲ್ಯಗಳ ಬಗ್ಗೆ ನಿಖರ ಅರಿವು ನಮಗಿನ್ನೂ ದೊರೆತಿಲ್ಲ. ಈಗಿನ ಹರಪ್ಪಾ, ಮೊಹೆಂಜೋದಾರೋ ಎನ್ನುವುದೆಲ್ಲಾ ನಾವಿಟ್ಟ ಹೆಸರುಗಳೇ ಹೊರತು ಅಲ್ಲಿನ ಮೂಲ ಜನತೆ ಕರೆದ ಹೆಸರುಗಳಲ್ಲ. ಆದಾಗ್ಯೂ ಆ ಜನರು ಪಶ್ಚಿಮ ಏಶಿಯಾ ಮುಖ್ಯವಾಗಿ ಪರ್ಶಿಯನ್ ಕೊಲ್ಲಿ ಪ್ರದೇಶದ ಜನರೊಂದಿಗೆ ಸಮುದ್ರ ಮಾರ್ಗದ ಮೂಲಕ ವ್ಯಾಪಾರ ಸಂಪರ್ಕ ಹೊಂದಿದ್ದ ಕುರುಹುಗಳು ದೊರೆತಿವೆ. ಜತೆಗೆ, ಹಿಂದಿನ ಸಿಂಧೂ ನಾಗರಿಕತೆ ಮತ್ತು ಪ್ರಾಚೀನ ಮಾಲ್ದೀವ್ಸ್ ದ್ವೀಪಗಳಲ್ಲಿ ದೋಣಿ ಮಾಡುವ ವಿಧಾನಗಳಲ್ಲಿ ಕಾಣಸಿಗುವ ಹೋಲಿಕೆ ಈ ಎರಡೂ ಜನಾಂಗಗಳ ನಡುವಿನ ಹೊಕ್ಕುಬಳಕೆಯತ್ತ ಬೆರಳು ಮಾಡುತ್ತದೆ. ಅಷ್ಟು ನಿಕಟ ಸಂಪರ್ಕ ಇದ್ದಿದ್ದೇ ಆದರೆ ಅದು ಸಮುದ್ರಮಾರ್ಗದ ಮೂಲಕವೇ ಎಂಬ ಭೌಗೋಳಿಕ ವಾಸ್ತವ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಕಣಿವೆಯ ನಾಗರಿಕತೆಯ ಜನರು ಸಮುದ್ರಯಾನದಲ್ಲಿ ಸಾಧಿಸಿದ್ದ ಅಸಾಮಾನ್ಯ ಸಾಧನೆಯ ಪರಿಚಯವನ್ನೂ ಮಾಡಿಕೊಡುತ್ತದೆ. ಇನ್ನೂ ಒಂದು ಅತ್ಯದ್ಭುತ ಸಂಗತಿಯಿದೆ. ಸಿಂಧೂ ನಾಗರಿಕತೆಯ ಲಿಪಿಗೂ ಪೆಸಿಫಿಕ್ ಸಾಗರದಲ್ಲಿನ ಈಸ್ಟರ್ ದ್ವೀಪಗಳಲ್ಲಿ ಪ್ರಾಚೀನ ಕಾಲದಲ್ಲಿ ಬಳಕೆಯಾಗುತ್ತಿದ್ದ ಲಿಪಿಗೂ ಬೆರಗು ಹುಟ್ಟಿಸುವ ಸಾಮ್ಯತೆಗಳಿವೆಯೆಂದು ವಿದ್ವಾಂಸರು ಪತ್ತೆಮಾಡಿದ್ದಾರೆ. ಎದ್ದುಕಾಣುವ ಒಂದೇ ವ್ಯತ್ಯಾಸವೆಂದರೆ ಸಿಂಧೂ ಲಿಪಿ ನೇರವಾಗಿದ್ದರೆ ಈಸ್ಟರ್ ಲಿಪಿ ಐಠಿಚ್ಝಜ್ಚಿಠ ನಂತೆ ಓರೆಯಾಗಿದೆ! ಭೂಗೋಳದ ಎರಡು ವಿಭಿನ್ನ ತುದಿಗಳ ಈ ಎರಡು ಜನಾಂಗಗಳ ನಡುವೆ ಕಂಡುಬರುವ ಇಷ್ಟು ಹತ್ತಿರದ ಸಂಬಂಧಗಳ ಮೂಲ ಮತ್ತು ಸಾಧನಗಳು ಯಾವುದಾಗಿದ್ದವು ಎಂಬ ಬಗ್ಗೆ ಸ್ಪಷ್ಟ ವಿವರಣೆ ಇಲ್ಲ.
ಕಳೆದ ನೂರು ವರ್ಷಗಳಲ್ಲಿ ಈ ನಾಗರಿಕತೆಯ ಹೆಸರೂ ಬದಲಾಗುತ್ತಾ ಬಂದಿದೆ. ಮೊದಲಿಗೆ ಅವಶೇಷಗಳು ಹರಪ್ಪಾದಲ್ಲಿ ಪತ್ತೆಯಾದ ಕಾರಣ ‘ಹರಪ್ಪಾ ನಾಗರಿಕತೆ’ ಎಂದು ಕರೆಯಲ್ಪಟ್ಟ ಇದು ನಂತರ ಅದಕ್ಕಿಂತಲೂ ಹೆಚ್ಚು ಅವಶೇಷಗಳು ಸಿಂಧೂನದಿಯ ಉದ್ದಕ್ಕೂ ಪತ್ತೆಯಾದ ಮೇಲೆ ‘ಸಿಂಧೂ ಕಣಿವೆಯ ನಾಗರಿಕತೆ’ ಎಂದು ಬಡತಿ ಪಡೆಯಿತು. ಆಮೇಲಾಮೇಲೆ ಪೂರ್ವದಲ್ಲಿ ಸಿಂಧೂ ನದಿಯ ಜಲಾನಯನ ಪ್ರದೇಶದಿಂದ ಹೊರತಾದ ಪ್ರದೇಶಗಳಲ್ಲೂ ಅವಶೇಷಗಳು ಪತ್ತೆಯಾಗುವುದರ ಜತೆಗೆ, ಸಟ್ಲೆಜ್ ಮತ್ತು ಯಮುನಾ ನದಿಗಳ ನಡುವೆಯೆಲ್ಲೋ ಉಗಮಿಸಿ ಪಂಜಾಬ್, ಹರಿಯಾಣಾ ಮತ್ತು ರಾಜಸ್ತಾನ ಮೂಲಕ ಹಾದು ಗುಜರಾತ್ನ ಕಚ್ಚ ಪ್ರದೇಶದ ರಣ್ನಲ್ಲಿ ಸಮುದ್ರ ಸೇರುವಂತಿದ್ದ ಮಹಾನದಿಯೊಂದು ಇತ್ತೆಂದೂ, ಹವಾಮಾನ ಬದಲಾವಣೆಯ ಕಾರಣದಿಂದಾಗಿ ಅದು ಕಾಲಾಂತರದಲ್ಲಿ ಇಂಗಿಹೋಗಿ ಈಗ ಹರಿಯಾಣಾದಲ್ಲಿ ಮಾತ್ರ ಸ್ಪಷ್ಟ ಕುರುಹುಗಳನ್ನು ಉಳಿಸಿಹೋಗಿದೆಯೆಂದೂ ತಿಳಿದುಬಂದ ಕಾರಣ ಮತ್ತು ಆ ಮಹಾನದಿ ಪುರಾಣಗಳಲ್ಲಿ ಪ್ರಸ್ತಾಪವಾಗಿರುವ ಸರಸ್ವತಿ ನದಿಯೇ ಆಗಿದ್ದಿರಬಹುದೆಂಬ ವಾದವೂ ಬಲವಾಗತೊಡಗಿದ ಕಾರಣ ಆ ಪ್ರಾಚೀನ ನಾಗರಿಕತೆ ಈಗ ಸಿಂಧೂ- ಸರಸ್ವತಿ ನಾಗರಿಕತೆ ಎಂದು ಹೆಸರಾಗಿದೆ.
ಪ್ರಾದೇಶಿಕ ವಿಸ್ತಾರ, ಜನಸಂಖ್ಯೆ ಹಾಗೂ ನಾಗರಿಕ ಸೌಲಭ್ಯಗಳ ವಿಚಾರದಲ್ಲಿ ಇತರೆಲ್ಲಾ ನಾಗರಿಕತೆಗಳಿಗಿಂತ ಉನ್ನತವಾಗಿದ್ದ ಈ ನಾಗರಿಕತೆ ಕ್ರಿ.ಪೂ. 1800-1500ರ ನಡುವಿನ ಅವಧಿಯಲ್ಲಿ ಅಳಿದುಹೋಯಿತೆಂದು ಇತಿಹಾಸಕಾರರು ಲೆಕ್ಕಹಾಕಿದ್ದರೂ ಆ ಅಳಿವು ಹೇಗಾಯಿತೆಂದು ಹೇಳಲು ಆಗಿಲ್ಲ; ಊಹೆಗಳ ಮೊರೆಹೋಗುವುದಷ್ಟೇ ಆಗಿದೆ. ಆರ್ಯರು ಎಂಬ ಹೊರಗಿನ ಜನಾಂಗದ ಆಕ್ರಮಣದಿಂದ ಆ ನಾಗರಿಕತೆ ನಾಶವಾಯಿತು ಎಂಬ ಪ್ರಾರಂಭಿಕ ವಾದ ಈಗ ವೈದ್ವಾಂಸಿಕ ಮನ್ನಣೆ ಕಳೆದುಕೊಂಡಿದೆ. ಆ ನಾಗರಿಕತೆಯ ಅಂತ್ಯದ ಸಮಯವನ್ನು ಕ್ರಿ.ಪೂ. 1,300ರಿಂದ ಕ್ರಿ.ಪೂ. 1,800ಕ್ಕೆ ತಳ್ಳಿರುವ ಇತಿಹಾಸಕಾರರು ಮಧ್ಯ ಏಶಿಯಾದಿಂದ ತುರುಗಾಹಿಗಳು ಸಿಂಧೂ ಬಯಲಿಗೆ ಬಂದದ್ದು ಕ್ರಿ.ಪೂ. 1,500ರ ಸುಮಾರಿಗೆ ಅಂದರೆ ಸಿಂಧೂ ನಾಗರಿಕತೆ ಅಳಿದ 2-3 ಶತಮಾನಗಳ ನಂತರ ಎಂಬುದು ಈಗಿನ ವಾದವಾಗಿದೆ. ಹಾಗಿದ್ದರೆ ಈ ನಾಗರಿಕತೆ ಅಂತ್ಯವಾದದ್ದಾದರೂ ಹೇಗೆ? ಇಂದು ಪಾಕಿಸ್ತಾನದ ಮೂರನೆಯ ಒಂದು ಭಾಗವನ್ನು ಮುಳುಗಿಸಿರುವ ಪ್ರವಾಹದಂತಹದ್ದೇ ಪುರಾತನ ಪ್ರಾಕೃತಿಕ ವಿಕೋಪವೊಂದು ಸಿಂಧೂ ನಾಗರಿಕತೆಯನ್ನೂ ಮುಳುಗಿಸಿಬಿಟ್ಟೀತೆ? ಅದಕ್ಕೂ ಮೊದಲು ಈ ನಾಗರಿಕತೆ ಉದ್ಭವವಾದದ್ದು ಹೇಗೆ? 40 ಸಾವಿರ ವರ್ಷಗಳ ಹಿಂದೆ ಮನುಷ್ಯನಲ್ಲಿ ಏಕಾಏಕಿ ಕಂಡುಬಂದ ‘ಬುದ್ಧಿವಂತಿಕೆ’ ಸಿಂಧೂ-ಸರಸ್ವತಿ ನಾಗರಿಕತೆಗೆ ಜನ್ಮ ನೀಡಿತೇ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುವ ಪ್ರಯತ್ನವನ್ನು ಮುಂದಿನ ವಾರ ಮಾಡೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)