ಆರ್ಭಟವೀರ ಸೇನೆಯೀಗ ಅಳುಬುರುಕಿ ದೇಹಾತೀ ಔರತ್!

Column F
Published on
ಪಾಕಿಸ್ತಾನದ ಇತಿಹಾಸದಲ್ಲೇ ಈಗ ಮೊತ್ತಮೊದಲ ಬಾರಿಗೆ ರಾಜಕಾರಣಿಯೊಬ್ಬರು ಸೇನೆಯ ವ್ಯವಹಾರಗಳಲ್ಲಿ ಕೈಯಾಡಿಸತೊಡಗಿದ್ದಾರೆ. ಅದರೊಳಗೆ ಒಡಕು ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ! ಹೀಗೆ ಪಾಕ್ ರಾಜಕಾರಣವನ್ನೇ ತಿರುವುಮುರುವು ಮಾಡಿ ಸೇನೆಗೆ ಹೊಸ ಹಣೆಬರಹ ಬರೆಯುತ್ತಿರುವವರು ಕ್ರಿಕೆಟರ್-ರಾಜಕಾರಣಿ ಇಮ್ರಾನ್ ಅಹ್ಮದ್ ಖಾನ್ ನಿಯಾಜಿ.

ಕಳೆದ ವಾರ ಗಮನ ಸೆಳೆಯುವ ಹಲವು ಘಟನೆಗಳು ಒಂದರ ಹಿಂದೊಂದರಂತೆ ಘಟಿಸಿಹೋದವು. ಮೊದಲಿಗೆ ವಾರಾಂತ್ಯದ ವಿರಾಮದ ನಂತರ ನ್ಯೂಯಾರ್ಕ್ ಮತ್ತು ಹಾಂಕಾಂಗ್ ಸ್ಟಾಕ್ ಎಕ್ಸ್​ಚೇಂಜ್​ಗಳು ಸೋಮವಾರ, ಅಕ್ಟೋಬರ್ 24ರಂದು ತೆರೆಯುತ್ತಿದ್ದಂತೇ ಪ್ರಮುಖ ಚೀನೀ ಕಂಪೆನಿಗಳ ಷೇರುಗಳ ಮೌಲ್ಯಗಳು 11%-14%ಗಳ ಭಾರಿ ಕುಸಿತವನ್ನು ಕಂಡವು. ಮರುದಿನ ಬ್ರಿಟನ್ ತನ್ನ ಮೊತ್ತಮೊದಲ ಅಶ್ವೇತ ಪ್ರಧಾನಮಂತ್ರಿಯನ್ನು ಪಡೆದುಕೊಂಡಿತು. ಮತ್ತೆರಡು ದಿನಗಳು ಕಳೆಯುತ್ತಿದ್ದಂತೇ ಅಕ್ಟೋಬರ್ 27ರಂದು ವಿಶ್ವದ ಅತ್ಯಂತ ಶ್ರೀಮಂತ ಈಲಾನ್ ಮಸ್ಕ್ ಟ್ವಿಟರ್​ನ ಮಾಲಿಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದರು.

ಈ ಮೂರೂ ಬೆಳವಣಿಗೆಗಳಿಗೆ ಇಂದಿನ ಜಾಗತಿಕ ಇತಿಹಾಸದಲ್ಲಿ ಅವುಗಳದೇ ಆದ ಮಹತ್ವವಿದೆ. ಮೊದಲಿಗೆ ಚೀನೀ ಕಂಪೆನಿಗಳ ಷೇರುಗಳ ಮೌಲ್ಯದಲ್ಲಾದ ಅಭೂತಪೂರ್ವ ಕುಸಿತ ಷಿ ಜಿನ್​ಪಿಂಗ್ ಮೂರನೆಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದದ್ದರ ಬಗ್ಗೆ ವಿದೇಶೀ ಹೂಡಿಕೆದಾರರ ಋಣಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿತು. ಚೀನಾ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದದ್ದರಲ್ಲಿ ವಿದೇಶೀ ಹೂಡಿಕೆದಾರರ ಪಾತ್ರ ಮಹತ್ತರವಾದುದು. ಈಗ ಅವರು ತೋರತೊಡಗಿರುವ ಈ ಪ್ರತಿಕ್ರಿಯೆ ಮುಂದಿನ ದಿನಗಳಲ್ಲಿ ಚೀನೀ ಆರ್ಥಿಕ ಶಕ್ತಿಯ ಕುಸಿತ, ಮತ್ತದರ ಪರಿಣಾಮವಾಗಿ ಜಾಗತಿಕ ರಾಜಕಾರಣದ ಮೇಲೆ ಚೀನೀ ಕಮ್ಯೂನಿಸ್ಟ್ ಸರ್ಕಾರದ ಪ್ರಭಾವದ ಇಳಿಕೆಯನ್ನು ಸೂಚಿಸುತ್ತಿರುವಂತಿದೆ. ಇದು ಭಾರತಕ್ಕೆ ಶುಭಸೂಚನೆ.

ತಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಋಷಿ ಸುನಕ್ ಅವರೇ ಹಳಿ ತಪ್ಪಿರುವ ಬ್ರಿಟಿಷ್ ಅರ್ಥವ್ಯವಸ್ಥೆಯನ್ನು ಮೇಲೆತ್ತಬಲ್ಲ ವ್ಯಕ್ತಿ ಎಂದು ಕನ್ಸರ್​ವೇಟಿವ್ ಪಕ್ಷ ತೀರ್ವನಿಸಿದ್ದು ಜಾಗತಿಕವಾಗಿ ಹಿಂದೂಗಳ ಆತ್ಮಬಲವನ್ನು ಹೆಚ್ಚಿಸುವ ಪ್ರಕರಣ. ಕಮ್ಯೂನಿಸ್ಟ್ ಸೋವಿಯೆತ್ ಯೂನಿಯನ್ ಮತ್ತು ಚೀನಾಗಳಲ್ಲೇ ದಾರುಣವಾಗಿ ವಿಫಲವಾದ ಸಮಾಜವಾದಿ ಆರ್ಥಿಕ ನೀತಿಯನ್ನು ಭಾರತದ ಮೇಲೆ ಹೇರಿದ ಕಾಕ ರಾಜಕಾರಣಿಗಳು ಮತ್ತು ಅರ್ಥಶಾಸ್ತ್ರಜ್ಞರು (?), ನಂತರದ ನಿರೀಕ್ಷಿತ ವೈಫಲ್ಯವನ್ನು ಹಿಂದೂಗಳ ಮನೋಭಾವದ ತಲೆಗೆ ಕಟ್ಟಿ, ಯಾವತ್ತೂ 3.5%ಗಿಂತ ಮೇಲೇರದ ವಾರ್ಷಿಕ ಅಭಿವೃದ್ಧಿ ದರದ ದಯನೀಯ ಸ್ಥಿತಿಯನ್ನು ಹಿಂದೂ ಅಭಿವೃದ್ಧಿ ದರ (Hindu Rate of Growth) ಎಂದು ಲೇವಡಿ ಮಾಡಿ, ತಾವು ನುಣುಚಿಕೊಳ್ಳಹೊರಟ ಹಿನ್ನೆಲೆಯಲ್ಲಿ ಒಂದು ಕಾಲದ ಬಲಾಢ್ಯ ಬ್ರಿಟನ್ ಇಂದು ತನ್ನ ಅರ್ಥವ್ಯವಸ್ಥೆಯನ್ಜು ಹಳ್ಳದಿಂದ ಮೇಲೆತ್ತಿ ಹಳಿಗೇರಿಸಲು ಹಿಂದೂ ಒಬ್ಬನನ್ನು ಆರಿಸಿಕೊಂಡಿರುವುದು ಮಹತ್ವದ ಪ್ರಕರಣವೆನಿಸುತ್ತದೆ.

ಇನ್ನು ಟ್ವಿಟರ್ ಬಗ್ಗೆ ಹೇಳುವುದಾದರೆ, ತಾವೇ ಅಭಿವ್ಯಕ್ತಿ ಸ್ವಾತಂತ್ರ್ಯದ ಉಗ್ರ ಸೇನಾನಿಗಳು ಎಂದು ಬೊಬ್ಬೆ ಹೊಡೆಯುತ್ತಲೇ ತಮಗೆ ವಿರುದ್ಧವಾದ ಎಲ್ಲ ಅಭಿವ್ಯಕ್ತಿಗಳನ್ನೂ ತಡೆಹಿಡಿಯುತ್ತಿದ್ದ ಎಡ ಕ್ಯಾನ್ಸರ್ ಗಡ್ಡೆಗಳನ್ನು ಟ್ಟಿಟರ್​ನಿಂದ ಕಿತ್ತೊಗೆಯಲು ಈಲಾನ್ ಮಸ್ಕ್ ಮೊದಲ ಗಳಿಗೆಯಿಂದಲೇ ಆರಂಭಿಸಿದ್ದು ಇನ್ನೊಂದು ವಾರದಲ್ಲಿ ಅಮೆರಿಕದಲ್ಲಿ ಜರುಗಲಿರುವ ದ್ವೈವಾರ್ಷಿಕ ಸಂಸದೀಯ ಚುನಾವಣೆಗಳನ್ನು ಧನಾತ್ಮಕವಾಗಿ ಪ್ರಭಾವಿಸುವುದು ನಿಶ್ಚಿತ. ಅಷ್ಟರಮಟ್ಟಿಗೆ ಅಮೆರಿಕದ ಆಂತರಿಕ ರಾಜಕಾರಣ ಮತ್ತು ಅದು ಸದಾ ಕೈಯಾಡಿಸುವ ಜಾಗತಿಕ ರಾಜಕಾರಣ ಶುದ್ಧಗೊಳ್ಳುತ್ತದೆ.

ಈ ಮೂರೂ ಮಹತ್ತರ ಪ್ರಕರಣಗಳ ನಡುವೆ ಇದುವರೆಗೆ ಯಾರೂ ಕಂಡು ಕೇಳರಿಯದ ಅಸಾಮಾನ್ಯ ಪ್ರಕರಣವೊಂದು ಅಕ್ಟೋಬರ್ 27ರಂದು ಪಾಕಿಸ್ತಾನದಲ್ಲಿ ತಣ್ಣಗೆ ಘಟಿಸಿಹೋಯಿತು. ಆ ದೇಶದ ಆಂತರಿಕ ರಾಜಕಾರಣದ ಜತೆ ಉಪಖಂಡದ ಭವಿಷ್ಯವನ್ನೂ ನಾವ್ಯಾರೂ ಕಲ್ಪಿಸಿಕೊಂಡಿರದಿದ್ದ ಹಾದಿಗೆ ಕೊಂಡೊಯ್ಯಬಹುದಾದ ಈ ಅನಿರೀಕ್ಷಿತವಾದ, ಅಚ್ಚರಿಯ ಹಾಗೂ ವಿಲಕ್ಷಣ ಪ್ರಕರಣದ ವಿಶ್ಲೇಷಣೆ ಇಂದಿನ ಜಗದಗಲಕ್ಕೆ ಅತ್ಯಂತ ಸೂಕ್ತ ವಸ್ತುವಿಷಯ ಎಂದು ನನ್ನ ತೀರ್ವನ.

ದೇಶ ಸ್ವತಂತ್ರಗೊಂಡ ಎರಡು ತಿಂಗಳು ಒಂದು ವಾರಕ್ಕೆ ಕಾಶ್ಮೀರಕ್ಕೆ ನುಗ್ಗಿಬಂದ ಪಾಕ್ ದಾಳಿಕಾರರನ್ನು ಅಲ್ಲಿಂದ ಹೊರಗಟ್ಟಲು ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದ್ದು ಅಕ್ಟೋಬರ್ 27, 1947ರಂದು. ಹೀಗಾಗಿ ಭಾರತದಲ್ಲಿ ಅಕ್ಟೋಬರ್ 27 ಅನ್ನು ಪ್ರತಿವರ್ಷವೂ ಶೌರ್ಯ ದಿವಸವಾಗಿ ಆಚರಿಸಲಾಗುತ್ತದೆ. ಅದರಂತೆ ಈ ಬಾರಿಯ ಶೌರ್ಯ ದಿವಸದಂದು ನಮ್ಮ ರಕ್ಷಾ ಮಂತ್ರಿ ರಾಜನಾಥ್ ಸಿಂಗ್ ಶ್ರೀನಗರದಲ್ಲಿ ಮಾತನಾಡುತ್ತಾ, ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ಭಾರತದಲ್ಲಿ ಒಂದುಗೂಡಿಸುವುದಾಗಿ ಗುಡುಗಿದರೆ, ಅತ್ತ ಇಸ್ಲಾಮಾಬಾದ್​ನಲ್ಲಿ ಕುಖ್ಯಾತ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್​ಐ) ಸಂಸ್ಥೆಯ ಮುಖ್ಯಸ್ಥ ಲೆ.ಜ. ನದೀಂ ಅಂಜುಂ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೆದುರು ಅತ್ತರು! ಪಾಕಿಸ್ತಾನಕ್ಕೆ ಬುದ್ಧಿ ಹೇಳಿ ಎಂದು ಒಂಬತ್ತು ವರ್ಷಗಳ ಹಿಂದೆ ಅಧ್ಯಕ್ಷ ಒಬಾಮ ಮುಂದೆ ಬೇಡಿಕೆಯಿತ್ತ ನಮ್ಮ ಮನಮೋಹನ್ ಸಿಂಗ್ ಅವರನ್ನು ಅಂದಿನ ಪಾಕ್ ಪ್ರಧಾನಿ ನವಾಜ್ ಶರೀಫ್ ದೇಹಾತಿ ಔರತ್ ಅಂದರೆ ಪಿರಿಪಿರಿಗುಟ್ಟುವ ಅಳುಬುರುಕಿ ಹಳ್ಳಿ ಹೆಂಗಸು ಎಂದು ಜರೆದ ಹಿನ್ನೆಲೆಯಲ್ಲಿ ನದೀಂ ಅಂಜುಂ ಅವರ ಈ ಪಿರಿಪಿರಿ ಅಳುಬುರುಕತನ ಒಂದು Poetic Justice ಎಂದು ನನಗೆ ಸಮಾಧಾನವೆನಿಸುತ್ತಿದೆ.

ಗುಪ್ತಚರ ಸಂಸ್ಥೆ ಎಂಬ ಹಣೆಪಟ್ಟಿಯೊಂದಿಗೆ ಪಾಕಿಸ್ತಾನದ ಸರ್ಕಾರಿ ಭಯೋತ್ಪಾದಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಸ್​ಐನ ಕರಾಳ ಮುಖ ಭಾರತದಲ್ಲಿ ಎಲ್ಲರಿಗೂ ತಿಳಿದದ್ದೇ. ಭಾರತದಲ್ಲಿ ಅತಿ ಹೆಚ್ಚು ಬೇಹುಗಾರರನ್ನೂ, ಅವರ ಸ್ಥಳೀಯ ಹಸ್ತಕರನ್ನೂ ಹೊಂದಿರುವ; ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡುತ್ತೇವೆ ಎಂಬ ಘೊಷಣೆಯೊಂದಿಗೆ ಈ ದೇಶದಲ್ಲಿ ಲೆಕ್ಕವಿಲ್ಲದಷ್ಟು ಭಯೋತ್ಪಾದಕ ರಕ್ತದೋಕುಳಿ ಎಸಗಿರುವ; ಕಾಶ್ಮೀರದಲ್ಲಿ ಭಾರತ-ವಿರೋಧಿ ಅಶಾಂತಿಯನ್ನು ಪ್ರಾಯೋಜಿಸುತ್ತಿರುವ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅನ್ನು ಹುಟ್ಟುಹಾಕಿ ಎರಡು ಸಲ ಅಧಿಕಾರಕ್ಕೇರಿಸಿರುವ; ಈಗಲೂ ಅಫ್ಘನ್ ತಾಲಿಬಾನ್ ಸರ್ಕಾರದ ಪ್ರಮುಖ ಅಂಗವಾದ ಹಖ್ಖಾನಿ ನೆಟ್​ವರ್ಕ್ ಅನ್ನು ನಿಯಂತ್ರಿಸುವ; ಪಾಕಿಸ್ತಾನದೊಳಗೇ ಸೇನೆಗೆ ವಿರುದ್ಧ ದನಿಯೆತ್ತುವ ರಾಜಕಾರಣಿಗಳನ್ನು, ಪತ್ರಕರ್ತರನ್ನು, ಮಾನವಹಕ್ಕುಗಳ ಹೋರಾಟಗಾರರನ್ನು ಹಾಗೂ ಕೆನಡಾ, ಸ್ವೀಡನ್, ಕೀನ್ಯಾ ಸೇರಿದಂತೆ ದೂರದೂರದ ದೇಶಗಳಲ್ಲೂ ಪಾಕ್-ವಿರೋಧಿ ಬಲೂಚಿಗಳು ಮತ್ತು ಸಿಂಧಿಗಳನ್ನು ಹುಡುಕಿ ಹುಡುಕಿ ಕೊಲ್ಲುವ ಐಎಸ್​ಐನ ಮುಖ್ಯಸ್ಥ ಹೀಗೆ ಸಾರ್ವಜನಿಕವಾಗಿ ಅಳುವಂತಾದದ್ದು ಹೇಗೆ?

ತನಗೆ ಅಗತ್ಯವೆನಿಸಿದಾಗ ಸೇನೆ ಯಾವುದೇ ಹಿಂಜರಿಕೆಯಿಲ್ಲದೆ ತಾನೇ ನೇರವಾಗಿ ಆಡಳಿತ ನಡೆಸುತ್ತಾ, ಅದು ಅಗತ್ಯವಿಲ್ಲವೆನಿಸಿದಾಗ ನಾಗರಿಕ ಸರ್ಕಾರವನ್ನು ತನ್ನ ಕೈಗೊಂಬೆ ಮಾಡಿಕೊಂಡು ಕುಣಿಸುತ್ತಾ ಬಂದಿರುವುದು ಇದುವರೆಗಿನ ಪಾಕ್ ಇತಿಹಾಸ. ಹೀಗಾಗಿ, ಜಗತ್ತಿನ ಬೇರೆಲ್ಲಾ ದೇಶಗಳಿಗೆ ಸೇನೆಗಳಿದ್ದರೆ, ಪಾಕಿಸ್ತಾನದಲ್ಲಿ ಸೇನೆಗಾಗಿಯೇ ಒಂದು ದೇಶವಿದೆ ಎಂಬ ಮಾತೂ ಚಾಲ್ತಿಗೆ ಬಂದು ದಶಕಗಳೇ ಕಳೆದುಹೋಗಿದೆ. ಹೀಗೆ ಪಾಕ್ ರಾಜಕಾರಣದಲ್ಲಿ ಸದಾ ಕೈಯಾಡಿಸುತ್ತಾ, ರಾಜಕಾರಣಿಗಳ ನಡುವೆ ವಿರಸ ತಂದಿಟ್ಟು, ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ ಸೇನೆಯ ಹಣೆಬರಹ ಈಗ ಬದಲಾಗುತಿದೆ. ಪಾಕಿಸ್ತಾನದ ಇತಿಹಾಸದಲ್ಲೇ ಈಗ ಮೊತ್ತಮೊದಲ ಬಾರಿಗೆ ರಾಜಕಾರಣಿಯೊಬ್ಬರು ಸೇನೆಯ ವ್ಯವಹಾರಗಳಲ್ಲಿ ಕೈಯಾಡಿಸತೊಡಗಿದ್ದಾರೆ. ಅದರೊಳಗೆ ಒಡಕು ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ! ಹೀಗೆ ಪಾಕ್ ರಾಜಕಾರಣವನ್ನೇ ತಿರುವುಮುರುವು ಮಾಡಿ ಸೇನೆಗೆ ಹೊಸ ಹಣೆಬರಹ ಬರೆಯುತ್ತಿರುವವರು ಕ್ರಿಕೆಟರ್-ರಾಜಕಾರಣಿ ಇಮ್ರಾನ್ ಅಹ್ಮದ್ ಖಾನ್ ನಿಯಾಜಿ.

ಇದೆಲ್ಲಾ ಹೇಗಾಯಿತೆಂದು ತಿಳಿಯಬೇಕಾದರೆ ನಾವು ಹೆಚ್ಚೇನೂ ಶ್ರಮಪಡಬೇಕಾಗಿಲ್ಲ. ಸೇನಾ ಮುಖ್ಯಸ್ಥ ಜ. ಕಮರ್ ಜಾವೆದ್ ಬಾಜ್ವಾ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್​ರ ನಡುವಿನ ಸಂಬಂಧಗಳು ಕಳೆದ ನಾಲ್ಕು ವರ್ಷಗಳಲ್ಲಿ ರೋಲರ್​ಕೋಸ್ಟರ್​ಗೇರಿ ಅನೂಹ್ಯ ವೇಗದಲ್ಲಿ ಹತ್ತಿಳಿದದ್ದರತ್ತ ಒಮ್ಮೆ ಕಣ್ಣಾಡಿಸಿದರೆ ಸಾಕಷ್ಟೇ. ಇಮ್ರಾನ್ ಖಾನ್ ಬಗ್ಗೆ ಒಟ್ಟಾರೆ ಸೇನೆಯ ನಡವಳಿಕೆಯನ್ನೇ ಗಮನಿಸುವುದಾದರೆ, ಮೊದಲಿಗೆ ದಶಕದ ಹಿಂದೆ ಅಧ್ಯಕ್ಷ ಅಸಿಫ್ ಆಲಿ ಜರ್ದಾರಿ ಭ್ರಷ್ಟ ಎಂದು ಕೂಗೆತ್ತುತ್ತಲೇ ಇಮ್ರಾನ್ ಖಾನ್ ಬಗ್ಗೆ ‘ಒಳ್ಳೆಯ’ ಮಾತುಗಳನ್ನಾಡುತ್ತಾ ಈ ಮಾಜಿ ಕ್ರಿಕೆಟರ್​ನ ರಾಜಕೀಯ ಉತ್ಕರ್ಷಕ್ಕೆ ನಾಂದಿ ಹಾಡಿದ್ದೇ ಅಂದಿನ ಸೇನಾ ಮುಖ್ಯಸ್ಥ ಆಷ್ಪಾಕ್ ಪರ್ವೆಜ್ ಕಯಾನಿ. ಅದೇನೂ 2013ರ ಚುನಾವಣೆಗಳಲ್ಲಿ ಇಮ್ರಾನ್ ಖಾನ್​ರ ಪಾಕಿಸ್ತಾನ್ ತೆಹ್ರೀಕ್-ಇನ್ಸಾಫ್ (ಪಿಟಿಐ) ಪಕ್ಷದ ಕೈಗೆ ಅಧಿಕಾರ ತಂದಿಡಲಿಲ್ಲ. ಆಗ ಪ್ರಧಾನಿಯಾದ ನವಾಜ್ ಶರೀಫ್ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವೆಬ್ಬಿಸಲು ಇಮ್ರಾನ್ ಖಾನ್​ಗೆ ಕುಮ್ಮಕ್ಕು ಕೊಟ್ಟದ್ದು ಹೊಸ ಸೇನಾ ಮುಖ್ಯಸ್ಥ ರಹೀಲ್ ಶರೀಫ್. ಅವರು ಹೇಳಿದ್ದೂ ನವಾಜ್ ಶರೀಫ್ ಭ್ರಷ್ಟ, ಇಮ್ರಾನ್ ಖಾನ್ ಬಹಳ ಕ್ಲೀನ್ ಮನುಷ್ಯ ಅಂತ. ನಂತರ ಬಂದ ಸೇನಾ ಮುಖ್ಯಸ್ಥ ಕಮರ್ ಜಾವೆದ್ ಬಾಜ್ವಾ ಬರೀ ಮಾತು ಮತ್ತು ತೆರೆಯ ಹಿಂದಿನ ಕುಮ್ಮಕ್ಕಷ್ಟೇ ಸಾಕಾಗದು ಎಂದು ತೀರ್ವನಿಸಿ ನೇರ ಅಖಾಡಕ್ಕಿಳಿದರು. ಸುವ್ಯವಸ್ಥೆ ಹಾಗೂ ಶಾಂತಿಯುತ ಮತದಾನಗಳ ನೆಪದಲ್ಲಿ 2018ರ ಚುನಾವಣೆಗಳಲ್ಲಿ ಎಲ್ಲ ಮತದಾನ ಕೇಂದ್ರಗಳಲ್ಲೂ ಸೈನಿಕರನ್ನು ನಿಲ್ಲಿಸಿದ ಬಾಜ್ವಾ, ಪಿಟಿಐ ಪರವಾಗಿ ಭಾರಿ ಪ್ರಮಾಣದಲ್ಲಿ ಚುನಾವಣಾ ಅಕ್ರಮಗಳನ್ನೆಸಗಿದ್ದು ಬಹಿರಂಗ ಸತ್ಯ. ಸೇನಾಧಿಕಾರಿಗಳು ಮತದಾರರಿಗೆ ಐನೂರು ರೂಪಾಯಿಯ ನೋಟುಗಳನ್ನೂ ಹಂಚಿದ್ದೂ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿಹೋಗಿದೆ. ಇಷ್ಟೆಲ್ಲಾ ಮಾಡಿಯೂ ಪಿಟಿಐಗೆ ಪೂರ್ಣ ಬಹುಮತ ಬಾರದಿದ್ದಾಗ ಸಣ್ಣಪುಟ್ಟ ಪಕ್ಷಗಳನ್ನು, ಪಕ್ಷೇತರರನ್ನು ಹಿಡಿದು ತಂದು ಇಮ್ರಾನ್ ಖಾನ್​ರ ಕೈ ಬಲಪಡಿಸಿ ಅವರನ್ನು ಪ್ರಧಾನಿ ಗದ್ದುಗೆಗೇರಿಸಿದ್ದೇ ಬಾಜ್ವಾ.

ಆದರೆ, ಈ ಹನಿಮೂನ್ ಮೂರೇ ವರ್ಷಗಳಲ್ಲಿ ಹಳಸಿಹೋಯಿತು. ಇದಕ್ಕೆ ಕಾರಣ ದಿನೇದಿನೆ ಅಗಾಧ ಜನಬೆಂಬಲವನ್ನು ಗಳಿಸಿಕೊಳ್ಳುತ್ತಾ ಹೋದ ಇಮ್ರಾನ್ ಖಾನ್ ಇನ್ನು ತಮ್ಮ ಕೈಗೊಂಬೆಯಾಗಿ ಉಳಿಯಲಾರರು ಎಂದು ಬಾಜ್ವಾ ಆತಂಕ ಪಟ್ಟದ್ದು. ಇಮ್ರಾನ್ ಖಾನ್​ರ ಕೈಗಳನ್ನು ಕಟ್ಟಿ ಹಾಕಹೊರಟ ಬಾಜ್ವಾ ಪ್ರಧಾನಿಯ ನಂಬಿಗಸ್ತ ಲೆ.ಜ. ಶೂಜಾ ಹಮೀದ್​ರನ್ನು ಐಎಸ್​ಐ ಮುಖ್ಯಸ್ಥನ ಸ್ಥಾನದಿಂದಿಳಿಸಿ ತಮ್ಮ ನಂಬಿಗಸ್ತ ಲೆ.ಜ. ನದೀಮ್ ಅಂಜುಂರನ್ನು ಅಲ್ಲಿಗೆ ತಂದರು, ಪ್ರಧಾನಿಯ ವಿರುದ್ಧ ಜನಾಭಿಪ್ರಾಯ ರೂಪಿಸಲು ಮೂಲಭೂತವಾದಿ ಪಕ್ಷ ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ್ ಅನ್ನು ಛೂ ಬಿಟ್ಟರು. ಅದಾವುದೂ ನಿರೀಕ್ಷಿತ ಫಲವನ್ನು ನಿರೀಕ್ಷಿತ ಸಮಯ ಮಿತಿಯೊಳಗೆ ತರದಿದ್ದಾಗ ಪಿಟಿಐನಲ್ಲೇ ಒಡಕು ತಂದು ಸಂಸತ್ತಿನಲ್ಲೇ ಇಮ್ರಾನ್ ಖಾನ್​ರ ಸ್ಥಾನ ಅಲುಗಾಡುವಂತೆ ಮಾಡಿದರು. ಜತೆಗೆ ಪ್ರಧಾನಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವಂತೆ ತೆರೆಯ ಮರೆಯಲ್ಲೇ ವಿರೋಧ ಪಕ್ಷಗಳನ್ನು ಎತ್ತಿಕಟ್ಟಿದರು. ಆದರೆ, ದೊಡ್ಡದಾಗಿ ಹೇಳಿದ್ದು ಮಾತ್ರ ಪ್ರಧಾನಿ ಮತ್ತು ವಿರೋಧಪಕ್ಷಗಳ ನಡುವಿನ ಹಣಾಹಣಿಯಲ್ಲಿ ಸೇನೆ ಅಲಿಪ್ತ ನೀತಿ ಅನುಸರಿಸುತ್ತಿದೆ ಎಂದು.

ಇಮ್ರಾನ್ ಖಾನ್ ಸೋಲೊಪ್ಪಿಕೊಳ್ಳುವ ಮನುಷ್ಯರಲ್ಲ. ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಸಮರ ನಡೆವಾಗ ಅರಿವುಳ್ಳ ಮನುಷ್ಯ ಒಳ್ಳೆಯದರ ಪರ ನಿಲ್ಲುತ್ತಾನೆಯೇ ಹೊರತು ಅಲಿಪ್ತನಾಗಿ ದೂರ ನಿಲ್ಲುವುದಿಲ್ಲ, ಹಾಗೆ ಮಾಡುವುದು ಅರಿವಿಲ್ಲದ ಜಾನ್​ವರ್​ಗಳು ಎಂದು ಚಾಟಿ ಬೀಸಿದರು. ಅಧಿಕಾರ ಕಳೆದುಕೊಂಡ ಮೇಲೂ ಅವರು ಸುಮ್ಮನಾಗಲಿಲ್ಲ. ಅಪಾದಮಸ್ತಕ ಭ್ರಷ್ಟರು ಎಂದು ತಾವೇ ಹಿಂದೆ ಹೇಳಿದ್ದ ಶರೀಫ್ ಸಹೋದರರನ್ನೇ ಈಗ ಅಧಿಕಾರಕ್ಕೆ ತಂದಿದ್ದೀರಲ್ಲ, ನೀವೆಷ್ಟು ಭ್ರಷ್ಟರಿರಬೇಕು ಎಂದು ಬಹಿರಂಗವಾಗಿ ಮತ್ತೆಮತ್ತೆ ಕೆಣಕುತ್ತಿದ್ದಾರೆ. ಅಷ್ಟೇ ಅಲ್ಲ, ಬಾಜ್ವಾರನ್ನು ದೇಶದ್ರೋಹಿ, ಮೀರ್ ಜಾಫರ್, ಮೀರ್ ಸಾದಿಕ್ ಎಂದು ಎಲ್ಲೆಲ್ಲೂ ಬಣ್ಣಿಸುತ್ತಿದ್ದಾರೆ. ಅವರ ಮಾತುಗಳನ್ನು ಇಡೀ ಪಾಕಿಸ್ತಾನ ಗಮನವಿಟ್ಟು ಕೇಳುತ್ತಿದೆ. ಸೇನೆಯ ಮಧ್ಯಮ ಹಾಗೂ ಕೆಳ ಸ್ತರ ಸಹ ಇಮ್ರಾನ್ ಖಾನ್ ಮಾತು ಕೇಳಿ ಉಚ್ಚ ಸ್ತರದ ವಿರುದ್ಧ ಕೂಗೆತ್ತಿವೆ. ಹಿಂದೆ ಯಾವ ರಾಜಕಾರಣಿಯೂ ಸೇನೆಯನ್ನು ಹೀಗೆ ಹೀಯಾಳಿಸಿರಲಿಲ್ಲ, ಅದನ್ನು ಒಡೆದಿರಲಿಲ್ಲ! ಹಾಗೆ ಯಾರಾದರೂ ಕಿಂಚಿತ್ ಪ್ರಯತ್ನ ಮಾಡಿದರೂ ಅವರನ್ನು ಸೇನೆ ಜೀವದಿಂದ ಉಳಿಸುತ್ತಿರಲಿಲ್ಲ. ಆದರೆ, ಇಂದು ಅದೇ ಸೇನೆ ಇಮ್ರಾನ್ ಖಾನ್ ವಿರುದ್ಧ ಏನೂ ಮಾಡಲಾಗುತ್ತಿಲ್ಲ. ಬದಲಾಗಿ, ಹೀಗೆಲ್ಲಾ ಯಾಕೆ ಹೇಳುತ್ತಿದ್ದೀರಿ, ಬೇಡ ಪ್ಲೀಸ್ ಎಂದು ಅಳುತ್ತಳುತ್ತಾ ಇಮ್ರಾನ್ ಖಾನ್​ರನ್ನು ಬೇಡಿಕೊಳ್ಳುತ್ತಿದೆ! ಸೇನೆಯ ಈ ದುರ್ಗತಿ ನಿಜವೇ? ಇಮ್ರಾನ್ ಖಾನ್​ರ ಹುಮ್ಮಸ್ಸು ಶ್ರಾವಣದ ಒಂದು ಹುಚ್ಚು ಮಳೆ ಮಾತ್ರವೇ ಅಥವಾ ಪಾಕ್ ರಾಜಕಾರಣದ ಶಾಶ್ವತ ಬದಲಾವಣೆಯ ಮುನ್ಸೂಚನೆಯೇ? ಹಾಗೇ ಇದ್ದರೆ ಉಪಖಂಡದ ಭವಿಷ್ಯ ಯಾವ ದಾರಿ ಹಿಡಿಯಬಹುದು? ಈ ಪ್ರಶ್ನೆಗಳನ್ನು ಲೇಖನದ ಎರಡನೆಯ ಭಾಗದಲ್ಲಿ ವಿಶ್ಲೇಷಿಸೋಣ.

ಸದ್ಯಕ್ಕೆ ಕೊನೆಯ ಮಾತು: ಇಮ್ರಾನ್ ಖಾನ್​ರ ವಿರೋಧವನ್ನೂ ಬದಿಗೊತ್ತಿ ಹೆಣ್ಣು ಮುಖದ ನದೀಂ ಅಂಜುಂರನ್ನು ಐಎಸ್​ಐ ಮುಖ್ಯಸ್ಥರನ್ನಾಗಿ ಬಜ್ವಾ ನೇಮಿಸಿದಾಗ ಇದೇಕೋ ಸರಿಯಾದಂತಿಲ್ಲ ಎಂದು ನನಗನ್ನಿಸಿತ್ತು. ಆದರೆ, ಐಎಸ್​ಐ ಮುಖ್ಯಸ್ಥ ಥೇಟ್ ಅಸಹಾಯಕ ದೇಹಾತೀ ಔರತ್​ನಂತೆ ಜನರೆದುರು ಹಾಡಾಡಿಕೊಂಡು ಅಳುವುದನ್ನು ನೋಡುತ್ತೇನೆ ಎಂದು ಮಾತ್ರ ನಾನು ಅಂದುಕೊಂಡಿರಲಿಲ್ಲ

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net