

ಭಾರತದ ವಿರುದ್ಧ ಚೀನೀಯರು ಕಾಲು ಕೆರದುಕೊಂಡು ಜಗಳಕ್ಕೆ ಬಂದಾಗ, ಅವರ ಜತೆ ಪಾಕಿಸ್ತಾನೀಯರೂ ಸೇರಿಕೊಳ್ಳುವ ಸೂಚನೆ ಹೊರಬಂದಾಗ ಭಾರತದ ಸಹಾಯಕ್ಕೆ ನಿಂತದ್ದು ಇದೇ ಟ್ರಂಪ್ರ ಅಮೆರಿಕ. ಅದು ಯಾವ ಮಟ್ಟದ ಸಹಾಯವೆಂದರೆ ‘ಅಮೆರಿಕದ ರಕ್ಷಣಾಪಡೆಗಳು ಭಾರತದ ಪರವಾಗಿ ಹೋರಾಡುತ್ತವೆ’ ಎಂದು ಘೊಷಿಸಿ ಚೀನಾ ಮತ್ತು ಪಾಕಿಸ್ತಾನಗಳ ಎದೆಯನ್ನು ಡವಗುಟ್ಟಿಸುವಷ್ಟು!
ಅಧ್ಯಕ್ಷ ಟ್ರಂಪ್ ಅಂತಿಮವಾಗಿ ಶಾಂತಿ ಪುರಸ್ಕಾರಕ್ಕೆ ಭಾಜನರಾಗುತ್ತಾರೋ ಇಲ್ಲವೋ ಈಗಲೇ ಹೇಳುವ ಹಾಗಿಲ್ಲ. ಆದರೆ ನಾಲ್ಕು ವರ್ಷಗಳ ಹಿಂದೆ ಜಾಗತಿಕ ರಂಗದಲ್ಲಿ ನಗೆಪಾಟಲಿಗೆ, ನಿಂದನೆಗೆ, ದ್ವೇಷಕ್ಕೂ ಗುರಿಯಾಗಿದ್ದ ಟ್ರಂಪ್ ಇಂದು ಜಗತ್ತಿನ ರಕ್ಷಕನಾಗಿ ಹೊರಹೊಮ್ಮಿದ್ದಾರೆ ಎನ್ನುವುದರಲ್ಲಂತೂ ಎರಡು ಮಾತಿಲ್ಲ. ಈ ಚಮತ್ಕಾರ ಹೇಗಾಯಿತು? ಬನ್ನಿ, ಅದನ್ನಿಷ್ಟು ಶೋಧಿಸೋಣ. ಇದನ್ನೂ ಓದಿ: ರಾಷ್ಟ್ರಘಾತಕ ಹುನ್ನಾರಗಳಿಗೆ ಮದ್ದು ರಾಷ್ಟ್ರಹಿತ ಚಿಂತನೆಗಳು
2016ರ ಚುನಾವಣೆಗಳಿಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಟ್ರಂಪ್ ನಾಮಾಂಕನಗೊಂಡಾಗ ಅವರು ಅಲ್ಲಿಯವರೆಗಿನ ತಮ್ಮ ವರ್ತನೆಗಳಿಂದಾಗಿ ಜನತೆಯಲ್ಲಿ ಮೂಡಿಸಿದ್ದ ಅಭಿಪ್ರಾಯಗಳೆಂದರೆ ಆತ ಒರಟ, ಹುಚ್ಚು ನಿರ್ಧಾರಗಳನ್ನು ವಿವೇಚನೆಯಿಲ್ಲದೆ ತೆಗೆದುಕೊಳ್ಳುವ ಮನುಷ್ಯ ಎಂದು. ಹೀಗಾಗಿಯೇ, ಅವರು ಅಧ್ಯಕ್ಷರಾಗಿ ಅಮೆರಿಕವನ್ನು ಯಾವುದಾದರೂ ವಿನಾಶಕಾರಿ ಕಲಹದಲ್ಲಿ ಕೆಡವಿ ಆ ಸಂಪದ್ಭರಿತ, ಶಕ್ತಿಶಾಲಿ ದೇಶವನ್ನು ಮುಳುಗಿಸಿಬಿಡುತ್ತಾರೆ ಎಂಬ ಆತಂಕ ಉಂಟಾಗಿದ್ದು ಸಹಜವೇ ಆಗಿತ್ತು. ಶ್ವೇತಭವನ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಅವರು ಆಡಿದ ಹಲವು ಮಾತುಗಳು, ತೆಗೆದುಕೊಂಡ ಕೆಲವು ನಿರ್ಧಾರಗಳು ಆ ಆತಂಕಕ್ಕೆ ಇಂಬುಗೊಡುವಂತೆಯೇ ಇದ್ದವು. ಮೆಕ್ಸಿಕೋ ಜತೆಗಿನ ಗಡಿಯಲ್ಲಿ ಗೋಡೆ ಎಬ್ಬಿಸುವುದಾಗಿ, ಅದರ ಖರ್ಚನ್ನು ಮೆಕ್ಸಿಕನ್ನರೇ ಭರಿಸುವಂತೆ ಮಾಡುವುದಾಗಿ ಹೇಳಿದ್ದು; ಇರಾನ್, ಲಿಬಿಯಾ, ಸಿರಿಯಾ ಸೇರಿ 7 ಮುಸ್ಲಿಂ ರಾಷ್ಟ್ರಗಳಿಂದ ವಲಸೆಗಾರರಾಗಲೀ, ನಿರಾಶ್ರಿತರಾಗಲೀ ಅಮೆರಿಕಕ್ಕೆ ಕಾಲಿಡುವುದನ್ನು ನಿರ್ಬಂಧಿಸುವ ಕುರಿತಾಗಿ ಹೊರಡಿಸಿದ ಅಧ್ಯಕ್ಷೀಯ ಆದೇಶ- ಇಂತಹವು ಉಳಿದ ಜಗತ್ತಿರಲಿ, ಅಮೆರಿಕದಲ್ಲೇ ತೀವ್ರ ನಿಂದನೆ, ವಿರೋಧಕ್ಕೆ ಗುರಿಯಾದವು. ಹೇಳಿಕೇಳಿ ಅಮೆರಿಕ ವಲಸಿಗರ ದೇಶ, ಮುಕ್ತವಲಸೆ ನೀತಿಯನ್ನದು ತನ್ನ ಹುಟ್ಟಿನಿಂದಲೂ ಪಾಲಿಸಿಕೊಂಡು ಬಂದಿದೆ. ಹೀಗಾಗಿ, ಅಧ್ಯಕ್ಷ ಟ್ರಂಪ್ ಆದೇಶವನ್ನು ವಿರೋಧಿಸಿ ದೇಶಾದ್ಯಂತ ಹಲವು ನಗರಗಳಲ್ಲಿ ಪ್ರದರ್ಶನಗಳಾದವು. ಅಧ್ಯಕ್ಞರ ವಿವೇಚನಾರಹಿತ ಆದೇಶ ಅಮೆರಿಕದ ಐತಿಹಾಸಿಕ ಪರಂಪರೆಗೆ ವಿರುದ್ಧವಾಗಿದೆಯೆಂದೂ, ಅದರಿಂದಾಗಿ ಅಮೆರಿಕ ಎಂಬ ಆಧುನಿಕ ರಾಷ್ಟ್ರದ ಮೂಲಭೂತ ಮೌಲ್ಯಗಳಿಗೆ ಧಕ್ಕೆಯಾಗಿದೆಯೆಂದೂ ಸೆನೇಟರ್ ಚಾರ್ಲ್ಸ್ ಶೂಮರ್ರಂಥವರು ಕಣ್ಣೀರು ಹಾಕಿದರು. ಅದೇ ನಿಲುವು ಮಾಧ್ಯಮದಲ್ಲೂ ವ್ಯಕ್ತವಾಯಿತು. ‘ನ್ಯೂಯಾರ್ಕ್ ಡೈಲಿ ನ್ಯೂಸ್’ ಪತ್ರಿಕೆಯಂತೂ ಸ್ಟ್ಯಾಚು ಆಫ್ ಲಿಬರ್ಟಿ ಕಣ್ಣೀರು ಹನಿಸುತ್ತಿರುವಂಥ ಚಿತ್ರವನ್ನು ಮುಖಪುಟದಲ್ಲೇ ಪ್ರಕಟಿಸಿತು. ಇದನ್ನೂ ಓದಿ: ಮತಿಗೆಟ್ಟ ನಾಯಕರಿಂದಾಗಿ ಗತಿಗೆಟ್ಟ ಪಾಕಿಸ್ತಾನ
ತಮ್ಮ ಆ ಆದೇಶದಿಂದಾಗಿ ಟ್ರಂಪ್ ಹೊರಜಗತ್ತಿನಲ್ಲೂ ವಿರೋಧವನ್ನು ಎದುರಿಸಿದರು. ಇಂಥ ‘ಪ್ರತಿಗಾಮಿ’ ಮನೋಭಾವದ ವಿದೇಶೀ ನಾಯಕನೊಬ್ಬ ಬ್ರಿಟಿಷ್ ನೆಲದಲ್ಲಿ ಕಾಲಿಡುವುದು ಮಹಾರಾಣಿಯ ಸರ್ಕಾರಕ್ಕೆ ಅವಮಾನವೆಸಗಿದಂತೆ, ಹೀಗಾಗಿ ಅಧ್ಯಕ್ಷ ಟ್ರಂಪ್ ಬ್ರಿಟನ್ಗೆ ನೀಡಲಿರುವ ಅಧಿಕೃತ ಭೇಟಿಯನ್ನು ರದ್ದುಗೊಳಿಸಬೇಕೆಂಬ ಆನ್ಲೈನ್ ಪಿಟಿಷನ್ ಅಂತರ್ಜಾಲದಲ್ಲಿ ಹರಿಯತೊಡಗಿದ ಕೆಲವೇ ತಾಸುಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಸಹಿಗಳನ್ನು ಪಡೆದುಕೊಂಡಿತು! ಇನ್ನು ಮುಸ್ಲಿಂ ರಾಷ್ಟ್ರಗಳ ಪ್ರತಿಕ್ರಿಯೆಗಳನ್ನು ಕೇಳವುದೇ ಬೇಡ. ಏಷ್ಯಾ ಮತ್ತು ಆಫ್ರಿಕಾಗಳ ಹಲವಾರು ಮುಸ್ಲಿಂ ಅಷ್ಟೇ ಅಲ್ಲ, ಮುಸ್ಲಿಮೇತರ ರಾಷ್ಟ್ರಗಳ ಜನರ ಜತೆ ಜನನಾಯಕರೂ ಟ್ರಂಪ್ ಆದೇಶದ ವಿರುದ್ಧ ದೊಡ್ಡದಾಗಿ ದನಿಯೆತ್ತಿದರು. ಅದಾಗಿ ಸರಿಯಾಗಿ 3 ವರ್ಷಗಳ ನಂತರ ಜಗತ್ತಿನ ಜತೆ ಅಮೆರಿಕ ಕೂಡ ಕರೊನಾವೈರಸ್ ಮಾರಿಗೆ ಸಿಲುಕಿ ತತ್ತರಿಸತೊಡಗಿದಾಗ, ಆ ರೋಗಕ್ಕೆ ಮಲೇರಿಯಾ ಶಮನಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಪ್ರಯೋಜನಕಾರಿ ಎಂಬ ಸುದ್ದಿ ಹಬ್ಬುತ್ತಿದ್ದಂತೇ ಟ್ರಂಪ್ರ ಗಮನ ಆ ಮಾತ್ರೆಗಳ ಅತಿ ದೊಡ್ಡ ಉತ್ಪಾದಕನಾದ ಭಾರತದತ್ತ ಹೊರಳಿತು; ಸರಿ, ಮಾತ್ರೆಗಳಿಗಾಗಿ ಭಾರತಕ್ಕೆ ಬೇಡಿಕೆಯಿತ್ತರು. ‘ಭಾರತ ಮಾತ್ರೆಗಳನ್ನು ಕೊಡದಿದ್ದರೇನು ಮಾಡುತ್ತೀರಿ? ಆ ದೇಶದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೀರಾ?’ ಎಂದು ‘ಅತಿಬುದ್ಧಿವಂತ’ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಟ್ರಂಪ್ ಯೋಚಸಿದೇ ಇತ್ತ ಉತ್ತರ ‘ಹೌದು, ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು. ಅದಕ್ಕಾಗಿ ಈ ದೇಶದಲ್ಲಿ ಅವರು ತೀವ್ರ ಟೀಕೆಗೆ ಗುರಿಯಾದರು. ಆದರೆ ಮುಂದಿನ ಎರಡೇ ತಿಂಗಳಲ್ಲಿ ಭಾರತದ ವಿರುದ್ಧ ಚೀನೀಯರು ಕಾಲು ಕೆರೆದುಕೊಂಡು ಜಗಳಕ್ಕೆ ಬಂದಾಗ, ಅವರ ಜತೆ ಪಾಕಿಸ್ತಾನೀಯರೂ ಸೇರಿಕೊಳ್ಳುವ ಸೂಚನೆ ಹೊರಬಂದಾಗ ಭಾರತದ ಸಹಾಯಕ್ಕೆ ನಿಂತದ್ದು ಇದೇ ಟ್ರಂಪ್ರ ಅಮೆರಿಕ. ಅದು ಯಾವ ಮಟ್ಟದ ಸಹಾಯವೆಂದರೆ ‘ಅಮೆರಿಕದ ರಕ್ಷಣಾಪಡೆಗಳು ಭಾರತದ ಪರವಾಗಿ ಹೋರಾಡುತ್ತವೆ’ ಎಂದು ಘೊಷಿಸಿ ಚೀನಾ ಮತ್ತು ಪಾಕಿಸ್ತಾನಗಳ ಎದೆಯನ್ನು ಡವಗುಟ್ಟಿಸುವಷ್ಟು!
ಯಾವುದೇ ವಿಷಯದ ಕುರಿತಾಗಿ ಅಮೆರಿಕ ಅಧ್ಯಕ್ಷರ ಪ್ರಾರಂಭಿಕ ಮಾತುಗಳಲ್ಲಿ ಮತ್ತು ನಂತರದ ಸರ್ಕಾರಿ ನೀತಿಗಳಲ್ಲಿ ಹೀಗೇಕೆ ವ್ಯತ್ಯಾಸವಿರುತ್ತದೆ? ಈ ಪ್ರಶ್ನೆಗೆ ನಿಮಗೆ ಉತ್ತರ ಬೇಕಾದರೆ ಅಮೆರಿಕದ ಆಡಳಿತಾತ್ಮಕ ವ್ಯವಸ್ಥೆಯಲ್ಲಿನ ವೈಚಿತ್ರ್ಯವೊಂದನ್ನು ನಿಮ್ಮ ಗಮನಕ್ಕೆ ತರಬೇಕಾಗುತ್ತದೆ.
ಬಹುಪಾಲು ಅಮೆರಿಕನ್ ಅಧ್ಯಕ್ಷರುಗಳು ವೃತ್ತಿಪರ ರಾಜಕಾರಣಿಗಳಲ್ಲ. ಅಂದರೆ ನಮ್ಮ ರಾಜಕಾರಣಿಗಳಂತೆ ಅವರು ಜೀವಮಾನವಿಡೀ ರಾಜಕಾರಣವನ್ನೇ ಪರ್ಮನೆಂಟ್ ಉದ್ಯೋಗವನ್ನಾಗಿ ಮಾಡಿಕೊಂಡಿರುವುದಿಲ್ಲ ಮತ್ತು ಆ ಕಾರಣದಿಂದಲೇ ಅವರಿಗೆ ಆಡಳಿತದ ಪರಿಚಯವಿರುವುದಿಲ್ಲ. ಚುನಾವಣೆಗಳಲ್ಲಿ ಗೆಲ್ಲುವ ಉದ್ದೇಶದಿಂದಲೇ ರಾಜಕೀಯ ಪಕ್ಷಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಹೆಸರು ಮಾಡಿರುವವರನ್ನು ತಮ್ಮ ಅಭ್ಯರ್ಥಿಯಾಗಲು ಪುಸಲಾಯಿಸಿ ಕಣಕ್ಕಿಳಿಸುತ್ತವೆ. ಇಂತಹವರ ರಾಜಕೀಯ ತಿಳಿವಳಿಕೆ ಸಾಮಾನ್ಯವಾಗಿ ನಿರ್ದಿಷ್ಟ ಪಕ್ಷವೊಂದರ ಕಟ್ಟಾ ಬೆಂಬಲಿಗರಾಗಿರುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ಪಕ್ಷನಿಷ್ಠೆ ಅವರು ಬದುಕಿನ ಯಾವುದೋ ಹಂತದಲ್ಲಿ ರೂಪಿಸಿಕೊಂಡದ್ದಾಗಿರಬಹುದು ಅಥವಾ ತಲೆತಲಾಂತರಗಳಿಂದ ಬಂದದ್ದಾಗಿರಬಹುದು. ಹೀಗೆ, ಯಾವುದೋ ಕ್ಷೇತ್ರದಲ್ಲಿ ಸಾಧನೆಗೈದ ಆದರೆ ರಾಜಕಾರಣ ಹಾಗೂ ಆಡಳಿತಾನುಭವವಿಲ್ಲದ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದಾಗ ಆಡಳಿತದ ನೀತಿನಿಲುವುಗಳನ್ನು ನಿರ್ಧರಿಸುವಾಗ ಪಕ್ಷದ ಹಿರಿಯರ ಮಾರ್ಗದರ್ಶನ ಪಡೆಯುತ್ತಾರೆ. ಅವರು ಆ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮಾಂಕನಗೊಂಡಾಗಲೇ ಈ ಮಾರ್ಗದರ್ಶನ ಪ್ರಕ್ರಿಯೆ ಆರಂಭವಾಗುತ್ತದೆ. ಚುನಾವಣಾಪ್ರಚಾರದಲ್ಲಿ ಅಭ್ಯರ್ಥಿ ಆಡಳಿತಾತ್ಮಕ ಬದಲಾವಣೆ ಹಾಗೂ ಆಂತರಿಕ ಮತ್ತು ವಿದೇಶ ನೀತಿಗಳ ಬಗ್ಗೆ ‘ಗಂಭೀರ’ವಾಗಿ ಆಡುವ ಹೆಚ್ಚಿನ ಮಾತುಗಳು ಅವರ ಸ್ವಂತದ್ದಾಗಿರುವುದಿಲ್ಲ. ಸಹಾಯಕರು ಹಾಗೂ ಸಲಹೆಗಾರರು ಹೇಳುವ ಮಾತುಗಳನ್ನು ಅವರು ವಿಶಿಷ್ಟವಾದ ಶೈಲಿಯಲ್ಲಿ ಜನರಿಗೆ ಹೇಳುತ್ತಾರೆ ಅಷ್ಟೇ. ನಯ ಮಾತುಗಾರ ಅಭ್ಯರ್ಥಿ ಬೆಣ್ಣೆಯಲ್ಲಿ ಕೂದಲೆಳೆದಂತೆ ಹೇಳಿದರೆ 'politically correct' ಆಗಿ ಅಂದರೆ ಜಾಣತನದ ಮಾತಾಡಲು ಬಾರದ, ಎಲ್ಲವನ್ನೂ ನೇರಾನೇರ ಹೇಳಿಬಿಡುವ ಸ್ವಭಾವದ ಟ್ರಂಪ್ರಂಥ ವ್ಯಕ್ತಿ ಒರಟೊರಟಾಗಿ ಹೇಳುತ್ತಾರೆ. ಇದನ್ನೂ ಓದಿ: ನಾಸ್ತಿಕ ಚೀನಾದ ವಸಾಹತಾಗುತ್ತಿರುವ ಮುಸ್ಲಿಂ ಪಾಕಿಸ್ತಾನ
ಇನ್ನು ಅಭ್ಯರ್ಥಿಯೊಬ್ಬ ಚುನಾವಣೆಯಲ್ಲಿ ವಿಜಯಿಯಾಗಿ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಏನಾಗುತ್ತದೆ ಎನ್ನುವುದಂತೂ ಮತ್ತೂ ಸ್ವಾರಸ್ಯಕರ ವಿಷಯ. ಹೊಸ ಅಧ್ಯಕ್ಷ ಹಿಂದಿನ ಅಧ್ಯಕ್ಷರ ಪಕ್ಷದವರೇ ಆಗಿದ್ದರೆ ಹಾಗೂ ಯಾವುದೇ ತುರ್ತು ಸನ್ನಿವೇಶ ಎದುರಾಗದಿದ್ದರೆ ಹೊಸ ಆಡಳಿತದ ಆಂತರಿಕ ಹಾಗೂ ವಿದೇಶ ನೀತಿಗಳಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ. ಗಂಭೀರ ಹಾಗೂ ಮಹತ್ವಪೂರ್ಣ ಬದಲಾವಣೆಗಳಾಗುವುದು ವಿಶೇಷ ಸನ್ನಿವೇಶಗಳು ಎದುರಾದಾಗ ಮಾತ್ರ. ಕಳೆದ 100 ವರ್ಷಗಳಲ್ಲಿ ಅಂಥ ಸನ್ನಿವೇಶಗಳು ಸೃಷ್ಟಿಯಾದದ್ದು 1917ರಲ್ಲಿ ಯುದ್ಧನಿರತ ಜರ್ಮನ್ ನೌಕಾಸೇನೆ ತಟಸ್ಥ ಅಮೆರಿಕದ ‘ಲೂಸಿಯಾನಾ’ ಜಹಜನ್ನು ಮುಳುಗಿಸಿದಾಗ, 1929ರಲ್ಲಿ ಏಕಾಏಕಿ ‘ಮಹಾ ಆರ್ಥಿಕ ಮುಗ್ಗಟ್ಟು’ ಎರಗಿದಾಗ, 1941ರಲ್ಲಿ ಜಪಾನ್ ಸುಮ್ಮನಿರಲಾರದೆ ಪರ್ಲ್ ಹಾರ್ಬರ್ ಮೇಲೆ ದಾಳಿ ಎಸಗಿದಾಗ, 1945-46ರಲ್ಲಿ ಕಮ್ಯೂನಿಸ್ಟ್ ಸೋವಿಯೆತ್ ಯೂನಿಯನ್ ಪೂರ್ವ ಯುರೋಪಿನಲ್ಲಿ ಸೈದ್ಧಾಂತಿಕ ಹಾಗೂ ಭೌಗೋಳಿಕ ವಿಸ್ತರಣಕ್ಕಾಗಿ ಪ್ರಯತ್ನ ಆರಂಭಿಸಿ ಆ ಮೂಲಕ ಅಮೆರಿಕದ ಹಿತಾಸಕ್ತಿಗಳಿಗೆ ಬೆದರಿಕೆ ಒಡ್ಡಿದಾಗ, 2001ರ ಸೆಪ್ಟೆಂಬರ್ 11ರಂದು ಅಲ್-ಖಯೀದಾ ಭಯೋತ್ಪಾದಕರು ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲೆ ದಾಳಿ ಎಸಗಿದಾಗ. ಈ ಬಗೆಯ ಗಂಭೀರ ಪರಿಸ್ಥಿತಿಗಳು ಘಟಿಸದಿದ್ದರೆ ಎಲ್ಲವೂ ಮೊದಲಿನಂತೇ ಸುಸೂತ್ರವಾಗಿ ನಡೆಯತೊಡಗುತ್ತದೆ.
ಆದರೆ, ಇದಕ್ಕೆ ವಿರುದ್ಧವಾಗಿ ಹೊಸ ಅಧ್ಯಕ್ಷ ವಿರೋಧಪಕ್ಷಕ್ಕೆ ಸೇರಿದವರಾಗಿದ್ದರೆ ಆಗ ದೇಶದ ಒಳಗೆ ಅಥವಾ ಹೊರಗೆ ಯಾವುದೇ ಗಂಭೀರ ಸನ್ನಿವೇಶಗಳು ಉಂಟಾಗದಿದ್ದರೂ ಸರ್ಕಾರದ ನೀತಿಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಾಣತೊಡಗುತ್ತವೆ. ಈ ಬದಲಾವಣೆಗಳ ಪ್ರಮಾಣ ಹೊಸ ಅಧ್ಯಕ್ಷರ ಪಕ್ಷ ಆಡಳಿತದಿಂದ ಎಷ್ಟು ವರ್ಷ ಹೊರಗುಳಿದಿತ್ತು ಎನ್ನುವುದರ ಮೇಲೆ ನಿರ್ಣಯವಾಗುತ್ತದೆ. ಹೀಗಾಗುವುದಕ್ಕೆ ಆಸಕ್ತಿಕರ ಕಾರಣವಿದೆ. ಸಾಮಾನ್ಯವಾಗಿ ಹೊಸ ಅಧ್ಯಕ್ಷ ಬಂದ ಕೂಡಲೇ ಹಳೆಯ ಅಧ್ಯಕ್ಷ ವಿವಿಧ ಇಲಾಖೆಗಳಿಗೆ ನೇಮಕ ಮಾಡಿಕೊಂಡಿದ್ದ ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿಗಳು, ರಾಜತಂತ್ರಜ್ಞರು, ಸಲಹೆಗಾರರು ಮುಂತಾದ ಉನ್ನತಾಧಿಕಾರಿಗಳನ್ನು ಬದಲಾಯಿಸುವುದು ಒಂದು ಪಾಲಿಸಲೇಬೇಕಾದ ನಿಯಮ ಎಂಬಂತೆ ನಡೆಯುತ್ತದೆ. ಹೊಸ ಅಧ್ಯಕ್ಷ ನೇಮಿಸಿಕೊಳ್ಳುವುದು ಸಾಮಾನ್ಯವಾಗಿ ತಮ್ಮದೇ ಪಕ್ಷದ ಹಿಂದಿನ ಅಧ್ಯಕ್ಷರ ಜತೆಗಿದ್ದವರನ್ನೇ. ಇವರ ಕುರಿತಾದ ಸಮಸ್ಯೆಯೆಂದರೆ ತಮ್ಮ ಪಕ್ಷದ ಹಿಂದಿನ ಅಧ್ಯಕ್ಷ ಅಧಿಕಾರ ಕಳೆದುಕೊಂಡಾಗ ಇವರೂ ಅಧಿಕಾರ ವಂಚಿತರಾಗಿದ್ದವರು ಮತ್ತು ಮೂಲ ಉದ್ಯೋಗಗಳಿಗೆ ಹಿಂತಿರುಗಿದ್ದವರು. ಅಧಿಕಾರದಿಂದ ದೂರವಿದ್ದ ದಿನಗಳಲ್ಲಿ ಅಂದರೆ ನಾಲ್ಕು, ಎಂಟು ಅಥವಾ ಹನ್ನೆರಡು ವರ್ಷಗಳಲ್ಲಿ ಇವರು ಹೆಚ್ಚಿನಂಶ ಅವರ ವೃತ್ತಿಗಳಲ್ಲಿ ವ್ಯಸ್ತರಾದರೇ ಹೊರತು ರಾಷ್ಟ್ರಿಯ, ಅಂತಾರಾಷ್ಟ್ರೀಯ ಬೆಳವಣಿಗೆಗಳತ್ತ ಗಮನ ನೀಡಿರುವುದಿಲ್ಲ. ಅಮೆರಿಕನ್ನರು ತುಂಬ ಬುದ್ಧಿವಂತರು, ತಿಳಿವಳಿಕಸ್ಥರು ಎಂಬುದೇನೋ ನಿಜ. ಆದರೆ ಅವರ ತಿಳಿವಳಿಕೆ ಮತ್ತು ಪ್ರಾವೀಣ್ಯ ತಾವು ಕೈಗೊಂಡಿರುವ ವೃತ್ತಿಗಷ್ಟೇ ಸೀಮಿತವಾಗಿರುತ್ತದೆ ಎನ್ನುವುದೂ ಅಷ್ಟೇ ನಿಜ. ತಮ್ಮ ವೃತ್ತಿಗೆ ಹೊರತಾದ ವಿಷಯಗಳಲ್ಲಿ ಇವರ ಜ್ಞಾನ ಸಾಮಾನ್ಯವಾಗಿ ಅತ್ಯಲ್ಪ. ಇದು ಅಧಿಕಾರದಿಂದ ಹೊರಗುಳಿದು ಹಿಂದಿನ ವೃತ್ತಿಗೇ ಹಿಂತಿರುಗಿದವರ ವಿಷಯದಲ್ಲೂ ನಿಜ. ಹೀಗೆ ತಾವು ಅಧಿಕಾರದಿಂದ ಹೊರಗಿದ್ದ ಅವಧಿಯಲ್ಲಿ ಘಟಿಸಿದ ಬೆಳವಣಿಗೆಗಳ ಬಗ್ಗೆ ಇರಬೇಕಾದಷ್ಟು ಅರಿವಿಲ್ಲದ ಇವರು ತಮ್ಮ ಪಕ್ಷದವರೇ ಅಧ್ಯಕ್ಷರಾದಾಗ ಮತ್ತೆ ಸರ್ಕಾರದಲ್ಲಿ ಮುಖ್ಯಸ್ಥಾನಗಳನ್ನು ಗಳಿಸಿಕೊಳ್ಳುತ್ತಾರೆ. ಆದರೆ ಇವರ ತಿಳಿವಳಿಕೆಯಲ್ಲಿ ಸಮಕಾಲೀನತೆ ಇಲ್ಲದಿರುವುದರಿಂದ ಹಾಗೂ ವರ್ತಮಾನದ ಅಗತ್ಯಗಳ ಬಗ್ಗೆ ಸ್ಪಷ್ಟ ಅರಿವಿಲ್ಲದಿರುವ ಕಾರಣದಿಂದ ಯಾವುದೇ ಸಮಕಾಲೀನ ಸಮಸ್ಯೆಯ ಬಗ್ಗೆ ಇವರ ತೀರ್ವನಗಳು ಸಮರ್ಪಕವಾಗಿರುವುದಿಲ್ಲ. ಮೊದಲೇ ತಿಳಿವಳಿಕೆಯಿಲ್ಲದ ಅಧ್ಯಕ್ಷರಿಗೆ ಇಂಥವರು ಸಹಾಯಕರಾದಾಗ ಹೊಸ ಸರ್ಕಾರದ ನೀತಿನಿಲುವುಗಳು ಅರ್ತಾಕವಾಗುವುದು, ಆ ಕಾರಣದಿಂದಲೇ ಟೀಕೆಗೋ, ನಗೆಪಾಟಲಿಗೋ ಒಳಗಾಗುವುದು ಸಾಮಾನ್ಯ. ಇದು ಹೇಗಾಗುತ್ತದೆಂದು ಮನವರಿಕೆಯಾಗಬೇಕಾದರೆ ನಮ್ಮ ತಲೆಮಾರೇ ಕಂಡ ಕೆಲವು ಪ್ರಕರಣಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ವಿವರಿಸಬೇಕಾಗುತ್ತದೆ. ಅದನ್ನು ಮುಂದಿನವಾರ ಲೇಖನದ ಎರಡನೆಯ ಭಾಗದಲ್ಲಿ ಮಾಡೋಣ. ಆ ಮೂಲಕ, ಟ್ರಂಪ್ ಆರಂಭದಲ್ಲಿ ಮೂಡಿಸಿದ ಋಣಾತ್ಮಕತೆ, ಈಗ ಸಾಧಿಸಿರುವ ಧನಾತ್ಮಕತೆಗಳ ಪರಿಚಯವನ್ನೂ ಮಾಡಿಕೊಳ್ಳೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)