

ಬ್ಯಾಂಕಿನಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತನಾದ ನಾನು ನನ್ನ ಸೇವಾವಧಿಯಲ್ಲಿ ತರತರದ ಗ್ರಾಹಕರನ್ನು ನೋಡಿದ್ದೇನೆ. ನನ್ನ ಅನುಭವದ ಆಧಾರದಲ್ಲಿ ಈ ಅಂಕಣದಲ್ಲಿ ಒಮ್ಮೆ ಗ್ರಾಹಕರ ಬಗ್ಗೆ, ಗ್ರಾಹಕ ಸೇವೆಯ ಬಗ್ಗೆ
ಬ್ಯಾಂಕಿನಲ್ಲಿ ಸಿಗುವ ವಿವಿಧ ಸೇವೆಗಳನ್ನು ಶುಲ್ಕ ನೀಡಿ ಪಡೆದುಕೊಳ್ಳುವ ಗ್ರಾಹಕರು ಹೆಚ್ಚಾಗಿ ಅವರೇ ಅವುಗಳನ್ನು ಬಳಸುತ್ತಾರೆ. ಹೀಗಾಗಿ ನಿಜವಾದ ಅರ್ಥದಲ್ಲಿ ಅವರು ಬಳಕೆದಾರರು. ಸೇವೆಯಲ್ಲಿ ಲೋಪವಾದರೆ ಬ್ಯಾಂಕಿನ ಗ್ರಾಹಕರು ಬಳಕೆದಾರರ ರಕ್ಷಣಾ ಕಾಯ್ದೆಯಡಿ ಬಳಕೆದಾರರ ವೇದಿಕೆಗೆ ದೂರು ಸಲ್ಲಿಸಬಹುದು. ಆದರೂ ಬ್ಯಾಂಕಿಂಗ್ ಸೇವೆಗಳನ್ನು ಬಳಸುವವರನ್ನು ಗ್ರಾಹಕರು ಎಂದು ಕರೆಯವುದೇ ರೂಢಿ. ಬ್ಯಾಂಕ್ ನೌಕರರಿಗೆ ನೀಡುವ ತರಬೇತಿಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಹೇಗೆ ಎಂಬ ಬಗ್ಗೆ ತಿಳಿವಳಿಕೆ ಕೊಡುತ್ತಾರೆ. ಅಲ್ಲಿ ಹೇಳುವ ಒಂದು ಮಾತು- ಕಸ್ಟಮರ್ ಈಸ್ ಕಿಂಗ್ (ಗ್ರಾಹಕನೇ ದೊರೆ). ಇದು ಬ್ಯಾಂಕಿಂಗ್ ಮಾತ್ರವಲ್ಲ ಉತ್ಪನ್ನ ಮತ್ತು ಸೇವೆಗಳನ್ನು ಮಾರಾಟ ಮಾಡುವ ಎಲ್ಲ ಉದ್ಯಮಗಳಿಗೂ ಅನ್ವಯಿಸುತ್ತದೆ. ಕೊಳ್ಳುವವರೇ ಇಲ್ಲದಿದ್ದರೆ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಲಾಭವಾಗುವುದು ಹೇಗೆ? ಉತ್ಪಾದಕರು ಎತ್ತರದಲ್ಲಿ ಹಾರಾಡುವ ಗಾಳಿಪಟವಾದರೆ ಅವರ ಹಾರಾಟಕ್ಕೆ ಕಾರಣ ಗ್ರಾಹಕ ಅಥವಾ ಬಳಕೆದಾರ ಎಂಬ ಅದೃಶ್ಯ ದಾರ. ಆ ದಾರ ಇಲ್ಲದಿದ್ದರೆ ಗಾಳಿಪಟ ಆಧಾರವಿಲ್ಲದೆ ನೆಲಕಚ್ಚುತ್ತದೆ.
ಮೆನೇಜರ್ ತನ್ನ ಸಹೋದ್ಯೋಗಿಗಳಿಗೆ ಗ್ರಾಹಕ ಸೇವೆಯ ಮಹತ್ವದ ಬಗ್ಗೆ ಎಷ್ಟೇ ಉಪದೇಶ ಮಾಡಿದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಕಡಿಮೆ. ‘ಕಸ್ಟಮರ್ಗಳನ್ನು ಸಂಬಾಳಿಸುವುದು ತುಂಬಾ ಕಷ್ಟ ಮಾರಾಯ್ರೆ’ ಎಂದು ರಾಗ ಎಳೆಯುವವರೇ ಜಾಸ್ತಿ. ಮ್ಯಾನೇಜರ್ ಉತ್ತಮ ಸೇವೆ ನೀಡಿ ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸಿದರೆ, ಕೆಲವು ಮೈಗಳ್ಳ ಉದ್ಯೋಗಿಗಳು ಶಾಖೆಯ ವ್ಯವಹಾರ ಜಾಸ್ತಿಯಾದರೆ ತಮಗೆ ಕೆಲಸ ಹೆಚ್ಚಾಗುತ್ತದೆ ಎಂದು ಗೊಣಗುತ್ತಾರೆ. ವಿಪರೀತ ಸ್ಪರ್ಧೆಯಿಂದಾಗಿ ಹೊಸ ಗ್ರಾಹಕರನ್ನು ಸೆಳೆಯುವುದು ಕಷ್ಟ. ಮೆನೇಜರ್ ತುಂಬಾ ಶ್ರಮವಹಿಸಿ ತಂದ ಗ್ರಾಹಕರನ್ನು ಕೌಂಟರಿನಲ್ಲಿ ಕುಳಿತ ಉದ್ಯೋಗಿಗಳು ಒಂದೇ ನಿಮಿಷದಲ್ಲಿ ಬ್ಯಾಂಕ್ ಬಿಟ್ಟುಹೋಗುವಂತೆ ಮಾಡಬಲ್ಲರು. ಮೆನೇಜರ್ಗೆ ವರುಷ ಗುಮಾಸ್ತನಿಗೆ ನಿಮಿಷ! ಗ್ರಾಹಕರ ಜತೆ ಮೆನೇಜರ್ಗಿಂತಲೂ ಚೆನ್ನಾಗಿ ಮಾತನಾಡಿ ಅತ್ಯುತ್ತಮ ಸೇವೆ ನೀಡುವ, ಹೊಸ ಗ್ರಾಹಕರನ್ನು ಶಾಖೆಗೆ ಪರಿಚಯಿಸುವ ಉದ್ಯೋಗಿಗಳೂ ಇರುತ್ತಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ. ಉತ್ತಮ ಗ್ರಾಹಕಸೇವೆ ನೀಡಬೇಕಾದರೆ ಸಂಸ್ಥೆಯಲ್ಲಿರುವ ಎಲ್ಲರೂ ಒಂದು ತಂಡವಾಗಿ ದುಡಿಯಬೇಕು. ಉತ್ತಮ ಗ್ರಾಹಕ ಸೇವೆ ನೀಡಲು ಉದ್ಯೋಗಿಗಳಲ್ಲಿ ಇರಬೇಕಾದ ಮುಖ್ಯ ಗುಣ ಛಿಞಟಚಠಿಜಢ (ಎಂಪತಿ). ಅಂದರೆ ಇನ್ನೊಬ್ಬರ ಬೂಟಿನಲ್ಲಿ ನಮ್ಮ ಕಾಲು ತೂರಿಸುವುದು. ಅವರ ಪರಿಸ್ಥಿತಿಯಲ್ಲಿ ನಾವು ಇದ್ದಿದ್ದರೆ ಎಂದು ಯೋಚಿಸುವುದು.
ಬಹಳಷ್ಟು ಗ್ರಾಹಕರು ಉದ್ಯೋಗಿಗಳಿಂದ ನಿರೀಕ್ಷಿಸುವುದು ನಗುಮೊಗದ ಸೇವೆ. ಆದರೆ ಕೌಂಟರಿನಲ್ಲಿ ಕುಳಿತ ಉದ್ಯೋಗಿಗಳು ಗ್ರಾಹಕರನ್ನು ತಲೆಯೆತ್ತಿ ನೋಡುವುದಿಲ್ಲ. ಅವರ ಗಮನವೆಲ್ಲ ಕಂಪ್ಯೂಟರ್ ಪರದೆಯ ಮೇಲಿರುತ್ತದೆ. ಬ್ಯಾಂಕುಗಳು ಎಷ್ಟೋ ವಾಸಿ. ಉದ್ಯೋಗಿಗಳು ಕೆಲಸದಲ್ಲಿ ನಿರತರಾಗಿರುವ ಕಾರಣ ಗ್ರಾಹಕರನ್ನು ಮಾತನಾಡಿಸುವುದಿಲ್ಲ. ಕೆಲವು ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಗಳು ತಮ್ಮ ಕುರ್ಚಿಗಳಲ್ಲಿ ಕುಳಿತಿರುವುದೇ ಅಪರೂಪ. ಇರುವ ಕೆಲವರು ಪತ್ರಿಕಾ ವಾಚನ, ಮೊಬೈಲ್ ವೀಕ್ಷಣೆ ಅಥವಾ ಹರಟೆ ಹೊಡೆಯುವುದರಲ್ಲಿ ತಲ್ಲೀನರಾಗಿರುತ್ತಾರೆ. ಗ್ರಾಹಕರು ಬಂದು ಕಾಯುತ್ತಾ ನಿಂತಿರುವುದು ಅವರ ಗಮನಕ್ಕೇ ಬರುವುದಿಲ್ಲ. ಎಷ್ಟೋ ಸರ್ಕಾರಿ ಕಚೇರಿಗಳಿಗೆ ಗ್ರಾಹಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇರುವುದಿಲ್ಲ. ಗ್ರಾಹಕರ ಬಗ್ಗೆ ನೌಕರರು ತೋರುವ ದಿವ್ಯ ನಿರ್ಲಕ್ಷ್ಯವನ್ನು ಕಂಡಾಗಲೆಲ್ಲ ನನಗೆ-
ಏನು ಬಂದಿರಿ ಹದುಳವಿದ್ದಿರೆ ಎಂದರೆ
ನಿಮ್ಮ ಮೈಸಿರಿ ಹಾರಿಹೋಹುದೆ?
ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?
ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ?
ಎಂದು ಕೇಳಬೇಕೆನಿಸುತ್ತದೆ. ಬಸವಣ್ಣ 12ನೇ ಶತಮಾನದಲ್ಲಿ ಹೇಳಿದ ಈ ವಚನ 21ನೇ ಶತಮಾನದಲ್ಲೂ ಅತ್ಯಂತ ಪ್ರಸ್ತುತ! ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಚಿತ್ರವನ್ನು ತೂಗುಹಾಕುವುದನ್ನು ಕಡ್ಡಾಯಗೊಳಿಸಿದ್ದಾರೆ. ಅದರ ಜತೆಗೆ ಮೇಲೆ ಹೇಳಿದ ವಚನವನ್ನೂ ಪ್ರದರ್ಶಿಸಿದರೆ ತುಂಬಾ ಅರ್ಥಪೂರ್ಣವಾಗುತ್ತದೆ.
ನಾನು ಬ್ಯಾಂಕ್ ಮೆನೇಜರ್ ಆಗಿದ್ದಾಗ ಕ್ಯಾಬಿನ್ಗೆ ಯಾರೇ ಬಂದರೂ ನನ್ನ ಅಳಿದುಳಿದ ಕೆಲವೇ ಹಲ್ಲುಗಳನ್ನು ತೆರೆದು ಸ್ವಾಗತಿಸುತ್ತಿದ್ದೆ. ‘ಬನ್ನಿ ಕುಳಿತುಕೊಳ್ಳಿ’ ಅನ್ನುತ್ತಿದ್ದೆ. ಆದರೂ ಒಮ್ಮೆ ಒಬ್ಬ ಗ್ರಾಹಕರು ನನ್ನ ಬಳಿ ಬಂದು ನಿಮ್ಮ ಶಾಖೆಯಲ್ಲಿ ನಗುಮೊಗದ ಸೇವೆ ಸಿಗುತ್ತಿಲ್ಲ ಎಂದು ದೂರಿದರು. ನಾನು ‘ನೋಡಿ ಸಾರ್, ನಾನು ಯಾವಾಗ್ಲೂ ಹೀಗೆ ಹಲ್ಲು ಕಿಸಿದುಕೊಂಡೇ ಕೂತ್ಕೋತೀನಲ್ಲ’ ಅಂದೆ. ಆಗ ಅವರು ಇನ್ನಷ್ಟು ದೊಡ್ಡ ಸ್ವರದಲ್ಲಿ ‘ನೀವು ನಕ್ರೆ ಏನ್ ಪ್ರಯೋಜನ? ಆ ಕ್ಯಾಶ್ ಕೌಂಟರಿನಲ್ಲಿ ಕುಳಿತಿರೋ ಹುಡುಗಿಯ ಮುಖ ನೋಡಿ. ಆಕೆ ಹಣ ಕೊಡುವಾಗ ಒಂದು ಸಲವಾದರೂ ನಕ್ಕಿದ್ದನ್ನು ನಾನು ನೋಡಿಲ್ಲ. ನಮ್ಮ ಹಣ ನಮಗೆ ಕೊಡ್ಲಿಕ್ಕೆ ಅವಳಿಗ್ಯಾಕೆ ದುಃಖ? ತನ್ನ ಕೈಯಿಂದ ಕೊಡುವವಳ ಹಾಗೆ ಮುಖ ಗಂಟು ಹಾಕ್ಕೊಂಡು ದುಡ್ಡು ಕೊಡ್ತಾಳೆ. ಇದು ನಗುಮೊಗದ ಸೇವೆಯಲ್ಲ, ನಗು ಮುಗಿದ ಸೇವೆ’ ಎಂದರು. ಅವರು ಹೇಳಿದ್ದರಲ್ಲಿ ಏನೂ ಅತಿಶಯೋಕ್ತಿ ಇರಲಿಲ್ಲ. ಆ ಹುಡುಗಿ ನಮ್ಮ ಶಾಖೆಗೆ ಸೇರಿದ ದಿನ ನಾನು ಅವಳ ಹತ್ತಿರ ನಗುನಗುತ್ತ ಮಾತನಾಡಿದ್ದೆ. ಆದರೆ ಅವಳ ಪ್ರತಿಕ್ರಿಯೆ ತೀರಾ ಸಪ್ಪೆಯಾಗಿತ್ತು. ಅದೂ ಅಲ್ಲದೆ ಆಕೆ ಕ್ಯಾಶಿಯರ್. ನಗುಮೊಗದ ಸೇವೆಯೆಂದು ಗಡಿಬಿಡಿಯಲ್ಲಿ ಗ್ರಾಹಕರಿಗೆ ಐನೂರರ ಒಂದು ನೋಟು ಜಾಸ್ತಿ ಕೊಟ್ಟರೆ ಅವರು ನಗುನಗುತ್ತ ತೆಗೆದುಕೊಂಡು ಹೋಗುತ್ತಾರೆ. ಸಂಜೆ ಕ್ಯಾಶ್ ಕಡಿಮೆಯಾದಾಗ ಕ್ಯಾಶಿಯರ್ ಅಳುತ್ತ ಅವಳ ಕೈಯಿಂದ ದುಡ್ಡು ಕಟ್ಟಬೇಕು.
ಕ್ಯಾಶಿಯರ್ ಕೆಲಸ ಮಾಡುವವರ ಈ ಕಷ್ಟವನ್ನು ದೂರು ನೀಡಿದ ಗ್ರಾಹಕರಿಗೆ ವಿವರಿಸಿದೆ. ಆದರೂ ಅವರಿಗೆ ಸಮಾಧಾನವಾಗಲಿಲ್ಲ. ಕ್ಯಾಶ್ ಕೌಂಟರಿನಲ್ಲಿ ಬರೆದ ‘ನಗದು’ ಎಂಬ ನಾಮ ಫಲಕ ತೋರಿಸಿದೆ. ಪ್ರಯೋಜನವಾಗಲಿಲ್ಲ. ಕೊನೆಗೆ ಈ ಹನಿಗವನ ಹೇಳಿದೆ:
ಕ್ಯಾಶ್ ಕೌಂಟರಿನ
ಹುಡುಗಿಯರ ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೇ ಅಲ್ಲಿ
ಹಾಕಿದ್ದಾರೆ ಬೋರ್ಡ
ನಗದು!
ಅದನ್ನು ಕೇಳಿ ದೂರು ನೀಡಿದ ಗ್ರಾಹಕರು ನಗುತ್ತಾ ತಮ್ಮ ದೂರನ್ನು ವಾಪಾಸು ಪಡೆದುಕೊಂಡರು.
ಸಂತೃಪ್ತ ಗ್ರಾಹಕರು ಒಂದು ಸಂಸ್ಥೆಯ ರಾಯಭಾರಿಗಳಿದ್ದ ಹಾಗೆ. ಒಳ್ಳೆಯ ಸೇವೆ ನೀಡಿದವರಿಗೆ ಅವರು ಉಚಿತ ಪ್ರಚಾರ ನೀಡುತ್ತಾರೆ. ದೂರುವ ಗ್ರಾಹಕರು ಕೂಡ ಮುಖ್ಯ. ಅವರು ಸೇವೆ ಅಥವಾ ಉತ್ಪನ್ನಗಳ ಕುಂದುಕೊರತೆಗಳನ್ನು ಎತ್ತಿತೋರಿಸುವ ಮೂಲಕ ಅವುಗಳನ್ನು ಉತ್ತಮ ಪಡಿಸಲು ನೆರವಾಗುತ್ತಾರೆ. ಬಹಳಷ್ಟು ಗ್ರಾಹಕರು ಅಸಂತುಷ್ಟರಾದಾಗ ದೂರು ನೀಡುವುದಿಲ್ಲ. ಮೌನವಾಗಿ ಬೇರೆ ಕಡೆಗೆ ಹೋಗುತ್ತಾರೆ. ಆದುದರಿಂದ ಗ್ರಾಹಕರು ದೂರು ಕೊಟ್ಟಿದ್ದಾರೆಂದರೆ ಅವರಿಗೆ ಆ ಸಂಸ್ಥೆಯೊಂದಿಗೆ ವ್ಯವಹಾರ ಮುಂದುವರಿಸುವ ಆಸಕ್ತಿಯಿದೆ ಎಂದು ಭಾವಿಸಬೇಕು. ಎಲ್ಲಾ ಬ್ಯಾಂಕ್ ಶಾಖೆಗಳಲ್ಲೂ ಗ್ರಾಹಕರ ಲಿಖಿತ ದೂರು ಅಥವಾ ಸಲಹೆಗಳನ್ನು ಸ್ವೀಕರಿಸಲು ಒಂದು ಪೆಟ್ಟಿಗೆಯನ್ನು ಇಡಬೇಕೆಂಬ ನಿಯಮವಿದೆ. ಶಾಖೆಯನ್ನು ಆರಂಭಿಸುವಾಗ ದೂರು ಪೆಟ್ಟಿಗೆಯನ್ನು ಇಡುತ್ತಾರಾದರೂ ನಂತರ ಅದನ್ನು ತೆರೆದು ನೋಡಲು ಯಾರಿಗೂ ಬಿಡುವಿರುವುದಿಲ್ಲ. ವರ್ಷಕ್ಕೊಮ್ಮೆ ಶಾಖೆಯ ಕಾರ್ಯನಿರ್ವಹಣೆಯ ಪರಿಶೋಧನೆಗೆ ಬಂದ ಅಧಿಕಾರಿಗಳು ಆ ಪೆಟ್ಟಿಗೆಯ ಬೀಗ ತೆಗೆಸಿ ಅದರಲ್ಲಿರುವ ದೂರುಗಳನ್ನು ಪರಿಶೀಲಿಸುತ್ತಾರೆ. ಬಹಳಷ್ಟು ಶಾಖೆಗಳಲ್ಲಿ ಪೆಟ್ಟಿಗೆಯ ಬೀಗದ ಕೈ ಎಲ್ಲಿದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲವಾದ್ದರಿಂದ ಇನ್ಸ್ಪೆಕ್ಟರ್ ಬಂದಾಗ ಬೀಗ ಒಡೆಯುವುದು ಅನಿವಾರ್ಯವಾಗುತ್ತದೆ. ಒಮ್ಮೆ ನಮ್ಮ ಶಾಖೆಯ ದೂರು ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದರಲ್ಲಿ ಒಂದೇ ಕೈ ಬರಹದ ಐದು ಚೀಟಿಗಳು ಇದ್ದವು. ಒಂದು ಚೀಟಿಯಲ್ಲಿ ನಿಮ್ಮ ದೂರು ಪೆಟ್ಟಿಗೆ ಧೂಳು ತಿನ್ನುತ್ತಿದೆ. ಅದನ್ನು ತಿಂಗಳಿಗೊಮ್ಮೆಯಾದರೂ ತೆರೆದು ನೋಡಿ ಎಂದು ಬರೆಯಲಾಗಿತ್ತು!
ಗ್ರಾಹಕರನ್ನು ತೃಪ್ತಿಪಡಿಸುವುದು ಮುನಿಸಿಕೊಂಡ ಮಡದಿಯನ್ನು ಸಮಾಧಾನ ಪಡಿಸುವಷ್ಟೇ ಕಷ್ಟದ ಕೆಲಸ. ಹೇಳಿದ್ದಕ್ಕೆಲ್ಲ ಹೂಂ ಅನ್ನುವುದು, ವಾದ ಮಾಡದಿರುವುದು, ಅಪ್ರಿಯ ಸತ್ಯ ಹೇಳದಿರುವುದು, ತಪ್ಪು ಮಾಡದಿದ್ದರೂ ಸ್ಸಾರಿ ಅನ್ನುವುದು ಮುಂತಾದ ಹೆಂಡತಿಯನ್ನು ಖುಷಿಪಡಿಸಲು ಬಳಸುವ ತಂತ್ರಗಳನ್ನು ಗ್ರಾಹಕರನ್ನು ಸಂತೋಷಪಡಿಸುವುದಕ್ಕೂ ಬಳಸಬಹುದು. ಕೌಂಟರಿನಲ್ಲಿ ಗ್ರಾಹಕ ಮತ್ತು ಉದ್ಯೋಗಿಯ ನಡುವೆ ಜಗಳವಾದಾಗ ಶಾಖೆಯ ಮ್ಯಾನೇಜರ್ ಅದನ್ನು ಪರಿಹರಿಸಬೇಕು. ಆಗ ಆತನ ಪರಿಸ್ಥಿತಿ ಹೆಂಡತಿ ಮತ್ತು ತಾಯಿಯ ನಡುವಿನ ಜಗಳವನ್ನು ಬಿಡಿಸಲು ಹೋದ ವ್ಯಕ್ತಿಯಂತೆ ಆಗುತ್ತದೆ.
ನಗರದ ಬ್ಯಾಂಕ್ ಗ್ರಾಹಕರಿಗೆ ಹೋಲಿಸಿದರೆ ಗ್ರಾಮೀಣ ಶಾಖೆಗಳ ಗ್ರಾಹಕರನ್ನು ಖುಷಿಪಡಿಸುವುದು ಸುಲಭ. ಅವರ ಸುಖ ದುಃಖ ವಿಚಾರಿಸಿದರೆ, ಸಲಹೆ ನೀಡಿದರೆ, ಅವರ ಮನೆಯ ಸಮಾರಂಭಗಳಿಗೆ ಹೋದರೆ ಅಷ್ಟೇ ಸಾಕು. ತುಂಬಾ ಸಂತೋಷಪಡುತ್ತಾರೆ. ಅವರು ಬೆಳೆದ ತರಕಾರಿ, ಹಣ್ಣುಗಳನ್ನು ಪ್ರೀತಿಯಿಂದ ಕೊಡುತ್ತಾರೆ. ನಗರದ ಪ್ರತಿಷ್ಠಿತ ಗ್ರಾಹಕರಿಗೆ ಎಷ್ಟು ಸೇವೆ, ಗೌರವ ನೀಡಿದರೂ ಸಾಕಾಗುವುದಿಲ್ಲ. ದೀಪಾವಳಿ, ಕ್ರಿಸ್ವುಸ್, ಹೊಸವರ್ಷ ಮುಂತಾದ ಸಂದರ್ಭಗಳಲ್ಲಿ ಅವರು ಭಾರೀ ಉಡುಗೊರೆ ನಿರೀಕ್ಷಿಸುತ್ತಾರೆ. ಒಮ್ಮೆ ನಾನು ನಮ್ಮ ಶಾಖೆಯಲ್ಲಿ ಒಳ್ಳೆಯ ಠೇವಣಿ ಇಟ್ಟ ಸರ್ಕಾರಿ ಇಲಾಖೆಯ ಮುಖ್ಯಸ್ಥರಿಗೆ ಒಂದು ಲೆದರ್ ಪರ್ಸನ್ನು ಉಡುಗೊರೆಯಾಗಿ ಕೊಟ್ಟೆ. ಅವರು ‘ಏನ್ರೀ? ಖಾಲಿ ಪರ್ಸ್ ಕೊಟ್ಟಿದ್ದೀರಲ್ಲ’ ಎಂದು ಠೇವಣಿ ನೀಡಿದ್ದಕ್ಕೆ ತಮಗೆ ಕಮಿಷನ್ ಬೇಕೆಂಬುದನ್ನು ಸೂಚ್ಯವಾಗಿ ಹೇಳಿದರು.
1992ರಲ್ಲಿ ನಾನು ಬ್ಯಾಂಕಿನ ಗ್ರಾಮೀಣ ಶಾಖೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನಮ್ಮ ಶಾಖೆಯ ಒಬ್ಬ ಉದ್ಯೋಗಿ ಕರೆಸೇವೆ ಮಾಡಲು ಅಯೋಧ್ಯೆಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಒಬ್ಬ ಗ್ರಾಹಕರು ನನ್ನ ಬಳಿ ‘ನೀವೇಕೆ ಕರಸೇವೆಗೆ ಹೋಗಿಲ್ಲ?’ ಎಂದು ಕೇಳಿದರು. ‘ನಾನು ಇಲ್ಲೇ ಮಾಡುತ್ತಿದ್ದೇನಲ್ಲ ಕರಸೇವೆ, ಗ್ರಾಹ-ಕರ ಸೇವೆ’ ಎಂದೆ.
ಮುಗಿಸುವ ಮುನ್ನ:
ಕ್ಯಾಶ್ ಕೌಂಟರಿನ ಚೆಲುವೆಯತ್ತ
ಹರಿದು ನೋಟ
ಗಮನಿಸಲಿಲ್ಲ ಅವಳು ಕೊಟ್ಟ
ಹರಿದ ನೋಟ!
(ಲೇಖಕರು ಕವಿ ಹಾಗೂ ನಾಟಕಕಾರರು)
ಪ್ರತಿಕ್ರಿಯಿಸಿ: hanigarike@gmail.com