ವೈದ್ಯರೆಂಬ ಬಿರುದು ಮಾತ್ರವೇ ಸಾಕೇ?

Doctor
Published on
ಸರ್ಕಾರದ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯಗಳಿಂದ ವೈದ್ಯಕೀಯ ಪದವಿ ಪಡೆದ ತಕ್ಷಣ ಅವರೆಲ್ಲರನ್ನೂ ವೈದ್ಯರೆಂದು ಅಂದುಕೊಳ್ಳುತ್ತೇವೆ. ವೈದ್ಯಕೀಯ ಕ್ಷೇತ್ರ ಹದಗೆಡಲು ಇರುವ ನಾನಾ ಕಾರಣಗಳಲ್ಲಿ ಇದೂ ಒಂದು. ಹಿಂದೆಯೂ ಆಯುರ್ವೆದ ಶಿಕ್ಷಣವನ್ನು ಪಡೆದವರೆಲ್ಲರೂ ವೈದ್ಯರೆಂದು ಪರಿಗಣನೆಗೆ ಒಳಪಡುತ್ತಿರಲಿಲ್ಲ! ವೈದ್ಯ ಎನ್ನಬೇಕಾದರೆ ಹಲವಾರು ಮಾನದಂಡಗಳನ್ನು ದಾಟಬೇಕಾಗುತ್ತದೆ. ಇದನ್ನು ಪ್ರಾಚೀನ ವೈದ್ಯಗ್ರಂಥಗಳು ವಿವರಿಸಿದ ಪರಿ ಅಚ್ಚರಿ ಮೂಡಿಸುತ್ತದೆ. ಆಯುರ್ವೆದ ಗ್ರಂಥಗಳಲ್ಲಿ ವಿಭಿನ್ನ ಗುಣಲಕ್ಷಣಗಳ ವೈದ್ಯರ ವಿವರಣೆ ಸಿಗುತ್ತದೆ. ವೈದ್ಯರು ಬಳಸುವ ಸಲಕರಣೆ, ಔಷಧಗಳನ್ನೆಲ್ಲಾ ಇಟ್ಟುಕೊಂಡು ತಮ್ಮನ್ನೇ ವೈದ್ಯರೆಂಬಂತೆ ಬಿಂಬಿಸಿಕೊಂಡು ಜನರನ್ನು ಮೋಸಗೊಳಿಸುವ ಛದ್ಮಚರ ವೈದ್ಯರು, ಯಶಸ್ವೀ ವೈದ್ಯರನ್ನು ಅನುಕರಣೆ ಮಾಡಿ ವೈದ್ಯರಂತೆ ತೋರ್ಪಡಿಸಿಕೊಳ್ಳುವ ಸಿದ್ಧಸಾಧಿತ ವೈದ್ಯರು, ಚಿಕಿತ್ಸೆಗೆ ಅಗತ್ಯವಾದ ಎಲ್ಲಾ ಅಂಗ ವಿಭಾಗಗಳಾದ ಪರಿಚಾರಕ, ಯೋಗ್ಯ ಔಷಧ ಬಳಸಿಕೊಂಡು ಆಯುರ್ವೆದದ ಚಿಕಿತ್ಸಾ ಮರ್ಮವನ್ನು ಸಮಗ್ರವಾಗಿ ತಿಳಿದುಕೊಂಡ ನಿಜಾರ್ಥದ ವೈದ್ಯರಾದ ಪ್ರಾಣಾಭಿಸರ ವೈದ್ಯರು- ಹೀಗೆ ಮೂರು ತೆರನಾದ ವೈದ್ಯರನ್ನು ಚರಕಸಂಹಿತೆ ವಿವರಿಸಿದೆ. ಕುವೈದ್ಯರು ಆಧುನಿಕ ಯುಗದಲ್ಲಿ ಮಾತ್ರವಲ್ಲ, ಸಹಸ್ರಾರು ವರ್ಷಗಳ ಹಿಂದೆಯೂ ಇದ್ದರೆಂಬುದು ಈ ವಿಶ್ಲೇಷಣೆಗಳಿಂದ ಸ್ಪಷ್ಟವಾಗುತ್ತದೆ! ಆಯುರ್ವೆದದ ಭೈಷಜ್ಯ ರತ್ನಾವಲೀ ಗ್ರಂಥದಲ್ಲಿ ನಿಂದನೀಯ ಪಂಚ ವೈದ್ಯರ ಬಗ್ಗೆ ಹೇಳಿದ್ದೂ ವಿಶೇಷವಾಗಿದೆ. ಕುಚೇಲ- ಕೊಳೆಯಿಂದ ತುಂಬಿ ಮಲಿನವಾಗಿರುವ, ಅಸಭ್ಯ ಬಟ್ಟೆಬರೆ ಧರಿಸಿರುವ ವೈದ್ಯರು, ಕರ್ಕಶ- ಬೊಬ್ಬೆಹೊಡೆದು ಕ್ರೂರವಾಗಿ ಮಾತನಾಡುವ ವೈದ್ಯರು, ಸ್ತಬ್ಧ-ಅಹಂಕಾರದಿಂದ ಯಾವಾಗಲೂ ತನ್ನನ್ನೇ ಹೊಗಳಿಕೊಳ್ಳುವ ವೈದ್ಯರು, ಕುಗ್ರಾಮೀ- ಅಪ್ರಬುದ್ಧ ಜನರು ಇರುವ ಸ್ಥಳದಲ್ಲಿ ವಾಸಸ್ಥಾನ ಹೊಂದಿರುವ ವೈದ್ಯರು, ಸ್ವಯಮಾಗತ- ಕರೆಯದೆ ರೋಗಿಗಳ ಬಳಿಗೆ ತೆರಳುವ ವೈದ್ಯರು- ಹೀಗೆ ಐದು ವಿಧವಾದ ಕೊರತೆಯುಳ್ಳ ವೈದ್ಯರನ್ನು ಧನ್ವಂತರಿಯೆಂದು ಪರಿಗಣಿಸಕೂಡದು ಎನ್ನಲಾಗಿದೆ.

ಆದರ್ಶ ವೈದ್ಯರ ಕುರಿತಾದ ವಿವರಣೆಯೂ ಪರಿಪಕ್ವವಾಗಿದೆ. ವೈದ್ಯನು ಶಾಸ್ತ್ರಜ್ಞ ಹಾಗೂ ಕರ್ಮಜ್ಞ ಎರಡೂ ಆಗಿರಬೇಕು. ಶಾಸ್ತ್ರದಲ್ಲಿ ಸಂಪೂರ್ಣ ಪರಿಣತಿ ಹೊಂದಿರಬೇಕು. ದೃಷ್ಟಕರ್ವ ಅರ್ಥಾತ್ ಚಿಕಿತ್ಸೆ ಹಾಗೂ ಔಷಧ ತಯಾರಿಕೆಯನ್ನು ಸ್ವತಃ ನೋಡಿ ಕಲಿತಿರಬೇಕು. ಇವುಗಳಲ್ಲಿ ಒಂದಿಲ್ಲದಿದ್ದರೂ ಒಂದೇ ರೆಕ್ಕೆಯಿರುವ ಪಕ್ಷಿಯಂತಾಗುತ್ತದೆ. ವೈದ್ಯರಲ್ಲಿ ಯಾರು ಉತ್ತಮ ಎಂಬ ಪ್ರಶ್ನೆಗೆ ನೀಡಿರುವ ಉತ್ತರವೂ ಪ್ರಶಸ್ತವಾಗಿದೆ. ಔಷಧ ಯೋಗಗಳ ಪ್ರಯೋಗ ಚೆನ್ನಾಗಿ ಅರಿತಿರುವ, ದೇಶ ಹಾಗೂ ಕಾಲಗಳ ಪರಿಗಣನೆಯನ್ನು ಸರಿಯಾಗಿ ಮಾಡಲು ಗೊತ್ತಿರುವ, ಪ್ರತಿ ವ್ಯಕ್ತಿಯ ಸೂಕ್ಷ್ಮಗಳನ್ನು ವೀಕ್ಷಿಸಬಲ್ಲ ವೈದ್ಯನೇ ಶ್ರೇಷ್ಠ ಎಂಬ ಒಕ್ಕಣೆಯಿದೆ. ಗುರುಮುಖದಿಂದಲೇ ಶಾಸ್ತ್ರಬೋಧನೆ ನಡೆದು ಗ್ರಂಥಗಳ ಜ್ಞಾನವನ್ನು ಪಡೆದುಕೊಂಡು ಅವುಗಳನ್ನು ಅನುಷ್ಠಾನ ಮಾಡುವವನೇ ನಿಜವಾದ ವೈದ್ಯ. ಹೀಗಿಲ್ಲದಿದ್ದರೆ ಅವರು ಧನ ಹಾಗೂ ಪ್ರಾಣ ಎರಡನ್ನೂ ಅಪಹರಿಸುವುದರಿಂದ ವೈದ್ಯರಲ್ಲ, ತಸ್ಕರರು ಅರ್ಥಾತ್ ಕಳ್ಳರು! ನಾಡೀ, ಮೂತ್ರ, ಮಲ, ನಾಲಿಗೆ, ಕಿವಿ, ಚರ್ಮ, ಕಣ್ಣು ಹಾಗೂ ಶರೀರದ ಪರೀಕ್ಷೆಯನ್ನು ಸೂಕ್ತವಾಗಿ ಮಾಡಲು ಬರದ ವೈದ್ಯರು ಯಮನಂತೆ ಪ್ರಾಣಹರ ಆಗಿಬಿಡುತ್ತಾರೆ. ಹಾಗಾಗಿ ವೈದ್ಯನಾದವನು ಪರಿಪಕ್ವತೆ ಹೊಂದಿರಬೇಕಾದುದು ಕರ್ತವ್ಯವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಚರಕ ಸಂಹಿತೆಯು ರಾಜಾರ್ಹ ಭಿಷಕ್ ಬಗ್ಗೆ ಉಲ್ಲೇಖಿಸಿದೆ. ರೋಗ ಬಂದ ಕಾರಣ, ಲಕ್ಷಣ, ಕಾಯಿಲೆ ಗುಣಪಡಿಸುವ ವಿಧಾನ, ರೋಗವು ಪುನಃ ಬರದಂತೆ ಮೂಲದಿಂದಲೇ ಕಿತ್ತೆಸೆಯುವ ಮಾಗೋಪಾಯ- ಈ ನಾಲ್ಕರ ಜ್ಞಾನವುಳ್ಳ ವೈದ್ಯರೇ ಅತ್ಯುತ್ತಮರು ಹಾಗೂ ರಾಜರಿಗೆ ಚಿಕಿತ್ಸೆ ನೀಡಲೂ ಅರ್ಹರು. ಹಾಗಾಗಿ ಇಂತಹ ಶ್ರೇಷ್ಠ ವೈದ್ಯರನ್ನು ರಾಜಾರ್ಹ ಭಿಷಕ್ ಎಂದು ಕೊಂಡಾಡಿದೆ.

ಹೇತು ಅಂದರೆ ಕಾರಣ, ಲಿಂಗ ಅಂದರೆ ಲಕ್ಷಣ ಹಾಗೂ ಔಷಧ ಅಂದರೆ ಚಿಕಿತ್ಸಾ ದ್ರವ್ಯ - ಮೂರೂ ಸೇರಿದರೆ ತ್ರಿಸೂತ್ರಗಳು. ಇವುಗಳ ಜ್ಞಾನ ಶಾಶ್ವತ ಹಾಗೂ ಪುಣ್ಯಪ್ರದ ಎಂಬುದು ಸೃಷ್ಟಿಕರ್ತ ಬ್ರಹ್ಮನಿಂದಲೇ ಸ್ಮರಿಸಿ ಹೇಳಲ್ಪಟ್ಟಿರುವುದು ಗಣನೀಯವಾಗಿದೆ. ಒಂದೇ ಶಾಸ್ತ್ರವನ್ನು ಅಧ್ಯಯನ ಮಾಡಿದರೆ ಜ್ಞಾನವು ಪರಿಪೂರ್ಣವಾಗಿ ಗ್ರಾಹ್ಯವಾಗುವುದಿಲ್ಲ. ಆದುದರಿಂದ ವೈದ್ಯನಾದವನು ಹಲವಾರು ವಿಷಯಗಳ ಜ್ಞಾನವನ್ನು ಪಡೆದುಕೊಂಡು ಬಹುಶ್ರುತ ಆಗಬೇಕೆಂಬುದು ಸರ್ವಕಾಲಕ್ಕೂ ಅನ್ವಯವಾಗುವ ಸುಶ್ರುತ ಸಂಹಿತೆಯ ವಾಕ್ಯ. ಒಂದು ವಿದ್ಯೆ ಅಥವಾ ಗ್ರಂಥದ ಸಂಪೂರ್ಣ ಜ್ಞಾನವನ್ನು ಹೊಂದಿ ಶಾಸ್ತ್ರ, ತಂತ್ರಯುಕ್ತಿಗಳನ್ನು ಸಮ್ಯಕ್ ರೀತಿಯಲ್ಲಿ ಬಲ್ಲ ವೈದ್ಯರು ಉಳಿದ ವೈದ್ಯ ವಿಭಾಗ ಹಾಗೂ ವಿಜ್ಞಾನಗಳನ್ನು ಯುಕ್ತಿಯಿಂದಲೇ ಗ್ರಹಿಸಲು ಶಕ್ತರಾಗುತ್ತಾರೆ ಎಂಬ ಚರಕಸಂಹಿತೆಯ ಮಾತೂ ಇಲ್ಲಿ ಪ್ರಸ್ತುತವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net