ಅರ್ಥವ್ಯವಸ್ಥೆಯಲ್ಲಿ ಪ್ರಧಾನಿ ಮೋದಿ ಮೋಡಿಯೇ?

PM modi
Published on

2013ರಲ್ಲಿ ‘ಅರ್ಥಶಾಸ್ತ್ರಜ್ಞ ಪ್ರಧಾನಮಂತ್ರಿ’ ಅಧಿಕಾರ ತ್ಯಜಿಸುತ್ತಿದ್ದಾಗ ಜಾಗತಿಕವಾಗಿ ಭಾರತದ ಅರ್ಥವ್ಯವಸ್ಥೆಯ ಸ್ಥಾನವಿದ್ದದ್ದು ‘ಬಲಹೀನ ಐದು’ ಪಟ್ಟಿಯಲ್ಲಿ. ನಂತರ ಮೊದಲ ಬಾರಿಗೆ ಸಂಸತ್​ನ ಮೆಟ್ಟಿಲು ಹತ್ತಿದ ‘ಚಾಯ್ವಾಲಾ’ ಹತ್ತು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ‘ಸಶಕ್ತ ಐದು’ ಪಟ್ಟಿಗೆ ಕೊಂಡೊಯ್ದಿದ್ದಾರೆ ಎನ್ನುವುದನ್ನು ಲೇಖನದ ಮೊದಲ ಭಾಗದಲ್ಲಿ ಅಂಕಿಅಂಶಗಳೊಡನೆ ವಿವರವಾಗಿ ನೋಡಿದ್ದೇವೆ. ಸದ್ಯದಲ್ಲೇ ಭಾರತೀಯ ಅರ್ಥವ್ಯವಸ್ಥೆ ‘ಬಲಿಷ್ಠ ಮೂರು’ ಪಟ್ಟಿಗೆ ಸೇರುವ ಬಲವಾದ ಸಾಧ್ಯತೆಯನ್ನು ಗುರುತಿಸಿಯೂ ಇದ್ದೇವೆ.

2010ರಿಂದಲೂ ಜಾಗತಿಕವಾಗಿ ಎರಡನೆಯ ಬೃಹತ್ ಅರ್ಥವ್ಯವಸ್ಥೆಯೆಂದು ಗುರುತಿಸಿಕೊಂಡಿರುವ ಚೀನಾ ಆ ಸ್ಥಾನ ಗಳಿಸಲು ನಿಜವಾದ ಪ್ರಗತಿ ತೋರಿಸುವುದಕ್ಕಿಂತಲೂ ಸುಳ್ಳು ಹಾಗೂ ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ಬಳಸಿಕೊಂಡಿದೆ ಎನ್ನುವ ‘ರಹಸ್ಯ’ ವರ್ಷದ ಹಿಂದೆ ಬಯಲಾದಾಗಿನಿಂದ ಆ

Jagadagala
ಕಮ್ಯೂನಿಸ್ಟ್ ದೇಶದ ಅರ್ಥವ್ಯವಸ್ಥೆಯ ವಾಸ್ತವಿಕ ಸ್ಥಿತಿ-ಗತಿಯ ಬಗ್ಗೆ ಪ್ರಶ್ನೆಗಳೆದ್ದಿವೆ. ಜಾಗತಿಕವಾಗಿ ಕಮ್ಯೂನಿಸ್ಟರ ಚಾಳಿಯೇ ಇದು. ಹಿಂದಿನ ಸೋವಿಯೆತ್ ಯೂನಿಯನ್ ಸಹ ಇದೇ ಆಟ ಆಡಿತ್ತು."Years of Stagnation'ಎಂದು ಹೀಗಳೆಯಲ್ಪಡುವ, ಲಿಯೋನಿದ್ ಬ್ರೆಝೆ್ನೕವ್ ನಾಯಕತ್ವದ 1964-82ರ ಅವಧಿಯಲ್ಲಿ ತನ್ನ ವಾರ್ಷಿಕ ಜಿಡಿಪಿ ಅಮೆರಿಕಾದ 55% ಇದೆ ಎಂದು ಹೇಳಿಕೊಂಡು ಅದಕ್ಕೆ ಪೂರಕವಾದ ಅಂಕಿಅಂಶಗಳನ್ನು ಸೋವಿಯೆತ್ ಯೂನಿಯನ್ ಜಗತ್ತಿಗೆ ನೀಡುತ್ತಿತ್ತು. ಆದರೆ ಅದು ಸುಳ್ಳು, ಸೋವಿಯೆತ್ ವಾರ್ಷಿಕ ಜಿಡಿಪಿ ಅಮೆರಿಕಾದ ಎಂಟನೆಯ ಒಂದು ಭಾಗಕ್ಕಿಂತಲೂ ಅಂದರೆ 12.5%ಗಿಂತಲೂ ಕಡಿಮೆ ಎನ್ನುವುದನ್ನು ಅಲ್ಲಿನ ಅರ್ಥಶಾಸ್ತ್ರಜ್ಞರೇ 1980ರ ದಶಕಗಳಲ್ಲಿ ಅಂಕಿಅಂಶಗಳೊಂದಿಗೆ ಹೇಳತೊಡಗಿದರು! ಆಮೇಲೆ ಅದು ಇನ್ನೂ ಇಳಿಯುತ್ತಾ ಹೋಗಿ ಪುಟ್ಟ ನ್ಯೂಜಿಲ್ಯಾಂಡ್​ನ ವಾರ್ಷಿಕ ಜಿಡಿಪಿಗಿಂತಲೂ ಕಡಿಮೆ ಎನ್ನುವ ಸುದ್ದಿ ಬಂತು. ಕಮ್ಯೂನಿಸ್ಟ್ ಸತ್ತೆಗಳ ಈ ಕಳ್ಳಾಟವನ್ನು ತಾವು ಕಂಡುಕೊಂಡ ಬಗೆಯನ್ನು ನಮ್ಮ ದೇಶದ ಗೌರವಾನ್ವಿತ ಪತ್ರಕರ್ತರಲ್ಲೊಬ್ಬರಾದ ಮನೋಹರ್ ಮಳಗಾಂವ್​ಕರ್ ಹೇಳುತ್ತಾರೆ. ಪೂರ್ವ ಯೂರೋಪಿಯನ್ ಕಮ್ಯೂನಿಸ್ಟ್ ರಾಷ್ಟ್ರ ಹಾಗೂ ಸೋವಿಯೆತ್ ‘ಉಪಗ್ರಹ’ ಝೆಕೊಸ್ಲೊವೇಕಿಯಾದಲ್ಲಿ 1968ರಲ್ಲಿ ಕ್ರಾಂತಿಯಾದಾಗ ಅದನ್ನು ವರದಿ ಮಾಡಲು ಟೈಮ್್ಸ ಆಫ್ ಇಂಡಿಯಾ ಪತ್ರಿಕೆ ಮಳಗಾಂವ್​ಕರ್ ಅವರನ್ನು ಝೆಕ್ ರಾಜಧಾನಿ ಪ್ರಾಗ್​ಗೆ ಕಳುಹಿಸಿತು. ಆದರೆ ಝೆಕ್ ಭಾಷೆ ಅರಿಯದ ಅವರಿಗೆ ಅಲ್ಲಿನ ಪತ್ರಿಕೆಗಳಲ್ಲಿ ಏನು ವರದಿಯಾಗುತ್ತಿದೆ ಎಂದು ತಿಳಿಯಲಾಗಲಿಲ್ಲ. ಈ ವಿಷಯದಲ್ಲಿ ಸಹಾಯಕ್ಕಾಗಿ ಅವರು ಸ್ಥಳೀಯರೊಬ್ಬರನ್ನು ವಿನಂತಿಸಿಕೊಂಡಾಗ ಅವರು ಹೇಳಿದ್ದು ಹೀಗಂತೆ: ‘ನಮ್ಮ ಪತ್ರಿಕೆಗಳಲ್ಲಿ ಸತ್ಯ, ಅರೆಸತ್ಯ ಹಾಗೂ ಸುಳ್ಳುಳಿರುತ್ತವೆ; ಸತ್ಯ ಕ್ರೀಡಾಪುಟಗಳಲ್ಲಿ, ಅರೆಸತ್ಯ ರಾಜಕೀಯ ಪುಟಗಳಲ್ಲಿ ಹಾಗೂ ಸುಳ್ಳು ಆರ್ಥಿಕ ಪುಟಗಳಲ್ಲಿ!’ ಇದನ್ನೇ ಚೀನೀ ಮಾಧ್ಯಮಗಳು ಈಗಲೂ ಮಾಡುತ್ತಿವೆ. ಒಂದು ದಿನ ಸತ್ಯ ಹೊರಬರುತ್ತದೆ. ಆಗ ಚೀನೀ ಅರ್ಥವ್ಯವಸ್ಥೆಯ ನಿಜವಾದ ಸ್ಥಾನ ಜಗಜ್ಜಾಹೀರಾಗುತ್ತದೆ. ಅದರ ಸೂಚನೆಯನ್ನು ಅಂದರೆ ಒಂದು ಬಗೆಯಲ್ಲಿ ಚೀನೀಯರನ್ನೂ, ಜಗತ್ತನ್ನೂ ಸತ್ಯ ಸ್ವೀಕರಿಸಲು ಸಿದ್ಧವಾಗಿಸುವಂತಹ ನಡೆಯನ್ನು ಅಧ್ಯಕ್ಷ ಷಿ ಜಿನ್​ಪಿಂಗ್ ಹೊಸವರ್ಷದ ಮೊದಲ ದಿನವೇ ಹೇಳಿದ್ದಾರೆ. ಚೀನೀ ಅಧ್ಯಕ್ಷರು ಪ್ರತಿ ಹೊಸವರ್ಷದ ಮೊದಲ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಮಾತಾಡುತ್ತಾರೆ. ಆ ಪ್ರತಿ ಭಾಷಣವೂ ಧನಾತ್ಮಕ ಅಂಶಗಳಿಂದ ಕೂಡಿರುತ್ತವೆ. ಆದರೆ ಈ ಬಾರಿ ಆ ಸಂಪ್ರದಾಯವನ್ನು ಅಧ್ಯಕ್ಷ ಷಿ ಮುರಿದಿದ್ದಾರೆ. ಚೀನೀ ಕಂಪೆನಿಗಳು ಕುಸಿಯುತ್ತಿವೆ, ಕಾರ್ಖಾನೆಗಳಲ್ಲಿ ಉತ್ಪಾದನೆ ಕುಂಠಿತಗೊಂಡಿದೆ, ನಿರುದ್ಯೋಗ ಸಮಸ್ಯೆ ವೇಗವಾಗಿ ವೃದ್ಧಿಸುತ್ತಿದೆ, ಅಗತ್ಯ ವಸ್ತುಗಳ ಸಮಸ್ಯೆ ಬಹುತೇಕ ಜನರನ್ನು ಬಾಧಿಸುತ್ತಿದೆ ಎಂದೆಲ್ಲಾ ಹೇಳಿ ಅವರು ‘ಈ ತೊಂದರೆಗಳೆಲ್ಲವೂ ನನ್ನ ಮನಸ್ಸಿನ ಮುಂಭಾಗದಲ್ಲಿವೆ’ ಅಂದರು! ಅವರ ಹಳಹಳಿಕೆಗಳನ್ನು ಸಮರ್ಥಿಸುವಂತೆ ಜನವರಿ 1ರಂದೇ ಹೊರಬಂದ ಆರ್ಥಿಕ ಸರ್ವೆಕ್ಷಣೆಯೊಂದರ ವರದಿ ಡಿಸೆಂಬರ್ 2023ರಲ್ಲಿ ಚೀನೀ ರಫ್ತುಗಳು ಕೇವಲ 0.05% ವೃದ್ಧಿಯಾದವು ಎಂದು ಹೇಳಿತು. ಈ ಅಂಕಿಅಂಶವೂ ಉತ್ಪೆ›ೕಕ್ಷೆಯೇ ಇರಬೇಕು. ಚೀನೀ ಕಮ್ಯೂನಿಸ್ಟ್ ನಡವಳಿಕೆಯ ಪರಿಚಯವಿರುವವರಿಗೆ ಚೀನೀ ರಫ್ತು ಋಣಾತ್ಮಕತೆಗೆ ಸರಿದಿದೆ ಎಂದೆನಿಸಿದರೆ ಅಚ್ಚರಿಯಿಲ್ಲ. ನಿರುದ್ಯೋಗ, ದೈನಂದಿನ ಬದುಕಿನ ಅಗತ್ಯವಸ್ತುಗಳನ್ನು ಕೊಳ್ಳಲು ತಮಗಾಗುತ್ತಿಲ್ಲ ಎಂದು ಸಾಮಾನ್ಯ ಚೀನೀಯರು ತಮ್ಮ ಆರ್ಥಿಕ ದುಃಸ್ಥಿತಿಗಳನ್ನು ಮುಂದಿಟ್ಟು 2023ರಲ್ಲಿ ಸಾರ್ವಜನಿಕವಾಗಿಯೇ ಪ್ರದರ್ಶನ ನಡೆಸಿದ್ದು 1,700ಕ್ಕಿಂತಲೂ ಹೆಚ್ಚು ಬಾರಿ! ಇದರರ್ಥ ಜರ್ಮನಿ ಹಾಗೂ ಜಪಾನ್ ಅನ್ನು ಹಿಂದೆ ಹಾಕಿ ಮುಂದೆ ಹೋಗಲಿರುವ ಭಾರತದ ಅರ್ಥವ್ಯವಸ್ಥೆಗೆ ಚೀನೀ ಅರ್ಥವ್ಯವಸ್ಥೆ ಯಾವ ಪ್ರತಿರೋಧವನ್ನೂ ಒಡ್ಡದೇ ಕೆಳಗೆ ಸರಿಯುತ್ತದೆ, ಭಾರತ ಅನತಿಕಾಲದಲ್ಲೇ ಜಗತ್ತಿನ ಎರಡನೆಯ ಬೃಹತ್ ಅರ್ಥವ್ಯವಸ್ಥೆಯ ಸ್ಥಾನಕ್ಕೇರುತ್ತದೆ. ಇದನ್ನು ಪುಷ್ಟೀಕರಿಸುವ ನಿಜವಾದ ಅಂಕಿಅಂಶಗಳನ್ನು ಲೇಖನದ ಮೊದಲ ಭಾಗದಲ್ಲೇ ನಿಮ್ಮೆದುರಿಗೆ ಇಡಲಾಗಿದೆ.

ಇಷ್ಟೆಲ್ಲಾ ಧನಾತ್ಮಕ ವಿಷಯಗಳ ನಡುವೆಯೂ ನಾವು ಗಂಭೀರವಾಗಿ ಚಿಂತಿಸಬೇಕಾದ ವಿಷಯವೊಂದಿದೆ. ಹೇಗೆ ನಿಭಾಯಿಸಬೇಕೆಂದು ಸ್ಪಷ್ಟ ಮಾರ್ಗ ಕಾಣದ ಸಮಸ್ಯೆಯೊಂದು ನಮ್ಮೆದುರು ಭೂತಾಕಾರವಾಗಿ ಬೆಳೆಯುತ್ತಿದೆ. ಅದೆಂದರೆ ಜನಸಂಖ್ಯಾ ಸ್ಪೋಟ. 1961ರ ಜನಗಣತಿಯಲ್ಲಿ ದೇಶದ ಜನಸಂಖ್ಯೆ ನಲವತ್ತನಾಲ್ಕು ಕೋಟಿಗೆ ಹತ್ತಿರವಾಗಿದೆ ಎಂದು ತಿಳಿದ ಕೂಡಲೇ ಹಾಹಾಕಾರವೆದ್ದು ಮೂರನೆಯ ಪಂಚವಾರ್ಷಿಕ ಯೋಜನೆಯಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಪ್ರಾಧಾನ್ಯತೆ ನೀಡಲಾಯಿತು. ಆಗ ಸರ್ಕಾರದ ಮಂತ್ರವಾದ ಕುಟುಂಬ ಯೋಜನೆ 1970ರಲ್ಲಿ ಜನಸಂಖ್ಯೆ ಐವತೆôದು ಕೋಟಿಯಾದಾಗ ದೊಡ್ಡ ಕೂಗೇ ಆಗಿಬಿಟ್ಟಿತು. ಇಷ್ಟಾಗಿಯೂ ನಂತರದ ಅರ್ಧ ಶತಮಾನದಲ್ಲಿ ಜನಸಂಖ್ಯೆ ಲಂಗುಲಗಾಮಿಲ್ಲದೇ ಏರುತ್ತಾ ಹೋಗಿ ಇಂದು ನೂರಾ ನಲವತ್ತು ಕೋಟಿ ದಾಟಿದೆ. ನಾವೀಗ ಚೀನೀಯರನ್ನು ಹಿಂದೆ ಹಾಕಿ ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯಾಗಿದ್ದೇವೆ. ದಶಕಕ್ಕೂ ಒಂದು ವರ್ಷ ಕಡಿಮೆ ಅವಧಿಯಲ್ಲಿ ‘ಬಲಹೀನ ಐದು’ ಪಟ್ಟಿಯಿಂದ ‘ಸಶಕ್ತ ಐದು’ ಪಟ್ಟಿಗೆ ನಾವು ಬಡ್ತಿ ಪಡೆದಿದ್ದರೂ, ಶೇಕಡಾ 6.5%ರಿಂದ 8%ವರೆಗೆ ನಮ್ಮ ವಾರ್ಷಿಕ ಜಿಡಿಪಿ ಹೆಚ್ಚಳವಾಗುತ್ತಾ ಹೋಗುತ್ತದೆಂದು ಜಾಗತಿಕ ಹಣಕಾಸು ಹಾಗೂ ಆರ್ಥಿಕ ಸಂಸ್ಥೆಗಳೇ ಹೇಳುತ್ತಿದ್ದರೂ, ಬಹುರಾಷ್ಟ್ರೀಯ ಕಂಪೆನಿಗಳ ಆಗಮನ ಮತ್ತು ಪ್ರಸಕ್ತ ಸರ್ಕಾರದ ಆತ್ಮನಿರ್ಭರತಾ ಯೋಜನೆಗಳಿಂದಾಗಿ ಉದ್ಯೋಗಾವಕಾಶಗಳು ವೃದ್ಧಿಸುತ್ತಿದ್ದರೂ 2013ರ ಮತ್ತು 2023ರ ನಿರುದ್ಯೋಗ ಸೂಚ್ಯಾಂಕಗಳಲ್ಲಿ ನಾವು ಹೆಮ್ಮೆ ಪಡುವಂತಹ ವ್ಯತ್ಯಾಸವೇನೂ ಕಾಣುತ್ತಿಲ್ಲ. ಆದಾಗ್ಯೂ, ಪ್ರಗತಿಯ ಫಲವನ್ನೆಲ್ಲಾ ತಿಂದುಹಾಕುತ್ತಿರುವ ಜನಸಂಖ್ಯೆಯ ನಿಯಂತ್ರಣದ ಬಗ್ಗೆ ಯಾರೂ ಮಾತಾಡುತ್ತಲೇ ಇಲ್ಲ! ಇದೇಕೆ ಹೀಗೆ? ನಿಜವಾದ ಸಮಸ್ಯೆ ಎಲ್ಲಿದೆ?

ಜನಸಂಖ್ಯಾ ನಿಯಂತ್ರಣ ಎರಡು ಅಲುಗಿನ ಕತ್ತಿಯಂತೆ. ಜನಸಂಖ್ಯೆಯನ್ನು ನಿಯಂತ್ರಿಸದೇ ಹೋದರೆ ನಾವು ಉತ್ಪಾದಿಸುವ ಬಹ್ವಂಶವನ್ನು ನಮ್ಮ ಜನರೇ ತಿಂದು ರಫ್ತನ್ನು ಕುಗ್ಗಿಸಿ ವಿದೇಶೀ ವಿನಿಮಯ ಹೆಚ್ಚಾಗಿ ಬಾರದಂತೆ ತಡೆಯುತ್ತಾರೆ. ದೇಶದೊಳಗೇ ವಸ್ತುಗಳ ಕೊರತೆಯೂ ಉಂಟಾಗಬಹುದು. ಜತೆಗೆ ಜನತೆಯ ಒಂದು ಭಾಗ ನಿರುದ್ಯೋಗಿಯಾಗಿಯೇ ಉಳಿದಿರುತ್ತದೆ. ಹಾಗಂತ ಜನಸಂಖ್ಯೆಯನ್ನು ನಿಯಂತ್ರಿಸಹೋದರೆ ಜನನ ಪ್ರಮಾಣ ಕಡಿಮೆಯಾಗಿ ದುಡಿಯುವ ಯುವಜನತೆ ಕಡಿಮೆಯಾಗಿ ಉತ್ಪಾದನೆ ಕುಗ್ಗಿಹೋಗುತ್ತದೆ; ದುಡಿಯಲಾಗದ, ಕೂತು ತಿನ್ನುವ ವೃದ್ಧರೇ ಅಧಿಕವಾಗಿ ಅರ್ಥವ್ಯವಸ್ಥೆಯ ಮೇಲೆ ಹೊಡೆತ ಬೀಳುತ್ತದೆ. ಆಗಂತೂ ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡುದಾರಕ್ಕೆ ಅನ್ನುವಂತಹ ಸ್ಥಿತಿಯಾಗುತ್ತದೆ! ದೇಶ ವೇಗವಾಗಿ ‘ಮುದಿ’ಯಾಗುತ್ತಾ ಹೋದರೆ ಏನಾಗುತ್ತದೆ ಎನ್ನುವುದನ್ನು ಚೀನಾದಲ್ಲಿ ನೋಡುತ್ತಲೇ ಇದ್ದೇವೆ.

ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಸೇರಿದಂತೆ ಹಲವಾರು ಸಂಸ್ಥೆಗಳು ಮಾಡಿರುವ ಅಧ್ಯಯನಗಳನ್ನು ಒಟ್ಟಾರೆಯಾಗಿ ತೆಗೆದುಕೊಂಡರೆ ಜಾಗತಿಕ ಜನಸಂಖ್ಯೆ ಹೀಗೇ ಏರುತ್ತಾ ಹೋಗುವುದಿಲ್ಲ, ಒಂದು ಹಂತ ದಾಟಿದ ನಂತರ ಅದು ಇಳಿಯತೊಡಗುತ್ತದೆ ಎನ್ನುವುದು ತಿಳಿಯುತ್ತದೆ. ಆ ಪ್ರಕಾರ ಬಹುತೇಕ ಯೂರೋಪ್ ಆ ಸ್ಥಿತಿಯನ್ನು ಈಗಾಗಲೇ ತಲುಪಿದೆ. ಚೀನಾದ ಜನಸಂಖ್ಯೆ 2026ರಲ್ಲಿ ಗರಿಷ್ಠ ಮಟ್ಟ ಮುಟ್ಟಿ ನಂತರ ಇಳಿಯುತ್ತಾ ಹೋಗಿ ಕ್ರಿ.ಶ. 3001ಕ್ಕೆ 78 ಕೋಟಿಯಷ್ಟೇ ಇರುತ್ತದಂತೆ. ನಮ್ಮದು 2048ರಲ್ಲಿ 170 ಕೋಟಿಯ ಗರಿಷ್ಠ ಮಟ್ಟ ಮುಟ್ಟಿ ಕ್ರಿ.ಶ. 3001ರಲ್ಲಿ 108 ಕೋಟಿಗೆ ಇಳಿಯುತ್ತದಂತೆ. ಈ ಹಾದಿಯಲ್ಲಿ ನಾವು ದುಡಿಯುವ ಕೈಗಳನ್ನು ಎಷ್ಟು ಪ್ರಮಾಣದಲ್ಲಿ ಕಳೆದುಕೊಳ್ಳುತ್ತೇವೆ, ಅದರಿಂದಾಗಿ ನಮ್ಮ ವಾರ್ಷಿಕ ಅಭಿವೃದ್ಧಿ ದರ ಎಷ್ಟರ ಮಟ್ಟಿಗೆ ಕುಗ್ಗಬಹುದು, ಅದು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ನಮ್ಮನ್ನು ಎಲ್ಲಿಡಬಹುದು ಎಂದು ಈಗಲೇ ಹೇಳಲಾಗದು. ಆದರೆ ಅದು ಒಂದು ದಿನ ನಮ್ಮೆದುರು ಭೂತಾಕಾರವಾಗಿ ನಿಲ್ಲುವುದಂತೂ ನಿಶ್ಚಿತ. ಇದಕ್ಕೆ ಪ್ರಸಕ್ತ ನಾಯಕತ್ವದಲ್ಲಿ, ಮೋದಿಯವರಲ್ಲಿ ಪರಿಹಾರವಿದೆಯೇ? ನಾಳಿನ ಸವಾಲುಗಳನ್ನು ಇಂದೇ ಗ್ರಹಿಸಿ ಪರಿಹಾರಾತ್ಮಕ ಯೋಜನೆಗಳನ್ನು ಮೋದಿ ಕೈಗೊಳ್ಳುತ್ತಿದ್ದಾರೆಯೇ?

ಪ್ರಧಾನಿಯವರ ಅನೇಕ ಹೇಳಿಕೆಗಳು ಮತ್ತು ಯೋಜನೆಗಳನ್ನು ಗಮನಿಸಿದರೆ ಈ ಎಲ್ಲ ಪ್ರಶ್ನೆಗಳಿಗೂ ಧನಾತ್ಮಕವಾಗಿ ನಾವು ಉತ್ತರಿಸಬಹುದೆನಿಸುತ್ತದೆ. ಅಮೆರಿಕಾ, ಜರ್ಮನಿ, ಫ್ರಾನ್ಸ್ ಮುಂತಾದ ಪಶ್ಚಿಮ ಜಗತ್ತಿನ ದೇಶಗಳು ಕುಗ್ಗುತ್ತಿರುವ ಜನಸಂಖ್ಯೆಯ ಹಿನ್ನೆಲೆಯಲ್ಲಿ ತಮ್ಮ ಉತ್ಪಾದನಾ ಪ್ರಕ್ರಿಯೆಯನ್ನು ಹೆಚ್ಚುಹೆಚ್ಚು ಯಾಂತ್ರೀಕೃತಗೊಳಿಸುತ್ತಿವೆ. ಪ್ರಧಾನಿ ಮೋದಿ ಇದರಾಚೆಗೂ ಯೋಚಿಸಿದ್ದಾರೆ ಎನ್ನುವುದು ಅವರು ಎಐ ಅಂದರೆ ಕೃತಕ ಬುದ್ಧಿವಂತಿಕೆಯ ಕುರಿತಾಗಿ ಮತ್ತೆ ಮಾತಾಡುವುದರಲ್ಲಿ ನಮಗೆ ತಿಳಿಯುತ್ತದೆ. ವ್ಯಾಪಕ ಯಾಂತ್ರೀಕರಣ, ಕೃತಕ ಬುದ್ಧಿವಂತಿಕೆಯ ಬಳಕೆ ಅಗಾಧ ಪ್ರಮಾಣದಲ್ಲಿ ನಮಗಿಂದು ಅಗತ್ಯವಿಲ್ಲ, ನಿಜ. ಆದರೆ ಜನನ ಪ್ರಮಾಣ ಯಾವುದೇ ಕಾರಣದಿಂದ ಇಳಿಯುತ್ತಾ ಹೋದಂತೆ ಆ ಪ್ರಮಾಣಕ್ಕನುಗುಣವಾಗಿ ನಾವು ನಮ್ಮ ಉತ್ಪಾದನಾ ವಿಧಾನಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ನಾವು ಎಚ್ಚರ ವಹಿಸಬೇಕಾದ್ದು ಚೀನಾ ಮಾಡಿದ ತಪ್ಪುಗಳನ್ನು ಮಾಡದಿರುವಲ್ಲಿ. ಚೀನಾ ಸಹ ಯಾಂತ್ರೀಕರಣ ಕ್ಷೇತ್ರದಲ್ಲಿ ಅಗಾಧ ಸಾಧನೆಯನ್ನೇನೋ ಮಾಡಿದ್ದುಂಟು. ಆದರೆ ಅದು ಸೃಷ್ಟಿಸಿದ ಹೆಚ್ಚಿನ ಯಂತ್ರಗಳು ರಿವರ್ಸ್ ಇಂಜಿನೀಯರಿಂಗ್ ಮೂಲಕ, ಯಂತ್ರಗಳ ನೀಲನಕ್ಷೆಗಳನ್ನು ಹೊರಗಿನಿಂದ ಕದ್ದು, ತುಸು ಮಾರ್ಪಡಿಸಿಕೊಳ್ಳುವ ಮೂಲಕ. ಆದರೆ ಅದೂ ಸರಿಯಾಗಿ ಆಗದೇ ಚೀನೀ ಯಂತ್ರಗಳು ಪಶ್ಚಿಮದ ದೇಶಗಳ ಯಂತ್ರಗಳಷ್ಟು ಕಾರ್ಯಕ್ಷಮತೆಯನ್ನೂ ತೋರುತ್ತಿಲ್ಲ, ಬಾಳಿಕೆಯೂ ಬರುತ್ತಿಲ್ಲ. ಈ ಸಮಸ್ಯೆ ಚೀನಾದೊಳಗೆ ಬಳಕೆಯಾಗುತ್ತಿರುವ ಯಂತ್ರಗಳಿಗಷ್ಟೇ ಇಲ್ಲ, ಚೀನಾದಿಂದ ರಫ್ತಾದ ಯಂತ್ರಗಳನ್ನೂ ಕಾಡುತ್ತಿದೆ. ಹಲವು ದೇಶಗಳು ಚೀನಾದಿಂದ ಪಡೆದುಕೊಂಡ ಕೈಗಾರಿಕಾ ಯಂತ್ರಗಳ ಜತೆ ಯುದ್ಧವಿಮಾನಗಳು ಹಾಗೂ ನೌಕಾಸೇನೆಯ ಜಹಜುಗಳೂ ಉಪಯೋಗಿಸಲಾಗದ ಸ್ಥಿತಿಯಲ್ಲಿವೆ. ಪರಿಣಾಮವಾಗಿ ಚೀನೀ ಯಂತ್ರಗಳಿಗೆ ಬೇಡಿಕೆ ಇಳಿಕೆಯಾಗಿ, ಚೀನೀ ರಫ್ತು ದೊಡ್ಡ ಪ್ರಮಾಣದಲ್ಲಿ ಕುಗ್ಗುತ್ತಿದೆ, ಕಾರ್ಖಾನೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸದಂತಾಗಿವೆ, ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಮೇಲೆ ಹೇಳಿದಂತೆ ಚೀನೀಯರ ಬದುಕಿನ ಗುಣಮಟ್ಟ ಕುಗ್ಗುತ್ತಿದೆ. ಚೀನಾವನ್ನು ಹಿಂದೆ ಹಾಕಿ ಭಾರತ ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ ಎಂಬ ಮಾಹಿತಿ ಜಾಗತಿಕವಾಗಿ ಅಧಿಕೃತವಾಗಿ ಹೊರಬಿದ್ದಾಗ ಚೀನೀ ಸರ್ಕಾರಿ ನಿಯಂತ್ರಿತ ಮಾಧ್ಯಮಗಳು ಹೇಳಿದ್ದ ಜನಸಂಖ್ಯೆ ದಾಖಲೆಯ ಪ್ರಮಾಣವನ್ನು ತಲುಪುವುದೇನೂ ದೊಡ್ಡ ವಿಷಯವಲ್ಲ, ಜನರ ‘ಗುಣಮಟ್ಟ’ ಎಂತಹದು ಎನ್ನುವುದು ಮುಖ್ಯ ಎಂದು ಹೇಳಿದವು. ಆ ‘ಗುಣಮಟ್ಟ’ ಚೀನೀ ಸರ್ಕಾರ ಹೆಮ್ಮೆಪಡುವಷ್ಟೇನೂ ಇಲ್ಲ ಎಂದು ಇದೇ ಜನವರಿ 1ರ ಷಿ ಜಿನ್​ಪಿಂಗ್​ರ ಹಳಹಳಿಕೆಗಳಲ್ಲಿ ಜಗತ್ತಿಗೇ ಕಂಡಿತು.

ಇಂತಹ ಸ್ಥಿತಿಗೆ ಭಾರತ ತಲುಪಬಾರದು ಎನ್ನುವುದು ಪ್ರಧಾನಮಂತ್ರಿ ಮೋದಿಯವರ ಆಶಯ ಹಾಗೂ ನಿರ್ಧಾರಗಳಾಗಿವೆ. ಅದಕ್ಕಾಗಿಯೇ ಅವರು ಸಂಶೋಧನೆಗಳಿಗೆ ಮಹತ್ವ ನೀಡುತ್ತಿದ್ದಾರೆ. ಸಂಶೋಧನೆಯ ಕ್ಷೇತ್ರದಲ್ಲಿ ದೇಶ ಗಂಭೀರ ಹೆಜ್ಜೆಗಳನ್ನಿಟ್ಟು ಜಾಗತಿಕ ಗುಣಮಟ್ಟದ ಯಂತ್ರಗಳು ಹಾಗೂ ಉಪಕರಣಗಳನ್ನು ತಯಾರಿಸುವಂತಾದರೆ ಅದು ನಮ್ಮ ಉತ್ಪಾದನಾ ಕ್ಷೇತ್ರವನ್ನು ಸದಾ ಸುಸ್ಥಿತಿಯಲ್ಲಿ ಹಾಗೂ ಚಾಲನೆಯಲ್ಲಿಡುತ್ತದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ನಮ್ಮಿಂದ ಕ್ಷಿಪ್ರಕಾಲದಲ್ಲಿ ಸಂಶೋಧನೆ ಆಗಲಾರದ ಕ್ಷೇತ್ರಗಳಲ್ಲಿ ಅಂತಹ ಯಂತ್ರಗಳನ್ನು, ರಕ್ಷಣಾ ಸಾಮಗ್ರಿಗಳನ್ನು ಭಾರತದಲ್ಲೇ ಉತ್ಪಾದಿಸಲು ಅವಕಾಶ ನೀಡುವ ಒಪ್ಪಂದಗಳನ್ನು ಫ್ರಾನ್ಸ್, ಅಮೆರಿಕಾ ಸೇರಿದಂತೆ ಹಲವು ದೇಶಗಳೊಂದಿಗೆ ಅವರು ಮಾಡಿಕೊಂಡಿದ್ದಾರೆ.

ಇದೆಲ್ಲವೂ ಹೇಳುವುದು ‘ಮೋದಿ ಯುಗದಲ್ಲಿ ಭಾರತ ಸಾಧಿಸುತ್ತಿರುವ ಆರ್ಥಿಕ ಪ್ರಗತಿ ನೀರಿನ ಮೇಲಿನ ಗುಳ್ಳೆಯಲ್ಲ, ಶಾಶ್ವತ’ ಎಂದು. ಇದು ಭಾರತದ ಇಂದಿನ ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಬಗೆಗಿನ ಇಣುಕುನೋಟ. ವಾಸ್ತವ ಹೀಗಿದ್ದೂ ಮೋದಿ ಸರ್ಕಾರದ ಸಾಧನೆಗಳನ್ನು ನಗಣ್ಯಗೊಳಿಸಿ, ಅದನ್ನು ಜನತೆಯ ಮುಂದೆ ವೈಫಲ್ಯಗಳಂತೆ ಬಿಂಬಿಸಿ 2024ರ ಲೋಕಸಭಾ ಚುನಾವಣೆಗಳನ್ನು ಪ್ರಭಾವಿಸಲು ನಡೆಯುತ್ತಿರುವ ಕುತಂತ್ರಗಳ ಬಗ್ಗೆ, ಅವುಗಳಲ್ಲಿ ಸಂಸತ್ ದಾಳಿಯಂತಹ ಘಟನೆಗಳು ವಹಿಸುವ ಪಾತ್ರದ ಬಗ್ಗೆ ಲೇಖನದ ಅಂತಿಮ ಭಾಗದಲ್ಲಿ ಮುಂದಿನವಾರ ಅವಲೋಕನ ಮಾಡೋಣ.

(ಮುಂದುವರಿಯುವುದು)

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net