EPFO: ಉದ್ಯೋಗಿಗಳ ಠೇವಣಿ ಮೇಲಿನ ಬಡ್ಡಿ ದರ ಫಿಕ್ಸ್​: ಶೇ.8.25​ ನಿಗದಿಪಡಿಸಿದ ಸಿಬಿಇಟಿ..

epf
Published on

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಲ್ಲಿನ ಬ್ಯಾಲೆನ್ಸ್ ಮೇಲಿನ ಬಡ್ಡಿ ದರವನ್ನು ಅಂತಿಮಗೊಳಿಸಲಾಗಿದೆ. 2023-24 ರ ಹಣಕಾಸು ವರ್ಷದಲ್ಲಿ ಬಡ್ಡಿ ದರವನ್ನು ಶೇಕಡಾ 8.25 ಕ್ಕೆ ನಿಗದಿಪಡಿಸಲಾಗಿದೆ. ಶನಿವಾರ ನಡೆದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇಪಿಎಫ್‌ಒ ಮೂಲಗಳು ಬಹಿರಂಗಪಡಿಸಿವೆ. ಇದು ಕಳೆದ ಮೂರು ವರ್ಷಗಳಲ್ಲಿ ನೀಡಿರುವ ಅತಿ ಹೆಚ್ಚು ಬಡ್ಡಿಯಾಗಿದೆ.

ಸಿಬಿಟಿಯ ನಿರ್ಧಾರವನ್ನು ಕೇಂದ್ರ ಹಣಕಾಸು ಇಲಾಖೆಗೆ ಕಳುಹಿಸಲಾಗುವುದು. ಸರ್ಕಾರದ ಅನುಮೋದನೆಯ ನಂತರ ಬಡ್ಡಿ ದರವನ್ನು ಇಪಿಎಫ್‌ಒ ಅಧಿಕೃತವಾಗಿ ತಿಳಿಸುತ್ತದೆ. ಅದರ ನಂತರ ಬಡ್ಡಿ ಮೊತ್ತವನ್ನು 6 ಕೋಟಿ ಚಂದಾದಾರರ ಖಾತೆಗಳಿಗೆ ಇಪಿಎಫ್‌ಒ ಜಮಾ ಮಾಡುತ್ತದೆ. ಸಿಬಿಟಿ ಪ್ರಸ್ತಾವನೆಗಳ ಕುರಿತು ಕೇಂದ್ರ ಹಣಕಾಸು ಇಲಾಖೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

ಇದು ಕಳೆದ ಹಣಕಾಸು ವರ್ಷಕ್ಕಿಂತ ಸ್ವಲ್ಪ ಹೆಚ್ಚಾಗಿದೆ. 2022-23 ರ ಹಣಕಾಸು ವರ್ಷದ ಬಡ್ಡಿ ದರವನ್ನು ಶೇಕಡಾ 8.15 ಕ್ಕೆ ನಿಗದಿಪಡಿಸಲಾಗಿತ್ತು. ಅದಕ್ಕೂ ಮೊದಲು, 2021-22ರಲ್ಲಿ 8.10 ಪ್ರತಿಶತ ಬಡ್ಡಿಯನ್ನು ಪಾವತಿಸಲಾಗಿದೆ.

ಕಳೆದ 10 ವರ್ಷದ ಇಪಿಎಫ್ ಬಡ್ಡಿ ದರ: 2013-14: ಶೇ.8.75, 2014-15: ಶೇ.8.75. 2015-16: ಶೇ.8.8, 2016-17: ಶೇ.8.65, 2017-18: ಶೇ.8:55, 2018-19: ಶೇ.8.65, 2019-20: ಶೇ. 8.5, 2020-21 : ಶೇ.8.50, 2021-22: ಶೇ.8.1, 2022-23: ಶೇ8.15 .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net