ಕೀಟಗಳೇ ಹೇಳಿ ಹೋಗಿ ಮನುಷ್ಯನ ಸಾವಿಗೆ ಕಾರಣ…

Insects
Published on
ಚೌಕ
ಅದು 2012ರ ನವೆಂಬರ್ ತಿಂಗಳಿನ ಒಂದು ಮುಂಜಾನೆ. ಚುಮುಚುಮು ಚಳಿಯಲ್ಲಿ ಉತ್ತರ ಇಟಲಿಯ ಬ್ರಾಸಿಯಾನೋ ನಗರದ ಊರ ಮಧ್ಯದ ಕೆರೆಯ ಪಕ್ಕದ ರಸ್ತೆಯನ್ನು ಸೈಕಲ್ ತುಳಿಯುತ್ತ ದಾಟುತ್ತಿದ್ದ ಜ್ಯಾಕ್​ಗೆ ದಂಡೆಯಲ್ಲೇನೋ ಬಿದ್ದಿರುವುದು ಕಾಣಿಸಿತು. ಹತ್ತಿರ ಹೋದ ಆತನಿಗೆ ಕಂಡಿದ್ದು ಬೋರಲಾಗಿ ಬಿದ್ದಿದ್ದ ತರುಣಿಯ ಶವ. ಜಾಕ್​ನ ಕರೆಗೆ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು ಅದು ಹದಿನಾರು ವರ್ಷ ಪ್ರಾಯದ ಫೆಡರಿಕಾ ಮಾಂಗಿಯಪೆಲೊ ಎಂಬ ಬಾಲಕಿಯ ಶವವೆಂದು. ಫೆಡರಿಕಾಳ ಒದ್ದೆ ಮೈಮೇಲೆ ಕ್ರೌರ್ಯ ನಡೆದ ಯಾವುದೇ ಲಕ್ಷಣಗಳು ಪೊಲೀಸರಿಗೆ ಕಂಡುಬರಲಿಲ್ಲ. ಆದರೆ ಆಕೆಯ ಬಲಗೈ ತಿರುಚಿದ್ದನ್ನು, ಬ್ಯಾಗ್ ಮತ್ತು ಮೊಬೈಲ್ ನಾಪತ್ತೆಯಾಗಿದ್ದನ್ನು ಪೊಲೀಸರು ಗಮನಿಸಿದರು. ತದನಂತರ ನಡೆದ ವೈದ್ಯಕೀಯ ತಪಾಸಣೆಯು ಆಕೆಗೆ ಹೃದಯಸ್ತಂಭನವಾಗಿದ್ದ ವಿಷಯವನ್ನು ಹಾಗೂ ಆಕೆಯ ಮರಣವು ಜಾಕ್ ನೋಡಿದ್ದ ನಾಲ್ಕು ಗಂಟೆಯ ಮೊದಲು ಆಗಿರುವ ವಿಷಯವನ್ನು ಬಹಿರಂಗಪಡಿಸಿತು. ಪೂರಕ ಸಾಕ್ಷ್ಯಾಧಾರಗಳಿರದ ಕಾರಣ ಮತ್ತು ಫೆಡರಿಕಾಗೆ ಬಾಲ್ಯದಿಂದಲೂ ಅಪಸ್ಮಾರ ಕಾಯಿಲೆಯಿದ್ದ ಹಿನ್ನೆಲೆಯಲ್ಲಿ ಪೊಲೀಸರು ಇದೊಂದು ಸಹಜ ಸಾವು ಎಂಬ ನಿರ್ಧಾರಕ್ಕೆ ಬಂದು ಪ್ರಕರಣವನ್ನು ಮುಚ್ಚಿದರು.

ಪೊಲೀಸರ ಈ ನಿರ್ಧಾರವನ್ನು ಒಪ್ಪದ ಫೆಡರಿಕಾಳ ಕುಟುಂಬದವರು ಇದೊಂದು ಹತ್ಯೆಯ ಪ್ರಕರಣವಾಗಿದ್ದು, ಕೂಲಂಕಷವಾಗಿ ತನಿಖೆ ನಡೆಸಿ ಅಪರಾಧಿಯನ್ನು ಪತ್ತೆ ಹಚ್ಚಬೇಕೆಂದು ಮೇಲ್ಮನವಿ ಸಲ್ಲಿಸಿದರು. ವಿಷಯ ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಕಾರಣ ಪೊಲೀಸರ ಮೇಲೆ ಒತ್ತಡ ಬಂದು ಪ್ರಕರಣವನ್ನು ಆಗತಾನೇ ನಿಯುಕ್ತಿಗೊಂಡು ತರಬೇತಿ ಪಡೆಯುತ್ತಿದ್ದ ನೂತನ ಪೊಲೀಸ್ ಅಧಿಕಾರಿಯೊಬ್ಬರಿಗೆ ವಹಿಸಲಾಯಿತು.

ತರಬೇತಿಯ ಭಾಗವಾಗಿ ಅಂದು ಪಾವೋಲಾ ಮಾಗ್ನಿ ಎಂಬ ವಿಧಿವಿಜ್ಞಾನ ತಜ್ಞೆಯ ಜಲವಿಧಿವಿಜ್ಞಾನವೆಂಬ ನೂತನ ಅಪರಾಧಪತ್ತೆ ಶಾಸ್ತ್ರ ಕುರಿತಾದ ಉಪನ್ಯಾಸ ಕೇಳುತ್ತ ಕುಳಿತಿದ್ದ ಆ ಅಧಿಕಾರಿ ಫೆಡರಿಕಾಳ ಪ್ರಕರಣ ತನಗೆ ವಹಿಸಿರುವ ವಿಷಯ ತಿಳಿಯುತ್ತಿದ್ದಂತೆ ಬ್ರಾಸಿಯಾನೋಗೆ ದೌಡಾಯಿಸಿ ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಪೂರಕ ಸಾಕ್ಷ್ಯಾಧಾರಗಳಿಲ್ಲದೆ ಈ ಕೇಸನ್ನು ಪರಿಹರಿಸಬೇಕಾಗಿರುವ ಸವಾಲು ಅಧಿಕಾರಿ ಮುಂದಿತ್ತು. ಪಾವೋಲಾ ಮಾಗ್ನಿ ತನ್ನ ಉಪನ್ಯಾಸದಲ್ಲಿ ‘ನಾವು ಮಾಡುವ ಪ್ರತಿಯೊಂದು ಕ್ರಿಯೆಯೂ ಈ ಪರಿಸರದಲ್ಲಿ ಯಾವುದಾದರೂ ಕುರುಹು ಖಂಡಿತ ಬಿಟ್ಟಿರುತ್ತದೆ’ ಎಂದು ಹೇಳಿದ್ದು ಈ ಅಧಿಕಾರಿಯ ನೆನಪಿಗೆ ಬಂತು.

ಅಷ್ಟಕ್ಕೂ ಫೆಡರಿಕಾಳ ಮೃತದೇಹ ಪತ್ತೆಯಾಗಿದ್ದು ಕೆರೆಯ ದಂಡೆಯ ಮೇಲಾಗಿದ್ದ ಕಾರಣಕ್ಕೆ ಪಾವೋಲಾರ ಪರಿಣಿತಿ ತನ್ನ ನೆರವಿಗೆ ಬರಬಹುದೆಂದು, ಪಾವೋಲಾರನ್ನು ಸಂರ್ಪಸಿದರು. ಕೇಸಿನ ಹಿನ್ನೆಲೆಯನ್ನು ಅರಿತುಕೊಂಡ ಪಾವೋಲಾ ಪೊಲೀಸರಿಂದ ಅನುಮಾನಿತ ವ್ಯಕ್ತಿಗಳ ಪಟ್ಟಿ ತರಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಇದಾದ ಕೆಲದಿನಗಳಲ್ಲಿಯೇ ಪೊಲೀಸರ ತಂಡವು ಫೆಡರಿಕಾಳ ಪ್ರಿಯಕರ ಡಿ ಮೋರೋನನ್ನು ಬಂಧಿಸಿ ಆತನೇ ಕೊಲೆಮಾಡಿದ್ದಾಗಿ ಘೊಷಿಸಿದರು. ಅಲ್ಲಿಗೆ ತಿಂಗಳುಗಳಿಂದ ಬ್ರಾಸಿಯಾನೋ ನಗರದ ಜನರ ನಿದ್ದೆಗೆಡಿಸಿದ್ದ ಕೊಲೆಪ್ರಕರಣವೊಂದು ರ್ತಾಕ ಅಂತ್ಯ ಕಂಡಿತು.

ಫೆಡರಿಕಾಳ ಕುಟುಂಬದವರು ಆಕೆಯ ಸಾವನ್ನು ಕೊಲೆಯೆಂದು ವಾದಿಸುತ್ತಿರುವಾಗಲೇ ಹಲವರ ಅನುಮಾನ ಡಿ ಮೋರೋ ಮೇಲಿತ್ತು. ಈ ನಿಟ್ಟಿನಲ್ಲಿ ಹಲವು ಬಾರಿ ಪೊಲೀಸರು ಆತನ ವಿಚಾರಣೆ ನಡೆಸಿದ್ದರೂ ಆತ ಮಾತ್ರ ಆಕೆಯ ಸಾವಿನ ಹಿಂದಿನ ದಿನ ರಾತ್ರಿ ಇಬ್ಬರೂ ಜೊತೆಯಲ್ಲಿದ್ದೇವೆಂದೂ ಆಕೆಯ ಕೋರಿಕೆಯಂತೆ ಮನೆಯ ಹತ್ತಿರದ ಮಾಲ್ ಒಂದರಲ್ಲಿ ಡ್ರಾಪ್ ಕೊಟ್ಟು ತಾನು ಮನೆಗೆ ಹೋಗಿದ್ದಾಗಿ ವಾದಿಸುತ್ತಲೇ ಬಂದಿದ್ದ. ಪಾವೋಲಾ ಈ ಕೇಸಿನ ತನಿಖೆಯಲ್ಲಿ ಎಂಟ್ರಿ ಕೊಟ್ಟಿದ್ದೇ ಸೈ ಮೊದಲು ಪೊಲೀಸರನ್ನು ಡಿ ಮೋರೋ ಮನೆಗೆ ಕಳಿಸಿ ಕೊಲೆಯಾದ ಹಿಂದಿನ ರಾತ್ರಿ ಆತ ಹಾಕಿಕೊಂಡಿದ್ದ ಶರ್ಟ್​ನ್ನು ವಶಪಡಿಸಿಕೊಂಡರು. ಅದಾಗಲೇ ವಾಷಿಂಗ್ ಮಷೀನ್ನಿನೊಳಗೆ ತೂರಿ ಬಂದಿದ್ದ ಆ ಬಟ್ಟೆಯೇ ಪ್ರಕರಣದ ಪ್ರಮುಖ ಸಾಕ್ಷಿಯಾಯಿತು.

ಅಪರಾಧ ಪತ್ತೆಗೆ ಪಾವೋಲಾ ಬಳಸಿದ್ದ ತಂತ್ರ ವಿಶಿಷ್ಟವಾದದ್ದು. ನೀರೆಂದ ಮೇಲೆ ಹತ್ತುಹಲವು ಸೂಕ್ಷ್ಮಜೀವಿಗಳು ಪಾಚಿಗಳಲ್ಲಿ ತೇಲುತ್ತಿರುತ್ತವೆ. ಕೆರೆ, ಹಳ್ಳ, ಸಮುದ್ರ ಹೀಗೆ ನೀರಿನಲ್ಲಿ ವ್ಯಕ್ತಿಯೋರ್ವ ಬಿದ್ದಾಗ ಅವನ ದೇಹದೊಳಗೆ ಪ್ರವೇಶಿಸುವ ನೀರಿನ ಜೊತೆಗೆ ಪಾಚಿಯೂ ದೇಹದ ಒಳಗೆ ಪ್ರವೇಶಿಸುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಒಂದು ವೇಳೆ ನೀರಿನಲ್ಲಿ ಬೀಳುವ ಮುನ್ನ ದೇಹವು ಜೀವಂತವಾಗಿದ್ದಲ್ಲಿ ಮಾತ್ರ ಈ ಪಾಚಿ ಅದರಲ್ಲೂ ವಿಶೇಷವಾಗಿ ಛಜಿಚಠಿಟಞ ಅಂದರೆ ಏಕಕೋಶ ಪಾಚಿಯು ಶ್ವಾಸಕೋಶದ ಮುಖಾಂತರ ಹೃದಯರಕ್ತನಾಳಗಳ ಮಾರ್ಗವಾಗಿ ದೇಹದ ಅಂಗಗಳನ್ನು ತಲಪುತ್ತವೆ. ಹೀಗಾಗಿ ವಿಧಿವಿಜ್ಞಾನ ತಜ್ಞರು ಶವಪರೀಕ್ಷೆಯಲ್ಲಿ ಮಿದುಳು, ಲೀವರ್​ನ್ನು ಪರೀಕ್ಷಿಸಿ ಅದರಲ್ಲಿ ಈ ಏಕಕೋಶ ಪಾಚಿಗಳ ಇರುವಿಕೆಯ ಆಧಾರದ ಮೇಲೆ ನೀರಿಗೆ ಬೀಳುವ ಮುಂಚಿನ ದೇಹದ ಪರಿಸ್ಥಿತಿಯ ಕುರಿತು ನಿರ್ಧರಿಸುತ್ತಾರೆ.

ಫೆಡರಿಕಾಳ ಪ್ರಕರಣದಲ್ಲಿ ಪಾವೋಲಾ ಆಕೆಯ ಅಂಗಾಂಶದಲ್ಲಿ ಕಂಡುಬಂದ ಏಕಕೋಶ ಪಾಚಿಯನ್ನು ಪತ್ತೆಹಚ್ಚಿದ ಜೊತೆಯಲ್ಲೇ ಡಿ ಮೋರೋನ ಬಟ್ಟೆಗಳ ಮೇಲೆ ಕಂಡುಬಂದ ಏಕಕೋಶ ಪಾಚಿಯನ್ನು ಸಹ ಪರೀಕ್ಷಿಸಿದರು. ಇದರ ಜೊತೆಗೆ ಪೊಲೀಸರು ಡಿ ಮೋರೋನ ಮನೆಗೆ ಹೋದಾಗ ಅದಾಗಲೇ ಆತನ ತಾಯಿ ಬಟ್ಟೆಯನ್ನು ವಾಷಿಂಗ್ ಮಷೀನಿನಲ್ಲಿ ತೊಳೆದ ಹಿನ್ನೆಲೆಯಲ್ಲಿ ಆ ಯಂತ್ರ ಬಳಸುವ ನೀರಿನ ಮಾದರಿಯನ್ನೂ ತಂಡವು ಕಲೆಹಾಕಿತು. ತಾನು ಕಲೆಹಾಕಿದ್ದ ಮಾದರಿಗಳನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿದಾಗ ಫೆಡರಿಕಾಳ ದೇಹದ ಮೇಲೆ ಮತ್ತು ಡಿ ಮೋರೋನ ಬಟ್ಟೆಗಳ ಮೇಲೆ ಕಂಡುಬಂದ ಏಕಕೋಶ ಪಾಚಿ ಒಂದೇ ಆಗಿದ್ದು ಆತನ ಮನೆಯ ವಾಷಿಂಗ್ ಮಷೀನ್ನಿನ ನೀರಿನ ಮಾದರಿಯಲ್ಲಿದ್ದ ಪಾಚಿಗೆ ಉಳಿದ ಪಾಚಿಯೊಡನೆ ತಾಳೆಯಾಗದ ಹಿನ್ನೆಲೆಯಲ್ಲಿ ಫೆಡರಿಕಾಳ ಹತ್ಯೆಯಲ್ಲಿ ಡಿ ಮೋರೋನ ಕೈವಾಡದ ಕುರಿತು ತನಿಖಾ ತಂಡಕ್ಕೆ ಖಾತ್ರಿಯಾದಂತಾಯಿತು.

ಪಾವೋಲಾ ಸಂಶೋಧನಾ ಸಮಯದಲ್ಲಿ ನೀರಿನ ಏಕಕೋಶ ಪಾಚಿಯು ಒಂದೆರಡು ಬಾರಿ ಮಷೀನಿನಲ್ಲಿ ತೊಳೆದರೂ ತನ್ನ ಕುರುಹುಗಳನ್ನು ಬಿಟ್ಟಿರುತ್ತದೆ ಎಂಬುದನ್ನು ಕಂಡುಕೊಂಡಿದ್ದು ಪ್ರಕರಣವನ್ನು ಪರಿಹರಿಸಲು ಸಾಧ್ಯವಾಯಿತು. ಈ ಬಾರಿ ಸಾಕ್ಷಿಯ ಸಮೇತ ವಿಚಾರಣೆ ನಡೆಸಿದ ಪೊಲೀಸರಿಗೆ ಡಿ ಮೋರೋ ಆ ರಾತ್ರಿ ಫೆಡರಿಕಾ ತನ್ನೊಡನೆ ಜಗಳವಾಡಿ ಕಾಯಂ ಆಗಿ ತಮ್ಮಿಬ್ಬರ ಸಂಬಂಧವನ್ನು ಕಡಿದುಕೊಳ್ಳುವುದಾಗಿ ನಿರ್ಧರಿಸಿದ ಕಾರಣಕ್ಕೆ ಬ್ರಾಸಿಯಾನೋ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ.

ಮುಚ್ಚಿಹೋಗುವುದೆಂದು ಎಲ್ಲರೂ ಅಂದುಕೊಂಡಿದ್ದ ಫೆಡರಿಕಾಳ ಕೊಲೆಯ ಕೇಸನ್ನು ಸುಲಭವಾಗಿ ಬಗೆಹರಿಸಿದ ಪಾವೋಲಾ ಎಲ್ಲರ ಕಣ್ಮಣಿಯಾದರು. ಆದರೆ ಈ ಪ್ರಕರಣ ಅವರ ಪಾಲಿಗೆ ಒಂದು ಆರಂಭವಷ್ಟೆ. ಕೀಟಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ಮುಂದುವರಿಸಿ, ಅಲ್ಲಿನ ಪರಿಣತಿಯನ್ನು ವಿಧಿವಿಜ್ಞಾನ ಕ್ಷೇತ್ರದಲ್ಲಿ ಬಳಸಲು ಆರಂಭಿಸಿದ ಮೇಲಂತೂ ಪಾವೋಲಾರನ್ನು ತಡೆಯುವವರೇ ಇಲ್ಲ. ಘಟನಾಸ್ಥಳದಲ್ಲಿ ಕಂಡುಬರುವ ಕ್ರಿಮಿ, ಕೀಟ, ಹುಳು, ಹುಪ್ಪಡಿಗಳ ಆಧಾರದ ಮೇಲೆ ಕೊಲೆಯ ಜಾಡನ್ನು ಕಂಡುಹಿಡಿಯುವ ಪಾವೋಲಾ ಈಗ ಅಂತಾರಾಷ್ಟ್ರೀಯ ವಿಧಿವಿಜ್ಞಾನ ತಾರೆ. ಹಲವು ದೇಶಗಳಿಗೆ ಇವರು ಅಪರಾಧ ಪತ್ತೆಗಾಗಿ ಸಲಹಾಗಾರ್ತಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ‘ಸ್ಮಾರ್ಟ್ ಇನ್ಸೆಕ್ಟ್ಸ್’ ಎಂಬ ಮೊಬೈಲ್ ಆಪ್ ತಯಾರಿಸಿದ್ದಾರೆ. ಅಪರಾಧ ಪತ್ತೆಯಲ್ಲಿ ಕೀಟಶಾಸ್ತ್ರವನ್ನು ಹೇಗೆ ಬಳಸಬಹುದೆಂಬ ಮಾಹಿತಿಯ ಈ ಆಪ್ ಈಗಾಗಲೇ ಜನಪ್ರಿಯವಾಗಿದ್ದು ನಲವತ್ತು ಸಾವಿರಕ್ಕಿಂತ ಹೆಚ್ಚು ಡೌನ್​ಲೋಡ್​ಗಳನ್ನು ಕಂಡಿದೆ.

ಊಟ್ಟಛ್ಞಿಠಜ್ಚಿ ಛ್ಞಿಠಿಟಞಟ್ಝಟಜಢ (ವಿಧಿವಿಧಾನ ಕೀಟಶಾಸ್ತ್ರ) ಇತ್ತೀಚಿನ ವರ್ಷಗಳಲ್ಲಿ ಅಪರಾಧ ಪತ್ತೆಯಲ್ಲಿ ಹೆಚ್ಚು ಬಳಸಲಾಗುತ್ತಿದೆ. ಮರಣದ ನಂತರ ದೇಹದ ಜೀವಕೋಶಗಳನ್ನು ಅವುಗಳೊಳಗಿರುವ ಕೀಣ್ವಗಳೇ ತಿನ್ನಲಾರಂಭಿಸುತ್ತವೆ. ಅಠಿಟ್ಝಢಠಜಿಠ ಎಂದೆನ್ನಲಾಗುವ ಈ ಪ್ರಕ್ರಿಯೆಯೇ ದೇಹದ ಕೊಳೆಯುವಿಕೆ. ಇದು ಮುಂದುವರಿಯುತ್ತಿದ್ದಂತೆಯೇ ಕರುಳಿನ ಬ್ಯಾಕ್ಟೀರಿಯಾಗಳು ಅದರ ಅಂಗಾಂಶಗಳನ್ನು ನಾಶಮಾಡಿ ಹೈಡ್ರೋಜನ್ ಸಲ್ಪೈಟ್ , ಇಂಗಾಲದ ಡೈ ಆಕ್ಸೆ ೖಡ್​ನಂಥ ಅನಿಲಗಳು ಉತ್ಪತ್ತಿಯಾಗುತ್ತವೆ. ಕೊಳೆಯುವಿಕೆಯ ವಿವಿಧ ಹಂತಗಳಲ್ಲಿ ಬೇರೆ ಬೇರೆ ರೀತಿಯ ಕೀಟಗಳ ಚಟುವಟಿಕೆಗಳು ಜರುಗುವುದರಿಂದ ಮತ್ತೆ ಅವೆಲ್ಲ ಮೃತದೇಹವಿರುವ ವಾತಾವರಣ, ದೇಹದಲ್ಲಿನ ರಾಸಾಯನಿಕಗಳ ಮೇಲೂ ನಿರ್ಭರವಾಗಿರುವ ಕಾರಣಕ್ಕೆ ಈ ಕೀಟಗಳು ಬಹಳಷ್ಟು ವಿಷಯಗಳನ್ನು ಹೇಳಬಲ್ಲವು.

ಕೀಟಗಳನ್ನಾಧರಿಸಿ ಅಪರಾಧ ಪತ್ತೆಯ ತಂತ್ರ ಇತ್ತೀಚಿನದೇನಲ್ಲ. ನಾವು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಕಥೆಯೊಂದು ನಿಮಗೆಲ್ಲ ನೆನಪಿರಬೇಕು. ರೈತನೊಬ್ಬನ ಹೊಲದಲ್ಲಿ ಕೆಲಸಕ್ಕೆ ಬಂದಿದ್ದ ಕೂಲಿಯೊಬ್ಬನ ಕೊಲೆಯಾಗುತ್ತದೆ. ಅದು ನೇಗಿಲಿನಿಂದ ಕೊಚ್ಚಿ ಮಾಡಿದ ಕೊಲೆಯೆಂದು ಗೊತ್ತಾದ ಪೊಲೀಸರು ಅಲ್ಲಿ ಕೆಲಸಕ್ಕೆ ಬಂದಿದ್ದ ಎಲ್ಲ ಕೂಲಿಯಾಳುಗಳ ನೇಗಿಲನ್ನು ಪರೀಕ್ಷಿಸಿದಾಗ ಅದರಲ್ಲಿ ಒಬ್ಬನ ನೇಗಿಲಿಗೆ ಇರುವೆಗಳು ಮುತ್ತಿಕೊಂಡಿರುವುದು ಕಂಡುಬಂದು ವಿಚಾರಣೆಗೆ ಒಳಪಡಿಸಿದಾಗ ಆತ ತಾನೇ ಆ ಕೊಲೆಯನ್ನು ಮಾಡಿರುವುದಾಗಿ ಶರಣಾಗುತ್ತಾನೆ. ತೊಳೆದರೂ ನೇಗಿಲಿನ ತುದಿಗೆ ಅಂಟಿಕೊಂಡಿದ್ದ ರಕ್ತದ ಹನಿಗಳು ಕೊಲೆಗಾರನ ಪತ್ತೆಗೆ ಕಾರಣವಾಗುತ್ತವೆ. ಕ್ರಿಮಿಕೀಟಗಳ ಇಂತಹ ಸಣ್ಣಸಣ್ಣ ಚಟುವಟಿಕೆಗಳು ಹೇಗೆ ಅಪರಾಧಿಯೆಡೆಗೆ ನಮ್ಮನ್ನು ಕೊಂಡೊಯ್ಯಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net