

ಯೋಗವನ್ನು ಕುರಿತ ಗ್ರಂಥಗಳಲ್ಲಿ ಮೂಲತಃ 84 ಲಕ್ಷ ಆಸನಗಳ ಬಗ್ಗೆ ಹೇಳಲಾಗಿದೆ. ಇವು ಪ್ರತಿಯೊಂದು ಜೀವಿಯೂ ಹುಟ್ಟು ಸಾವುಗಳ ಚಕ್ರದಿಂದ ಮುಕ್ತಿ ಪಡೆಯುವ ಮೊದಲು ಹಾದುಹೋಗಬೇಕಾದ 84 ಲಕ್ಷ ಅವತಾರಗಳನ್ನು ಪ್ರತಿನಿಧಿಸುತ್ತವೆ ಎಂದಿರುವರು. ಈ ಆಸನಗಳೂ ಸಹ ಜೀವಿಯು ಅತ್ಯಂತ ಸರಳರೂಪದಿಂದ ಸಂಕೀರ್ಣತೆಯೆಡೆಗೆ ಅಂದರೆ, ಪೂರ್ಣ ಪ್ರಮಾಣದ ಮನುಷ್ಯ ಜೀವಿಯವರೆಗೆ ವಿಕಾಸವಾಗುವುದನ್ನೇ ಪ್ರತಿನಿಧಿಸುತ್ತವೆ. ಕಾಲಾನುಕ್ರಮದಲ್ಲಿ ಮಹರ್ಷಿಗಳು ಸಾಧು- ಸಂತ- ಮುನಿಗಳು ಆಸನಗಳ ಸಂಖ್ಯೆಯನ್ನು ಇಂದು ನಮಗೆ ತಿಳಿದಿರುವ ಕೆಲವು ನೂರು ಆಸನಗಳಿಗೆ ತಗ್ಗಿಸಿದರು ಮತ್ತು ಅವುಗಳ ಸ್ವರೂಪದಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿದರು. ಈ ಆಸನಗಳ ಅಭ್ಯಾಸದಿಂದ ಕರ್ಮಪ್ರಕ್ರಿಯೆಗಳನ್ನು ತಪ್ಪಿಸಿ ಒಂದೇ ಜೀವಿತಾವಧಿಯಲ್ಲಿ ವಿಕಾಸಕ್ರಮದ ಅನೇಕ ಹಂತಗಳನ್ನು ಬದಿಗಿರಿಸಿ ಉನ್ನತಮಟ್ಟಕ್ಕೆ ಬರಬಹುದು. ಕೆಲವು ನೂರರಷ್ಟಿರುವ ಆಸನಗಳಲ್ಲಿ ಎಂಬತ್ನಾಲ್ಕು ಆಸನಗಳ ಬಗ್ಗೆ ಮಾತ್ರ ವಿವರಗಳನ್ನು ಪಡೆಯಬಹುದಾಗಿದೆ. ಅನೇಕ ಯೋಗಾಸನಗಳು ಪ್ರಾಣಿಗಳ, ಪರ್ವತ, ಋಷಿ-ಮುನಿಗಳ ಸೂರ್ಯ-ಚಂದ್ರ, ಪ್ರಕೃತಿಯ ಹಲವು ಹೆಸರನ್ನು ಆಧರಿಸಿವೆ. ವಿಶೇಷವಾಗಿ ಪ್ರಾಣಿಗಳ ಹೆಸರಿನ ಆಸನಗಳು ಅವುಗಳ ಸ್ಥಿತಿ ಹಾಗೂ ಚಾಲನೆಯನ್ನು ಪ್ರತಿಬಿಂಬಿಸುತ್ತವೆ. ಪ್ರಾಣಿಗಳು ಹೇಗೆ ತಮ್ಮ ಸನ್ನಿವೇಶದೊಂದಿಗೆ ಮತ್ತು ದೇಹದೊಂದಿಗೆ ಸಾಮರಸ್ಯ ಸಾಧಿಸುತ್ತವೆ ಎಂಬುದನ್ನು ಪ್ರಾಣಿಲೋಕದ ಅವಲೋಕನದಿಂದ ಋಷಿಮುನಿಗಳು ತಿಳಿದುಕೊಂಡಿದ್ದರು. ನಿರ್ದಿಷ್ಟ ಭಂಗಿಯೊಂದರ ಪರಿಣಾಮ ಹೇಗಿರುತ್ತದೆ ಮತ್ತು ಅದರ ಮೂಲಕ ಹೇಗೆ ಹಾಮೋನು ಸ್ರವಿಸುವಿಕೆಯನ್ನು ಪ್ರಚೋದಿಸಬಹುದು ಹಾಗೂ ನಿಯಂತ್ರಿಸಬಹುದು ಎಂಬುದನ್ನು ಅನುಭವದ ಮೂಲಕ ಅವರು ತಿಳಿದಿದ್ದರು. ಉದಾಹರಣೆಗೆ, ಮಯೂರಾಸನದಲ್ಲಿ ನವಿಲನ್ನು ಅನುಕರಣೆ ಮಾಡುವ ಮೂಲಕ ಶರೀರದ ಋಣಾತ್ಮಕ ಹಾಗೂ ನಂಜು-ವಿಷಯುಕ್ತ ಅಂಶಗಳನ್ನು ನಿರೋಧಿಸುವ ಸಾಮರ್ಥ್ಯ ಪಡೆಯಬಹುದಾಗಿದೆ.
ಶಶಾಂಕಾಸನದಲ್ಲಿ ಮೊಲವನ್ನು ಅನುಕರಣೆ ಮಾಡುವ ಮೂಲಕ ‘ಹೋರಾಟ ಅಥವಾ ಪಲಾಯನ’ಕ್ಕೆ ಪ್ರಚೋದನೆ ನೀಡುವ ಆಡ್ರೀನಲಿನ್ ಎಂಬ ಹಾಮೋನ್ ಸ್ರಾವವನ್ನು ಪ್ರಭಾವಿಸಬಹುದಾಗಿದೆ. ಹೀಗೆ ಪ್ರಾಣಿಗಳ ಭಂಗಿಗಳನ್ನು ಅನುಕರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ನಿಸರ್ಗದ ಸವಾಲುಗಳನ್ನು ಎದುರಿಸಬಹುದಾಗಿದೆ.
ಯೋಗಾಸನ ಮತ್ತು ಪ್ರಾಣ: ಪ್ರಾಣ ಎಂಬುದು ಅತ್ಯವಶ್ಯ ಚೈತನ್ಯ ಶಕ್ತಿಯಾಗಿದ್ದು ಚೀನಿ ವೈದ್ಯದ ‘ಕಿ’ ಅಥವಾ ‘ಚಿ’ಗೆ ಇದು ಸಂವಾದಿಯಾಗಿದೆ. ‘ನಾಡಿ’ ಎಂದು ಕರೆಯಲಾಗುವ ಪ್ರವಹನ ವಿನ್ಯಾಸಗಳ ಪ್ರಕಾರ ಪ್ರಾಣವು ಇಡೀ ದೇಹವನ್ನು ವ್ಯಾಪಿಸಿದೆ. ಪ್ರತಿಯೊಂದು ಜೀವಕೋಶದ ಕಾರ್ಯಚಟುವಟಿಕೆಯ ನಿರ್ವಹಣೆಗೆ ನಾಡಿಗಳೇ ಕಾರಣವಾಗಿವೆ. ಪ್ರಾಣವು ಅಲ್ಲಲ್ಲಿ ತಡೆಯಲ್ಪಟ್ಟಾಗ ವಿಷಾಣುಗಳು ಸಂಚಯನವಾಗುತ್ತವೆ. ಇದು ಚೈತನ್ಯವನ್ನು ಕುಂದಿಸುತ್ತದೆ. ಪ್ರಾಣವು ಸರಾಗವಾಗಿ ಪ್ರವಹಿಸಿದಾಗ ವಿಷಯುಕ್ತ ಪದಾರ್ಥಗಳು ಹೊರದೂಡಲ್ಪಡುತ್ತವೆ. ಆಗ ಇಡೀ ದೇಹ ಆರೋಗ್ಯಪೂರ್ಣವಾಗಿರುತ್ತದೆ. ದೇಹದ ಪಟುತ್ವವು ಹೆಚ್ಚಿದಾಗ ಮೊದಲು ಅಸಾಧ್ಯವೆಂದು ಕಂಡುಬಂದಿದ್ದ ಆಸನಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಚಲನೆಯಲ್ಲಿ ಸ್ಥಿರತೆ ಮತ್ತು ನಮನೀಯತೆ- ಸರಾಗತೆ ಸಾಧ್ಯವಾಗುತ್ತದೆ. ಪ್ರಾಣದ ಪರಿಣಾಮವನ್ನು ಅತಿ ಗರಿಷ್ಠ ಮಟಕ್ಕೆ ಹೆಚ್ಚಿಸಿದಾಗ ದೇಹವು ತಾನಾಗಿಯೇ ಕೆಲವೊಂದು ಆಸನಗಳಿಗೆ ಪ್ರವೇಶಿಸುತ್ತದೆ. ಮತ್ತು ಆಸನ, ಮುದ್ರಾ ಹಾಗೂ ಪ್ರಾಣಾಯಾಮಗಳು ಸಹಜವಾಗಿ ನಿರಾಯಾಸವಾಗಿ ತಮ್ಮಷ್ಟಕ್ಕೆ ತಾವೇ ಸಂಭವಿಸುತ್ತವೆ.