ಏಕಾಗ್ರತೆಯ ಮಹತ್ವ: ಮನೋಲ್ಲಾಸ

Kashi (1)
Published on
| ಡಾ.ವಿ.ಎಚ್.ಮೂಲಿಮನಿ

13ನೇ ಶತಮಾನದ ಘಟನೆ. ಸಂಸ್ಕೃತ ಹಾಗೂ ವೇದಾಂತದಲ್ಲಿ ಅಪಾರ ಪಾಂಡಿತ್ಯ ಸಾಧಿಸಿದ ವಾಚಸ್ಪತಿ ಮಿಶ್ರ ಮಹಾತ್ವಾಕಾಂಕ್ಷಿ ಯುವ ವಿದ್ವಾಂಸ. ಶ್ರೀ ಶಂಕರಾಚಾರ್ಯರ ಭಾಷ್ಯಗಳಿಗೆ ಟೀಕೆ ಬರೆಯಬೇಕೆಂದು ಸಂಕಲ್ಪಿಸಿದ್ದರು. ಇದಕ್ಕೆ ಬಹುದೊಡ್ಡ ತಪಸ್ಸೇ ಬೇಕು ಅದಕ್ಕೆ. ತನ್ನ ಪತ್ನಿಯನ್ನು ಕರೆದು ಇಂತಹ ಬೃಹತ್ ಯೋಜನೆಯೊಂದಕ್ಕೆ ತಾನು ಕೈಹಾಕುತ್ತಿರುವುದಾಗಿಯೂ, ಅವರ ಸಂಪೂರ್ಣ ಸಹಕಾರ ಇದಕ್ಕೆ ಬೇಕಾಗಿದೆಯೆಂದೂ, ಯಾವುದೇ ಸಾಂಸಾರಿಕ ಕೆಲಸದಿಂದ ಕೆಲಕಾಲ ವಿಮುಖವಾಗುತ್ತಿರುವುದಾಗಿಯೂ ಅರುಹಿದರು. ಪರಮಸಾದ್ವಿಯಾದ ಅವಳು ಸಂತೋಷದಿಂದಲೇ ಒಪ್ಪಿಗೆ ಕೊಟ್ಟಳು.

ಮಿಶ್ರರು ಬಾಹ್ಯ ಪ್ರಪಂಚದ ಪರಿವೆಯೇ ಇಲ್ಲದೆ ತಮ್ಮ ಕಾರ್ಯದಲ್ಲಿ ಮಗ್ನರಾದರು. ವರ್ಷಗಳೇ ಉರುಳಿದವು. ಒಂದು ರಾತ್ರಿ, ಇನ್ನೇನು ಅವರ ಬರವಣಿಗೆ ಮುಕ್ತಾಯದ ಹಂತಕ್ಕೆ ಬಂದಿರುವಾಗ, ಬೀಸಿದ ಗಾಳಿಗೆ ಅಲ್ಲಿದ್ದ ದೀಪ ಆರಿಹೋಯಿತು. ಚಿಂತನ ಲಹರಿ ಖಂಡವಾಗಬಾರದೆಂದು ಕಣ್ಮುಚ್ಚಿ ಅದನ್ನೇ ಮೆಲಕು ಹಾಕಹತ್ತಿದರು. ಅವರ ಮುಂದೆ ಒಮ್ಮೆಯೂ ಸುಳಿಯದೆಯೇ ದೂರದಿಂದಲೇ ಗಮನಿಸಿ, ಅವರ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ಪತ್ನಿ ಬೇಗನೆ ಇನ್ನೊಂದು ದೀಪ ತಂದು ದೀಪವನ್ನು ಹಚ್ಚಿದಳು. ಬೆಳಕು ಬಂದದ್ದನ್ನು ಗ್ರಹಿಸಿದ ಮಿಶ್ರ ಕಣ್ಣು ತೆರೆದು ಸಂತೋಷ, ಕೃತಜ್ಞತೆಗಳಿಂದ ಅವಳನ್ನೇ ನೋಡುತ್ತ, ‘ದೇವಿ! ತಾವು ಯಾರು?’ ಎಂದು ಕೇಳಿದರು. ಆವಾಕ್ಕಾದ ಆಕೆ, ‘ನಾನು ನಿಮ್ಮ ಹೆಂಡತಿ’ ಎಂದಳು. ಕೈಗೆತ್ತಿಕೊಂಡ ಕಾರ್ಯದಲ್ಲಿ ಯಾವ ರೀತಿಯಲ್ಲಿ ಮಿಶ್ರರು ಮುಳುಗಿದ್ದರೆಂದರೆ ಹೊರಗೊಂದು ಪ್ರಪಂಚ ಇದೆ, ಅಲ್ಲಿ ತನಗೊಂದು ಸಂಸಾರವಿದೆ, ಹೆಂಡತಿ ಇದ್ದಾಳೆ ಇವೆಲ್ಲವನ್ನು ಮರೆತೇ ಹೋಗಿದ್ದರು. ಇದ್ಯಾವುದೂ ಅವರ ಗಮನವನ್ನು ಸೆಳೆಯದಂತೆ ಪರಿಸ್ಥಿತಿಯನ್ನು ನಿಭಾಯಿಸಿದ್ದಳು, ಆ ಮಹಾ ಮಾತೆ!

ಕಸಿವಿಸಿಗೊಂಡ ಮಿಶ್ರರು ಸ್ವಲ್ಪ ಪಶ್ಚಾತ್ತಾಪದ ದನಿಯಲ್ಲಿಯೆ ‘ಎಂಥಾ ತಪಸ್ಸು ನಿನ್ನದು1 ಪತಿಯ ಕಾರ್ಯಸಿದ್ಧಿಗಾಗಿ ಅದೆಷ್ಟು ಸಮರ್ಪಿಸಿಕೊಂಡು ಬಿಟ್ಟೆ ನೀನು’ ಎಂದಾಗ ಅವರು ಕಣ್ಣಾಲಿಗಳು ತುಂಬಿಬಂದವು. ಲೇಖನಿಯನ್ನು ಬದಿಗಿಟ್ಟು ಎದ್ದು ನಿಂತು ಕೈಮುಗಿದರು. ಭಾವತಿಗೆ ಕಸಿವಿಸಿ ಎನಿಸಿತು. ‘ಸ್ವಲ್ಪ ಹೆಚ್ಚು ಮಾತನಾಡಿದೆ ಕ್ಷಮಿಸಿ. ದಯವಿಟ್ಟು ತಮ್ಮ ವೇದಾಂತದ ಬರವಣಿಗೆ ಮುಂದುವರಿಸಿ’ ಎಂದಳು. ‘ಬರೆಯುವುದೆಲ್ಲಾ ಆಗಿದೆ. ಇನ್ನೇನೂ ಉಳಿದಿಲ್ಲ. ನಿಮ್ಮ ಫಲಾಪೇಕ್ಷೆಯಿಲ್ಲದೆ ನಿರ್ಮಲವಾದ ಕರ್ಮ ಮತ್ತು ತ್ಯಾಗದ ಮುಂದೆ ನನ್ನ ಈ ಬೃಹತ್ ಬರಹ ಅಲ್ಪವೆನಿಸುತ್ತಿದೆ. ಇನ್ನು ಈ ಗ್ರಂಥಕ್ಕೆ ಹೆಸರಿಡುವುದಷ್ಟೇ ಉಳಿದಿರುವುದು. ನಿಮ್ಮ ತ್ಯಾಗದ ಪ್ರತೀಕವಾಗಿ ಈ ಗ್ರಂಥಕ್ಕೆ ಭಾಮತಿ ಎಂದೇ ಹೆಸರಿಡುತ್ತೇನೆ’ ಎಂದರು. ಭಾಮತಿ ಗ್ರಂಥಕ್ಕೆ ಕಾಗದದ ಹಸ್ತಪ್ರತಿ ಬನಾರಸ್ ಭಾಷೆಯಲ್ಲಿದ್ದು ಕ್ರಿ.ಶ 1468ರ ದಿನಾಂಕವನ್ನು ಹೊಂದಿದೆ. ಭಾಮತಿ ಭಾರತೀಯ ಆಧ್ಯಾತ್ಮಿಕ ಸಾಹಿತ್ಯದಲ್ಲಿ ವೇದಾಂತದ ಅಧ್ಯಯನಕ್ಕೆ ಅತ್ಯುತ್ತಮ ಮಾರ್ಗದರ್ಶಿ. ಶ್ರೀ ರಾಮಕೃಷ್ಣರು, ಐನ್​ಸ್ಟೀನ್, ಸ್ವಾಮಿವಿವೇಕಾನಂದರ ಜೀವನದಲ್ಲೂ ಇಂಥ ಹಲವಾರು ಘಟನೆಗಳನ್ನು ನೋಡುತ್ತೇವೆ. ಇಂಥ ಮಹತ್ತರವಾದ ಏಕಾಗ್ರತೆ, ಏಕಮುಖ ಚಿಂತನೆ ಸಿದ್ಧಿಸಬೇಕೆಂದರೆ ಮೊಟ್ಟಮೊದಲ ಅವಶ್ಯಕತೆ ಅವನು ತನ್ನ ಆಸಕ್ತ ಕ್ಷೇತ್ರವನ್ನು ಆರಿಸಿಕೊಳ್ಳಬೇಕು.

(ಲೇಖಕರು ನಿವೃತ್ತ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net