ಸಮಯದ ಮಹತ್ವ: ಮನೋಲ್ಲಾಸ

Mind Time
Published on

| ನಾಗೇಶ ಜಿ. ವೈದ್ಯ

ಸಮಯದ ಸಮರ್ಪಕ ನಿರ್ವಹಣೆ ಯಶಸ್ಸಿನ ಒಂದು ಮೆಟ್ಟಿಲು ಎನ್ನುತ್ತಾರೆ. ಯಶಸ್ವಿ ವ್ಯಕ್ತಿಗಳು ಅಂದುಕೊಂಡ ಗುರಿಯನ್ನು ಮುಟ್ಟಲು ಸಮಯವನ್ನು ಅಗತ್ಯದ ಕೆಲಸಕ್ಕೆ ತಕ್ಕಂತೆ ಹೊಂದಿಸಿಕೊಂಡು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ತತ್ತ್ವಶಾಸ್ತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಂದಾಗಿ ಈಗಲೂ ಪ್ರಸ್ತುತವೆನಿಸುವ ಇಮ್ಯಾನುಯೆಲ್ ಕಾಂಟ್ ಅವರು ಇದಕ್ಕೆ ಒಂದು ಉತ್ತಮ ಉದಾಹರಣೆ. ಈ ಜರ್ಮನ್ ತತ್ವಜ್ಞಾನಿ ಜೀವಿಸಿದ್ದುದು ಹದಿನೆಂಟನೇ ಶತಮಾನದಲ್ಲಿ.

ಕಾಂಟ್ ಕಟ್ಟುನಿಟ್ಟಾದ ದೈನಂದಿನ ವೇಳಾಪಟ್ಟಿಯನ್ನು ಇಟ್ಟುಕೊಂಡಿದ್ದರು. ಅವರ ನೆರೆಹೊರೆಯವರು ತಮ್ಮ ಗಡಿಯಾರಗಳನ್ನು ಕಾಂಟ್​ರ ಮಧ್ಯಾಹ್ನದ ನಡಿಗೆಯ ಆಧಾರದ ಮೇಲೆ ಹೊಂದಿಸುವ ಮಟ್ಟಿಗೆ ನಿಖರವಾಗಿರುತ್ತಿತ್ತು, ಅವರು ಹೊರಗೆ ಹೋಗುವ ಸಮಯ. ಹಾಗೆಯೇ, ಅವರು ನೀತಿಶಾಸ್ತ್ರ, ಸೌಂದರ್ಯ ಶಾಸ್ತ್ರ, ಮೆಟಾಫಿಸಿಕ್ಸ್​ನಲ್ಲಿ ಸಂಶೋಧನೆಗಾಗಿ ದಿನದ ಇಪ್ಪತ್ತು ಗಂಟೆಗಳನ್ನು ಮೀಸಲಿಟ್ಟಿದ್ದರು. ಸ್ನಾನ, ಊಟ, ಮಧ್ಯಾಹ್ನದ ನಡಿಗೆಯನ್ನು ಕಟ್ಟುನಿಟ್ಟಾಗಿ ಒಂದು ಗಂಟೆಯ ಅವಧಿಯಲ್ಲಿ ಮುಗಿಸುತ್ತಿದ್ದರು. ನಡುರಾತ್ರಿಯ 1 ಗಂಟೆಗೆ ಮಲಗಿ, 4 ಗಂಟೆಗೆ ಏಳುತ್ತಿದ್ದರು. ಈ ಮೂರು ಗಂಟೆಯ ಅವಧಿಯಲ್ಲಿ ಭೂಕಂಪವಾದರೂ ತನ್ನನ್ನು ಎಬ್ಬಿಸಬಾರದೆಂದು ಮನೆಯ ಕೆಲಸದಾಳಿಗೆ ಆಣತಿ ಮಾಡಿದ್ದರು. ಅವರ ಪ್ರತಿಭೆಯನ್ನು ಗಮನಿಸಿದ ವಿಶ್ವವಿದ್ಯಾಲಯವೊಂದು ಕಾಂಟ್​ರನ್ನು ತನ್ನ ಕುಲಪತಿಯಾಗಿ ನೇಮಿಸಿಕೊಳ್ಳಲು ತೀರ್ವನಿಸಿತು.

ಈ ಸಂದೇಶ ತಲುಪಿದಾಗ ರಾತ್ರಿ 2 ಗಂಟೆ! ಕೆಲಸಗಾರನಿಗೆ ಸಂತೋಷ ತಡೆಯಲಾಗಲಿಲ್ಲ. ತನ್ನ ಒಡೆಯ ಇಷ್ಟು ದೊಡ್ಡ ಹುದ್ದೆಯನ್ನು ಪಡೆದಿರುವುದನ್ನು ತಕ್ಷಣ ಅವರಿಗೆ ತಿಳಿಸುವ ಕಾತರ. ಧೈರ್ಯ ಮಾಡಿ, ಕಾಂಟ್​ರನ್ನು ಎಬ್ಬಿಸಿದ. ಖುಷಿಯಲ್ಲಿ ಸಂದೇಶವನ್ನು ತಿಳಿಸಿದ. ಕಾಂಟ್ ವಿಚಲಿತರಾಗದೇ ಕೆಲಸದವನ ಕೆನ್ನೆಗೆ ಬಲವಾಗಿ ಹೊಡೆದು, ಮತ್ತೆ ಹೊದ್ದು ಮಲಗಿದರು. ನಾಲ್ಕು ಗಂಟೆಗೆ ಎದ್ದವರೇ, ಕಾಗದವನ್ನು ತೆಗೆದುಕೊಂಡು ‘ನಿಮ್ಮ ನಿರ್ಧಾರ ನನ್ನ ನಿದ್ದೆಯನ್ನು ಕೆಡಿಸಿದೆ. ಇನ್ನು ಮುಂದೆಂದೂ ಹಾಗಾಗಲು ಬಿಡಲಾರೆ. ನಾನು ಈ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಮೂರು ಸಾಲಿನ ಪತ್ರವನ್ನು ವಿಶ್ವವಿದ್ಯಾಲಯಕ್ಕೆ ಬರೆದರು. ಬಳಿಕ ಕೆಲಸದವನನ್ನು ಕರೆದು ‘ನೀನೊಬ್ಬ ಹುಚ್ಚ. ನಮಗೆ ಖುಷಿ ನೀಡುವ ಸಂಗತಿಯ ಹಿಂದೆ ದುಃಖವಿರುತ್ತದೆ. ನಾನು ಆ ಕೆಲಸವನ್ನು ಒಪ್ಪಿಕೊಂಡರೆ ಅದು ನನ್ನನ್ನು ಗುರಿಯಿಂದ ವಿಮುಖಗೊಳಿಸುತ್ತದೆ. ನನ್ನ ಸಮಯವಿರುವುದು ಹಾಳು ಮಾಡುವುದಕ್ಕಲ್ಲ. ನೋಡು, ನನ್ನ ಸಮಯವೇನಿದ್ದರೂ ಸಂಶೋಧನೆ ಮಾಡಿ, ಈ ಮನುಕುಲಕ್ಕೆ ನನ್ನ ಕೈಲಾದ ಸೇವೆ ಮಾಡುವುದಕ್ಕೆ’ ಎಂದರು. ಸಮಯದ ಮಹತ್ವವನ್ನು ಅರಿತಿದ್ದರಿಂದಲೇ ಕಾಂಟ್ ಅವರು ತತ್ವಶಾಸ್ತ್ರಕ್ಕೆ ಅಸಾಧಾರಣ ಕೊಡುಗೆ ನೀಡಲು ಸಾಧ್ಯವಾಯಿತು. ಸಮಯಕ್ಕೆ ಮಹತ್ವವನ್ನು ನೀಡಿದರೆ ಎಲ್ಲರೂ ತಮ್ಮತಮ್ಮ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net