

| ರವಿಕಾಂತ ಕುಂದಾಪುರ
ಕೋವಿಡ್ ಸಂಕಷ್ಟದಲ್ಲಿ ಇರುವವರಿಗೆ ಚಿತ್ರರಂಗದ ಹಲವರು ನಾನಾ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಚಿತ್ರನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಅವರು ತಮ್ಮ ಭುವನ್ ಫೌಂಡೇಷನ್ ಮೂಲಕ ಆಕ್ಸಿಜನ್ ಎಕ್ಸ್ಪ್ರೆಸ್ ಎಂಬ ಬಸ್ ಸೇವೆ ನೀಡಿದ್ದಲ್ಲದೆ, ಸೋಂಕಿತರಿಗೆ ಕಿಟ್-ಔಷಧ ತಲುಪಿಸಲು ಆಟೋ ಸೇವೆ ಕೂಡ ಒದಗಿಸುತ್ತಿದ್ದಾರೆ. ಚಿತ್ರನಟಿ ರಾಗಿಣಿ ಸಂಕಷ್ಟದಲ್ಲಿ ಇರುವವರಿಗೆ ಈ ವರ್ಷವೂ ದಿನಸಿ ಕಿಟ್, ಆಹಾರದ ಪೊಟ್ಟಣಗಳನ್ನು ತಮ್ಮದೇ ಜೆನ್ನೆಕ್ಸ್ಟ್ ಚಾರಿಟಬಲ್ ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಉಪ್ಪಿ ಫೌಂಡೇಷನ್ ಮೂಲಕ ಡಿಫರೆಂಟ್ ರೀತಿಯಲ್ಲಿ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಸಂಕಷ್ಟದಲ್ಲಿರುವ ಸಿನಿಮಾ ಮಂದಿಗೆ ಮಾತ್ರವಲ್ಲದೆ, ರೈತರಿಗೂ ಉಪೇಂದ್ರ ಸಹಾಯ ಮಾಡುತ್ತಿದ್ದಾರೆ. ಇವರಿಗೆ ಬಿ. ಸರೋಜಾದೇವಿ, ಮಾನ್ಯಾ, ಸಾಧುಕೋಕಿಲ, ಶೋಭರಾಜ್ ಮುಂತಾದವರಲ್ಲದೆ, ದೇಶ-ವಿದೇಶಗಳ ದಾನಿಗಳೂ ಸಹಕಾರ ನೀಡುತ್ತಿದ್ದಾರೆ. ನಟ ಶಿವರಾಜ್ಕುಮಾರ್ ಕೂಡ ಬೆಂಗಳೂರಿನ ನಾಗವಾರದಲ್ಲಿ ಬಡವರಿಗೆ ಊಟಕ್ಕೆ ‘ಆಸರೆ’ಯಾಗಿದ್ದಾರೆ.
ಇವರ ಸಹಾಯ ಇದೀಗ ರಾಜ್ಯದ ಹೊರಗೂ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಏಕೆಂದರೆ ಇವರ ಸಹಾಯಕ್ಕೆ ಪಾತ್ರರಾಗುತ್ತಿರುವ ಹಲವರು ಹೊರರಾಜ್ಯದವರೇ. ಕುಂದಾಪುರದ ಸಾಸ್ತಾನ ಟೋಲ್ಗೇಟ್ ಬಳಿ ಇವರದ್ದೊಂದು ತಂಡ ನಿತ್ಯ ನೂರಕ್ಕೂ ಅಧಿಕ ಮಂದಿಗೆ ಮಧ್ಯಾಹ್ನದ ಊಟ ನೀಡುತ್ತಿದೆ. ಜೀವನ್ಮಿತ್ರ ಎಂಬ ವಾಟ್ಸ್ಆಪ್ ಗ್ರೂಪ್ ಮಾಡಿಕೊಂಡು ತಂಡವಾಗಿ ಕೆಲಸ ಮಾಡುತ್ತಿರುವ ಇವರು ಅಂಗಡಿ-ಹೋಟೆಲ್ಗಳು ಮುಚ್ಚಿ ಎಲ್ಲೂ ಊಟ ಸಿಗದಂತಾಗಿರುವ ಪರಿಸ್ಥಿತಿಯಲ್ಲಿ ಊಟವನ್ನು ಉಚಿತವಾಗಿ ಹಂಚುತ್ತಿದ್ದಾರೆ. ‘‘ನಮ್ಮ ಊರಿನ ಮೂಲಕ ಹಾದುಹೋಗುವ ಹೊರರಾಜ್ಯಗಳ ವಾಹನ ಚಾಲಕರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಊಟ ಸಿಗುತ್ತಿಲ್ಲ ಎಂಬುದನ್ನು ತಿಳಿದು ಒಂದು ವಾರದಿಂದ ಊಟದ ಪೊಟ್ಟಣ ವಿತರಿಸುತ್ತಿದ್ದೇವೆ’’ ಎನ್ನುತ್ತಾರೆ ನಾಗರಾಜ್ ಪುತ್ರನ್. ‘‘ಇದಕ್ಕಾಗಿ ನಮ್ಮ ಮನೆಯಲ್ಲೇ ಒಬ್ಬ ಅಡುಗೆಯವರನ್ನು ಸಂಬಳ ಕೊಟ್ಟು ಇರಿಸಿಕೊಂಡು ಅಡುಗೆ ಮಾಡಿಸುತ್ತಿದ್ದೇವೆ. ನಮ್ಮ ಮನೆಯವರೆಲ್ಲರೂ ಅದಕ್ಕೆ ಕೈಜೋಡಿಸುತ್ತಿದ್ದಾರೆ. ಆರ್ಥಿಕವಾಗಿ ಪ್ರದೀಪ್ ಪಡುಕೆರೆ ಮುಂತಾದ ಸ್ಥಳೀಯ ಮುಖಂಡರು-ಗೆಳೆಯರು ಕೈಜೋಡಿಸುತ್ತಿದ್ದಾರೆ. ದಿನಕ್ಕೆ ಎಲ್ಲ ಸೇರಿ 5,500 ರೂ. ಖರ್ಚು ಬರುತ್ತಿದೆ. ಕರೊನಾ ಮೊದಲನೆಯ ಅಲೆ ಸಂದರ್ಭದಲ್ಲಿ 35 ದಿನಗಳಲ್ಲಿ 9,500 ಪೊಟ್ಟಣ ಆಹಾರ ವಿತರಿಸಿದ್ದೆವು. ಅದಕ್ಕೆ 3.96 ಲಕ್ಷ ರೂ. ಖರ್ಚಾಗಿದ್ದು, 2.5 ಲಕ್ಷ ರೂ. ಅವರಿವರಿಂದ ದೇಣಿಗೆ ಸಿಕ್ಕಿತ್ತು. ನಾನು ಬುಲೆಟ್ ತೆಗೆದುಕೊಳ್ಳಬೇಕು ಎಂದು 1 ಲಕ್ಷ ರೂ. ಕೂಡಿಟ್ಟಿದ್ದೆ. ತುರ್ತು ಅಂತ ಅದರಲ್ಲಿ ಸ್ವಲ್ಪಸ್ವಲ್ಪವೇ ತೆಗೆದು ಕೊನೆಯಲ್ಲಿ ಉಳಿದಿದ್ದು 25 ಸಾವಿರ ರೂ. ಮಾತ್ರ’’ ಎನ್ನುತ್ತಾರೆ ನಾಗರಾಜ್. ಹೊಟ್ಟೆ ಪಾಡಿಗೆ ಅವರದು ಆಂಬುಲೆನ್ಸ್ ಇದೆ. ಆದರೆ ಈಗ ಅದರಲ್ಲಿ ಬರುತ್ತಿರುವ ಲಾಭಾಂಶವನ್ನು ಉಳಿತಾಯ ಮಾಡುವ ಬದಲು ಇಂಥ ಕೆಲಸಕ್ಕೆ ಬಳಸುತ್ತಿದ್ದಾರೆ. ಸಂಪರ್ಕಕ್ಕೆ: 9686184490
ಕರೊನಾ ಸೋಂಕಿನಿಂದ ಸಾವಿಗೀಡಾದವರ ಕುಟುಂಬಕ್ಕೆ ಅತಿ ದೊಡ್ಡ ಸವಾಲು ಅಂತಿಮ ಸಂಸ್ಕಾರದ್ದು. ಆಸ್ಪತ್ರೆಗಳಂತೆ ಸ್ಮಶಾನದಲ್ಲೂ ನೂಕುನುಗ್ಗಲು ಉಂಟಾಗಿ ಅಲ್ಲಿಯೂ ಸಮಸ್ಯೆಗಳಾಗುತ್ತಿವೆ. ಹೀಗೆ ಅಂತಿಮಸಂಸ್ಕಾರದ ಸಮಸ್ಯೆ ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಡಿದಾಗ ಅಂತಿಮ ಆಯ್ಕೆಯಾಗಿ ಇವರನ್ನು ಸಂರ್ಪಸ ಬಹುದು. ಬೆಂಗಳೂರು ಆರ್ಕಿಡಯೊಸಿಸ್ ದಕ್ಷಿಣ ವಲಯದ ಸಗಾಯ್ ರಾಜ್ ಅವರ ನೇತೃತ್ವದಲ್ಲಿ ಒಂದು ತಂಡವೇ ಇದಕ್ಕಾಗಿ ಶ್ರಮಿಸುತ್ತಿದೆ. 20 ಯುವಕರ ತಂಡ ಹಗಲಿರುಳೆನ್ನದೆ ಕಾರ್ಯನಿರತವಾಗಿದೆ. ‘‘ಕೆಲವು ಆಸ್ಪತ್ರೆಗಳಿಂದ ನಮಗೆ ಕರೆ ಬರುತ್ತದೆ. ನಾವು ಅಲ್ಲಿಗೆ ಹೋಗಿ ಶವಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ, ಸ್ಮಶಾನಕ್ಕೆ ತಂದು ಅವರವರ ಧರ್ಮದ ನಿಯಮಗಳಿಗೆ ಅನುಸಾರವಾಗಿ ಅಂತ್ಯಸಂಸ್ಕಾರ ನಡೆಸುತ್ತೇವೆ. ಕೆಲವರು ಬಡವರಿಗೆ ಪ್ಯಾಕಿಂಗ್ ಮೆಟಿರಿಯಲ್ ಕೊಳ್ಳುವಷ್ಟೂ ಹಣ ಇರುವುದಿಲ್ಲ. ನಾವೇ ಗೆಳೆಯರು ದುಡ್ಡು ಹಾಕಿ ಸಂಸ್ಕಾರ ಮಾಡಿದ್ದೂ ಇದೆ. ಒಂದು ತಿಂಗಳಲ್ಲಿ ಇದುವರೆಗೂ ನೂರಾರು ಶವಗಳ ಅಂತ್ಯಸಂಸ್ಕಾರ ಮಾಡಿದ್ದೇವೆ’’ ಎನ್ನುತ್ತಾರೆ ಈ ತಂಡದ ಸದಸ್ಯ ಕೆನಿಸನ್. (9886004067)