

ಸಂಸಾರ ಸಮೇತ ಕಾಶಿಯಾತ್ರೆ ಮಾಡಬೇಕೆಂದು ರಾಮರಾಯ ನಿರ್ಧರಿಸಿದ. ಆಗ ಈಗಿನಂತೆ ವಾಹನ ಸೌಕರ್ಯಗಳಿರಲಿಲ್ಲ. ಎಂಟ್ಹತ್ತು ತಿಂಗಳಾದರೂ ಯಾತ್ರೆ ಮುಗಿಯುತ್ತಿರಲಿಲ್ಲ. ಆತ ತನ್ನಲ್ಲಿದ್ದ ಚಿನ್ನದ ನಾಣ್ಯಗಳನ್ನು ಚೀಲದಲ್ಲಿ ತುಂಬಿಸಿ ಮೇಲಿಂದ ಗೋಟು ಅಡಕೆ ಹಾಕಿ (ಒಣಗಿದ ಸಿಪ್ಪೆ ಸುಲಿದ ಅಡಕೆ) ಹೊಲಿಗೆ ಹಾಕಿ ತನ್ನ ಸ್ನೇಹಿತ ಗೋವಿಂದರಾಯನ ಮನೆಯಲ್ಲಿಟ್ಟು ಐದಾರು ತಿಂಗಳೊಳಗೆ ಮರಳುವುದಾಗಿ ಹೇಳಿ ಹೊರಟ. ಗೋವಿಂದರಾಯನ ಪತ್ನಿ ಒಂದು ದಿನ ಚೀಲವನ್ನು ಸರಿಸಲು ಪ್ರಯತ್ನಿಸಿದಾಗ ಅದು ಭಾರವಾಗಿದ್ದುದು ಕಂಡುಬಂದಿತು. ಗಂಡನನ್ನು ಕರೆದು ವಿಷಯ ತಿಳಿಸಿದಳು. ಆತ ಚೀಲವನ್ನು ತೆರೆದು ನೋಡಿದರೆ ಅಡಕೆ. ಮತ್ತೆ ಆಳದಲ್ಲಿ ನೋಡಿದರೆ ಚಿನ್ನದ ನಾಣ್ಯಗಳು. ಸಿಕ್ಕ ಸಂಪತ್ತನ್ನು ದಕ್ಕಿಸಿಕೊಳ್ಳದಿದ್ದರೆ ನಾವು ಮೂರ್ಖರಾಗುತ್ತೇವೆಂದು ಭಾವಿಸಿ ಚೀಲದಿಂದ ಚಿನ್ನದ ನಾಣ್ಯಗಳನ್ನೆಲ್ಲಾ ತೆಗೆದು ಅದರೊಳಗೆ ಗೋಟಡಿಕೆಗಳನ್ನು ತುಂಬಿಸಿ ಮೊದಲಿನಂತೆ ಹೊಲೆದು ಇಟ್ಟರು. ಕೆಲವು ದಿನಗಳ ನಂತರ ರಾಮರಾಯ ಯಾತ್ರೆ ಮುಗಿಸಿ ಮರಳಿದ. ಚೀಲ ಇರಿಸಿಕೊಂಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಗೋವಿಂದರಾಯನ ಮನೆಯಲ್ಲಿಟ್ಟ ಚೀಲವನ್ನು ಮನೆಗೆ ತಂದ. ಆದರೆ, ಹೊಲಿಗೆ ಬಿಚ್ಚಿ ನೋಡಿದರೆ ಚಿನ್ನದ ನಾಣ್ಯದ ಬದಲಾಗಿ ಅಡಕೆಗಳೇ ಇದ್ದವು. ಈ ವಿಚಾರವನ್ನು ಗೋವಿಂದರಾಯನಿಗೆ ತಿಳಿಸಿದಾಗ ತನಗೆ ಈ ವಿಚಾರವಾಗಿ ಏನೂ ತಿಳಿಯದೆಂತಲೂ, ಅದರೊಳಗೆ ಏನಿದೆ ಎಂದು ನೋಡಿಯೇ ಇಲ್ಲವೆಂದೂ ಉತ್ತರಿಸಿದ. ಉಪಾಯವಿಲ್ಲದೆ ರಾಮರಾಯ ರಾಜನ ಬಳಿ ತನ್ನ ಸಂಕಟವನ್ನು ನಿವೇದನೆ ಮಾಡಿಕೊಂಡ. ರಾಜನು ಗೋವಿಂದರಾಯ ದಂಪತಿಗಳನ್ನು ಕರೆದು ವಿಚಾರಿಸಿದರೆ ತಮಗೇನೂ ತಿಳಿಯದೆಂದು ಜಾರಿಕೊಂಡರು.
ಮರುದಿನ ಮಂತ್ರಿಯು ಒಬ್ಬ ಅನುಭವಿ ಅಡಕೆ ವ್ಯಾಪಾರಿಯನ್ನು ಕರೆಸಿ, ಚೀಲದಲ್ಲಿದ್ದ ಅಡಕೆಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಲು ತಿಳಿಸಿದನು. ಚಾಣಾಕ್ಷ ವ್ಯಾಪಾರಿ- ‘ಮಹಾಪ್ರಭು, ಚೀಲದಲ್ಲಿ ಏಳೆಂಟು ತಿಂಗಳು ಹಳತಾದ ಅಡಕೆಗಳು ಸ್ವಲ್ಪ ಪ್ರಮಾಣದಲ್ಲಿ ಮತ್ತು ಕೆಳಗೆ ಒಂದು ತಿಂಗಳೊಳಗಿನ ಹೊಸ ಅಡಕೆಗಳು ಇರುವುದು ಕಂಡುಬರುತ್ತವೆ’ ಎಂದ. ಮಂತ್ರಿಯು ಗೋವಿಂದರಾಯನನ್ನು ಕರೆದು ‘ಚೀಲದಲ್ಲಿದ್ದ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಹೊಸ ಅಡಕೆಗಳಿಂದ ತುಂಬಿಸಿ ಚೀಲವನ್ನು ಹೊಲಿದಿದ್ದೆ ಅಲ್ಲವೇ?’ ಎಂದು ಏರುಧ್ವನಿಯಲ್ಲಿ ಕೇಳಿದಾಗ ಗೋವಿಂದರಾಯನಿಗೆ ಭಯವಾಯಿತು. ತನ್ನ ಕೃತ್ಯವನ್ನು ಒಪ್ಪಿಕೊಂಡ. ಆಗ ಮಂತ್ರಿ ‘ನೀನು ಮಾಡಿದ ಮೋಸದ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ವಿಧಿಸಬಹುದಿತ್ತು. ಆದರೆ, ನೀನು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದರಿಂದ ನಿನ್ನ ಕಾಲುಭಾಗ ಆಸ್ತಿಯನ್ನು ರಾಜಭಂಡಾರಕ್ಕೆ ಸಲ್ಲಿಸಬೇಕು ಮತ್ತು ರಾಮರಾಯರ ಎಲ್ಲ ನಾಣ್ಯಗಳನ್ನೂ ಹಿಂದಿರುಗಿಸತಕ್ಕದ್ದು’ ಎಂದು ತೀರ್ಪು ನೀಡಿದನು.
ಆಗಿನ ಕಾಲದಲ್ಲಿ ಮೇಲ್ಮನವಿಯಾಗಲೀ, ನ್ಯಾಯವಾದಿಗಳ ವಾದ, ಕುತರ್ಕಗಳಾಗಲೀ ಇರಲಿಲ್ಲ. ಅಪರಾಧಕ್ಕೆ ಅತ್ಯಂತ ಕಠಿಣಶಿಕ್ಷೆ ವಿಧಿಸಲ್ಪಡುತ್ತಿತ್ತು. ಮಾನವನು ಅನ್ಯಾಯ ಮಾಡುವಾಗ, ಮೋಸದಿಂದ ಮುಕ್ಕುವಾಗ ಹಿತವಾಗಿ ಕಂಡರೂ ನಂತರ ಅದರ ಪರಿಣಾಮ ಅತ್ಯಂತ ಘೊರವಾಗಿರುತ್ತದೆಂಬ ಅರಿವನ್ನು ಇಟ್ಟುಕೊಂಡು ಆದಷ್ಟು ಪ್ರಾಮಾಣಿಕ ಜೀವನವನ್ನು ನಡೆಸಲು ಪ್ರಯತ್ನಿಸಬೇಕು.
(ಲೇಖಕರು ನಿವತ್ತ ಉಪನ್ಯಾಸಕರು, ಗಮಕಿ)