ಮಾನವ-ಪ್ರಾಣಿ ಸಂಘರ್ಷ ಅಂತ್ಯವಿಲ್ಲದ ಧಾರಾವಾಹಿ

Health (8)
Published on
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ಮುಂಬೈ ಸೇರಿದಂತೆ ಭಾರತದ ಹಲವು ಮಹಾನಗರಗಳಲ್ಲಿ ಪಾರಿವಾಳಗಳ ಸಂಖ್ಯೆ ಮಿತಿ ಮೀರಿರುವುದರಿಂದ ಉಂಟಾಗಿರುವ ತೊಂದರೆಗಳ ಕುರಿತು ಕೆಲ ದಿನಗಳ ಹಿಂದೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಆ ಲೇಖನ ಪ್ರಕಟವಾದ ದಿನದಂದೇ, ಬೀದಿನಾಯಿಗಳ ಕುರಿತು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಪಡಿಸಿ, ಬೀದಿನಾಯಿಗಳಿಗೆ ಆಹಾರ ನೀಡುವ ಮತ್ತು ಅವುಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಕುರಿತು ತನ್ನ ನಿರ್ಣಯವನ್ನು ಪ್ರಕಟಿಸಿತು. ಈ ಹೊಸ ಆದೇಶದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳು ನಡೆದವು. ಹಲವರು ಈ ನಿರ್ಣಯವನ್ನು ಸ್ವಾಗತಿಸಿದರೆ ಶ್ವಾನಪ್ರಿಯರು ತಮ್ಮ ಮುದ್ದುಪ್ರಾಣಿಗಳ ರಕ್ಷಣೆ ಕುರಿತು ಕಳವಳ ವ್ಯಕ್ತಪಡಿಸಿದರು. ಬೀದಿನಾಯಿಗಳ ಕುರಿತಾದ ಚರ್ಚೆ ಇದೇ ಮೊದಲಲ್ಲ. ಇತ್ತೀಚಿನ ಕೆಲ ಅಂಕಿಅಂಶಗಳು ಬೀದಿನಾಯಿಗಳ ಹಾವಳಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತವೆ. 2024ರಲ್ಲಿ ಭಾರತದಲ್ಲಿ 37 ಲಕ್ಷ ಬೀದಿನಾಯಿ ಕಡಿತದ ಘಟನೆಗಳು ವರದಿಯಾಗಿವೆ. ಅಂದರೆ ಸರಾಸರಿ ದಿನಕ್ಕೆ 10 ಸಾವಿರ ಪ್ರಕರಣಗಳು. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ನಾಯಿ ಕಡಿತದಿಂದ ಹರಡುವ ರೇಬಿಸ್​ನಿಂದ ಜಾಗತಿಕವಾಗಿ 59 ಸಾವಿರ ಸಾವುಗಳಾಗುತ್ತಿದ್ದು ಅವುಗಳಲ್ಲಿ ಶೇಕಡ 95ರಷ್ಟು ಸಾವುಗಳು ಏಷ್ಯಾ ಮತ್ತು ಆಫ್ರಿಕಾದಲ್ಲಿ ಸಂಭವಿಸುತ್ತಿ್ತೆ. ಭಾರತ ಶೇ. 35ರ ಪಾಲಿನೊಂದಿಗೆ ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಮೃತರಲ್ಲಿ ಹದಿನೈದರ ಹರೆಯದೊಳಗಿನವರ ಸಂಖ್ಯೆಯೇ ಹೆಚ್ಚು ಎಂಬುದು ಮತ್ತೊಂದು ಕಳವಳಕಾರಿ ಸಂಗತಿ.

ಪರಿಣತರು ಹೇಳುವಂತೆ ಸಮಯಕ್ಕೆ ಸರಿಯಾಗಿ ಔಷಧೋಪಚಾರ ನಡೆದರೆ ರೇಬಿಸ್​ಅನ್ನು ಖಂಡಿತ ವಾಸಿ ಮಾಡಬಹುದು. ಆದರೆ ಎಗ್ಗಿಲ್ಲದೆ ಏರುತ್ತಿರುವ ಬೀದಿನಾಯಿಗಳ ಸಂಖ್ಯೆ, ಔಷಧದ ಲಭ್ಯತೆ ಸೂಕ್ತವಾಗಿ ಇಲ್ಲದಿರುವುದು ಮತ್ತು ಅತಿ ಮುಖ್ಯವಾಗಿ ಜನಸಾಮಾನ್ಯರಲ್ಲಿ ಈ ಕುರಿತು ಅರಿವಿನ ಕೊರತೆ ಭಾರತದಲ್ಲಿ ರೇಬಿಸ್ ತಡೆಗಟ್ಟುವಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ 2030ರ ಒಳಗೆ ಭಾರತದಿಂದ ರೇಬಿಸ್​ಅನ್ನು ಸಂಪೂರ್ಣವಾಗಿ ನಿಮೂಲನೆ ಮಾಡುವ ನಮ್ಮ ಯೋಜನೆಯೇನೋ ಕೇಳಲು ಹಿತವಾಗಿದ್ದು ಕಾಗದದಲ್ಲಿ ಸರಿಯಾಗಿಯೇ ಇದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಅಳವಡಿಸುವುದರಲ್ಲಿ ನಾವು ಸೋತಿದ್ದೇ ಈ ಮೊದಲ ‘ರ‍್ಯಾಂಕ್​ಗೆ ಕಾರಣವಾಗಿದೆ.

ಮಾನವ ಮತ್ತು ಪ್ರಾಣಿಗಳ ಸಂಘರ್ಷ ಎಂದಿಗೂ ಮುಗಿಯದ ಚರ್ಚೆಯ ವಿಷಯ. ಆದರೆ ಈ ಕತೆಯ ತಾತ್ಪರ್ಯವೇನೆಂದರೆ ಎರಡೂ ಪಕ್ಷಗಳು ತಮ್ಮ ತಮ್ಮ ಮಿತಿಯೊಳಗಿದ್ದರೆ ಎರಡೂ ಕಡೆಯವರಿಗೆ ಕ್ಷೇಮ. ಬೀದಿನಾಯಿಗಳ ವಿಷಯದಲ್ಲಿ ಆಗಿರುವುದು ಅದೇ. ಅವುಗಳ ಸಂಖ್ಯೆ ಎಲ್ಲ ತೊಂದರೆಗಳ ಮೂಲ. ಅದೆಲ್ಲ ಸರಿ, ಬೀದಿನಾಯಿಗಳ ಸಂಖ್ಯೆ ಇದ್ದಕ್ಕಿದ್ದಂತೆಯೇ ಹೆಚ್ಚುತ್ತಿರುವುದಕ್ಕೆ ಕಾರಣವೇನೆಂದು ಹುಡುಕ ಹೊರಟರೆ ಅದಕ್ಕೆ ಉತ್ತರವೂ ಮತ್ತೆ ನಮ್ಮತ್ತಲೇ ಬರುತ್ತದೆ. ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಆಂಡ್ ಪ್ರೖೆಮರಿ ಕೇರ್ ಪ್ರಕಟಿಸಿರುವ ವರದಿಯೊಂದರ ಪ್ರಕಾರ ಭಾರತದಲ್ಲಿ ಆಹಾರದ ಪೋಲು ಹೆಚ್ಚುತ್ತಿರುವುದೇ ಇದಕ್ಕೆಲ್ಲ ಮೂಲ ಕಾರಣ. ದೈನಂದಿನ ಜೀವನದಲ್ಲಿ ಸಭೆ ಸಮಾರಂಭಗಳಲ್ಲಿ ನಾವು ಉಪಯೋಗಿಸದೆ ಬಿಸಾಡುವ ಆಹಾರದ ಪ್ರಮಾಣ ಜಾಸ್ತಿಯಾಗಿ ಅದು ಕೊನೆಗೆ ಬೀದಿನಾಯಿಗಳ ಖಾತೆಗೆ ಜಮಾ ಆಗುತ್ತಿದ್ದು, ಆಹಾರ ಲಭ್ಯತೆ ಹೆಚ್ಚುತ್ತಿದ್ದಂತೆಯೇ ಅವು ತಮ್ಮ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಳ್ಳುತ್ತಿವೆ. ಹೀಗಾಗಿ ನಮ್ಮ ಈ ನೂತನ ಜೀವನಶೈಲಿಯೇ ನಮಗೀಗ ತಿರುಗುಬಾಣವಾಗುತ್ತಿದೆ. ಬೀದಿನಾಯಿಗಳ ಹೆಚ್ಚಳದಿಂದ ಉಂಟಾಗುತ್ತಿರುವ ತೊಂದರೆಗಳು ಕೇವಲ ನಮಗಷ್ಟೇ ಸೀಮಿತವಾಗಿಲ್ಲ. ನೆಲದಲ್ಲಿ ಮೊಟ್ಟೆಯಿಡುವ ಕಡಲಾಮೆಗಳಂತಹ ಪ್ರಾಣಿ ಪಕ್ಷಿಗಳಿಗೂ ಇವುಗಳಿಂದ ತೊಂದರೆ ಉಂಟಾಗುತ್ತಿದೆ. ಕರ್ನಾಟಕದ ಕರಾವಳಿಯೂ ಸೇರಿದಂತೆ ಹಲವು ಏಕಾಂತ ಕಡಲತೀರಗಳಲ್ಲಿ ಬಂದು ಮೊಟ್ಟೆಯಿಟ್ಟು ಹೋಗುವ ಕಡಲಾಮೆಗಳ ಸರಾಸರಿ ಸಾವಿರ ಮೊಟ್ಟೆಗಳಲ್ಲಿ ಒಂದು ಬದುಕುಳಿದು ಕಡಲನ್ನು ಸೇರಿಕೊಳ್ಳುತ್ತದೆ. ಇಂತಹ ಕಳಪೆ ಸಾಧನೆಗೆ ನರಿ ತೋಳಗಳ ಜೊತೆಗೆ ಅತಿಮುಖ್ಯ ಕಾರಣ ಈ ಬೀದಿನಾಯಿಗಳು. ಮೊಟ್ಟೆಗಳನ್ನು ನಾಯಿಗಳಿಂದ ರಕ್ಷಿಸಲು ಅರಣ್ಯ ಇಲಾಖೆಯ ಹರಸಾಹಸಕ್ಕೆ ಭಾರಿ ಸವಾಲನ್ನು ಒಡ್ಡುತ್ತಿರುವ ನಾಯಿಗಳು ರಕ್ಷಣೆಗಾಗಿ ಅಳವಡಿಸುವ ಬೇಲಿಗಳನ್ನೂ ಕಿತ್ತೊಗೆದು ತಿಂದು ತೇಗುವ ರೇಂಜಿನ ಕ್ಷಮತೆಯನ್ನು ಹೊಂದಿವೆ. ಈ ಕಾರಣಕ್ಕೇ ಅವು ಅಳಿವಿನ ಅಂಚಿಗೆ ತಲುಪಿರುವ ದೊರೆವಾಯನ ಹಕ್ಕಿಗಳ ಸಂರಕ್ಷಣೆಗೂ ಸವಾಲಾಗಿ ಪರಿಣಮಿಸಿವೆ. ಹೀಗಾಗಿ ನಾಯಿಗಳ ಹೆಚ್ಚಳಕ್ಕೆ ವ್ಯವಸ್ಥೆಯನ್ನು ದೂಷಿಸುವ ಮೊದಲು ನಮ್ಮ ಬಗ್ಗೆ ನಾವೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಇತ್ತೀಚೆಗೆ ಕೇರಳ ಸರ್ಕಾರ 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಕರಡು ತಿದ್ದುಪಡಿಗೆ ಅನುಮೋದನೆ ನೀಡಿದೆ. ಭಾರತದಲ್ಲಿ ಮೊದಲ ಬಾರಿಯೆಂದು ಹೇಳಲಾಗುವ ಈ ತಿದ್ದುಪಡಿಯನ್ವಯ ಯಾವುದೇ ವನ್ಯಜೀವಿಯು ಜನವಸತಿಯ ವ್ಯಾಪ್ತಿಯಲ್ಲಿ ಸ್ಥಳೀಯರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದೇ ಆದಲ್ಲಿ ಅಂತಹ ವನ್ಯಜೀವಿಯನ್ನು ಕೊಲ್ಲುವ ಅಧಿಕಾರವನ್ನು ಅಲ್ಲಿನ ಮುಖ್ಯ ವನ್ಯಜೀವಿ ಮೇಲ್ವಿಚಾರಕರಿಗೆ ನೀಡಲಾಗಿದೆ. ಇದೇ ತಿದ್ದುಪಡಿಯು ಮುಖ್ಯ ವನ್ಯಜೀವಿ ಮೇಲ್ವಿಚಾರಕರಿಗೆ ಯಾವುದೇ ಪ್ರಾಣಿಯನ್ನು ಮತ್ತು ಜೀವಿಯನ್ನು ಅಪಾಯಕಾರಿ ಎಂದು ಘೊಷಿಸುವ ಅಧಿಕಾರವನ್ನೂ ನೀಡಿದೆ. ಸರ್ಕಾರಿ ಸಮಜಾಯಿಷಿಯ ಪ್ರಕಾರ ಈಗಿರುವ ಕಾಯಿದೆಯು ಕೇರಳದಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಆನೆ ಮತ್ತು ಹುಲಿ ದಾಳಿಗಳನ್ನು ನಿಭಾಯಿಸುವುದಕ್ಕೆ ಅಡ್ಡಿಯಾಗಿರುವ ಕಾರಣಕ್ಕೆ ಈ ತಿದ್ದುಪಡಿಯನ್ನು ತರಲಾಗಿದೆಯಂತೆ. ಆದರೆ ನಿರೀಕ್ಷೆಯಂತೆ ಪರಿಸರ ಪ್ರೇಮಿಗಳು ಸರ್ಕಾರದ ಈ ನಡೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅರಣ್ಯ ಪ್ರದೇಶವನ್ನು ಆಕ್ರಮಿಸಿ ಕಾಡುಪ್ರಾಣಿಗಳ ಆವಾಸವನ್ನು ನಾಶ ಮಾಡಿ ಇದೀಗ ಅವುಗಳ ಮೂಲ ಜಾಗೆಯನ್ನೇ ಜನವಸತಿಯೆಂದು ಹೇಳುವುದು ಎಷ್ಟು ಸರಿ ಎಂಬುದು ಅವರ ಪ್ರಶ್ನೆ. ತರ್ಕವೇನೋ ಸರಿಯಾಗಿಯೇ ಇದೆ. ಆದರೆ ಪ್ರಾಣಿಗಳು ಮತ ಹಾಕುವುದಿಲ್ಲವಲ್ಲ. ಹೀಗಾಗಿ ವಾಡಿಕೆಯಂತೆ ಜನರ ಪರವಾಗಿ ಕಾಯಿದೆಗಳನ್ನು ಬಗ್ಗಿಸುವ ಪರಿಪಾಠದತ್ತ ಸರ್ಕಾರ ಒಲವನ್ನು ತೋರಿದೆ.

ಸಾಮಾನ್ಯವಾಗಿ ಮಾನವ-ಪ್ರಾಣಿ ಸಂಘರ್ಷದ ವಿಷಯ ಬಂದಾಗಲೆಲ್ಲ ಅದು ಕಾಡಿನಂಚಿನಲ್ಲಿ ಬದುಕುವ ಜನರ ಮತ್ತು ಅಲ್ಲಿನ ವನ್ಯಜೀವಿಗಳ ನಡುವಿನ ವಿಷಯವೇ ಆಗಿರುವುದು ಹೆಚ್ಚು. ಆದರೆ ಆ ನಿಯಮ ಮೀರಿ ಹೊಸ ರೀತಿಯ ಘಟನೆಗಳು ಇಂದಿನ ದಿನಗಳಲ್ಲಿ ವರದಿಯಾಗುತ್ತಿವೆ. ಅಂಥವುಗಳ ಪೈಕಿ ಹೆಚ್ಚಿನವು ನಮ್ಮ ನವಯುಗದ ರೀಲ್ಸ್ ರಾಣಿ ಮತ್ತು ರಾಜರುಗಳ ಕುರಿತಾಗಿ ಇರುವಂಥವುಗಳು. ಕೆಲ ತಿಂಗಳ ಹಿಂದೆ ಛತ್ತೀಸ್​ಗಢದ ವ್ಯಕ್ತಿಯೊಬ್ಬ ತನ್ನ ರೀಲ್ಸ್ ತೆವಲಿಗೆ ಅಲ್ಲಿನ ಝುೂನಲ್ಲಿ ಕರಡಿಗೆ ಸಾಫ್ಟ್ ಡ್ರಿಂಕ್ ನೀಡಿದ್ದ. ಈ ಪೋಸ್ಟ್ಗೆ ನೆಟ್ಟಿಗರು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಕೀನ್ಯಾದಲ್ಲಿ ಪ್ರವಾಸಿಗನೊಬ್ಬ ಆನೆಗೆ ಬಿಯರ್ ಕುಡಿಸುವ ವಿಡಿಯೋ ಜಾಲತಾಣಗಳಲ್ಲಿ ಓಡಾಡುತ್ತಿದೆ. ಇಂತಹ ಘಟನೆಗಳಲ್ಲಿ ಬಹುಶಃ ಹೆಚ್ಚು ಭಯ ಬೀಳಿಸಿದ ವಿಡಿಯೋ ಬಂದಿದ್ದು ಥಾಯ್ಲೆಂಡ್​ನ ಹುಲಿ ರ್ಪಾಕಿನಿಂದ. ಒಂದೆರಡು ತಿಂಗಳ ಹಿಂದೆ ಥಾಯ್ಲೆಂಡ್​ನ ಮೂಲದ ವ್ಯಕ್ತಿಯೊಬ್ಬ ಹುಲಿಯೊಂದರ ಜೊತೆಗೆ ನಡೆದು ಬರುತ್ತಿರುವ ವಿಡಿಯೋ ಚಿತ್ರೀಕರಣ ನಡೆಯುತ್ತಿರುವಾಗ ಆ ಹುಲಿಯು ಕೆರಳಿ ಇದ್ದಕ್ಕಿದ್ದಂತೆಯೇ ಆ ವ್ಯಕ್ತಿಯ ಮೇಲೆ ದಾಳಿ ನಡೆಸಿರುವ ದೃಶ್ಯಾವಳಿ ಜಾಲತಾಣಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು. ಆ ಮೂಲಕ ಥಾಯ್ಲೆಂಡ್​ನಲ್ಲಿ ಪ್ರವಾಸಿಗರ ತೆವಲಿಗೆ ವನ್ಯಜೀವಿಗಳನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂಬ ವಿಷಯ ಮತ್ತೆ ಮುನ್ನೆಲೆಗೆ ಬಂತು. ಅಲ್ಲಿ ಹುಲಿ ಸೆಲ್ಪಿ ತಾಣಗಳು ಭಾರಿ ಜನಪ್ರಿಯತೆ ಗಳಿಸಿದ್ದು ಅಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲೆಂದೇ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಸೆಲ್ಪಿ ತಾಣಗಳಿಗೆ ಅಲ್ಲಿನ ಸರ್ಕಾರ ಪ್ರವಾಸೋದ್ಯಮದ ಹೆಸರಿನಲ್ಲಿ ಅನುಮತಿ ನೀಡುತ್ತದೆ. ಇದರ ಹೊರತಾಗಿಯೂ ಆ ದೇಶದಲ್ಲಿ ಹಲವು ಅನಧಿಕೃತ ಹುಲಿ ಸೆಲ್ಪಿ ತಾಣಗಳಿವೆಯೆಂದು ಹೇಳಲಾಗುತ್ತದೆ. ಅಂತಹ ತಾಣಗಳಲ್ಲಿ ಹುಲಿಗಳಿಗೆ ಮಂಪರು ಬರುವ ಚುಚ್ಚುಮದ್ದುಗಳನ್ನು ನೀಡಿ ಯಾವತ್ತೂ ಗುಂಗಿನಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ಜೊತೆಗೆ ಅತಿ ಕಡಿಮೆ ಆಹಾರವನ್ನು ನೀಡಿ ನಿತ್ರಾಣಗೊಳಿಸಲಾಗುತ್ತದೆ ಎಂಬ ಆಪಾದನೆ ಆ ಸೆಲ್ಪಿತಾಣಗಳಷ್ಟೇ ಹಳೆಯದು. ಈ ಕುರಿತು ಹಲವು ಪ್ರಾಣಿದಯಾ ಸಂಘಗಳು ದೂರು ನೀಡುತ್ತ ಬಂದಿದ್ದರೂ ಅಲ್ಲಿನ ಹುಲಿಗಳ ಪರಿಸ್ಥಿತಿಯ ಮೇಲೇನೂ ಫರಕು ಬೀಳಲಿಲ್ಲ.

ಮಾನವ ಮತ್ತು ವನ್ಯಜೀವಿಗಳ ಜೀವನ ಹೇಗೆ ಒಂದಕ್ಕೊಂದು ಹೊಂದಿಕೊಂಡಿದೆ ಎಂಬುದಕ್ಕೆ ಸೆರೆಂಗೆಟಿ ಒಂದು ಉತ್ತಮ ಉದಾಹರಣೆ. ಪೂರ್ವ ಆಫ್ರಿಕಾದ ತಾಂಜಾನಿಯಾ ಮತ್ತು ಕೀನ್ಯಾ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಪ್ರದೇಶ ತನ್ನ ಜೀವವೈವಿಧ್ಯಕ್ಕೆ ಹೆಸರುವಾಸಿ. ಅಂದಹಾಗೆ ಸ್ಥಳೀಯ ಭಾಷೆಯಲ್ಲಿ ಸೆರೆಂಗೆಟಿ ಅಂದರೆ ‘ಮಿತಿಯಿಲ್ಲದ ಬಯಲು’ ಎಂದರ್ಥವಂತೆ. 30 ಸಾವಿರ ಚದರ ಕಿಲೋಮೀಟರ್​ನಷ್ಟು ಹಬ್ಬಿಕೊಂಡಿರುವ ಈ ಬಯಲು ಪ್ರದೇಶದಲ್ಲಿರುವ ಏಕಾಂತ ಮತ್ತು ಆಹಾರ ಲಭ್ಯತೆಯ ಕಾರಣ ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಝೀಬ್ರಾ ಸೇರಿದಂತೆ ವೈವಿಧ್ಯಮಯ ಪ್ರಾಣಿಪಕ್ಷಿಗಳು ಆರಾಮಾಗಿ ಓಡಾಡಿಕೊಂಡಿವೆ. ಅದರಲ್ಲೂ ಗ್ನಸ್ ಎಂದು ಹೇಳಲಾಗುವ ಸ್ಥಳೀಯ ಹುಲ್ಲೆಗಳು ಇಲ್ಲಿನ ವಿಶೇಷ. ಇಷ್ಟೊಂದು ವಿಶಾಲ ಬಯಲಿನಲ್ಲಿ ವರ್ಷ ಪೂರ್ತಿ ಆಹಾರವನ್ನು ಅರಸುತ್ತ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ತಂಡಗಳಲ್ಲಿ ಓಡಾಡುವ ಇಲ್ಲಿನ ಪ್ರಾಣಿಗಳನ್ನು ನೋಡಲೆಂದೇ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಶತಮಾನಗಳ ಇತಿಹಾಸವಿರುವ ಈ ವಲಸೆ ಜಗತ್ತಿನ ಅತ್ಯಂತ ಮನಮೋಹಕ ವಲಸೆಯೆಂದೇ ಖ್ಯಾತಿಯಾಗಿದೆ. ಹೀಗಿರುವಾಗ 20ನೇ ಶತಮಾನದ ಮಧ್ಯದಲ್ಲಿ ಯಾವುದೋ ವೈರಾಣುವಿನ ಕಾರಣ ಹಬ್ಬಿದ ರೋಗವು ಇಲ್ಲಿನ ಪ್ರಾಣಿಗಳ, ಅದರಲ್ಲೂ ವಿಶೇಷವಾಗಿ ಹುಲ್ಲೆಗಳ ಮೇಲೆ ಮಾರಕವಾಗಿ ಪರಿಣಮಿಸಿತು. ಲಕ್ಷಗಟ್ಟಲೇ ಪ್ರಾಣಿಗಳು ಇದ್ದಕ್ಕಿದ್ದಂತೆ ಮರಣ ಹೊಂದಿದ ಕಾರಣ ಅವುಗಳ ಸಂಖ್ಯೆ ದಿಢೀರನೆ ಕುಸಿದು ಆ ಬಯಲುಗಾಡಿನಲ್ಲಿ ಈ ಪ್ರಾಣಿಗಳು ಮೇಯುತ್ತಿದ್ದ ಹುಲ್ಲು ಅಲ್ಲೇ ಒಣಗಿತು. ಇದರ ಪರಿಣಾಮ ಎಲ್ಲೆಡೆ ಕಾಡ್ಗಿಚ್ಚು ಹಬ್ಬಿ ಎಲ್ಲೆಲ್ಲೂ ಕಪ್ಪು ಹೊಗೆಯೋ ಹೊಗೆ. ಇದು ಈ ಪ್ರದೇಶದ ಅಂಚಿನಲ್ಲಿ ಜೀವಿಸುತ್ತಿದ್ದ ಜನರ ಜೀವನವನ್ನು ನರಕವನ್ನಾಗಿ ಮಾಡಿದ್ದಲ್ಲದೆ ಈ ಪ್ರದೇಶದಿಂದ ಶಾಖವರ್ಧಕ ಅನಿಲಗಳು ಭಾರಿ ಪ್ರಮಾಣದಲ್ಲಿ ಹೊರಹೊಮ್ಮುವಂತೆ ಮಾಡಿತು. ಇದರಿಂದ ಎಚ್ಚೆತ್ತ ಸ್ಥಳೀಯ ಆಡಳಿತದ, ಸ್ಥಳೀಯರ ಮತ್ತು ಪರಿಸರ ಪ್ರಿಯರ ಸತತ ಪ್ರಯತ್ನದಿಂದಾಗಿ ರೋಗ ನಿಧಾನವಾಗಿ ಹತೋಟಿಗೆ ಬಂದು ಹಲವು ವರ್ಷಗಳ ನಂತರ ಮತ್ತೆ ಇಲ್ಲಿನ ಪ್ರಾಣಿಗಳ ಸಂಖ್ಯೆ ಸುಧಾರಿಸಿ ಮಾಮೂಲು ಸ್ಥಿತಿಗೆ ಬಂತು. ಇದೀಗ ಸೆರೆಂಗೆಟಿ ಮತ್ತೆ ಹಸಿರನ್ನು ಉಸಿರಾಡುತ್ತಿದೆ. ಮಹಾ ವಲಸೆಯ ಖದರು ಮತ್ತೆ ವಾಪಸ್ಸು ಬಂದಿದೆ. ಊರು ಬಿಟ್ಟು ಓಡಿ ಹೋಗಿದ್ದ ಸ್ಥಳೀಯರು ಮತ್ತೆ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ.

ಮಾನವ ಮತ್ತು ಪ್ರಾಣಿಗಳು ತಮ್ಮ ತಮ್ಮ ಮಿತಿಯನ್ನು ಅರಿತು ಗೌರವಿಸಿದರೆ ನಾವಿರುವ ಸ್ಥಳವೂ ಸೆರೆಂಗೆಟಿ ಆಗಬಲ್ಲದು. ಇಲ್ಲದಿದ್ದಲ್ಲಿ ಈ ಸಂಘರ್ಷಕ್ಕೆ ಮತ್ತೆ ಸಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net