ನೆಮ್ಮದಿ ನಮ್ಮದಾಗಿಸಿಕೊಳ್ಳುವ ಬಗೆ

Manollasa
Published on

| ವಿದ್ಯಾ ಉಪೇಂದ್ರ ಜೋಶಿ

Vidya Upendra Joshi
ಒಬ್ಬನು ನೆಮ್ಮದಿಯನ್ನು ಹುಡುಕಿಕೊಂಡು ವಿವಿಧ ಅಧ್ಯಾತ್ಮ ಗುರುಗಳನ್ನು ಭೇಟಿಯಾದ. ಅವರು ಹೇಳಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದ. ಆದರೂ, ಅವನಿಗೆ ನೆಮ್ಮದಿ ಮರೀಚಿಕೆಯಾಯಿತು. ಕೊನೆಗೊಮ್ಮೆ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ, ‘ಸ್ವಾಮೀಜಿ, ನಾನು ಮುಚ್ಚಿದ ಕೋಣೆಯಲ್ಲಿ ಗಂಟೆಗಟ್ಟಲೆ ಕುಳಿತು ಧ್ಯಾನ ಮಾಡುತ್ತೇನೆ. ಆದರೆ ಮನಶ್ಶಾಂತಿ ಸಿಕ್ಕಿಲ್ಲ’ ಎಂದ. ಆಗ ಸ್ವಾಮಿ ವಿವೇಕಾನಂದರು, ‘ಮೊಟ್ಟಮೊದಲು ನಿನ್ನ ಕೋಣೆಯ ಬಾಗಿಲನ್ನು ತೆರೆದಿಡು. ನಂತರ ಹೊರಗೆ ದುಃಖದಲ್ಲಿ ಇರುವವರನ್ನು, ಅನಾರೋಗ್ಯದಿಂದ ಬಳಲುವವರನ್ನು, ಹಸಿದವರನ್ನು, ಇನ್ನೂ ಅನೇಕ ರೀತಿಯ ಸಂಕಷ್ಟದಲ್ಲಿರುವವರನ್ನು ಕಂಡು, ಅವರಿಗೆ ನಿನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡು. ಶ್ರೇಷ್ಠಕಾರ್ಯವನ್ನು ಮಾಡಲು ತಡಮಾಡಬಾರದು’ ಎಂದು ಹೇಳಿ ಹುರಿದುಂಬಿಸಿದರು. ಆ ಯುವಕ ಸಮಾಜದಲ್ಲಿ ಬೆರೆತು ಸೇವೆ ಮಾಡತೊಡಗಿದ. ನೊಂದವರ ಕಣ್ಣೀರು ಒರೆಸಿದ. ರೋಗಿಗಳಿಗೆ, ವೃದ್ಧರಿಗೆ ಸಹಾಯ ಮಾಡಿದ. ಆ ಸಮಾಜಮುಖಿ ಕೆಲಸಗಳಲ್ಲಿ ಸಿಕ್ಕ ಸಂತೃಪ್ತಿ, ಅದರಿಂದ ಒದಗಿದ ಆನಂದ ಅವನ ಜೀವನವನ್ನೇ ಬದಲಿಸಿಬಿಟ್ಟಿತು. ದುಃಖ, ನಿರಾಸೆಯನ್ನು ದೂರ ಮಾಡಿತು.

ನಾರದರು ಒಮ್ಮೆ ಶ್ರೀಕೃಷ್ಣನ ಬಳಿ ಹೋಗಿ ‘ಈ ಪ್ರಪಂಚದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ, ಏಕೆ?’ ಎಂದು ಕೇಳಿದರು. ಅದಕ್ಕೆ ಮುಗುಳ್ನಕ್ಕ ಶ್ರೀಕೃಷ್ಣ ಪರಮಾತ್ಮ, ‘ಎಲ್ಲರಲ್ಲೂ ಸಂತೋಷವಿದೆ, ಆದರೆ, ಅವರೆಲ್ಲರೂ ಬೇರೆಯವರ ಸಂತೋಷ ನೋಡಿ ದುಃಖಿಗಳಾಗುತ್ತಿದ್ದಾರೆ. ಹಾಗೆ ಎಲ್ಲರಲ್ಲೂ ಶಾಂತಿ ಇದೆ. ಆದರೆ ಬೇಡವಾದ ವಿಷಯಗಳಲ್ಲಿ ತೊಡಗಿ ಅಶಾಂತಿ ಸೃಷ್ಟಿಸಿಕೊಂಡಿದ್ದಾರೆ’ ಎಂದು ಉತ್ತರಿಸಿದ. ನಿಜ, ಅಶಾಂತಿ ಮತ್ತು ಶಾಂತಿ ಎರಡೂ ನಮ್ಮ ಅಧೀನದಲ್ಲಿಯೇ ಇವೆ. ಸತ್ಯ, ನಿಸ್ವಾರ್ಥ ಮತ್ತು ಆಂತರಿಕ ಪರಿಶುದ್ಧತೆ- ಈ ಮೂರೂ ಇದ್ದರೆ ಮನಸ್ಸಿನಲ್ಲಿ ಸದಾ ಶಾಂತಿ ನೆಲೆಸುತ್ತದೆ. ಮನಸ್ಸಿಗೆ ಶಾಂತಿ ಬೇಕೆಂದು ಏನೇನೋ ಮಾಡಲು ಪ್ರಯತ್ನಿಸುತ್ತೇವೆ. ಆದರೆ ನಮ್ಮ ಹೃದಯದ ಮಾತನ್ನು ಕೇಳಿದಾಗ ಮಾತ್ರ ಮನಸ್ಸಿಗೆ ಶಾಂತಿ ಸಿಗುತ್ತದೆ.

ಗಾಳಿಗೆ ಸುಗಂಧ, ದುರ್ಗಂಧದ ಭೇದವಿಲ್ಲ. ಅರಮನೆಯೋ ಗುಡಿಸಲೋ ಬೆಳಕು ಬೀರುವುದಿಲ್ಲವೇ ರವಿಕಿರಣ? ಬಡವನೋ ಬಲ್ಲಿದನೋ ಒದ್ದೆ ಮಾಡುವುದಿಲ್ಲವೇ ಮಳೆ? ಪುಣ್ಯಾತ್ಮನೋ ಪಾಪಾತ್ಮನೋ ಹೊತ್ತು ನಿಂತಿಲ್ಲವೆ ಧರಣಿ? ಒಳ್ಳೆಯವರೋ ಕೆಟ್ಟವರೋ ನಿನಗೇಕೆ ಇಲ್ಲಸಲ್ಲದ ಚಿಂತೆ, ನಿನ್ನ ನೀನು ಅರಿತು ಬಾಳಿದರೆ ಅದೇ ನಿನ್ನ ಮನಸ್ಸಿಗೆ ಶಾಂತಿ. ಇದನ್ನು ಎಲ್ಲರೂ ಅರಿಯಬೇಕು. ಬೇಡವಾದುದನ್ನೆಲ್ಲ ತೆಗೆದು ಹಾಕಿ ಇದ್ದುದರಲ್ಲೇ ತೃಪ್ತಿ ಹೊಂದಿದಾಗ ಮನಶ್ಶಾಂತಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಬಾಳಿನ ದಾರಿ ಸರಳ, ಸಹಜವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net