

ಭಾರತೀಯ ಮಾರುಕಟ್ಟೆಯಲ್ಲಿ 2024ನೇ ವರ್ಷ ಒಂದು ಹೆಗ್ಗುರುತಿಗೆ ಸಾಕ್ಷಿಯಾಯಿತು. 2023ಕ್ಕೆ ಹೋಲಿಸಿದರೆ ಷೇರು ವಿತರಣೆಗಳು 2.6 ಪಟ್ಟು ಹೆಚ್ಚಾದವು. ಭಾರತೀಯ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಸಂಖ್ಯೆ ದುಪ್ಪಟ್ಟು ಆಗಿದ್ದಕ್ಕೆ ಇದು ಸಾಕ್ಷಿಯಾಗಿದೆ. ಒಂದು ವರದಿಯ ಪ್ರಕಾರ 2024ರಲ್ಲಿ 317ಕ್ಕೂ ಹೆಚ್ಚು ಐಪಿಒಗಳ ಮೂಲಕ 1.8 ಟ್ರಿಲಿಯನ್ (1.80 ಲಕ್ಷ ಕೋಟಿ ರೂ.) ಹಣ ಮಾರುಕಟ್ಟೆಗೆ ಹರಿದುಬಂದಿದೆ. 2021ರಲ್ಲಿ ಸಂಗ್ರಹವಾಗಿದ್ದ 1.3 ಟ್ರಿಲಿಯನ್ ಹಿಂದಿನ ದಾಖಲೆಯಾಗಿತ್ತು.
ಷೇರು ಮಾರುಕಟ್ಟೆಯಲ್ಲಿ ಯಾವುದೇ ಕಂಪನಿಯ ಷೇರು ಹೊಂದಬೇಕು ಎಂದರೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಖರೀದಿ ಮಾಡಬಹುದು. ಹಾಗೆಯೇ ಕಂಪನಿಗಳು ನೀಡುವ ಆರಂಭಿಕ ಸಾರ್ವಜನಿಕ ಕೊಡುಗೆ ಮೂಲಕವೂ ಷೇರುಗಳ ಮಾಲೀಕರಾಗಬಹುದು. ಯಾವುದೇ ಒಂದು ಪ್ರೖೆವೇಟ್ ಕಂಪನಿ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನೋಂದಣಿಯಾಗಿ ಸಾರ್ವಜನಿಕರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುವುದನ್ನು ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಎಂದು ಕರೆಯಲಾಗುತ್ತದೆ. ಈ ಮೂಲಕ ಆ ಪ್ರೖೆವೇಟ್ ಕಂಪನಿ ಪಬ್ಲಿಕ್ ಕಂಪನಿಯಾಗಿ ಮಾರ್ಪಡುತ್ತದೆ.
ಸಾಮಾನ್ಯವಾಗಿ ಪ್ರೖೆವೇಟ್ ಲಿ. ಕಂಪನಿಗಳು ವ್ಯಾಪಾರ- ವಹಿವಾಟು, ಬಂಡವಾಳ ಹೆಚ್ಚಿಸಿಕೊಳ್ಳಲು ಐಪಿಒಗಳನ್ನು ಬಳಸಿಕೊಳ್ಳುತ್ತವೆ. ಇದರಿಂದ ಬಂದ ಬಂಡವಾಳವನ್ನು ವಿಸ್ತರಣೆ, ಸಂಶೋಧನೆ, ಅಭಿವೃದ್ಧಿ, ಸಾಲ ಮರುಪಾವತಿಗಾಗಿ ಬಳಸಿಕೊಳ್ಳುತ್ತವೆ. ಐಪಿಒ ನಂತರ, ಕಂಪನಿಯ ಷೇರುಗಳು ಸಾರ್ವಜನಿಕವಾಗಿ ವ್ಯಾಪಾರವಾಗುತ್ತವೆ. ಯಾರಾದರೂ ಅವುಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ಖರೀದಿ ಅಥವಾ ಮಾರಾಟ ಮಾಡಬಹುದಾಗಿದೆ. ಐಪಿಒಗಳಿಂದ ಕಂಪನಿ ಬ್ರ್ಯಾಂಡ್ ವ್ಯಾಲ್ಯೂ ಮತ್ತು ವಿಶ್ವಾಸಾರ್ಹತೆ ಹೆಚ್ಚುತ್ತದೆ. ಕಂಪನಿಯ ಸ್ಥಿರತೆ, ಪಾರದರ್ಶಕತೆ ಹಾಗೂ ಬದ್ಧತೆಗೆ ಐಪಿಒ ಕನ್ನಡಿಯಾಗಿದೆ.
ಅರ್ಜಿ ಹಾಕುವುದು ಹೇಗೆ?: ಐಪಿಒ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಪ್ರಾಥಮಿಕವಾಗಿ ನೀವು ಡಿಮ್ಯಾಟ್ ಅಕೌಂಟ್ ಹೊಂದಿರಬೇಕು. ಈಗ ಎಲ್ಲ ಬ್ರೋಕರ್ಗಳು ಆನ್ಲೈನ್ ಅರ್ಜಿ ವ್ಯವಸ್ಥೆ ಹೊಂದಿವೆ. ಡಿಮ್ಯಾಟ್ ಅಕೌಂಟ್ನಲ್ಲಿ ಐಪಿಒಗಳಿಗಾಗಿಯೇ ಒಂದು ಪ್ರತ್ಯೇಕ ವಿಭಾಗವಿರುತ್ತದೆ. ಅಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಐಪಿಒಗಳ ಹೆಸರು ನಮೂದಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನೀಡಲಾಗಿರುತ್ತದೆ. ನಮಗೆ ಬೇಕಾದ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಕೆಲ ವಿವರಗಳನ್ನು ನೀಡಿ, ಆನ್ಲೈನ್ ಮೂಲಕ ನಿಗದಿತ ಹಣ ಪಾವತಿ ಮಾಡಿದರೆ ಐಪಿಒಗೆ ಅರ್ಜಿ ಸಲ್ಲಿಕೆಯಾಗುತ್ತದೆ. ನಂತರ ನಮ್ಮ ಬ್ಯಾಂಕ್ ಖಾತೆಯಲ್ಲಿ ಅಷ್ಟು ಹಣ ಬ್ಲಾಕ್ ಆಗುತ್ತದೆ. ಒಂದು ವೇಳೆ ನಮ್ಮ ಡಿಮ್ಯಾಟ್ ಅಕೌಂಟ್ಗೆ ಷೇರುಗಳು ಹಂಚಿಕೆಯಾದರೆ ಅಕೌಂಟ್ನಿಂದ ಹಣ ಕಡಿತವಾಗುತ್ತದೆ. ಹಂಚಿಕೆ ಆಗದಿದ್ದರೆ ಹಣ ಕಡಿತವಾಗುವುದಿಲ್ಲ.
ಸಾಮಾನ್ಯವಾಗಿ ಒಂದು ಕಂಪನಿಯು ಐಪಿಒ ಮೂಲಕ ಸಾರ್ವಜನಿಕವಾಗಿ ಬಿಡುಗಡೆಯಾದಾಗ, ಕೆಲವು ಹೂಡಿಕೆದಾರರು ತಮ್ಮ ಷೇರುಗಳನ್ನು ನಿರ್ದಿಷ್ಟ ಅವಧಿಗೆ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗುತ್ತದೆ. ಇದನ್ನು ಲಾಕ್-ಇನ್ ಅವಧಿ ಎಂದು ಕರೆಯುತ್ತಾರೆ. ಈ ಅವಧಿಯು ಸಾಮಾನ್ಯವಾಗಿ ಆರು ತಿಂಗಳವರೆಗೆ ಇರುತ್ತದೆ. ಆದರೆ, ಹೂಡಿಕೆದಾರರ ವರ್ಗ ಮತ್ತು ನಿಯಂತ್ರಕ ಮಾರ್ಗಸೂಚಿಗಳನ್ನು ಅವಲಂಬಿಸಿ ಒಂದು ವರ್ಷದವರೆಗೆ ವಿಸ್ತರಿಸಬಹುದು. ಲಾಕ್-ಇನ್ ಅವಧಿಯು ಷೇರಿನ ಬೆಲೆಯನ್ನು ಸ್ಥಿರಗೊಳಿಸುವ ಮತ್ತು ಐಪಿಒ ಬಿಡುಗಡೆಯ ನಂತರದ ದೊಡ್ಡ ಪ್ರಮಾಣದ ಮಾರಾಟದ ಅಪಾಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಪ್ರಮುಖ ಹೂಡಿಕೆದಾರರು, ವಿಶೇಷವಾಗಿ ಪ್ರವರ್ತಕರು, ಕಂಪನಿ ಉದ್ಯೋಗಿಗಳು ಮತ್ತು ಆಂಕರ್ ಹೂಡಿಕೆದಾರರಿಗೆ ಈ ನಿಯಮ ಅನ್ವಯಿಸುತ್ತದೆ. ಸಾಮಾನ್ಯ ಹೂಡಿಕೆದಾರರು ಐಪಿಒ ಬಿಡುಗಡೆಯಾಗಿ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ವಹಿವಾಟು ಆರಂಭಿಸುತ್ತಲೇ ತಮಗೆ ಹಂಚಿಕೆಯಾದ ಷೇರುಗಳನ್ನು ಮಾರಾಟ ಮಾಡಬಹುದಾಗಿದೆ.
ಐಪಿಒಗಳ ಸುತ್ತಲೂ ಯಾವಾಗಲೂ ಸಾಕಷ್ಟು ಅನಿಶ್ಚಿತತೆ ಇರುತ್ತದೆ. ಅದು ಹೀಗಂತೆ, ಇದು ಹಾಗಂತೆ . ಅಂತೆಕಂತೆಗಳು ಸಾಕಷ್ಟಿರುತ್ತವೆ. ಹೀಗಾಗಿ ಐಪಿಒ ಮಾರುಕಟ್ಟೆಯಲ್ಲಿ ಎಲ್ಲವನ್ನೂ ಸಂದೇಹದಿಂದಲೇ ನೋಡಲಾಗುತ್ತದೆ. ಹಾಗಾಗಿ, ಯಾವಾಗಲೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಆರ್ಥಿಕವಾಗಿ ಬಲಿಷ್ಠವಾಗಿರುವ ಕಂಪನಿಯನ್ನು ಆಯ್ಕೆ ಮಾಡಲು ದೊಡ್ಡ ದೊಡ್ಡ ಬ್ರೋಕರ್ ಕಂಪನಿಗಳ ಮೇಲೆ ಗಮನ ಇರಿಸಬೇಕು. ಅವರು ತಜ್ಞರ ಸಲಹೆ ನಂತರವೇ ಕಂಪನಿಗಳನ್ನು ಆಯ್ಕೆ ಮಾಡಿಕೊಂಡಿರುತ್ತವೆ. ಇದರ ಜತೆಗೆ ಕಂಪನಿಯ ಪರಿಚಯ ಕೈಪಿಡಿಯನ್ನು ಓದುವುದನ್ನು ಮರೆಯಬಾರದು.
ಯಾವುದೇ ಐಪಿಒಗೆ ಅರ್ಜಿ ಸಲ್ಲಿಸುವ ಮೊದಲು ಆ ಕಂಪನಿಯನ್ನು ಅರಿಯುವುದು ಅಗತ್ಯ. ಆ ಕಂಪನಿಯ ಬಂಡವಾಳ, ಲಾಭ-ನಷ್ಟ, ಯಾವ ಉದ್ಯಮವನ್ನು ಕಂಪನಿ ಹೊಂದಿದೆ, ಅದರ ಮಾಲೀಕರು, ಆಡಳಿತ ಮಂಡಳಿ ಕುರಿತು ತಿಳಿದಿರಬೇಕಾಗುತ್ತದೆ. ಸಾಮಾನ್ಯವಾಗಿ ಬ್ರೋಕರ್ಗಳು ಐಪಿಒಗಳ ಕುರಿತು ಸಲಹೆ ನೀಡುತ್ತಾದಾದರೂ ಸ್ವತಃ ನಾವು ಕೂಡ ಕಂಪನಿ ಕುರಿತು ಅರಿತುಕೊಳ್ಳುವುದು ಕ್ಷೇಮ.