ಮಕ್ಕಳಿಗಾಗೇ ಇರುವ ಯುನಿಸೆಫ್ ಬಗ್ಗೆ ನಿಮಗೆಷ್ಟು ಗೊತ್ತು!

Unicef
Published on
ಮಕ್ಕಳು ಎಂದಿಗೂ ಬಾಡದ ಕುಸುಮಗಳು. ಅವರ ಮನಸ್ಸು ಸದಾ ಅರಳಿರುವಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ. ಮಕ್ಕಳಿಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತನೆಗಳು ಹಾಗೂ ಕಾರ್ಯಕ್ರಮಗಳನ್ನು ಅನೇಕ ಅಧಿಕೃತ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ. ಮಕ್ಕಳಿಗಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಯುನಿಸೆಫ್ (UNICEF) ಪ್ರಮುಖವಾದುದು.

| ಅನೀಶ್ ಬಿ. ಕೊಪ್ಪ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1946 ರ ಡಿಸೆಂಬರ್ 11 ರಂದು ವಿಶ್ವಸಂಸ್ಥೆಯ ಮಕ್ಕಳ ನಿಧಿಯನ್ನು ನ್ಯೂಯಾರ್ಕ್​ನಲ್ಲಿ ಪ್ರಾರಂಭಿಸಲಾಯಿತು. ಆ ದಿನದ ನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 11ನ್ನು ಯುನಿಸೆಫ್ ದಿನವನ್ನಾಗಿ ಆಚರಿಸಲಾಗುತ್ತದೆ.

ಸ್ಥಾಪನೆಯ ಉದ್ದೇಶ: ಎರಡನೇ ಮಹಾಯುದ್ಧದಲ್ಲಿ ತೊಂದರೆಗೀಡಾದ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶ ಇದರದ್ದಾಗಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಮಕ್ಕಳ ಮತ್ತು ತಾಯಂದಿರ ಕಾಳಜಿಯ ದೀರ್ಘ ಕಾಲದ ಉಪಯುಕ್ತ ಯೋಜನೆಗಳು ಮತ್ತು ಅಭಿವೃದ್ಧಿಯ ನೆರವು ಒದಗಿಸುವುದು ಇದರ ಮೂಲ ಉದ್ದೇಶಗಳಲ್ಲಿ ಒಂದಾಗಿತ್ತು. ಹಾಗಾಗಿ ಅಂದು ಅಭಿವೃದ್ಧಿಶೀಲ ದೇಶವಾಗಿ ಗುರುತಿಸಲ್ಪಟ್ಟಿದ್ದ ಭಾರತದಲ್ಲಿ 1949 ರಲ್ಲಿ ಯುನಿಸೆಫ್ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತು. ನಂತರದಲ್ಲಿ ವಿಶ್ವದಾದ್ಯಂತ 30 ಸದಸ್ಯರನ್ನೊಳಗೊಂಡು 1953ರಲ್ಲಿ ವಿಶ್ವಸಂಸ್ಥೆಯ ಶಾಶ್ವತ ಭಾಗವಾಗಿ ಮಕ್ಕಳ ನಿಧಿಯು ಯುನೈಟೆಡ್ ನೇಷನ್ಸ್ ಚಿಲ್ಡ್›ನ್ಸ್ ಫಂಡ್ ಹೆಸರಿನಲ್ಲಿ ಮುಂದುವರಿಯುತ್ತಿದೆ.

ಯುನಿಸೆಫ್ ಧ್ವಜ: ಯುನಿಸೆಫ್ ಧ್ವಜವು ನೀಲಿ ಬಣ್ಣದಲ್ಲಿದೆ. ವಿಶ್ವಸಂಸ್ಥೆಯ ಧ್ವಜದಲ್ಲಿರುವ ಗ್ಲೋಬ್ ಮತ್ತು ಆಲಿವ್ ಎಲೆಗಳನ್ನು ಇದು ಒಳಗೊಂಡಿದೆ. ಧ್ವಜದಲ್ಲಿರುವ ಗ್ಲೋಬ್​ನಲ್ಲಿ ತಾಯಿ ಮತ್ತು ಮಗುವಿನ ಚಿತ್ರವಿದೆ.

ಭಾರತದಲ್ಲಿ ಯುನಿಸೆಫ್ ಕಾರ್ಯಕ್ರಮಗಳು: ತಾಯಿ ಮತ್ತು ಮಗುವಿನ ಆರೋಗ್ಯ, ಅವರಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯುನಿಸೆಫ್ ಸಹಾಯ ಹಸ್ತ ಚಾಚುತ್ತಿದೆ. ಪರಿಸರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ನೆರವು ನೀಡುತ್ತಿದೆ. ಎಚ್.ಐ.ವಿ ಪೀಡಿತರಿಗೆ ಬದುಕಿನ ಭರವಸೆಯ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದೆ. ಮಕ್ಕಳಿಗಾಗಿ ರಕ್ಷಣಾ ವಾತಾವರಣ ನಿರ್ವಿುಸುವ ಉದ್ದೇಶದಿಂದ ಮಕ್ಕಳಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತದೆ. ಬಾಲ ಕಾರ್ವಿುಕ ವ್ಯವಸ್ಥೆಯ ನಿಮೂಲನೆಗೆ ಅನೇಕ ರಾಜ್ಯಗಳು ಹಾಕಿಕೊಂಡಿರುವ ಕಾರ್ಯಕ್ರಮಗಳಿಗೆ ನೆರವು ನೀಡುತ್ತಿದೆ.

ಶಿಕ್ಷಣ ಕ್ಷೇತ್ರಕ್ಕೆ ನೆರವು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು, ಶಿಕ್ಷಣದಲ್ಲಿ ಲಿಂಗ ತಾರತಮ್ಯ ನಿವಾರ ಣೆಗೆ 1990 ರಿಂದ ಯುನಿಸೆಫ್ ಭಾರತದ ಯೋಜನೆಗಳೊಂದಿಗೆ ಶ್ರಮಿಸುತ್ತಿದೆ. ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ನೀಡುವುದು, ಶಿಕ್ಷಣದ ಗುಣಮಟ್ಟ ಕಾಪಾಡುವುದು, ಹಾಜರಾತಿ ಹೆಚ್ಚಿಸು ವುದು ಈ ಎಲ್ಲಾ ಉದ್ದೇಶಗಳಿಗೆ ಯುನಿಸೆಫ್ ಸಹಭಾಗಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಮೀನಾ ಎಂಬ ಪಾತ್ರಧಾರಿ: ಮಕ್ಕಳ ಹಕ್ಕುಗಳನ್ನು ಪ್ರಚುರಪಡಿಸಲು ಚಿತ್ರಗಳು, ಪೋಸ್ಟರ್​ಗಳು,ಕಾರ್ಟೂನ್ ಚಲನಚಿತ್ರ, ಪುಸ್ತಕಗಳ ಮೂಲಕ ಯುನಿಸೆಫ್ ಪ್ರಯತ್ನಿಸುತ್ತದೆ. ಮಕ್ಕಳ ಹಕ್ಕುಗಳು, ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಪ್ರಚುರಪಡಿಸಲು ಯುನಿಸೆಫ್​ನವರು ಸೃಷ್ಟಿಸಿರುವ ಕಥೆಗಳ ಮುಖ್ಯ ಪಾತ್ರಧಾರಿ ಮೀನಾ. ಜನಸಾಮಾನ್ಯರಲ್ಲಿ ಮಕ್ಕಳ ಬಗ್ಗೆ ಎಚ್ಚರ ವಹಿಸುವ ಕುರಿತು ಕಥೆಯ ಇತರ ಪಾತ್ರಗಳೊಂದಿಗೆ ರಂಜಿಸುತ್ತಾ ಮೀನಾ ವಿಚಾರಗಳನ್ನು ಪ್ರಸ್ತುತಪಡಿಸುತ್ತಾಳೆ. 1990ರಲ್ಲಿ ಮೀನಾಳ ಕಥೆ ಮತ್ತು ಪಾತ್ರವನ್ನು ಕಲ್ಪಿಸಿಕೊಂಡ ಯುನಿಸೆಫ್​ನ ಸಂವಹನ ತಂಡ 1998ರಲ್ಲಿ ಮೊದಲ ಬಾರಿಗೆ ಮೀನಾಳನ್ನು ಮಕ್ಕಳ ಮುಂದೆ ಪ್ರದರ್ಶಿಸಿತು. ಮೀನಾಳ ಕಥೆಗಳು ದಕ್ಷಿಣ ಏಷ್ಯಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್, ಭೂತಾನ್ ದೇಶಗಳಿಗೂ ಅನ್ವಯಿಸುವಂತೆ ಮಾಡುವುದು ಯುನಿಸೆಫ್​ಗೆ ಸವಾಲಾಗಿತ್ತು. ಆದರೆ ಈಗ ಶಾಲಾ ಶಿಕ್ಷಣದಲ್ಲಿ ಮಕ್ಕಳೆದುರು ಕಾರ್ಟೂನ್ ಚಿತ್ರದ ಮೀನಾ ಸೂಪರ್ ಗರ್ಲ್​ಳಂತೆ ಆಗಿದ್ದಾಳೆ.

ಮೀನಾ ಕ್ಲಬ್: ಮೀನಾ ಈಗ ಕೇವಲ ಕಥೆಯಾಗಿ ಉಳಿದಿಲ್ಲ. ಭಾರತದಲ್ಲಿ ಶಿಕ್ಷಣ ಇಲಾಖೆ ಮೂಲಕ ರಾಷ್ಟ್ರದ ಹಲವಾರು ಶಾಲೆಗಳಲ್ಲಿ ‘ಮೀನಾ ಕ್ಲಬ್’ ಆರಂಭವಾಗಿದೆ. ಕರ್ನಾಟಕದಲ್ಲೂ ಸರ್ವ ಶಿಕ್ಷಣ ಅಭಿಯಾನದ ಅಂಗವಾಗಿ ಶಾಲೆಗಳಲ್ಲಿ ಮೀನಾ ಕ್ಲಬ್​ಗಳನ್ನು ಆರಂಭಿಸಲಾಗಿದೆ. ಈ ಕ್ಲಬ್​ಗಳಲ್ಲಿ ಮೀನಾಳ ಕಥೆಗಳನ್ನು ಆಧರಿಸಿ ಸಮುದಾಯದೊಡನೆ ಚರ್ಚೆ, ಸಮಾಲೋಚನೆ ಮತ್ತು ಹೆಣ್ಣು ಮಕ್ಕಳ ಸಮಸ್ಯೆಗೆ ಧನಾತ್ಮಕ ಪರಿಹಾರ ಕಂಡುಕೊಳ್ಳಲಾಗುತ್ತದೆ. ಮಕ್ಕಳ ಹಕ್ಕುಗಳ ಕುರಿತು ರಸಪ್ರಶ್ನೆ, ಚರ್ಚಾ ಕೂಟ, ಪ್ರಬಂಧ ರಚನೆ, ಪ್ರದರ್ಶನಗಳು, ಸಮುದಾಯದಲ್ಲಿ ಪ್ರಭಾತ್ ಪೇರಿ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಟ್ಯಾಪ್ ಯೋಜನೆ: ಈ ಯೋಜನೆಯು ಶುದ್ಧ ನೀರನ್ನು ಬಡ ದೇಶಗಳ ಮಕ್ಕಳಿಗೆ ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯನ್ವಯ ಇಂದು ವಿಶ್ವದಾದ್ಯಂತ ಅಂದಾಜು 90 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ‘ವಸುಧೈವ ಕುಟುಂಬಕಂ’ ಎಂಬಂತೆ ಮಕ್ಕಳ ಜೀವನವನ್ನು ರಕ್ಷಿಸಲು ಮತ್ತು ಬಾಲ್ಯದಿಂದಲೂ ಅವರ ಬೇಕುಗಳನ್ನು ಪೂರೈಸುವ ಉದ್ದೇಶದಿಂದ 190 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುನಿಸೆಫ್​ನ ಕಾರ್ಯ ಚಟುವಟಿಕೆಗಳ ಸಮರ್ಪಕ ಅನುಷ್ಠಾನದಲ್ಲಿ ನಾವೆಲ್ಲರೂ ನಮ್ಮ ಜವಾಬ್ದಾರಿಯನ್ನು ಮೆರೆಯುವುದರ ಮೂಲಕ ಯುನಿಸೆಫ್​ನ ಉದ್ದೇಶಗಳನ್ನು ಸಾಕಾರಗೊಳಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net