ಪ್ರಿಗೋಝಿನ್ ಕಲ್ಲಿನಿಂದ ಪೂತಿನ್ ಕೆಡವಿದ್ದೆಷ್ಟು ಹಕ್ಕಿಗಳು?

Wagonr
Published on
ಜಗತ್ತಿನ ಕಣ್ಣಿಗೆ ಮಣ್ಣೆರಚಿ ಜಗತ್ತಿನಾದ್ಯಂತ ತನ್ನ ಕುಕೃತ್ಯಗಳನ್ನು ಸಾಗಿಸಲು ಹೊಸ ಶತಮಾನದ ಆರಂಭದ ಹಿಂದುಮುಂದಿನ ವರ್ಷಗಳಲ್ಲಿ ಅಮೆರಿಕಾ ತನ್ನಲ್ಲಿ ತಲೆಯೆತ್ತಲು ಅವಕಾಶ ಮಾಡಿಕೊಟ್ಟದ್ದು, ಸಾಕಿದ್ದು, ಬಳಸಿದ್ದು ಕನಿಷ್ಟ ಹದಿನಾರು ಕೂಲಿ ಸೇನೆಗಳು. ಅದಕ್ಕಾಗಿ 1994ರಿಂದ 2007ರ ನಡುವಿನ ಕಾಲದಲ್ಲಿ ವಾಷಿಂಗ್​ಟನ್ ಸುರಿದದ್ದು ಕನಿಷ್ಟ 300 ಬಿಲಿಯನ್ ಡಾಲರ್​ಗಳು! ಈ ಅಮೆರಿಕನ್ ಕೂಲಿ ಸೇನೆಗಳಲ್ಲಿ ಪ್ರಮುಖವಾದುದು ಬ್ಲ್ಯಾಕ್ ವಾಟರ್ಸ್. 1997ರಲ್ಲಿ ಸ್ಥಾಪಿತವಾಗಿ ಮುಂದಿನ ಆರು ವರ್ಷಗಳವರೆಗೆ ಅಲ್ಲಲ್ಲಿ ಸಣ್ಣಪುಟ್ಟ ಕಾರ್ಯಾಚರಣೆಗಳಲ್ಲಿ ತೊಡಗಿದ್ದ ಅದಕ್ಕೆ ದೊಡ್ಡ ಕಾಂಟ್ರ್ಯಾಕ್ ಸಿಕ್ಕಿದ್ದು ಇರಾಕ್​ನಲ್ಲಿ. 2003ರಲ್ಲೇ ಅಲ್ಲಿಗೆ ಅಮೆರಿಕನ್ ಸೇನೆಯೊಂದಿಗೆ ಕಾಲಿಟ್ಟ ಸುಮಾರು 2,500 ಬ್ಲಾ್ಯಕ್ ವಾಟರ್ಸ್ ಕೂಲಿ ಸೈನಿಕರಿಗೆ ಸಿಕ್ಕಿದ ಜವಾಬ್ದಾರಿ ಕ್ಯಾಮೆರಾ ಕಣ್ಣಿಗೆ ಕಾಣುವ ಹಾಗೆ ಅಮೆರಿಕನ್ ಸೇನೆ ಮಾಡಲಾಗದ ಕೃತ್ಯಗಳನ್ನು ಸದ್ದಿಲ್ಲದೇ ಮಾಡಿಬಿಡುವಂತಹದ್ದು ಮತ್ತು ಅದಕ್ಕಾಗಿ ಆ ವರ್ಷ ಅವರು ಪಡೆದುಕೊಂಡ ಮೊತ್ತ 21 ಮಿಲಿಯನ್ ಡಾಲರ್​ಗಳು.

ಹೊಟ್ಟೆಪಾಡಿಗಾಗಿ ಕೆಟ್ಟ ಕೆಲಸ ಮಾಡುವುದೆಷ್ಟು ಲಾಭದಾಯಕ! ಮರುವರ್ಷದ ಹೊತ್ತಿಗೆ ಬ್ಲಾ್ಯಕ್ ವಾಟರ್ಸ್ ಸೇರಿದಂತೆ ವಿವಿಧ ಅಮೆರಿಕನ್ ಕೂಲಿ ಸೇನೆಗಳ ಒಂದು ಲಕ್ಷ ಕೂಲಿ ಸೈನಿಕರು ಇರಾಕ್​ನಲ್ಲಿದ್ದರು. ಮುಂದಿನ ಮೂರೇ ವರ್ಷಗಳಲ್ಲಿ ಅದೆಷ್ಟು ಹೆಚ್ಚಿತೆಂದರೆ 2007ರಲ್ಲಿ ಕೇವಲ ಬ್ಲಾ್ಯಕ್ ವಾಟರ್ಸ್​ನದೇ 1,60,000 ಕೂಲಿ ಸೈನಿಕರು ಇರಾಕ್​ನಲ್ಲಿದ್ದರು. ಇದು ಅಲ್ಲಿದ್ದ ಅಧಿಕೃತ ಅಮೆರಿಕನ್ ಸೈನಿಕರ ಸಂಖ್ಯೆಗೆ ಸರಿಸಮನಾಗಿತ್ತು! ಆ ವರ್ಷ ಬ್ಲಾ್ಯಕ್ ವಾಟರ್ಸ್​ಗೆ ಸಿಕ್ಕಿದ ಕಾಂಟ್ರ್ಯಾಕ್ಟ್​ನ ಮೊತ್ತ ಬರೋಬ್ಬರಿ ಒಂದು ಬಿಲಿಯನ್ ಡಾಲರ್​ಗಳು! ಅದಕ್ಕಿದ್ದ ಜವಾಬ್ದಾರಿ ಇರಾಕ್​ನಲ್ಲಿದ್ದ ಪ್ರಮುಖ ಅಮೆರಿಕನ್ ವ್ಯಕ್ತಿಗಳ, ಕಚೇರಿಗಳ, ಶಸ್ತ್ರಾಸ್ತ್ರ ಸಂಗ್ರಹಗಳ, ಆರ್ಥಿಕ ಹಿತಾಸಕ್ತಿಗಳ ರಕ್ಷಣೆ. ಇದು ಎಲ್ಲರಿಗೂ ಕಾಣುವಂತಹ ಕೆಲಸ ಬಿಡಿ. ಕಾಣದಂತಹವು ಅತ್ಯಾಚಾರ, ಹಲ್ಲೆ, ಹತ್ಯೆ, ದೈಹಿಕ ಹಾಗೂ ಮಾನಸಿಕ ಪೀಡನೆ, ಅನಧಿಕೃತ ಬಂಧನ ಇತ್ಯಾದಿ. ತಾವಿಲ್ಲದೇ ಇರಾಕ್​ನಲ್ಲಿ ಅಮೆರಿಕನ್ ಸೇನೆ ಏನೂ ಮಾಡಲಾಗದು ಎಂದು ತಿಳಿದ ಈ ಕೂಲಿ ಸೈನಿಕರು ತಮ್ಮ ಕೆಟ್ಟ ಕೆಲಸಗಳನ್ನು ಸಾರ್ವಜನಿಕವಾಗಿಯೇ ಮಾಡತೊಡಗುವಷ್ಟು ಹದ್ದುಮೀರಿದರು. ಆಗ ನಡೆದದ್ದೇ ನಡುರಸ್ತೆಯಲ್ಲಿ ನಡೆದ ಹದಿನೇಳು ಅಮಾಯಕ ಇರಾಕಿಗಳ ಬರ್ಬರ ಹತ್ಯೆ. ನಿಸ್ಸೂರ್ ಚೌಕದ ಹತ್ಯಾಕಾಂಡ ಎಂದು ಕುಖ್ಯಾತವಾಗಿರುವ ಈ ಪ್ರಕರಣ ಮಾಧ್ಯಮಗಳ ಮೂಲಕ ಬಿತ್ತರವಾದ್ದೇ ಅಮೆರಿಕಾದಲ್ಲೇ ಆಕ್ರೋಶ ಮೂಡಿತು. ಪರಿಣಾಮವಾಗಿ ವಿದೇಶಾಂಗ ಇಲಾಖೆ ಒಂದು ತನಿಖಾ ತಂಡವನ್ನು ಇರಾಕ್​ಗೆ ಕಳುಹಿಸಿತು. ಆಮೇಲೆ ಆದ್ದದೇನು?

ಕೂಲಿ ಸೈನಿಕರು ತನಿಖಾಧಿಕಾರಿಗಳಲ್ಲೊಬ್ಬರ ಮೇಲೇ ಬಂದೂಕು ಎತ್ತಿದರು! ಬ್ಲಾ್ಯಕ್ ವಾಟರ್ಸ್​ಗೆ ಬೇಸರ ಮಾಡುವುದು ತಮಗೇ ಅಪಾಯಕಾರಿ ಎಂದು ತಿಳಿದ ಅಮೆರಿಕನ್ ಸರ್ಕಾರ ತನಿಖಾಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತು. ಆದರೆ ಜಗತ್ತಿಗೆ ಏನಾದರೂ ತೋರಿಸಬೇಕಿತ್ತಲ್ಲ, ಏನೋ ತನಿಖೆ ಮಾಡಿ ನಾಲ್ವರಿಗೆ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ದಶಕದ ನಂತರ ಅವರ ಬಿಡುಗಡೆಯೂ ಆಯಿತು. ಅದೇ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲೂ ಅಮೆರಿಕಾ ಕೂಲಿ ಸೈನಿಕರನ್ನು ವ್ಯಾಪಕವಾಗಿ ಬಳಸಿತು. ಅದೀಗ ಸಿರಿಯಾದಲ್ಲಿ ಒಂದು ದಶಕದಿಂದಲೂ ನಡೆಯುತ್ತಿದೆ. ಅಮೆರಿಕಾಗೆ ಹೋಲಿಸಿದರೆ ರಶಿಯಾದ ಕೂಲಿ ಸೈನಿಕರ ಇತಿಹಾಸ ಹಾಗೂ ಗಾತ್ರ ಚಿಕ್ಕದೇ. ಆದರೆ ಪಾತ್ರದ ಬಗ್ಗೆ ಹೀಗೆ ಹೇಳಲಾಗುವುದಿಲ್ಲ. ಶೀತಲ ಸಮರಾನಂತರ ಅಮೆರಿಕಾ ಕೂಲಿ ಸೈನಿಕರನ್ನು ಬಳಸಿ ಭದ್ರತೆಯನ್ನೂ ಖಾಸಗೀಕರಣಗೊಳಿಸಿದರೆ ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿದ್ದ ರಶಿಯಾಗೆ ಅದು ಸಾಧ್ಯವಿರಲಿಲ್ಲ. ಅಧಿಕೃತ ಸೇನೆಯನ್ನೇ ಸರಿಯಾಗಿಟ್ಟುಕೊಳ್ಳಲು ಹಣವಿಲ್ಲದಾಗ ಕೂಲಿ ಸೈನಿಕರನ್ನು ಸಾಕುವುದು ಮಾಸ್ಕೋಗೆ ಸಾಧ್ಯವೇ ಇರಲಿಲ್ಲ. ಹೊಟ್ಟೆಗೇ ಹಿಟ್ಟಿಲ್ಲದಾಗ ಜುಟ್ಟಿಗೆ ಮಲ್ಲಿಗೆ ಕಟ್ಟಿಕೊಳ್ಳಲು ರಶಿಯನ್ ನಾಯಕರು ಸಹಜವಾಗಿಯೇ ಬಯಸಲಿಲ್ಲ. ನಿಜ ಹೇಳಬೇಕೆಂದರೆ ಆ ದಿನಗಳಲ್ಲಿ ರಶಿಯಾವನ್ನು ಕಾಪಾಡಿದ್ದೇ ಅದರ ಬೃಹತ್ ಅಣ್ವಸ್ತ್ರ ಸಂಗ್ರಹ. ಅದರ ಭಯ ಇಲ್ಲದಿದ್ದರೆ ಅಮೆರಿಕಾ ಇರಲಿ, ಸುತ್ತಲಿನ ಚೀನಾ, ಯೂಕ್ರೇನ್, ಜಾರ್ಜಿಯಾ, ಲಿಥುವೇನಿಯಾ, ಫಿನ್​ಲ್ಯಾಂಡ್​ಗಳೂ ರಶಿಯಾವನ್ನು ಹರಿದು ಹಂಚಿಕೊಂಡುಬಿಡುತ್ತಿದ್ದವು; ಚೆಚೆನ್ಯಾದಲ್ಲೊಂದು ಮುಸ್ಲಿಂ ರಾಷ್ಟ ತಲೆಯೆತ್ತಿರುತ್ತಿತ್ತು. ಮಹತ್ವಾಕಾಂಕ್ಷಿ ಅಧ್ಯಕ್ಷ ವ್ಲಾದಿಮೀರ್ ಪೂತಿನ್​ರ ದುಸ್ಸಾಹಸ ಎನ್ನಬಹುದಾಗ ಸಾಹಸ ಪ್ರವೃತ್ತಿಗೆ ಇಂಬುಗೊಟ್ಟದ್ದು ಹೊಸ ಶತಮಾನದ ಆರಂಭದ ದಶಕದಲ್ಲಿ ನಾರ್ಡ್ ಸ್ಟ್ರೀಮ್ ಅನಿಲ ಕೊಳವೆಗಳು ತರತೊಡಗಿದ ಹೇರಳ ಡಾಲರ್​ಗಳು. ರಶಿಯಾದ ತೈಲ ಮತ್ತು ಅನಿಲದ ಮೇಲೆ ಅವಲಂಬಿತವಾಗಿ ಹೋದ ಯೂರೋಪ್ ಮಖ್ಯವಾಗಿ ಜರ್ಮನಿ ಪೂತಿನ್​ರ ಬೊಕ್ಕಸಕ್ಕೆ ದಿನವೊಂದಕ್ಕೇ ಹತ್ತಿರಹತ್ತಿರ ಒಂದು ಬಿಲಿಯನ್​ಗಟ್ಟಲೆ ಡಾಲರ್​ಗಳನ್ನು ತಂದು ಸುರಿಯತೊಡಗಿದಾಗ ಈ ಚಾಣಾಕ್ಷ ಅಧ್ಯಕ್ಷ ಸೇನೆಯನ್ನು ಬಲಪಡಿಸಿ ಅದರೊಂದಿಗೆ ಕೂಲಿ ಸೇನೆಗಳನ್ನೂ ಸೃಷ್ಟಿಸಿ ವರ್ಷವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಯೋಜನೆ ರೂಪಿಸಿದರು. ವಿದ್ರೋಹದ ನೆಲೆಯಾಗಿದ್ದ ಚೆಚೆನ್ಯಾ ಮಾತು ಕೇಳುವ ವಿಧೇಯ ಬಾಲಕನಾದದ್ದಷ್ಟೇ ಅಲ್ಲ, ರಶಿಯಾದ ಪರವಾಗಿ ನಿಲ್ಲುವ ರಂಜಾನ್ ಕದಿರೋವ್ ಸಹಾ ಅಲ್ಲಿ ಅವತರಿಸಿದ. ಅದರಾಚೆ ತಂಟೆ ತೆಗೆಯಲು ತಯಾರಿ ನಡೆಸುತ್ತಿದ್ದ ಜಾರ್ಚಿಯಾದ ರೆಕ್ಕೆಪುಕ್ಕಗಳನ್ನು ಪೂತಿನ್ ನಿರ್ದಾಕ್ಷಿಣ್ಯವಾಗಿ ಕತ್ತರಿಸಿಹಾಕಿದರು. ಪರಿಣಾಮವಾಗಿ ಆ ಕಾಕಸಸ್ ದೇಶ ನ್ಯಾಟೋ ಸೇರುವ ತನ್ನ ಬಯಕೆಯನ್ನು ಶಾಶ್ವತವಾಗಿ ಮರೆಯಬೇಕಾಯಿತು.

ಅದನ್ನು ತಮ್ಮಡೆ ಸೆಳೆದುಕೊಂಡು ರಶಿಯಾದ ಮೃದು ಹೊಟ್ಟೆಯ ಕೆಳಗೆ ಸಣ್ಣಗೆ ಕತ್ತರಿಯಾಡಿಸುವ ಕನಸು ಕಂಡಿದ್ದ ನ್ಯಾಟೋ ಸಹಾ ಸತ್ತೆನೋ ಕೆಟ್ಟೆನೋ ಅಂತ ಕಾಕಸಸ್ ಪ್ರದೇಶದಿಂದಲೇ ಓಡಿಹೋಯಿತು. ಜಾರ್ಜಿಯಾ ಕಲಿತಷ್ಟು ಬದುಕುವ ಕಲೆಯನ್ನು ಕಲಿಯದ ಯೂಕ್ರೇನ್ ಮೆಲ್ಲಗೆ ಬಾಲ ಬಿಚ್ಚತೊಡಗಿದಾಗ ಆಯಕಟ್ಟಿನ ಕ್ರಿಮಿಯಾ ಪರ್ಯಾಯ ದ್ವೀಪವನ್ನು ಪೂತಿನ್ ಯಶಸ್ವಿಯಾಗಿ ಆಕ್ರಮಿಸಿಕೊಂಡರು. ನ್ಯಾಟೋ ಸೇರಹೋದರೆ ಯೂಕ್ರೇನ್ ಮುಂದೆ ಬಿಚ್ಚಿಕೊಳ್ಳಬಹುದಾದ ಚಲನಚಿತ್ರದ ಟ್ರೇಲರ್ ಅದಾಗಿತ್ತು.

ಚೆಚೆನ್ಯಾ, ಜಾರ್ಜಿಯಾ, ಕ್ರಿಮಿಯಾಗಳಲ್ಲಿನ ಯುಶಸ್ಸು ಪೂತಿನ್​ರ ಗಮನವನ್ನು ಯೂರೋಪ್​ನಾಚೆಗೆ ಕೊಂಡೊಯ್ದಿತ್ತು. ಜತೆಗೆ ಶೀತಲಸಮರ ಕಾಲದಿಂದಲೂ ತನ್ನ ಘನಿಷ್ಟ ಮಿತ್ರನಾಗಿದ್ದ ಸಿರಿಯಾದ ಅಧ್ಯಕ್ಷ ಬಷರ್- ಅಲ್-ಅಸದ್​ರನ್ನು ಬರಾಕ್ ಒಬಾಮಾ ಛೂ ಬಿಟ್ಟಿದ್ದ ಇಸ್ಲಾಮಿಕ್ ಮೂಲಭೂತವಾದಿಗಳಿಂದ ರಕ್ಷಿಸುವುದು ಮಾಸ್ಕೋಗೆ ಅಗತ್ಯವಾಗಿತ್ತು. ಮಾಸ್ಕೋ ನಂಬಿಗಸ್ತ ಮಿತ್ರ, ಅಮೆರಿಕಾದಂತೆ ನಡುನೀರಿನಲ್ಲಿ ಕೈಬಿಟ್ಟು ಓಡಿಹೋಗುವ ವಿಶ್ವಾಸದ್ರೋಹಿ ಅಲ್ಲ ಎಂದು ಜಗತ್ತಿಗೆ ಮನಗಾಣಿಸಲೂ ಸಹ ಪೂತಿನ್​ರಿಗೆ ಸಿರಿಯಾ ಒಂದು ಪ್ರಯೋಗಶಾಲೆಯಾಗಬೇಕಿತ್ತು. ಆದರೆ ಅದಕ್ಕಾಗಿ ಅವರಿಗೆ ಬೇಕಾಗಿದ್ದದ್ದು ಕೆಟ್ಟ ಕೆಲಸಗಳನ್ನು ತಣ್ಣಗೆ ಮಾಡಿ ಮುಗಿಸುವ ತಮ್ಮದೇ ಒಂದು ಬ್ಲಾ್ಯಕ್ ವಾಟರ್ಸ್! 2014ರಲ್ಲಿ ವ್ಯಾಗ್ನರ್ ಗ್ರೂಪ್ ಹುಟ್ಟಿಕೊಂಡದ್ದು ಹೀಗೆ.

ಹುಟ್ಟೂರು ಸೈಂಟ್ ಪೀಟರ್ಸ್​ಬರ್ಗ್​ನಲ್ಲಿ ಮಹಿಳೆಯೊಬ್ಬರ ಆಭರಣಗಳನ್ನು ದೋಚಿ ಜೈಲು ಸೇರುವ ಮೂಲಕ ಹದಿನೆಂಟಕ್ಕೆ ಮೆಜಾರಿಟಿಗೆ ಬಂದ ಯೆವ್ಗೆನಿ ಪ್ರಿಗೋಝಿನ್ ಹತ್ತು ವರ್ಷಗಳ ನಂತರ ಹೊರಗಿನ ಬೆಳಕು ಕಂಡು, ರುಚಿರುಚಿ ಹಾಟ್ ಡಾಗ್ಸ್ ಮಾರುವ ಮೂಲಕ ಬದುಕಿನಲ್ಲೂ ಬೆಳಕು ಕಂಡುಕೊಂಡು, ಆ ಹೊಸ ಬೆಳಕಿನಲ್ಲಿ ಜಗಮಗಿಸುವ ರೆಸ್ಟೊರೆಂಟ್ ಮಾಲೀಕನಾಗಿ ತನ್ನನ್ನು ಜಗತ್ತಿಗೆ ತೋರಿಸಿಕೊಳ್ಳತೊಡಗಿದ ದಿನಗಳಲ್ಲೇ ವ್ಲಾದಿಮೀರ್ ಪೂತಿನ್ ಕೆಜಿಬಿ ಸಂಸ್ಥೆಯ ಗುಪ್ತಚರ ಅಧಿಕಾರಿಯ ಸ್ಥಾನವನ್ನು ತೊರೆದು ಅದೇ ಮಹಾನಗರದ ಮೇಯರ್ ಆಗುವ ಮೂಲಕ ರಶಿಯಾ ರಾಜಕೀಯ ಆಗಸದಲ್ಲಿ ಹೊಚ್ಚಹೊಸ ತಾರೆಯಾಗಿ ಮಿನುಗತೊಡಗಿದ್ದರು. ಪ್ರಿಗೋಝಿನ್​ರ ಪಾಕ ಪ್ರಾವೀಣ್ಯತೆ ಪೂತಿನ್​ರನ್ನು ಪೂರ್ತಿಯಾಗಿ ಸೆಳೆಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಪರಿಣಾಮವಾಗಿ ಸೈಂಟ್ ಪೀಟರ್ಗ್ ನಗರದ ಸರ್ಕಾರಿ ಕಾರ್ಯಕ್ರಮಗಳಿಗೆ ತಿಂಡಿ ಒದಗಿಸಲಾರಂಭಿಸಿದ ಪ್ರಿಗೋಝಿನ್ ಮುಂದೆ ಪೂತಿನ್ ರಶಿಯಾದ ಅಧ್ಯಕ್ಷರಾಗಿ ಮಾಸ್ಕೋಗೆ ತೆರಳಿದ ನಂತರ ಅವರ ಬಾಲಂಗೋಚಿಯಾಗಿ ಅಲ್ಲಿಗೂ ನಡೆದರು. ಹೇಳಿಕೇಳಿ ಬೃಹತ್ ಮಾಸ್ಕೋ ಬೃಹತ್ ರಶಿಯಾದ ರಾಜಧಾನಿ. ಪ್ರಿಗೋಝಿನ್​ಗೆ ಸಿಕ್ಕಿದ್ದೂ ಬೃಹತ್ ಅವಕಾಶಗಳೇ. ಪೂತಿನ್​ರ ಪ್ರೀತಿಯ ಅಡಿಗೆಯವ ಎನ್ನುವ ಗೌರವವೇನು ಸಾಮನ್ಯವೇ! ಆ ಸ್ನೇಹ ಅದೆಷ್ಟು ಘನಿಷ್ಟವಾಗುತ್ತಾ ಸಾಗಿತೆಂದರೆ ತಮ್ಮ ರುಚಿಗೊಪ್ಪುವ ಅಡುಗೆ ಮಾಡಿ ಬಡಿಸಲೂ ಪ್ರಿಗೋಝಿನ್ ಅವರೇ ಸರಿಯಾದ ವ್ಯಕ್ತಿ ಎಂದು ಪೂತಿನ್ ಬಗೆದರು. ಪರಿಣಾಮವಾಗಿ ಪ್ರಿಗೋಝಿನ್ 2014ರಲ್ಲಿ ಪೂತಿನ್​ರ ಕೃಪಾಕಟಾಕ್ಷದಲ್ಲಿ ವ್ಯಾಗ್ನರ್ ಗ್ರೂಪ್ ಕೂಲಿ ಸೇನೆಯನ್ನು ಕಟ್ಟಿದರು. ಮೊದಲಿಗೆ ಸಿರಿಯಾ ಮತ್ತು ಯೂಕ್ರೇನ್​ನ ರಶಿಯನ್ ಬಹುಸಂಖ್ಯಾತ ಕ್ರಿಮಿಯಾ ಹಾಗೂ ದಾನ್​ಬಾಸ್ ಪ್ರದೇಶಗಳಲ್ಲಿ ತೆರೆಯ ಹಿಂದೆ ಆರಂಭವಾದ ಈ ಅಡುಗೆಯ ಪರಿಮಳ ಜಗತ್ತಿನ ಮೂಗಿಗೆ ಅಡರತೊಡಗಿದ್ದು ಆಫ್ರಿಕಾದಲ್ಲಿ.

ರಾಜಕೀಯ ಅಸ್ಥಿರತೆಗೆ ಹೆಸರಾದ ಪಶ್ಚಿಮ ಮತ್ತು ಉತ್ತರ ಆಫ್ರಿಕಾದ ದೇಶಗಳಲ್ಲಿ ಅಶಕ್ತ ಸರ್ಕಾರಗಳಿಗೆ ರಕ್ಷಣೆ ಒದಗಿಸಿ ಅವು ಮಾಸ್ಕೋ ಪರವಾದ ದಾಳಗಳಾಗುವಂತೆ ಮಾಡುವುದು ರಾಜತಾಂತ್ರಿಕವಾಗಷ್ಟೇ ಅಲ್ಲ, ಆರ್ಥಿಕವಾಗಿಯೂ ಲಾಭಕರ ಎಂದೆಣಿಸಿದ ಪೂತಿನ್ ಕಣ್ಣು ಮಿಟುಕಿಸಿದ್ದೇ ಪ್ರಿಗೋಝೀನ್ ತಮ್ಮ ಸುಮಾರು 45,000 ಕೂಲಿ ಸೈನಿಕ ಪಡೆಯ ದೊಡ್ಡ ಭಾಗವನ್ನು ಆ ಮರಳುಗಾಡಿಗೆ ರವಾನಿಸಿದರು. ರಾಜಕೀಯ ವಿರೋಧಿಗಳು ಒಡ್ಡುವ ಅಪಾಯದ ವಿರುದ್ಧ ವ್ಯಾಗ್ನರ್ ಗ್ರೂಪ್ ಒದಗಿಸುವ ರಕ್ಷಣೆಗೆ ಅಲ್ಲಿನ ಸರ್ಕಾರಗಳು ಹೇರಳ ಹಣ ತೆರುತ್ತವೆ. ಅದು ಪ್ರಿಗೋಝಿನ್​ಗೂ ಲಾಭಕರ, ಅವರ ಮೂಲಕ ರಶಿಯಾಗೆ ದಕ್ಕುವ ಮರ್ಯಾದೆ ಪುತಿನ್​ರ ಹಮ್ಮಿಗೂ ಲಾಭಕರ. ಮಧ್ಯ ಆಫ್ರಿಕಾ, ನೈಜರ್, ಮಾಲಿ, ರ್ಬುನಾ ಫಾಸೋ, ಮಾರಿಟಾನಿಯಾ ದೇಶಗಳ ಸರ್ಕಾರಗಳು ಜೀವ ಉಳಿಸಿಕೊಂಡಿರುವುದೇ ಹೀಗೆ ಮತ್ತು ವ್ಯಾಗ್ನರ್ ಗ್ರೂಪ್ ಹೇರಳ ಹಣ ಗಳಿಸತೊಡಗಿದ್ದೂ ಇದರಿಂದಾಗಿಯೇ. ಸಿರಿಯಾ ಕಥೆ ಕೇಳುವುದೇ ಬೇಡ. ಅದು ಪ್ರಿಗೋಝಿನ್​ಗೆ ಎರಡನೆಯ ಮನೆ ಇದ್ದಹಾಗೆ.

ವ್ಯಾಗ್ನರ್ ಗ್ರೂಪ್ ಕೂಲಿ ಸೇನೆಗೆ ಮನೆಗೆ ಹತ್ತಿರದಲ್ಲೇ ನೌಕರಿ ದೊರೆತದ್ದು ಕಳೆದ ವರ್ಷದ ಫೆಬ್ರವರಿಯಲ್ಲಿ ಯೂಕ್ರೇನ್ ಮೇಲೆ ರಶಿಯಾ ದಾಳಿ ಮಾಡಿದಾಗ. ಪೂರ್ವದ ದಾನ್​ಬಾಸ್ ಪ್ರದೇಶವನ್ನು ರಶಿಯಾದ ಹಿಡಿತಕ್ಕೆ ತಂದದ್ದೇ ವ್ಯಾಗ್ನರ್ ಗ್ರೂಪ್. ಅಂತಹ ಕಾರ್ಯಾಚರಣೆಗಳ ಅನುಭವ ಅದಕ್ಕೆ ಸಿರಿಯಾ ಮತ್ತು ಲಿಬಿಯಾಗಳಲ್ಲಿ ಅದಕ್ಕೆ ಸಾಕಷ್ಟು ಸಿಕ್ಕಿದೆ. ಇದರಿಂದಾಗಿಯೇ ಯೂಕ್ರೇನ್​ನಲ್ಲಿ ವ್ಯಾಗ್ನರ್ ಗ್ರೂಪ್​ನ ಕಾರ್ಯಾಚರಣೆಯೇ ತಮ್ಮ ಯೋಜನೆಗಳಿಗೆಗೆ ಕಲ್ಲು ಹಾಕುತ್ತಿರುವುದು, ರಶಿಯನ್ ಸೇನೆಯನ್ನು ಹೆಚ್ಚಿನ ಪ್ರಾಣಾಪಾಯದಿಂದ ತಪ್ಪಿಸುತ್ತಿರುವುದು ಎಂದು ಅಮೆರಿಕಾ ಅರಿತದ್ದು ಕಳೆದ ಸೆಪ್ಟೆಂಬರ್ ನಂತರ, ಪ್ರಿಗೋಝಿನ್ ರಶಿಯನ್ ಖೈದಿಗಳನ್ನು ತನ್ನ ಪಡೆಗೆ ಸೇರಿಸಿಕೊಳ್ಳುತ್ತಿರುವುದು ಬಯಲಾದಾಗ. ಜೂನ್ 24ರ ನಾಟಕೀಯ ಘಟನೆಗಳಿಗೆ ಅದು ಮೂಲ.

ಯೂಕ್ರೇನ್​ನಲ್ಲಿ ತಾವಿನ್ನು ಸೆಣಸುವುದಿಲ್ಲ, ತಾವು ನೇರ ಮಾಸ್ಕೋಗೆ ನುಗ್ಗಿ ಪೂತಿನ್​ರನ್ನು ಪದಚ್ಯುತಗೊಳಿಸುವುದಾಗಿ ಅಂದು ಹೇಳಿ ಬೆಳಗಿನ ಜಾವ ಪ್ರಿಗೋಝಿನ್ ಘೊಷಿಸಿ ಅದರಂತೇ ಮಾಡುತ್ತಿರುವಂತೆ ಕಂಡಾಗ ಇಡೀ ಜಗತ್ತು ಧಿಗ್ಗನೆದ್ದು ಕೂತು ನಿಮಿಷ ನಿಮಿಷದ ರೋಚಕ ಸುದ್ದಿಗಳಿಗಾಗಿ ಕಾಯತೊಡಗಿತು. ಪ್ರಿಗೋಝಿನ್ ಹೇಳಿದ್ದನ್ನು ನಂಬದಿರಲು ಕಾರಣವೇ ಇರಲಿಲ್ಲ. ಎರಡು ತಿಂಗಳ ಹಿಂದೆಯೇ ಆತ ರಶಿಯಾದ ರಕ್ಷಣಾ ಮಂತ್ರಿ ಸೆರ್ಗೆಯಿ ಶೋಯ್ಗು ಅವರನ್ನು ಏರ್​ಕಂಡೀಷನ್ಡ್ ಕೋಣೆಯಲ್ಲಿ ಕೂತ ಕೊಬ್ಬಿದ ಕೊತ್ತಿ ಎಂದು ಜರೆದು ಆತ ತನಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿಲ್ಲ, ಅದರಿಂದಾಗಿ ತನ್ನ ಸೈನಿಕರು ಹೆಚ್ದಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ, ಹೀಗಾಗಿ ವ್ಯಾಗ್ನರ್ ಸೇನೆಯನ್ನು ತಾನು ಯುದ್ಧರಂಗದಿಂದ ಹೊರ ಗೊಯ್ಯುವುದಾಗಿ ಒಂದಕ್ಕಿಂತ ಹೆಚ್ಚು ಬಾರಿ ಸಿಟ್ಟಿನಿಂದ ಹೇಳಿದ್ದ. ಜೂನ್ 24ರ ಬೆಳಿಗ್ಗೆ ರಶಿಯನ್ ಸೇನೆಯ ದಕ್ಷಿಣದ ಮುಖ್ಯಾಲಯವನ್ನು ಒಂದೂ ಗುಂಡು ಹಾರಿಸದೇ ವಶಪಡಿಸಿಕೊಂಡಿದ್ದ, ಸಂಜೆಯ ಹೊತ್ತಿಗೆ 2,500 ಸೈನಿಕರೊಂದಿಗೆ ಮಾಸ್ಕೋ ನಗರಕ್ಕೆ ಇನ್ನೂರು ಕಿಲೋಮೀಟರ್ ಸಮೀಪ ಬಂದುಬಿಟ್ಟಿದ್ದ. ಇಷ್ಟಾಗಿಯೂ, ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಪ್ರಿಗೋಝಿನ್ ಮತ್ತು ಪೂತಿನ್ ಒಟ್ಟಿಗೆ ಸೇರಿ ಆಡುತ್ತಿರುವ ನಾಟಕ ಎನ್ನುವ ಸೂಚನೆ ಧಾರಾಳವಾಗಿಯೇ ಕಾಣುತ್ತಿತ್ತು. ಪ್ರಶ್ನೆಯಿದ್ದದ್ದು ಆ ನಾಟಕ ಯಾಕಾಗಿ ಎನ್ನುವುದು ಮಾತ್ರ. ಅದಕ್ಕೆ ಈಗ ಉತ್ತರಗಳು ಅನಾವರಣಗೊಳ್ಳುತ್ತಿವೆ. ಅವು ಯೂಕ್ರೇನ್​ನಲ್ಲಿ ವ್ಯಾಗ್ನರ್ ಗ್ರೂಪ್​ನ ಕೆಲಸ ಮುಗಿದಿದೆ, ಅದು ಹೊಸ ರಣರಂಗಕ್ಕೆ ತೆರಳಬೇಕಿದೆ, ಆ ಹೊಸ ತಾಣ ಪೋಲ್ಯಾಂಡ್, ಜತೆಗೆ ಆ ದೇಶ ಮತ್ತು ಲಿಥುವೇನಿಯಾವನ್ನು ಸಂರ್ಪಸುವ ಸುವಾಲ್ಕಿ ಕಾರಿಡಾರ್, ಅಲ್ಲಿಗೆ ವ್ಯಾಗ್ನರ್ ಗ್ರೂಪ್ ತಲುಪಬೇಕಾದ್ದು ಯುರೋಪ್ ಮತ್ತು ಅಮೆರಿಕಾದ ಕಣ್ಣಿಗೆ ಮಣ್ಣೆರಚಿ ಎಂದು! ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಕೆಡವಹೊರಟ ಪೂತಿನ್-ಪ್ರಿಗೋಝಿನ್ ಕಾರಸ್ಥಾನದ ವಿಶ್ಲೇಷಣೆ ಮುಂದಿನವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net