

| ಡ್ಯಾನಿ ಪಿರೇರಾ ಹಳ್ಳಿಮೈಸೂರು
ಅಧಿಕಾರವೆಂಬುದು ಕೆಲವರಿಗೆ ದರ್ಪ ಪ್ರದರ್ಶನದ ನಡೆ. ಮತ್ತೊಂದಷ್ಟು ಜನರಿಗೆ ಹತ್ತಾರು ತಲೆಮಾರಿಗೆ ಕೂಡಿಡುವ ಕುಬೇರನ ಖಜಾನೆ. ಆದರೆ ಜನಾನುರಾಗಿ ಸಜ್ಜನರಿಗೆ ಅದು ನೊಂದವರ, ದೀನದಲಿತರ ಕಣ್ಣೀರೊರೆಸಲು ಆ ವಿಧಾತ ಕರುಣಿಸಿದ ಸುಯೋಗ. ಹಾಗಿದ್ದವರು ಅಧಿಕಾರವಿದ್ದರೂ ಅದಕ್ಕೆ ಅಂಟಿಕೊಳ್ಳದೆ ಅದೊಂದು ಸಾವಿನಂತೆ ಕರೆಯದೇ ಬರುವ ಅತಿಥಿ ಎಂದು ಭಾವಿಸಿ ನಿರ್ಲಿಪ್ತ ಭಾವ ತೋರುತ್ತಾರೆ.
ಚರಿತ್ರೆಯಲ್ಲಿ ಶಿವಾಜಿ ಮಹಾರಾಜರ ನಡೆಯೂ ಇದಕ್ಕೆ ಮಾದರಿ. ತಾಯಿ ಕೊಟ್ಟ ಸಂಸ್ಕಾರ, ಗುರುಗಳ ಮಾರ್ಗದರ್ಶನ ಶಿವಾಜಿಯನ್ನು ಒಬ್ಬ ಆದರ್ಶಮೇರು ರಾಜನನ್ನಾಗಿಸಿತ್ತು. ಅದೊಂದು ದಿನ ಶಿವಾಜಿ ರಾಜಸಭೆಯಲ್ಲಿ ಕಾರ್ಯಭಾರ ಮಾಡುತ್ತಿದ್ದಾಗ ಹೊರಗೆ ‘ಭವತಿ ಭಿಕ್ಷಾಂ ದೇಹಿ’ ಎನ್ನುವ ಧ್ವನಿ ಕೇಳಿಸಿತು. ಅದು ಗುರುಗಳಾದ ಸಮರ್ಥ ರಾಮದಾಸರದ್ದು ಎಂದು ತಿಳಿದೊಡನೆ, ಅವರನ್ನು ಗೌರವದಿಂದ ಬರಮಾಡಿಕೊಂಡು, ಅನ್ನಗ್ರಹಣ ಮಾಡಿಸಿದ. ಮಹಾರಾಜರು ಗುರುಗಳಿಗೆ ರಾಜಭೋಜನ ಮಾಡಿಸಿ ಗುರುಕಾಣಿಕೆ ಸಮರ್ಪಿಸುತ್ತಾರೆ ಎಂದು ಭಾವಿಸಿದ್ದ ಸಭಾಸದರಿಗೆ ಶಿವಾಜಿ ಸಮರ್ಥ ರಾಮದಾಸರ ಜೋಳಿಗೆಗೆ ಒಂದು ಕಾಗದದ ಚೀಟಿ ಹಾಕಿದ್ದು ಅವರಿಗೆ ಆಶ್ಚರ್ಯ ತರಿಸಿತ್ತು. ಕಾಗದದಲ್ಲಿ ಬರೆಸಿದ್ದನ್ನು ಗುರುಗಳು ಅಲ್ಲಿದ್ದ ಒಬ್ಬರಿಂದ ಓದಿಸಿದರು. ಶಿವಾಜಿ ತನ್ನ ಇಡೀ ರಾಜ್ಯವನ್ನು ಗುರುಗಳಿಗೆ ಸಮರ್ಪಿಸಿದ್ದೇನೆ ಎಂಬ ಒಕ್ಕಣೆ ಆ ಪತ್ರದ್ದಾಗಿತ್ತು. ಗುರುಗಳು- ‘ಇಡೀ ರಾಜ್ಯ ನನಗೊಪ್ಪಿಸಿ ನೀನೇನು ಮಾಡುವೆ?’ ಎಂದಾಗ ಶಿವಾಜಿ ಹೇಳಿದ್ದು- ‘ನಾನು ನಿಮ್ಮ ಸೇವೆ ಮಾಡಿಕೊಂಡಿರುವೆ’ ಎಂದು. ಆಗ ಗುರುಗಳು ಹೇಳಿದರು- ‘ನಡೆ ಹಾಗಾದರೆ ಮನೆಮನೆಗೆ ಹೋಗಿ ಭಿಕ್ಷೆ ಬೇಡೋಣ’. ಸಾಮಾನ್ಯ ಉಡುಪು ಧರಿಸಿ ಶಿವಾಜಿ ಭಿಕ್ಷಾಟನೆಗೆ ನಡೆದೇ ಬಿಟ್ಟ. ತಾನು ರಾಜನಾಗಿದ್ದವನು ಇನ್ನು ಮುಂದೆ ಭಿಕ್ಷಾಟನೆ ನಡೆಸಿ, ಗುರುಸೇವೆ ಮಾಡಿ ಜೀವನ ಸಾಗಿಸಬೇಕೆಂಬ ಅಳುಕು ಶಿವಾಜಿಯೊಳಗಿರಲಿಲ್ಲ. ‘ನನ್ನ ರಾಜ್ಯದ ವಾರಸಿಕೆ ಇನ್ನು ಪೂರ್ತಿ ಗುರುಗಳದ್ದು. ಇನ್ನೇನಿದ್ದರೂ ನಾನು ಗುರುಗಳ ಸೇವಕ’ ಎನ್ನುವುದಷ್ಟೇ ಆತನೊಳಗಿದ್ದ ಸಾತ್ವಿಕಭಾವ.
ಸಂಜೆ ಮರದಡಿಯಲ್ಲಿ ಕುಳಿತು ದಣಿವಾರಿಸಿಕೊಳ್ಳುವಾಗ ಗುರುಗಳು ಹೇಳಿದರು- ‘ಈ ರಾಜ್ಯವನ್ನು ನಾನಿಟ್ಟುಕೊಂಡು ಏನು ಮಾಡಲಿ?! ನನಗೆ ಕೊಟ್ಟ ರಾಜ್ಯವನ್ನು ನಿನಗೆ ನೀಡುತ್ತಿರುವೆ. ನನ್ನ ಈ ರಾಜ್ಯವನ್ನು ನಿನಗೆ ನೋಡಿಕೊಳ್ಳಲು ನೇಮಿಸುತ್ತಿದ್ದೇನೆ’ ಎಂದು. ಗುರುಗಳ ಮಾತನ್ನು ಮತ್ತದೇ ವಿನೀತ ಭಾವದಿಂದ ಸ್ವೀಕಾರ ಮಾಡಿದ ಶಿವಾಜಿ ಗುರುಗಳ ಹೆಸರಲ್ಲಿ ಜನಾನುರಾಗಿ ಆಡಳಿತವನ್ನು ನೀಡಿದ. ಹೌದು, ಅದು ರಾಜ, ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿ, ಅಧಿಕಾರಿ ಯಾರೇ ಆಗಲಿ ಅವರು ಜನರ ಸೇವಕರೇ ಹೊರತು ಒಡೆಯರಲ್ಲ. ಅಧಿಕಾರ ಎನ್ನುವುದು ಸೇವೆ ಮಾಡಲು ಭಗವಂತ ಕೊಟ್ಟ ಅವಕಾಶ. ಹಾಗಾಗಿ ಹೇಳುವುದು ರಾಜಾ ಯಾವತ್ತೂ ಬಡವ ಎಂದು. ‘ಏಷಾಂ ರಾಜಾ ಬೂಯಾಸಂ’, ಇದು ಉಪನಿಷತ್ತಿನ ಮಾತು. ಅಂದರೆ ‘ಒಳ್ಳೆಯ ರಾಜನ ಪ್ರಭುತ್ವ ಜನರಿಗೆ ಸಿಗಲಿ’ ಎಂದು. ಸೇವೆಗೆ ನಿಂತವ ಕಾಲ ಸಂದರೂ ಎಲ್ಲರೊಳಗೆ ನೆನಪಾರದೆ ಉಳಿಯುತ್ತಾನೆ. ಆತನನ್ನು ಇತಿಹಾಸ ಎಂದೆಂದೂ ಒಳ್ಳೆಯ ಕಾರಣಕ್ಕಾಗಿ ಸ್ಮರಿಸುತ್ತದೆ.
(ಲೇಖಕರು ಅಧ್ಯಾಪಕರು)
(ಪ್ರತಿಕ್ರಿಯಿಸಿ: manollasavv@gmail.com)