‘ತೀರುತೇದಿ’ ಮತ್ತು ‘ತೋರುಚೂರು’ ಪದಗಳು ಹೇಗಿವೆ?

Untitled design (3)
Published on
(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)

‘ಇರುವೆ ಇರುವೆ ಕರಿಯ ಇರುವೆ ನಾನು ಜೊತೆಗೆ ಬರುವೆ, ಆಡಲಿಕ್ಕೆ ಅಮ್ಮನಿಂದ ಕರಣಿಬೆಲ್ಲ ತರುವೆ’ ಎಂದು ಮಗು ಕೇಳಿದಾಗ ಇರುವೆಯು ‘ಮಳೆಯ ಕಾಲ ಬರುತಲಿಹುದು ನನಗೆ ಸಮಯವಿಲ್ಲ. ಅನ್ನ ಕೂಡಿ ಹಾಕಿ ಇಟ್ಟು ಕರೆಯೆ ಬರುವೆನಲ್ಲ!’ ಎಂದು ಉತ್ತರಿಸುತ್ತದೆ; ಮಗುವಿನೊಡನೆ ಆಟವಾಡಲಿಕ್ಕೆ ಈಗ ತನಗೆ ಸಮಯವಿಲ್ಲ ಎನ್ನುತ್ತದೆ. ಆಮೇಲೆ ಮಗು ಅದೇ ಕೋರಿಕೆಯನ್ನು ಅನುಕ್ರಮವಾಗಿ ನಾಯಿಮರಿ, ಜೇನುನೊಣ ಮತ್ತು ಕೋಗಿಲೆಯ ಬಳಿಯಲ್ಲೂ ನಿವೇದಿಸುತ್ತದೆ. ಅವು ಕೂಡ ತಮ್ಮತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ಸದ್ಯಕ್ಕೆ ಆಟ ಒಲ್ಲೆ ಎನ್ನುತ್ತವೆ. ಕೊನೆಗೂ ಮಗು ‘ಯಾರೂ ಇವರು ನನ್ನ ಕೂಡ ಆಡಲಿಕ್ಕೆ ಒಲ್ಲರು, ತಮ್ಮತಮ್ಮ ಕೆಲಸದಲ್ಲಿ ವೇಳೆ ಕಳೆವರೆಲ್ಲರು. ಅವರ ಹಾಗೆ ಮೊದಲು ನನ್ನ ಕೆಲಸ ನಾನು ಮಾಡುವೆ, ಓದು ಬರಹ ಮುಗಿಸಿಕೊಂಡು ಸಮಯ ಉಳಿಯೆ ಆಡುವೆ’ ಎಂದು ಸಮಾಧಾನ ಮಾಡಿಕೊಳ್ಳುತ್ತದೆ, ತಾನೂ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತದೆ.

ಸುಮಾರು 1970-80ರ ದಶಕದಲ್ಲಿ ಪ್ರಾಥಮಿಕ ಶಾಲೆಯ ಎರಡನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿದ್ದ ಪದ್ಯವಿದು. ಸಿಸು ಸಂಗಮೇಶ ಅವರ ರಚನೆ. ಪುಟ್ಟ ಮಕ್ಕಳಿಗೆ ಒಳ್ಳೆಯದೊಂದು ನೀತಿಯ ಕಲಿಕೆ, ಅದೂ ಪ್ರಕೃತಿಯಿಂದಲೇ! ಜೀವಿಗಳೆಲ್ಲ ತಮ್ಮತಮ್ಮ ಕೆಲಸಗಳಲ್ಲಿ ನಿರತವಾಗಿರುತ್ತವೆ ಎಂಬ ಬೋಧಪ್ರದ ಚಿತ್ರಣ. ಈ ವಿಚಾರವನ್ನು ಮಕ್ಕಳ ಕವಿತೆಯೆಂದು ಲಘುವಾಗಿ ನೋಡಬೇಕಿಲ್ಲ. ಪ್ರಕೃತಿಯಲ್ಲಿ ಜೀವಿಗಳು ಇರುವುದೇ ಹಾಗೆ. ಜೇನುನೊಣವಂತೂ ಇಂಗ್ಲಿಷ್ ಭಾಷೆಯಲ್ಲೂ Busy Bee ಎಂದೇ ಪ್ರಸಿದ್ಧ. ಹಾಗೆ ನೋಡಿದರೆ, ಸೋಮಾರಿಯಾಗಿ ಕಾಲಕಳೆವ ಜಾಡ್ಯ ಮನುಷ್ಯನಲ್ಲೇ ಹೆಚ್ಚು. ಕೆಲಸದಲ್ಲಿ ತೊಡಗಿಸಿಕೊಂಡಂತೆ ನಟಿಸಿ ತಾನು Busy ಎಂದು ಹೇಳಿಕೊಳ್ಳುವುದು ಇನ್ನೂ ಹೆಚ್ಚು.

ಇರಲಿ, ಪದ ವ್ಯುತ್ಪತ್ತಿಯ ವಿಚಾರಕ್ಕೆ ಬಂದರೆ Busy ಪದದ ಮೂಲ ಹಳೆಯ ಇಂಗ್ಲಿಷ್​ನ Bisig ಎಂಬ ಪದವಂತೆ. ಅದಕ್ಕಿದ್ದ ಅರ್ಥ careful, anxious ಎಂದು. ತುಸು ಗಾಬರಿಯಿಂದ ಕೂಡಿದ ಜಾಗರೂಕತೆ. ಕಾಲಾಂತರದಲ್ಲಿ ಅರ್ಥ ಬದಲಾಗಿ continually employed or occupied, in constant or energetic action ಎಂದಾಯಿತು. ಮಾತ್ರವಲ್ಲ 15ನೆಯ ಶತಮಾನದಲ್ಲಿ Busy ಎಂದು ಸ್ಪೆಲ್ಲಿಂಗ್ ಸಹ ಬದಲಾಯಿತು. ಸ್ವಾರಸ್ಯವೆಂದರೆ ಈಗ ನಾವು ವ್ಯಾಪಾರ/ವ್ಯವಹಾರ ಎಂಬರ್ಥದಲ್ಲಿ ಬಳಸುವ Business ಕೂಡ ಅದೇ ಮೂಲದಿಂದ ಬಂದದ್ದು. ಒಟ್ಟಿನಲ್ಲಿ, ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸ್ಥಿತಿಯನ್ನೇ Busy ಎನ್ನುವುದು.

ಈ ದೃಷ್ಟಿಯಿಂದ ‘ಕಾರ್ಯನಿರತ’ ಎಂಬ ಪದ, ಈಗಾಗಲೇ ಬಳಕೆಯಲ್ಲಿರುವುದು ಕನ್ನಡಕ್ಕೆ ಸೂಕ್ತವಾಗಿಯೇ ಇದೆ. ದೂರವಾಣಿ ಕರೆಗಳಿಗೆ ಎಸ್​ಟಿಡಿ ಸೌಲಭ್ಯ ಬಳಸುತ್ತಿದ್ದಾಗ ‘ಈ ಮಾರ್ಗವು ಕಾರ್ಯನಿರತವಾಗಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಡಯಲ್ ಮಾಡಿ’ ಎಂದು ಧ್ವನಿಮುದ್ರಿತ ಸಂದೇಶ ಕೇಳಿ ಗೊತ್ತಿರುವವರಿಗಂತೂ ಹೆಚ್ಚು ಪರಿಚಿತವೂ ಆಗಿದೆ. ನೂರಕ್ಕೂ ಹೆಚ್ಚು ಪ್ರವೇಶಿಕೆಗಳು ‘ಕಾರ್ಯನಿರತ’ (ಅಥವಾ ‘ನಿರತ’) ಎಂದು ಸೂಚಿಸುತ್ತ ಬಂದಿವೆ. ಹೊಸಬರಿಗೆ ಆದ್ಯತೆಯಿತ್ತು ಕೆಲವು ಹೆಸರುಗಳು: ಸುಧೀಂದ್ರ ತುಮಕೂರು, ಹಿಮಾ ಹಿರೇಬೆಣಕಲ್, ಮಧುರಾ ಮಂಗಳೂರು, ಅನಂತಕೃಷ್ಣ ಶಿವಮೊಗ್ಗ, ಸಂಗೀತಾ ಚಟ್ಟಿ, ಶಶಿಕಾಂತ ದಾಬಡೆ, ಅಮೋಘ ಬಿರಾದಾರ, ಭಾರ್ಗವ ಬೆಂಗಳೂರು, ರಮ್ಯಾ ಸೋಮಶೇಖರ್, ಶ್ರೀಧರ ಅವರಾದಿ, ಬಸನಗೌಡ ಪಾಟೀಲ ಮಾಸ್ತಮರಡಿ, ಹೇಮಾ ಸುರೇಶ್, ಪ್ರಭುಲಿಂಗ ಸಿಂಗೋಡಿ, ಪುರುಷೋತ್ತಮ ಜೋಶಿ, ಭಾಗ್ಯ ಕೆ.ಎಸ್, ಶೈಲಶ್ರೀ ರಾವ್, ನಾರಾಯಣ ಯಾಜಿ ಶಿರಾಲಿ, ಮೇಘರ್ಷಾ ದೊಡ್ಡಿನತಲೆ, ಮುರಳೀಧರ ಬಳ್ಳಾರಿ, ಗೋಪಾಲಕೃಷ್ಣ ಹೆಮ್ಮಿಗೆ, ಕೇಶವಚಂದ್ರ ಕೊಂಬ್ರಾಜೆ, ಆನಂದ ಗೋಡಸೆ ಮುಂತಾದವರು.

‘ವ್ಯಸ್ತ’ ಎಂಬ ಇನ್ನೊಂದು ಪ್ರಚಲಿತ ಪದವನ್ನೂ ಅನೇಕರು ಸೂಚಿಸಿದ್ದಾರೆ. ಚೇತನ್ ಬೆಂಗಳೂರು, ಚಂದ್ರಶೇಖರ ನವಲಗುಂದ, ಶರದ್ ಹೊಂಬ್ಳಿ, ಅನಘಾ ನಾಡಿಗೇರ, ಜಯಲಕ್ಷ್ಮಿ ಭಟ್, ಅಂಬುಜ ಕುಲಕರ್ಣಿ, ಪ್ರಸನ್ನ ಎಸ್.ಜಿ, ವನಜ ಶಿವಕುಮಾರ್, ರಮೇಶ ಬಾಟಿ, ಕೇಶವ ಕುಲಕರ್ಣಿ, ಶೈಲಾ ಬಾಲಕೃಷ್ಣ, ಅನಂತರಾಮಯ್ಯ ಅಮೃತಹಳ್ಳಿ, ಗಂಗಾಧರ ಕಾಟೇನಹಳ್ಳಿ, ಸುಜಯಾ ಬಿ.ಜಿ, ಮುರಲೀನಾಥ ಗುಪ್ತ ಮುಂತಾದವರು. ಗಮನಿಸಬೇಕಾದ್ದೆಂದರೆ ‘ವ್ಯಸ್ತ’ ಪದ ಸಂಸ್ಕೃತ ಮೂಲದ್ದಾದರೂ ಅಲ್ಲಿ ಅದಕ್ಕಿರುವ ಅರ್ಥ ಬೇರೆ. ಚದುರಲ್ಪಟ್ಟ, ಸುತ್ತಲೂ ಹರಡಿರುವ, ಪ್ರತ್ಯೇಕ ಭಾಗವಾಗಿರುವ ಎಂದು. ಕಸಾಪ ನಿಘಂಟುವಿನಲ್ಲೂ- ಕೆದರಿದ, ಚೆಲ್ಲಾಪಿಲ್ಲಿಯಾದ, ಗಾಬರಿಗೊಂಡ ಮುಂತಾದ ಅರ್ಥಗಳನ್ನೇ ಕೊಟ್ಟಿದ್ದಾರೆ. ಹಿಂದೀ ಭಾಷೆಗೆ ಹೋದಾಗ ಇದು ಆಠಢ ಎಂಬ ಅರ್ಥ ಪಡೆದುಕೊಂಡಿದ್ದಿರಬಹುದು. ದೂರವಾಣಿ ಇಲಾಖೆಯ ಧ್ವನಿಮುದ್ರಿತ ಸಂದೇಶ ಹಿಂದಿ ಭಾಷೆಯಲ್ಲಿದ್ದಾಗ ಅದರಲ್ಲಿ ‘ವ್ಯಸ್ತ’ ಎಂದೇ ಬಳಕೆಯಿತ್ತು. ಸಂಸ್ಕೃತದ ಪದಗಳು ಬೇರೆ ಭಾಷೆಗಳಿಗೆ ಹೋಗಿ ಅರ್ಥ ಬದಲಾಯಿಸಿಕೊಳ್ಳುವ ಅನೇಕ ಉದಾಹರಣೆಗಳಲ್ಲಿ ಇದೂ ಒಂದು. ಅದಕ್ಕಿಂತ, ಸಂಸ್ಕೃತದಲ್ಲೂ ಹೆಚ್ಚೂಕಡಿಮೆ ಅದೇ ಅರ್ಥವಿರುವ ತಲ್ಲೀನ, ನಿಮಗ್ನ, ತತ್ಪರ, ಪ್ರವೃತ್ತ, ಅವಿಶ್ರಾಂತ ಮುಂತಾದುವನ್ನು ಸಂದರ್ಭಾನುಸಾರ Busy ಎಂಬರ್ಥದಲ್ಲಿ ಬಳಸಲಿಕ್ಕಾಗುತ್ತದೆ.

ಕಳೆದಸಲ ಕೇಳಿದ್ದ ಎರಡನೆಯ ಪದ Expiry Date. ಮಾರುಕಟ್ಟೆಯಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳು, ಔಷಧಗಳು ಮುಂತಾದುವೆಲ್ಲ ಯಾವ ದಿನಾಂಕದವರೆಗೆ ಬಾಳಿಕೆ ಬರುತ್ತವೆ ಮತ್ತು ಆಮೇಲೆ ಅವುಗಳನ್ನು ಉಪಯೋಗಿಸುವುದು ಅಪಾಯಕಾರಿಯಾಗಬಹುದು ಎಂದು ಗ್ರಾಹಕರಿಗೆ ತಿಳಿವಳಿಕೆ ನೀಡುವ ವಿಧಾನ. ಇದಕ್ಕೆ ಸಂವಾದಿಯಾಗಿ ಬಳಸಬಹುದೆಂದು ವಿವಿಧ ಬಗೆಯ ಪದಗಳನ್ನು ಓದುಗರು ಸೂಚಿಸಿದ್ದಾರೆ: ಅವಧಿ ಮುಕ್ತಾಯ ದಿನಾಂಕ, ಅವಸಾನ ದಿನಾಂಕ, ಗಡುವು ದಿನಾಂಕ, ವಾಯಿದೆ ದಿನ, ಸಮಾಪ್ತಿ ಸಮಯ, ಅಂತಿಮ ತಾರೀಖು, ಅಂತ್ಯಾವಧಿ, ಉಪಯೋಗಾವಧಿ, ಜೀವಿತಾವಧಿ, ಕಾಲಮಿತಿ, ಮುಗಿದಿನ, ಅಳಿದಿನ, ಚರಮಕಾಲ, ಬಾಳ್ಗೊನೆ(ಬಾಳಿನ ಕೊನೆ), ಕೊನೆಗಾಲ, ಕೆಡುಗಾಲ ಇತ್ಯಾದಿ. ಇವೆಲ್ಲ ಅರ್ಥಪೂರ್ಣವಾಗಿಯೇ ಇವೆ; ಕೆಲವು ಪದಶಃ ತರ್ಜುಮೆಯಾದರೆ ಇನ್ನು ಕೆಲವು ಭಾವಾರ್ಥಸೂಚಕ.

Expiry Date ಎನ್ನುವಾಗಿನ Expire ಭಾಗಕ್ಕಿರುವುದು ತೀರಿಹೋಗು ಎಂಬ ಅರ್ಥ. ಆದ್ದರಿಂದ ತೀರು ಕ್ರಿಯಾಧಾತುವನ್ನೇ ಮುಗಿ, ನಿಶ್ಶೇಷವಾಗು, ನಿವಾರಣೆಯಾಗು, ಕ್ಷಯಿಸು, ಸಾಯು ಮುಂತಾದ ಅರ್ಥಗಳಲ್ಲಿ ಬಳಸಿ ಪದ ಕಟ್ಟುವುದು ಸಾಧ್ಯವಿದೆ. ಈ ನಿಟ್ಟಿನಿಂದ ಯೋಚಿಸಿರುವ ‘ತೀರುವಳಿ ದಿನಾಂಕ’ (ಗೋಪಾಲ ಜೋಶಿ, ಮೈಥಿಲಿ ಮೈಸೂರು, ಡಾ.ದಯಾನಂದ ಭಟ್ಟ, ಅನಸೂಯಾ ಜಗದೀಶ್, ಧೀರೇಂದ್ರ ಬೀಳಗಿ), ‘ತೀರುವ ದಿನ’ (ಎಸ್.ಆರ್. ರಾವಳ), ತೀರು ಕಾಲ (ರವೀಂದ್ರ ಮುನ್ನೋಳಿಮಠ), ತೀರು-ತಾರೀಖು (ಡಾ.ಜಿ.ಎಸ್ ವೇಣುಗೋಪಾಲ್, ಜಿ.ಸುಬ್ರಹ್ಮಣ್ಯ) ಹೆಚ್ಚು ಸಮಂಜಸವೆನಿಸುತ್ತವೆ. ಇವುಗಳಿಗಿಂತಲೂ ಚಿಕ್ಕ-ಚೊಕ್ಕ ಮತ್ತು ನಿಖರ ಎನಿಸುವಂತಿದೆ ಕಲ್ಬುರ್ಗಿಯಿಂದ ಸಂಜೀವ ಜೋಷಿ ಅವರು ಸೂಚಿಸಿರುವ ‘ತೀರುತೇದಿ’ ಎಂಬ ಪದ. ತೇದಿ ಎಂದರೆ ದಿನಾಂಕ. ಕನ್ನಡ, ತಮಿಳು ಮತ್ತಿತರ ದ್ರಾವಿಡ ಭಾಷೆಗಳಲ್ಲಿ ಬಳಕೆಯಲ್ಲಿದೆ. ಕನ್ನಡದಲ್ಲಿ 1955ರಲ್ಲಿ ಬಿಡುಗಡೆಯಾದ ‘ಮೊದಲ ತೇದಿ’ ಚಲನಚಿತ್ರ, ಅದರಲ್ಲಿನ ‘ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ... ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ ಭಂಡಾಟ...’ ಹಾಡು, ತಿಂಗಳ ಸಂಬಳದಿಂದ ಸಂಸಾರ ತೂಗಿಸುವ ಮಧ್ಯಮವರ್ಗದ ಮನೆಗಳಲ್ಲಿ ಕಂಡುಬರುವ ಸಾರ್ವಕಾಲಿಕ ಸತ್ಯದ ಚಿತ್ರಣಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ‘ತೀರುತೇದಿ’ ಪದದಲ್ಲಿರುವ ಅನುಪ್ರಾಸವು ಅದನ್ನು ಮತ್ತಷ್ಟು ಆಕರ್ಷಕವನ್ನಾಗಿಯೂ, ನೆನಪಿಡಲಿಕ್ಕೆ ಮತ್ತು ಉಪಯೋಗಿಸಲಿಕ್ಕೆ ಸುಲಭವನ್ನಾಗಿಯೂ ಮಾಡುತ್ತದೆ.

ಕೊನೆಯದಾಗಿ Sample. ಇಂಗ್ಲಿಷ್​ನಲ್ಲಿ ಇದರ ಬೇರನ್ನು ತಡಕಾಡಿದರೆ ಹಳೆಯ ಫ್ರೆಂಚ್​ನ essample ಮತ್ತು ಲ್ಯಾಟಿನ್ ಭಾಷೆಯ exemplum ಪದಗಳಿಗೆ ತಲುಪುತ್ತೇವೆ. ಹಾಗೆಯೇ ಇಂಗ್ಲಿಷ್​ನಲ್ಲೀಗ ಉದಾಹರಣೆ ಎಂಬರ್ಥದಲ್ಲಿ ಬಳಕೆಯಾಗುವ example ಸಹ ಈ ಪದಗಳಿಂದಲೇ ಬಂದಿದ್ದೆಂದು ತಿಳಿಯುತ್ತದೆ. ಸಮಷ್ಟಿಯ ಗುಣಸೂಚಕಾಂಶವನ್ನು ತಿಳಿಯಲು ಆಯ್ದುಕೊಳ್ಳುವ ಚಿಕ್ಕ ಭಾಗವೇ sample. ಬಹಳಷ್ಟು ಓದುಗರ ಆಯ್ಕೆ ‘ಮಾದರಿ’ (ಮುಂಗಿಲ ನವೀನ್, ಛಾಯಾ ದಾವಣಗೆರೆ, ಶಂಕರ ಕುಮಾರ್, ಯಮನಪ್ಪ ಕೊಟ್ನಿಕಲ್, ಪಿ.ಜೆ ರಾಘವೇಂದ್ರ, ರಾಜು ಕೋಳಿವಾಡ, ರವಿಕುಮಾರ ಎಸ್.ಎಂ, ಉಷಾಕಿರಣ್ ಅತ್ತಾವರ, ಸೌಮ್ಯಾ ಚಿನ್ನಪ್ಪ, ವಸುಪ್ರದಾ ಮಂಜುನಾಥ್, ರೇವತಿ ಜೋಶಿ, ಶಿವಬಸವಯೋಗಿಮಠ, ಯತಿರಾಜ್ ಜೆ.ಪಿ, ಗೋವಿಂದಪ್ಪ ಹಂದನಕೆರೆ, ಆನಂದ ದೇಸಾಯಿ, ರತ್ನಾ ಹೆಗಡೆ, ಸವಿತಾ ಮೈಸೂರು, ವೈ.ಚೆನ್ನಬಸಪ್ಪ, ಡಾ.ವೀರಣ್ಣ ಜತ್ತಿ, ರಾಮನಾಥ ಮೊಸಳೆ, ಉಮೇಶ ಹೊಸೊಲಿಕೆ ಮುಂತಾದವರು) ಮತ್ತೆ ಕೆಲವರದು ‘ನಮೂನೆ’ (ವಿಟ್ಠಲ ಹಲಸಿ, ನಾಗೇಂದ್ರ ಭಟ್, ಎಸ್.ಎನ್ ಮಂಜುಳಾ, ಮಾಲತೇಶ ಕಮ್ಮನಳ್ಳಿ, ಶಂಕರ ಎನ್. ವಿ., ವನಜಾಕ್ಷಿ ಮತ್ತೂರು, ಅರವಿಂದ ಕುಮಾರ, ಸಿದ್ದನಗೌಡ ಮುದಿಗೌಡ್ರ, ಎಂ.ಕೆ.ಬದರಿನಾಥ್, ವಾಸುದೇವ ಭಟ್, ಭಾಗ್ಯಶ್ರೀ ಕೆ.ಸಿ, ಸತೀಶ ಕಬೇಕೋಡಿ, ಬೊ.ನಾ ಕೃಷ್ಣಮೂರ್ತಿ, ಪ್ರಭುದೇವ ಸಾಲಿಮಠ, ರಮ್ಯಕೃಷ್ಣ ಮೂಡಬಿದರೆ, ಶಶಿಕಲಾ ನರೇಂದ್ರನಾಥ್, ವೇದವತಿ ಕೆ.ವಿ, ಗೋಪಿನಾಥ ರಾವ್, ಸುರೇಶ ಪುರಾಣಿಕ್ ಮುಂತಾದವರು).

ಇವೆರಡೂ ಬಳಕೆಯಲ್ಲಿರುವ ಪದಗಳೇ. ಆದರೆ ಕೆಲವು ಸಂದರ್ಭಗಳಿಗೆ ಹೊಂದಲಿಕ್ಕಿಲ್ಲ. ಅನ್ನ ಬೆಂದಿದೆಯೇ ನೋಡಲು ಅಗಳೊಂದನ್ನು ಹಿಚುಕಿದರೆ ಸಾಕಾಗುತ್ತದೆ ಎಂದು ನುಡಿಗಟ್ಟು. ಅಗಳನ್ನು ನಮೂನೆ ಎನ್ನಲಾದೀತೇ? ಚಿಕಿತ್ಸಾಲಯದಲ್ಲಿ ‘ರಕ್ತದ ಮಾದರಿ’ ಸರಿಹೋದರೂ ಸಿಹಿತಿಂಡಿ ಅಂಗಡಿಯಲ್ಲಿ ‘ಲಾಡುವಿನ ಮಾದರಿ’ ಕೇಳಲಾದೀತೇ? ಅಂದಹಾಗೆ ರುಚಿ ನೋಡುವ ಸಂದರ್ಭಕ್ಕಾದರೆ ‘ಮಾಸಲೆ’ ಎಂಬೊಂದು ಪದ ಉತ್ತರಕರ್ನಾಟಕದಲ್ಲಿ ಬಳಕೆಯಲ್ಲಿದೆಯಂತೆ. ‘ಚಿಕ್ಕಂದಿನಲ್ಲಿ ನಮ್ಮ ತಾಯಿ ಪದಾರ್ಥ ತಯಾರಿಸುತ್ತಿದ್ದಾಗ ನಮ್ಮ ಕೈಯಲ್ಲಿ ಸ್ವಲ್ಪ ಹಾಕಿ, ಮಾಸಲೆ ನೋಡು ಎನ್ನುತ್ತಿದ್ದರು’ ಎಂದು ಬೆಂಗಳೂರಿನಿಂದ ಹೇಮಂತ ಸಂಪಗಾಂವಕರ್ ನೆನಪಿಸಿಕೊಂಡರೆ, ‘ಚಟ್ನಿಪುಡಿ ಮಾಡೀನಿ, ಸ್ವಲ್ಪು ಮಾಸಲೆ ನೋಡ್ರಿ ಹೆಂಗ ಆಗೇದ’ ಎಂದು ಅಡುಗೆಮನೆಯಿಂದ ಕೇಳಿಬರುವ ಮಾತನ್ನು ಉಲ್ಲೇಖಿಸಿದ್ದಾರೆ ಪುಣೆಯಿಂದ ಸುನಯನಾ ಮಾರ್ನಾಡು. ಪ್ರಕಾಶ್ ಉಮರಾಣಿ ಮತ್ತು ಅನಿಲ್ ಕುಸುಗಲ್ ಸಹ ಇದೇ ಪದವನ್ನು ಸೂಚಿಸಿದ್ದಾರೆ. ಅರೇಬಿಕ್​ನಿಂದ ಮರಾಠಿ ಮೂಲಕ ಬಂದದ್ದೆಂದು ಕಾಣುತ್ತದೆ. ಸಹಜವಾಗಿಯೇ ಉತ್ತರಕರ್ನಾಟಕದಲ್ಲಿ ಬಳಕೆಯಲ್ಲಿದೆ.

ಆದರೆ Sample ಎನ್ನಲಿಕ್ಕೆ ಅತಿಸೂಕ್ತವಾದ ಪದವೊಂದನ್ನು ಹೊಸದಾಗಿ ಕಟ್ಟಿದ್ದಾರೆ, ಬೆಂಗಳೂರಿನ ವಸಂತಕುಮಾರ್ ಕಲ್ಯಾಣಿ. ಅದೇ ‘ತೋರುಚೂರು’. ಸಮಷ್ಟಿಯ ಗುಣಸೂಚಕಾಂಶವನ್ನು ತೋರುವ ಚಿಕ್ಕದೊಂದು ಚೂರು! ಉಚ್ಚರಿಸಲಿಕ್ಕೂ ಸುಲಭವಿದೆ. ಚೂರುಪಾರು ಎನ್ನುವಂತೆ ಪ್ರಾಸಬದ್ಧವೂ ಆಗಿದೆ. ಹೀಗೆ ಅರ್ಥಪೂರ್ಣ ಸರಳ ಪದಗಳನ್ನು ಕಟ್ಟಿದರೆ, ಅಷ್ಟೇ ಮುಖ್ಯವಾಗಿ ಬಳಸತೊಡಗಿದರೆ, ನಮ್ಮೀ ಅಂಕಣದ ಉದ್ದೇಶ ಸ್ವಲ್ಪಸ್ವಲ್ಪವೇ ಈಡೇರುತ್ತ ಸಾಗುತ್ತದೆ. ಎಲ್ಲರ ಕ್ರಿಯಾಶೀಲ ಭಾಗವಹಿಸುವಿಕೆಗಾಗಿ ಅಭಿನಂದನೆಗಳು. ಉತ್ಸಾಹ ಹೀಗೆಯೇ ಇರಲಿ.

ಈ ವಾರದ ಮೂರು ಪದಗಳು:1. Celebrity: ಜನಸಾಮಾನ್ಯರ ಗಮನ ಆಕರ್ಷಿಸುವ ಮತ್ತು ವ್ಯಾಪಕವಾಗಿ ಗುರುತಿಸಲ್ಪಡುವ ವ್ಯಕ್ತಿ ಎನ್ನಲಿಕ್ಕೊಂದು ಕನ್ನಡ ಪದ ಬೇಕು.

2. Hats off: ಟೋಪಿ ತೆಗೆದು ತಲೆಯನ್ನು ತುಸು ಬಗ್ಗಿಸಿ ಗೌರವ ಸಲ್ಲಿಸುವ ಪಾಶ್ಚಾತ್ಯ ಸಂಪ್ರದಾಯ. ಇದೇ ಗೌರವ, ಮೆಚ್ಚುಗೆಯನ್ನು ಕನ್ನಡದಲ್ಲಿ ಏನನ್ನಬಹುದು?

3. Thesis: ಪದವಿ ಪಡೆಯಲಿಕ್ಕೆಂದು ಸಲ್ಲಿಸುವ ಪ್ರೌಢ ಪ್ರಬಂಧ ಎಂಬ ದೀರ್ಘ ವಿವರಣೆಗಿಂತ, ಒಂದೇ ಪದದಲ್ಲಿ ಹೇಳುವುದು ಸಾಧ್ಯವೇ?

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net