

ಕಷ್ಟಪಟ್ಟರೆ ಸುಖ ಸಿಗುತ್ತದೆ ಎಂಬ ಮಾತಿಗೆ ಆಲೆಮನೆ ಒಂದು ಸಮರ್ಥ ರೂಪಕ. ಅದು ಒಂದು ರೀತಿಯಲ್ಲಿ ಸಮೂಹ ಗಾನ. ಏಕೆಂದರೆ ಒಬ್ಬರು ಇಬ್ಬರ ಕೈಲಿ ಆಗುವ ಕೆಲಸ ಇದಲ್ಲ. ಹೀಗೆ ಸಹಕಾರ ತತ್ವ ಕೂಡ ಇಲ್ಲಿ ಸಾಕಾರ. ಆದರೀಗ ಕೃಷಿ ಸಂಸ್ಕೃತಿಯ ಹಲವು ಅವಿಭಾಜ್ಯ ಅಂಗಗಳು ಕಾಲದ ತಿರುವಿನಲ್ಲಿ ಮರೆಯಾಗಿವೆ; ಮರೆಯಾಗುತ್ತಿವೆ.
ಯಲ್ಲಾಪುರ ಸಮೀಪದ ಕರಡೊಳ್ಳಿ ಎಂಬಲ್ಲಿ ಸ್ವರ್ಣವಲ್ಲಿ ಮಠದ ಗೋಶಾಲೆ ಇದೆ. ಅಲ್ಲಿನ ಜಮೀನಿನಲ್ಲಿ ಕಬ್ಬು ಬೆಳೆ ಯಲಾಗುತ್ತಿದ್ದು ಅಲ್ಲಿ ಸಹ ಆಲೆಮನೆ ಹಬ್ಬ ನಡೆಸಲಾಗುತ್ತದೆ. ಬೀಸ್ಗೋಡ್, ಮಾಗೋಡು ಮುಂತಾದ ಕಡೆ ಕೂಡ ನಡೆಯುತ್ತದೆ. ಒಂದು ಕಾಲದಲ್ಲಿ ಮಲೆನಾಡಿನ ಮನೆಮನೆಗಳಲ್ಲಿ ಆಲೆಮನೆ ಸಾಮಾನ್ಯವಾಗಿತ್ತು. ಹಾಗಿರುವಾಗ ಸೊಸೈಟಿಗಳು ಅಥವಾ ಸಂಘಗಳು ಹೀಗೆ ಆಲೆಮನೆ ಹಬ್ಬ ಆಚರಿಸಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ.
‘ಹಿಂದೆ ಕಬ್ಬು ಬೆಳೆ ವ್ಯಾಪಕವಾಗಿ ಇದ್ದುದರಿಂದ ಮನೆ ಮನೆಯಲ್ಲಿ ಆಲೆಮನೆ ಇರುತ್ತಿತ್ತು. ಆದರೆ ಈಗ ಕಬ್ಬಿನ ಕೃಷಿ ತುಂಬಾ ತಗ್ಗಿದೆ. ಅದರಲ್ಲೂ ಈಗಿನ ಮಕ್ಕಳಿಗೆ ಆಲೆಮನೆ ಎಂದರೆ ಅಪರಿಚಿತ ಎಂಬಂತಾಗಿದೆ. ಹೀಗಾಗಿ ಈ ಕೃಷಿ ಸಂಸ್ಕೃತಿಯ ಅನುಭವವನ್ನು ನೀಡುವ ಉದ್ದೇಶದಿಂದ ಆಲೆಮನೆ ಹಬ್ಬ ಆಚರಿಸುವ ರೂಢಿ ಬಂದಿದೆ. ಇದು ಕಮರ್ಷಿಯಲ್ ಅಲ್ಲ. ನಮ್ಮ ಕೃಷಿ ಪರಂಪರೆಯ ಅರಿವು ಮೂಡಿಸುವ ಪ್ರಯತ್ನ’ ಎಂದು ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಹೇಳುತ್ತಾರೆ. ಕಷ್ಟಪಟ್ಟರೆ ಸುಖ ಸಿಗುತ್ತದೆ ಎಂಬ ಮಾತಿಗೆ ಆಲೆಮನೆ ಒಂದು ಸಮರ್ಥ ರೂಪಕ. ಕಬ್ಬು ಕಡಿದು ಗಾಣದ ಜಾಗಕ್ಕೆ ಸಾಗಿಸಿ, ಗಾಣದಲ್ಲಿ ಕಬ್ಬು ನುರಿಸಿ ಕೊಪ್ಪರಿಗೆಯಲ್ಲಿ ಹಾಕಿ ಕುದಿಸಿ ಬೆಲ್ಲ ಆಗುವವರೆಗೆ ಬಹು ಹಂತಗಳಲ್ಲಿ ಶ್ರಮ ಹಾಗೂ ಜನಬಲವನ್ನು ಬೇಡುವ ಕಾಯಕ ಇದು. ಕೊಪ್ಪರಿಗೆಗೆ ಕಬ್ಬಿನ ಹಾಲು ಹಾಕಿ ಆರಂಭದ ಹಂತದಲ್ಲಿ ಜಂಡು (ಕಬ್ಬಿನ ಹಾಲಿನಲ್ಲಿ ಇರುವ ಕಸಕಡ್ಡಿ ಕೆಸರಾಗಿ ಜಮೆಯಾಗುವುದು. ಈ ಜಂಡಿನಲ್ಲಿ ಶಕ್ತಿ ಇರುತ್ತದೆ ಎಂಬ ಕಾರಣಕ್ಕಾಗಿ ಆಲೆ ಕೋಣಗಳಿಗೆ ದಾಣಿ ಜತೆ ಸೇರಿಸಿ ಕೊಡಲಾಗುತ್ತಿತ್ತು) ತೆಗೆಯುತ್ತ ಇರಬೇಕು. ಇಲ್ಲವಾದಲ್ಲಿ ಬೆಲ್ಲ ರುಚಿ ಬರುವುದಿಲ್ಲ. ಬೆಲ್ಲ ಹದಕ್ಕೆ ಬಂದ ಮೇಲೆ ಕೊಪ್ಪರಿಗೆ ಇಳಿಸಲಿಕ್ಕೆ ಕನಿಷ್ಠ ನಾಲ್ಕು ಜನ ಗಟ್ಟಿ ಜನ ಬೇಕು. ಆ ಸಮಯಕ್ಕೆ ಸರಿಯಾಗಿ ಕೊಪ್ಪರಿಗೆ ಇಳಿಸದಿದ್ದರೆ ಬೆಲ್ಲ ಸೀದು ಹೋಗಿ ರುಚಿ ಬರುವುದಿಲ್ಲ. ಅಷ್ಟೇ ಅಲ್ಲ ಕೊಪ್ಪರಿಗೆಗೆ ಬೆಂಕಿ ಬೀಳುವ ಅಪಾಯವೂ ಇರುತ್ತದೆ.
ಆಲೆಮನೆ ಎಂದರೆ ಅದು ಅಕ್ಷರಶಃ ಸಿಹಿ ಸಂಗಮ. ಆ ಮನೆಯವರ ಸಂಬಂಧಿಗಳ ಹಾಜರಿ ಕಡ್ಡಾಯ. ಅಷ್ಟೇ ಅಲ್ಲ, ಆಸುಪಾಸಿನ ಶಿಕ್ಷಕರು ಹಾಗೂ ಸರ್ಕಾರಿ ನೌಕರರು ಕೂಡ ಆಲೆಮನೆಯತ್ತ ಬರುತ್ತಿದ್ದರು. ಬಂದವರಿಗೆ ಹಾಲು, ಬೆಲ್ಲದ ಉಪಚಾರ. ಅಷ್ಟಕ್ಕೇ ಮುಗಿಯದು. ಕೊನೆಗೆ ಹೋಗುವಾಗ ಕಬ್ಬಿನ ಹಾಲು ಕೊಡುವುದು ಮಾಮೂಲು. ಇನ್ನು ಶಾಲಾ ಮಕ್ಕಳಿಗೆ ಖುಷಿಯೋ ಖುಷಿ. ಹತ್ತಿರದ ಆಲೆಮನೆಗೆ ಗುಂಪು ಕಟ್ಟಿಕೊಂಡು ಹೋಗಿ ಸಿಹಿ ಸವಿಯುವ ಭಾಗ್ಯ. ವಾಪಸ್ ಬರುವಾಗ ಜಗಿಯಲು ಕಬ್ಬಿನ ಜಲ್ಲೆ. ಅದರಲ್ಲೂ ಆಲೆಗಾಣದವನನ್ನು ಮಾತಾಡಿಸಿ ಅವನ ಕೈಲಿನ ಕೋಲು ತೆಗೆದುಕೊಂಡು ಒಂದಷ್ಟು ಹೊತ್ತು ಗಾಣದ ಸುತ್ತ ತಿರುಗುವುದು ಎಂದರೆ ಅದೇನೋ ಗಮ್ಮತ್ತು! ಸಾಯಂಕಾಲ ಆಲೆಮನೆಗೆ ಜನ ಬರುವುದು ಜಾಸ್ತಿ. ಹೀಗಾಗಿ ಹಾಲಿನ ಬಾನಿ ತುಂಬಲು ಹೆಚ್ಚು ಸಮಯ ಬೇಕು. ಆಲೆಮನೆ ಒಂದು ರೀತಿಯಲ್ಲಿ ಸಮೂಹ ಗಾನ. ಏಕೆಂದರೆ ಒಬ್ಬರು ಇಬ್ಬರ ಕೈಲಿ ಆಗುವ ಕೆಲಸ ಇದಲ್ಲ. ಹೀಗೆ ಸಹಕಾರ ತತ್ವ ಕೂಡ ಇಲ್ಲಿ ಸಾಕಾರವಾಗುತ್ತಿತ್ತು.
ಯಲ್ಲಾಪುರ ತಾಲೂಕಿನ ಶೀಗೆಮನೆ ಎಂಬ ಊರಿನಲ್ಲಿ ಒಂದು ವಿಶಿಷ್ಟ ಪದ್ಧತಿ ಇತ್ತು. ಅಲ್ಲಿನ ಗದ್ದೆ ಬಯಲಿನಲ್ಲಿ ಆಯಾ ಮನೆಯವರು ಕಬ್ಬು ಬೆಳೆಗೆ ಎಂದು ನಿರ್ದಿಷ್ಟ ಗದ್ದೆಗಳನ್ನು ಮೀಸಲಾಗಿ ಇಡುತ್ತಿದ್ದರು. ಅಲ್ಲಿಂದ ಹತ್ತಿರದ ಕೋಟೆಮನೆ ಊರಿನ ಕೆಲವರ ಗದ್ದೆ ಸಹ ಅಲ್ಲಿತ್ತು. ಒಟ್ಟಿಗೆ ಸೇರಿ ದೊಡ್ಡ ಜಾಗದಲ್ಲಿ ಕಬ್ಬು ಇರುತ್ತಿತ್ತು. ಈ ಕಬ್ಬಿನ ಹಕ್ಕಲನ್ನು ನೋಡುವುದೇ ಚಂದ. ಆಲೆಮನೆ ಸುಮಾರು ಎರಡು ತಿಂಗಳ ಕಾಲ ನಡೆಯುತ್ತಿತ್ತು. ಆ ದಾರಿಯ ಮೂಲಕವೇ ಶಾಲೆಗೆ ಹೋಗುತ್ತಿದ್ದ ನಾವು ದಿನಾಲು ಸಿಹಿಯ ಸಹಿ ಹಾಕುತ್ತಿದ್ದೆವು. ಈಗ ಅಲ್ಲಿ ಕಬ್ಬು ಇಲ್ಲ. ನೆನಪು ಮಾತ್ರ ಇದೆ.
ಅದರಲ್ಲೂ ಬೆಳಗಿನ ಜಾವ ನಾಲ್ಕು ಐದು ಗಂಟೆಗೆ ಎದ್ದು ತಾಜಾ ಕಬ್ಬಿನ ಹಾಲು ಕುಡಿಯುವುದು ಅದ್ಭುತ ಅನುಭವ. ಫ್ರಿಜ್ಜಿನಲ್ಲಿ ಇಟ್ಟರೂ ಅಷ್ಟು ಕೋಲ್ಡ್ ಆಗಲಿಕ್ಕಿಲ್ಲ ಅಷ್ಟು ತಣ್ಣಗಿರುತ್ತದೆ ಹಾಲು. ಚಳಿಯಲ್ಲಿ ಹಾಲು ಕುಡಿದು ಮತ್ತೆ ಮುಸುಕು ಹೊದ್ದು ಮಲಗುವ ಸುಖವನ್ನು ಬಲ್ಲವರೇ ಬಲ್ಲರು! ಇನ್ನು, ಕಬ್ಬಿನ ಹಾಲಿನ ದೋಸೆ, ಮಣ್ಣಿ ಹಾಗೂ ತೊಡೆದೇವಿನ ರುಚಿಯ ಬಗ್ಗೆ ಹೇಳಿದಷ್ಟು ಕಡಿಮೆ.
ಕಬ್ಬಿನ ಹಾಲು ಆರೋಗ್ಯ ಪೂರಕ ಅಂಶಗಳನ್ನು ಸಹ ಒಳಗೊಂಡಿದೆ. ಜೀರ್ಣ ಕ್ರಿಯೆಗೆ ಸಹಕಾರಿ. ಲಿವರ್ ಕಾರ್ಯವನ್ನು ಉತ್ತೇಜಿಸುತ್ತದೆ. ಕ್ಯಾಲ್ಸಿಯಂ, ಸತು ಇತ್ಯಾದಿ ಖನಿಜ ಅಂಶಗಳನ್ನು ಒಳಗೊಂಡಿದೆ. ಪೊ›ಟೀನ್, ವಿಟಮಿನ್ ಇರುತ್ತದೆ.
ಮೊದಲೆಲ್ಲ ಬೆಲ್ಲವನ್ನು ಮಣ್ಣಿನ ಕೊಡದಲ್ಲಿ ತುಂಬಿ, ಅದು ಅಲುಗಾಡದಂತೆ ಬೆತ್ತದ ಬಳ್ಳಿಯಿಂದ ಸುತ್ತಿ ನಾಗಂದಿಗೆ ಮೇಲೆ ಇಡುತ್ತಿದ್ದರು. ಒಂದು ವರ್ಷವಾದರೂ ಬೆಲ್ಲದ ರುಚಿ ಕೆಡುತ್ತಿರಲಿಲ್ಲ. ಅಷ್ಟು ತಾಜಾ ತಾಜಾ. ಇಂತಹ ಮಣ್ಣಿನ ಕೊಡ ತಯಾರಿಸುವವರಿಗೆ ಕೆಲಸ -ಆದಾಯ ದೊರೆಯುತ್ತಿತ್ತು.
ಹಿಂದೆ ಕೃಷಿಕರ ಮನೆಗಳಲ್ಲಿ ಜನರ ಸಂಖ್ಯೆ ಜಾಸ್ತಿ ಇರುತ್ತಿತ್ತು. ಮೂರ್ನಾಲ್ಕು ಮಕ್ಕಳಲ್ಲಿ ಒಂದಿಬ್ಬರು ಉದ್ಯೋಗ ಅರಸಿ ಹೊರಗೆ ಹೋದರೂ ಮನೆಯಲ್ಲಿ ಒಬ್ಬಿಬ್ಬರು ಇರುತ್ತಿದ್ದರು. ಹೀಗಾಗಿ ಕೃಷಿ ಕೆಲಸಗಳಿಗೆ ಅಷ್ಟು ತೊಂದರೆ ಆಗುತ್ತಿರಲಿಲ್ಲ. ಇನ್ನೊಂದೆಡೆ ಕೃಷಿ ಕಾರ್ವಿುಕರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಭತ್ತದ ಗದ್ದೆಯ ಒಂದು ಭಾಗವನ್ನು ಕಬ್ಬು ಬೆಳೆಗೆ ಎಂದೇ ಮೀಸಲಾಗಿಡಲಾಗುತ್ತಿತ್ತು. ಕ್ರಮೇಣ ಆ ಜಾಗದಲ್ಲಿ ಅಡಿಕೆ ಗಿಡಗಳು ಬಂದವು. ಅತ್ತ ಕಾರ್ವಿುಕರು ಸಿಗುವುದು ಕಷ್ಟವಾಗತೊಡಗಿತು. ಕೂಲಿ ದರ ಕೂಡ ಏರುಮುಖವಾಯಿತು. ‘ಕಬ್ಬಿಗೊಂದು ಆಳು’ ಎಂಬ ಮಾತೇ ಇದೆ. ಅಂದರೆ ಅಷ್ಟು ಕೆಲಸ ಇರುತ್ತದೆ. ಇಂತಹ ಸಮಸ್ಯೆಗಳ ಕಾರಣಕ್ಕೆ ಕಬ್ಬು ಬೆಳೆ ನಿಧಾನಕ್ಕೆ ಕಡಿಮೆಯಾಗುತ್ತ ಬಂತು. ಈಗ ಅಲ್ಲಲ್ಲಿ ವಿರಳವಾಗಿ ಇದೆ. ಕಾಲಕ್ಕೆ ತಕ್ಕಂತೆ, ಕೋಣ ಅಥವಾ ಎತ್ತಿನ ಗಾಣದ ಬದಲು ಮಷಿನ್ ಬಳಕೆ ಶುರುವಾಯಿತು.
ಅಪರೂಪದ ವಸ್ತುಗಳ ದಾಖಲೆ: ಹಾಗೆ ನೋಡಿದರೆ ಕೃಷಿ ಸಂಸ್ಕೃತಿಯ ಹಲವು ಅವಿಭಾಜ್ಯ ಅಂಗಗಳು ಕಾಲದ ತಿರುವಿನಲ್ಲಿ ಮರೆಯಾಗಿವೆ; ಮರೆಯಾಗುತ್ತಿವೆ. ನಿವೃತ್ತ ಪ್ರಿನ್ಸಿಪಾಲ್, ಬರಹಗಾರ ಬೀರಣ್ಣ ನಾಯಕ ಮೊಗಟಾ ಅವರು ಇಂತಹ ಅನೇಕ ಅಪರೂಪದ ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಖಲಿಸುತ್ತಿದ್ದಾರೆ. ಇಂತಹ ಅಂಕಣ ಬರಹಗಳನ್ನು ಸಂಕಲಿಸಿ ‘ಮೆಲುಕು’ ಎಂಬ ಪುಸ್ತಕವನ್ನು ಶಿವಪ್ರದಾ ಪ್ರಕಾಶನದ ಮೂಲಕ ಹೊರತಂದಿದ್ದಾರೆ.
ತೆಂಗಿನ ಹೆಡೆಯನ್ನು ಕಲಾತ್ಮಕವಾಗಿ ನೇಯ್ದು ಮಾಡುವ ಮಡ್ಲು, ಮಾಪನಕ್ಕೆ ಬಳಸುವ ಕೊಳಗ, ದೀಪಾವಳಿ ಸಮಯದಲ್ಲಿ ಮಾಡುವ ಹಿಂಡ್ಲೆಕಾಯಿ ದೀಪ ಹಾಗೂ ಜಂಜು ದೀಪ, ರಂಗೋಲಿಗೆ ಮೂಲ ಪ್ರೇರಣೆಯಂತಿದ್ದ, ಧಾರ್ವಿುಕ ಆಚರಣೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಸಿಂಗಾರ ಹಲಿ, ಧಾರ್ವಿುಕ ಮಹತ್ವದ ಅಕ್ಕಿ ದಳ್ಳೆ, ಮಲೆನಾಡು, ಕರಾವಳಿ ಪ್ರದೇಶದ ಮನೆಗಳಲ್ಲಿ ಇರುತ್ತಿದ್ದ ಗಿಳಿ ಗುಟ್ಟ, ಅಪ್ಪೆಮಿಡಿ ಉಪ್ಪಿನಕಾಯಿಯನ್ನು ಇಡಲು ಬಳಸುವ ಬುಯ್ಯಮ್ಮ (ಚೀನೀ ಮಣ್ಣಿನಿಂದ ತಯಾರಿಸುವ ಬರಣಿಗೆ), ಸೇದುವ ಬಾವಿಗೆ ಬೀಳುವ ಕೊಡ ತೆಗೆಯಲು ಬಳಸುವ ಪಾತಾಳ ಗರಡಿ, ಮೀನು ಹಿಡಿಯಲು ಉಪಯೋಗಿಸುವ ಕೂಳಿ, ಸಣ್ಣ ಕೋಳಿ ಮರಿಗಳನ್ನು ರಕ್ಷಿಸಲು, ಬಿದಿರಿನಿಂದ ಮಾಡಿದ ಕೋಳಿಬುಟ್ಟಿ, ನೈಸರ್ಗಿಕ ಫ್ರಿಜ್ ರೀತಿಯಲ್ಲಿ ಬಳಸಬಹುದಾದ ಮರದ ಕಲ್ಬಿ, ಬೆಳೆ ಕಾಯಲು ಬಳಸುವ, ಬಿದಿರಿನಿಂದ ತಯಾರಿಸಿದ ನೀರಂಡೆ, ಆಡುಗೆ ಮನೆಯ ಅಂದ ಹೆಚ್ಚಿಸುವ, ಮಡಕೆ ಇಡಲು ಬಳಸುವ ಸಿಕ್ಕ, ಭತ್ತವನ್ನು ಕುಟ್ಟಿ ಅಕ್ಕಿ ಮಾಡಲು ಬಳಸುವ ಮಾರುಳ್ಳು, ಗದ್ದೆ ಊಳಲು ಬಳಸುತ್ತಿದ್ದ ನೇಗಿಲ ಕುಳ್ಳಿ... ಹೀಗೆ ಹಲವು ಬಗೆಯ ಕೃಷಿ ಸಂಸ್ಕೃತಿಯ ಸಾಧನ- ಸಲಕರಣೆಗಳ ಮಾಹಿತಿಯನ್ನು ಚಿಕ್ಕದಾಗಿ ಚೊಕ್ಕದಾಗಿ ಅವರು ಕಟ್ಟಿಕೊಟ್ಟಿದ್ದಾರೆ. ‘ಹಳೆಯದು ಹೊನ್ನು’ ಎಂಬುದನ್ನು ಈ ಮೂಲಕ ಧ್ವನಿಸಿದ್ದಾರೆ. ವರ್ಣ ಪುಟಗಳು, ಕಲರ್ ಫೋಟೋಗಳು ಕೃತಿಯ ಮೌಲಿಕತೆ ಹೆಚ್ಚಿಸಿವೆ.
ಕೊನೇ ಮಾತು: ಅನಿವಾರ್ಯತೆಗಳು ಏನೇ ಇದ್ದರೂ , ಕಾಲಚಕ್ರದ ಉರುಳಿನಲ್ಲಿ ಆಲೆಮನೆಯ ಸೊಬಗು ಪೂರ್ತಿಯಾಗಿ ಮರೆಯಾಗದಿರಲಿ; ಹಾಗೇ ನಮ್ಮ ಕೃಷಿ ಪರಂಪರೆಯ ವಸ್ತುಗಳು ಅಸ್ತಿತ್ವ ಉಳಿಸಿಕೊಂಡು ನಮ್ಮ ಬಾಳಿಗೆ ಹೊಸ ಹೊಳಪನ್ನು ಸದಾ ನೀಡುತ್ತಿರಲಿ ಎಂಬುದು ಈ ಹೊತ್ತಿನ ಆಶಯ! ಕೃಷಿ ಪರಂಪರೆ - ವೈವಿಧ್ಯ ಕಾಣೆಯಾದರೆ ಭಾರತದ ಅಸ್ಮಿತೆಗೆ ಪೆಟ್ಟುಬಿದ್ದಂತೆಯೆ ಸರಿ...